ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ನಂತರ ಬ್ಲ್ಯಾಕ್‌ಮೇಲ್ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಜಬಲ್‌ಪುರ ಮಂಡಲದ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ರಾಜೇಶ್ ಶ್ರೀವಾಸ್ತವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯು ಪತಿಯೊಂದಿಗೆ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಶ್ರೀವಾಸ್ತವ್ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಜಬಲ್‌ಪುರ್ ಪೊಲೀಸರ ಪ್ರಕಾರ, ಆರೋಪಿ ಶ್ರೀವಾಸ್ತವ್ ಮಹಿಳೆಯ ಪರಿಚಯದವರಾಗಿದ್ದು ಆಗಾಗ್ಗೆ ಮಹಿಳೆಯ ಮನೆಗೆ ತೆರಳುತ್ತಿದ್ದರು. ಮಹಿಳೆಯ ಪತಿ ಸರ್ಕಾರಿ ಉದ್ಯೋಗಿಯಾಗಿರುವ ಕಾರಣ ಕೆಲಸದ ಕಾರಣಕ್ಕೆ ಮನೆಯಿಂದ ದೂರವಿದ್ದರು. ಇಂತಹ ಸಮಯದಲ್ಲಿ ಮನೆಗೆ ಭೇಟಿ ನೀಡಿದ್ದ ಶ್ರೀವಾಸ್ತವ್ ಜ್ಯೂಸ್‌ಗೆ ಮಾದಕ ದ್ರವ್ಯವನ್ನು ಸೇರಿಸಿದ್ದು, ಇದರಿಂದಾಗಿ ಮಹಿಳೆಯು ಪ್ರಜ್ಞೆ ಕಳೆದುಕೊಂಡಿದ್ದರು. ಆ ಹೊತ್ತಲ್ಲಿ ಅವರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ: ‘ರಾಹುಲ್ ಗಾಂಧಿ ಅವಿವಾಹಿತ, ಎಚ್ಚರಿಕೆಯಿಂದಿರಿ’: ಮಾಜಿ ಸಂಸದನ ಹೇಳಿಕೆಗೆ ಭಾರಿ ವಿರೋಧ
ಈ ವೇಳೆ ಶ್ರೀವಾಸ್ತವ್ ಕೃತ್ಯದ ಚಿತ್ರಗಳನ್ನು ಸೆರೆಹಿಡಿದಿದ್ದು, ಅದರ ವಿಡಿಯೋವನ್ನು ಹಿಡಿದು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಆದರೆ 2020 ರ ಸೆಪ್ಟೆಂಬರ್‌ನಲ್ಲಿ ಮಹಿಳೆಯು ಗಂಡನೊಂದಿಗೆ ತೆರಳಿದ್ದು, ಶ್ರೀವಾಸ್ತವ್ ಮಹಿಳೆಯನ್ನು ಹಿಂತಿರುಗುವಂತೆ ಒತ್ತಾಯಿಸಿದ್ದಾರೆ ಮತ್ತು ಮಹಿಳೆಯು ಅದಕ್ಕೆ ಒಪ್ಪದೆ ಇದ್ದಾಗ ಕೃತ್ಯದ ವಿಡಿಯೋವನ್ನು ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯು ದೂರಿದ್ದಾರೆ.
ಜಬಲ್ಪುರದ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, “ಆತನು ಮಹಿಳೆಯು ತನ್ನ ಬಳಿಗೆ ಹಿಂತಿರುಗಬೇಕು ಅಥವಾ 10 ಲಕ್ಷ ರೂ. ನೀಡುವಂತೆ ಕೇಳಿಕೊಂಡಿದ್ದನು. ಇದಕ್ಕೆ ಮಹಿಳೆಯು ಒಪ್ಪದೆ ಇದ್ದಾಗ ಮಹಿಳೆಯ ಗಂಡನಿಗೆ ವಿಡಿಯೋ ಮತ್ತು ಪೋಟೋಗಳನ್ನು ಕಳುಹಿಸಿದ್ದನು. ಈ ವೇಳೆ ವಿಷಯವು ಬೆಳಕಿಗೆ ಬಂದಿದೆ” ಎಂದು ತಿಳಿಸಿದ್ದಾರೆ.
ಇದರ ನಂತರ ಘಟನೆಯ ಬಗ್ಗೆ ಮಹಿಳೆಯು ಪತಿಗೆ ಮಾಹಿತಿ ನೀಡಿದ್ದು, ನಂತರ ಇಬ್ಬರು ಪೊಲೀಸ್ ಠಾಣೆಗೆ ತೆರಳಿ ಶ್ರೀವಾಸ್ತವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2-ಎನ್), 506 I, 284 ಮತ್ತು 384 ರ ಅಡಿಯಲ್ಲಿ ಪೊಲೀಸರು ಶ್ರೀವಾಸ್ತವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಬಿಜೆಪಿ ಶಾಸಕನ ಮೇಲೆ ಹಲ್ಲೆ ಪ್ರಕರಣ: ನಮ್ಮ ರೈತರು ಭಾಗಿಯಾಗಿಲ್ಲವೆಂದ ರಾಕೇಶ್ ಟಿಕಾಯತ್
ಪೊಲೀಸ್ ಸೂಪರಿಂಟೆಂಡೆಂಟ್ ಆಗಿರುವ ಸಿದ್ಧಾರ್ಥ್ ಬಹುಗುಣ, “ಆರೋಪಿಯು ಬಿಜೆಪಿಯ ಯುವ ಮೋರ್ಚಾದ ಸ್ಥಳೀಯ ನಾಯಕ. ಮಹಿಳೆಯ ದೂರಿನ ಆಧಾರದ ಮೇಲೆ ನಾವು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಹೇಳಿದ್ದಾರೆ.
ಅತ್ಯಾಚಾರ ಮತ್ತು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಬಿಜೆಪಿ ಮುಖಂಡನೂ ಎಲ್ಲ ಮಿತಿಗಳನ್ನು ಮೀರಿದ್ದಾನೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷವು ಆಕ್ರೋಶ ವ್ಯಕ್ತಪಡಿಸಿದೆ.
“ನನಗೆ ಈ ವಿಷಯದ ಬಗ್ಗೆ ತಿಳಿದಿಲ್ಲ ಆದರೆ ಕಾನೂನು ತನ್ನ ಕ್ರಮವನ್ನು ಕೈಗೊಳ್ಳುತ್ತದೆ” ಎಂದು ರಾಜ್ಯದ ಬಿಜೆಪಿಯ ವಕ್ತಾರ ರಜನೀಶ್ ಅಗರ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಕೋರ್ಟ್‌ಗೆ ಹಾಜರಾದ ಸಂತ್ರಸ್ತ ಯುವತಿ: ಅರೆಸ್ಟ್ ಆಗುವರೆ ರಮೇಶ್ ಜಾರಕಿಹೊಳಿ?


