ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದ ಮಧ್ಯೆ ಕೊಂಡಿಯಂತಿರುವ ಒಂದು ಸಣ್ಣ ಭೂಭಾಗವನ್ನು ಒಡೆದು ಪನಾಮಾ ಕಾಲುವೆ ನಿರ್ಮಿಸಿರುವುದು ನಮಗೆ ಗೊತ್ತು. ಅದೇ ರೀತಿ – ಅದಕ್ಕಿಂತ ಹಿಂದೆ – ಆಫ್ರಿಕಾ ಮತ್ತು ಏಷ್ಯಾ ಖಂಡದ ನಡುವಿನ ಭೂಖಂಡವನ್ನು ಛೇದಿಸಿ ಮಾಡಿದ ಸೂಯೆಜ್ ಕಾಲುವೆಯು ಈಗ ಸುದ್ದಿಯಲ್ಲಿದೆ.
ಕೆಲವು ದಿನಗಳ ಹಿಂದೆ ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಸರಕು ಸಾಗಾಟದ ಎವರ್‌ಗ್ರೀನ್ ಅಥವಾ ಎವರ್‌ಗಿವನ್ ಎಂಬ ಹಡಗಿನ ಬಗ್ಗೆ ಸುದ್ದಿಗಳು ನಾವೆಲ್ಲರೂ ಕೇಳುತ್ತಲೇ ಇದ್ದೇವೆ. ಜಪಾನೀ ಮಾಲೀಕತ್ವದ, ತೈವಾನ್ ದೇಶದಿಂದ ಚೀನಾ ಸರಕುಗಳನ್ನು ಪಾಶ್ಚಾತ್ಯ ದೇಶಗಳಿಗೆ ಮತ್ತು ಪಾಶ್ಚಾತ್ಯ ದೇಶಗಳಿಂದ ಏಷ್ಯಾ ದೇಶಗಳಲ್ಲಿ ವ್ಯವಹರಿಸುವ, ಪೂರಾ ಭಾರತೀಯ ಸಿಬ್ಬಂದಿಗಳಿಂದಲೇ ಕಾರ್ಯನಿರ್ವಹಿಸುತ್ತಿರುವ ಈ 400 ಮೀಟರ್ ಉದ್ದದ, 60 ಮೀಟರ್ ಅಗಲದ ಈ ಸರಕು ಸಾಗಾಟದ ಈ ಹಡಗು (ಕಂಟೇನರ್ ಶಿಪ್) ನೋಂದಣಿಯಾಗಿರುವುದು ದಕ್ಷಿಣ ಅಮೆರಿಕಾದ ಪನಾಮ ದೇಶದಲ್ಲಿ. ಸಾಂಕೇತಿಕವಾಗಿ ಜಾಗತೀಕರಣದ ಸಂಕೀರ್ಣತೆಯ ಬಿಕ್ಕಟ್ಟನ್ನು ಇದು ಬಹಳ ಸರಳವಾಗಿ ಅನಾವರಣಗೊಳಿಸಿದೆ. ಕಳೆದ ಒಂದು ವಾರದಿಂದ ಪ್ರಪಂಚದ ಸರಕು ಸಾಗಾಟದಲ್ಲಿರುವ ಸೂಕ್ಷ್ಮತೆ ಮತ್ತು ಸರಕು ಸರಬರಾಜು ವ್ಯವಸ್ಥೆಯ ದುರ್ಬಲತೆಯನ್ನು ತೆರೆದಿಟ್ಟಿದೆ. ಅಲ್ಲದೆ ಕಳೆದ 2 ದಶಕಗಳಿಂದ ಈ ಸರಕು ಸಾಗಿಸುವ ಹಡಗುಗಳ ಗಾತ್ರ ಮತ್ತು ತೂಕದ ಸಾಮರ್ಥ್ಯ ಹೆಚ್ಚಾದುದ್ದರಿಂದ ಈ ರೀತಿಯ ಅವಘಡಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಮುನ್ಸೂಚನೆ ಎಂದು OCED ಸಂಸ್ಥೆ ಬಹಳ ಹಿಂದೆಯೇ ಕಳವಳ ವ್ಯಕ್ತಪಡಿಸಿದೆ.
2000ನೇ ಇಸವಿಯಲ್ಲಿ 5000 ಶಿಪ್ಪಿಂಗ್ ಕಂಟೇನರ್ ಸಾಮರ್ಥ್ಯ ಹೊಂದಿದ್ದ ಹಡಗುಗಳು 2008ರ ಆರ್ಥಿಕ ಕುಸಿತದ ನಂತರ ಜಾಗತೀಕರಣದ ಲಾಭ ಗಳಿಸುವ ಸಲುವಾಗಿ ಇನ್ನು ದೊಡ್ಡ ದೊಡ್ಡ ಹಡಗುಗಳನ್ನು ಮಾಡಲು ಶುರು ಮಾಡಿದವು. ಅದರ ಸಾಮರ್ಥ್ಯವನ್ನು 20,000 ಶಿಪ್ಪಿಂಗ್ ಕಂಟೇನರ್‌ಗಳಿಗೆ ಏರಿಸಿ, ಕಡಿಮೆ ಖರ್ಚು ಮತ್ತು ಕಡಿಮೆ ಸಿಬ್ಬಂದಿಗಳಿಂದ ನಡೆಸುವ ಬೃಹತ್ ಲಾಭದಾಯಕ ವ್ಯವಹಾರವನ್ನಾಗಿಸಲಾಯಿತು. ಒಂದು ಕಡೆ ಹಡಗುಗಳು ದೊಡ್ಡ ದೊಡ್ಡ ಪ್ರಮಾಣದ (ಇಫಿಲ್ ಟವರ್, ಎಂಪೈರ್ ಸ್ಟೇಟ್ ಕಟ್ಟಡದಷ್ಟು ದೊಡ್ಡ ಪ್ರಮಾಣ) ತೇಲುವ ಕಬ್ಬಿಣಗಳಾದರು, ಕಡಲ ಮಾರ್ಗಗಳ ಮೂಲಸೌಕರ್ಯ ಹಾಗೆಯೆ ಉಳಿದುಕೊಂಡಿತು. 5 ಬಿಲಿಯನ್ ಡಾಲರ್ ಖರ್ಚಿನಲ್ಲಿ ಪನಾಮ ಕಾಲುವೆಯನ್ನು ದೊಡ್ಡ ಹಡಗುಗಳಿಗೆ ವಿಸ್ತರಿಸಲಾಯಿತಾದರೂ ಏಷ್ಯಾದ ಕೊರಿಯಾ, ಚೀನಾ ಮತ್ತು ಜಪಾನ್ ದೇಶದ ನೌಕಾಂಗಣಗಳು ಈ ವಿಸ್ತರಣೆಗಳನ್ನು ಮೀರಿಸುವ ಹಡಗುಗಳನ್ನು ಸೃಷ್ಟಿಸುತ್ತಿವೆ. ಎವರ್ ಗಿವನ್ ಕೂಡ ಪನಾಮ ಕಾಲುವೆಯಲ್ಲಿ ಸಂಚರಿಸಲು ಆಗುವುದಿಲ್ಲ.
ಪ್ರಪಂಚದ ಅತಿದೊಡ್ಡ ಹಡಗುಗಳಲ್ಲಿ ಒಂದಾಗಿರುವ ಎವರ್ ಗ್ರೀನ್, 200,000 ಮೆಟ್ರಿಕ್ ಟನ್ ತೂಕವನ್ನೆತ್ತಿಕೊಂಡು ಸೂಯೆಜ್ ಕಾಲುವೆಗೆ ಹೋಗುವ ಮೊದಲೇ ಸ್ವಲ್ಪ ಚಡಪಡಿಸಿತ್ತು ಮತ್ತು ಕಾಲುವೆಯಲ್ಲಿ ಹೋದಾಗ ರಭಸದ ಗಾಳಿ ಮತ್ತು ದಡದ ಪರಿಣಾಮದಿಂದ (ಬ್ಯಾಂಕ್ ಎಫೆಕ್ಟ್) ಕಾಲುವೆಯಲ್ಲಿ ತಿರುಗಿ ಹಡಗಿನ ಮುಂಭಾಗ ಪೂರ್ವದ ದಡಕ್ಕೆ ಮತ್ತು ಹಿಂಭಾಗ ಪಶ್ಚಿಮದ ದಡದ ಮರಳಿನಲ್ಲಿ ಸಿಲುಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಅದನ್ನು 29ನೆ ತಾರೀಕು ಸೋಮವಾರದಂದು ಭಾಗಶಃ ಸಿಕ್ಕಿನಿಂದ ಬಿಡಿಸಿ ಮತ್ತೆ ತೇಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಏನೇ ಆದರೂ ಇವೆಲ್ಲದಕ್ಕೂ ಜಾಗತಿಕ ವಾಣಿಜ್ಯ ವ್ಯವಹಾರಗಳ ಸಂಕೀರ್ಣತೆ, ಅಭಿವೃದ್ಧಿ ಎಂಬ ಉಳ್ಳವರ ಲೂಟಿಕೋರ ಲಾಭಗಳ ನಾಗಾಲೋಟ, ವಸಾಹತು ಇತಿಹಾಸದ ಏಕಪಕ್ಷೀಯ ಸಮುದ್ರ ಮಾರ್ಗಗಳ ಮೂಲಸೌಕರ್ಯಗಳ ಮೇಲಿನ ಹಿಡಿತ ಮತ್ತು ಅದನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ಜಾಗತಿಕ ಶಕ್ತಿಗಳ ವೈಫಲ್ಯಕ್ಕೆ ಹಿಡಿದ ಕನ್ನಡಿ. ಒಟ್ಟಾರೆಯಾಗಿ ಜಾಗತೀಕರಣಗೊಂಡಿರುವ ಜಗತ್ತಿನ ಅಸ್ಥಿರ ವ್ಯವಸ್ಥೆ ಮತ್ತು ಅದನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರಲು ತನ್ನ ಸಪ್ಲೈ ಚೈನ್‌ನಲ್ಲಿ ಸೃಷ್ಟಿಸಿಕೊಂಡಿರುವ ಚೋಕ್ ಪಾಯಿಂಟ್‌ಗಳ ಪತನವೇ ಈ ಸಿಕ್ಕಿನ ಅಥವಾ ಬಿಕ್ಕಟ್ಟಿನ ಮೂಲ.
ಐತಿಹಾಸಿಕವಾಗಿ ವಸಾಹತು ಆಳ್ವಿಕೆ ವಿಸ್ತರಿಸಿದ್ದೆ ಕಡಲ ಮಾರ್ಗಗಳ ಮೂಲಕ ಬಂದ ವ್ಯಾಪಾರದಿಂದಾಗಿ. ಇದೇ ರೀತಿ ವಸಾಹತುಶಾಹಿ ಪೋರ್ಚುಗಲ್ ಈ ಕಡಲತೀರದ 50 ಕೋಟೆ ಬಂದರುಗಳು ಮತ್ತು ಕಡಲ ಮಾರ್ಗಗಳ ಸಂಕೀರ್ಣ ಕೊಂಡಿಗಳ(ಬಾಟಲ್ ನೆಕ್) ನಿಯಂತ್ರಣದಿಂದಾಗಿ. ಫ್ರೆಂಚ್ ಹಾಗು ಬ್ರಿಟಿಷ್ ಸಾಮ್ರಾಜ್ಯಶಾಹಿ ಕೂಡ ಇದನ್ನು ವಿಸ್ತರಿಸುತ್ತ ಹೋಗಿ ಕಡಲ ಮಾರ್ಗಗಳ ಹೊರತಾಗಿ ಭೌಗೋಳಿಕ ಹಿಡಿತವನ್ನು ಸಾಧಿಸಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸತೊಡಗಿದವು. ಸೂಯೆಜ್ ಕಾಲುವೆಗೂ ಮುಂಚೆ ಲಂಡನ್ನಿನಿಂದ ಭಾರತಕ್ಕೆ ಪ್ರಯಾಣದ ಸಮಯ 6 ತಿಂಗಳಿಗೂ ಹೆಚ್ಚು ಕಾಲ ಆಗುತ್ತಿತ್ತು. ಅದು ಆಫ್ರಿಕಾದ ದಕ್ಷಿಣದ ತುದಿ ಗುಡ್ ಹೋಪ್ ಭೂಶಿರವನ್ನು (ಸರಾಸರಿ 9500ಕ್ಕೂ ಹೆಚ್ಚು ಕಿ.ಮೀ.) ಸುತ್ತಿಕೊಂಡು ಅರಬ್ಬೀ ಸಮುದ್ರಕ್ಕೆ ಬರಬೇಕಿತ್ತು. ಯೂರೋಪಿನಿಂದ ಏಷ್ಯಾ ಖಂಡಕ್ಕೆ ಹೋಗಲು ಅವರು ಮೆಡಿಟರೇನಿಯನ್ ಸಮುದ್ರದ ಈಜಿಪ್ಟ್ ಬಂದರಿಗೆ ಬಂದು ಅಲ್ಲಿಂದ ಒಂಟೆ ಹಾಗು ಕುದುರೆಗಳನ್ನು ಬಳಸಿ ಸೂಯೆಜ್ ಬಂದರಿಗೆ ಬಂದು ಮತ್ತೆ ಹಡಗಿನಲ್ಲಿ ಪ್ರಯಾಣ ಬೆಳೆಸಬೇಕಿತ್ತು.
ಇದೇ ಮಾರ್ಗವಾಗಿಯೇ ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ-ಸಿಪಾಯಿ ದಂಗೆಯ ವಿಷಯ 30 ದಿನದಲ್ಲಿ ಲಂಡನ್ ತಲುಪಿ ನಂತರ ಅದನ್ನು ಹತ್ತಿಕ್ಕಿದ್ದು. ಸ್ಟೀಮ್ ಎಂಜಿನ್ ಆವಿಷ್ಕಾರದ ಸಹಾಯದಿಂದ ಹಡಗುಗಳು ವೇಗವಾಗಿ ಚಲಿಸತೊಡಗಿದವು, ಸೂಯೆಜ್ ಕಾಲುವೆಗೆ ಬಾಡಿಗೆ ರೈಲ್ವೆ ವ್ಯವಸ್ಥೆಯನ್ನು ಮಾಡಲಾಯಿತು. ಒಟ್ಟೋಮನ್ ಸಾಮ್ರಾಜ್ಯ ಹಾಗು ಫ್ರೆಂಚ್ ಇಂಜಿನಿಯರ್ ಫರ್ಡಿನ್ಯಾಂಡ್ ಡಿ ಲೆಸೆಪ್ಸ್‌ನ ಸೂಯೆಜ್ ಕೆನಾಲ್ ಕಂಪನಿಯ ಅಡಿಯಲ್ಲಿ 1859ರಲ್ಲಿ ಹೂಳೆತ್ತುವ ಕೆಲಸ ಶುರುವಾಗಿ 10 ವರ್ಷಗಳಲ್ಲಿ ಪೂರ್ಣಗೊಂಡು ನವೆಂಬರ್ 17 1869ರಲ್ಲಿ ಮೊದಲ ಪ್ರಯಾಣ ಪೂರೈಸಿತು. ಇದರ ಜೊತೆಗೆ ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಕ್ಕೆ ನೇರ ಸಂಪರ್ಕ ಬೆಳೆದು ಆಫ್ರಿಕಾ ಖಂಡ ಒಂದು ದೊಡ್ಡ ಮಾನವ ನಿರ್ಮಿತ ದ್ವೀಪವಾಯಿತು.

ಈ ಸಂಪರ್ಕದಿಂದ ಯೂರೋಪಿನ ವಸಾಹತುಶಾಹಿ ಶಕ್ತಿಗಳಿಗೆ ಆಫ್ರಿಕಾ, ಪರ್ಶಿಯನ್ ಕೊಲ್ಲಿಗೆ ಒಟ್ಟಾರೆಯಾಗಿ ಏಷ್ಯಾ ಖಂಡದಿಂದ ಆಸ್ಟ್ರೇಲಿಯಾ ಖಂಡದವರೆಗೂ ಮೆಡಿಟರೇನಿಯನ್ ಸಮುದ್ರದಿಂದ ನೆರೆಸಂಪರ್ಕ ಕಲ್ಪಿಸಿತು ಮತ್ತು ವಸಾಹತು ಲೂಟಿಗೆ ರಾಜಮಾರ್ಗವಾಯಿತು. ಎಟುಕದೆ ಇದ್ದ ಆಫ್ರಿಕಾ ಖಂಡದ ಭಾಗಗಳು ವಸಾಹತು ಆಳ್ವಿಕೆಗೆ ಒಳಪಟ್ಟಿತು, ಪರ್ಶಿಯನ್ ಕೊಲ್ಲಿಯ ತೈಲ ನಿಕ್ಷೇಪಗಳು ಬ್ರಿಟಿಷ್ ಪೆಟ್ರೋಲಿಯಂ ಕಂಪೆನಿಯಾಯಿತು. ಏಷ್ಯಾದ ಟೀ, ಸಕ್ಕರೆ, ಹತ್ತಿ ಇತ್ಯಾದಿ ಮತ್ತು ಹೊಸ ಪ್ರಪಂಚ ಎಂದು ಕರೆಯಲ್ಪಟ್ಟ ಅಮೆರಿಕಾದ ತಂಬಾಕು, ಕಾಫೀ ಇತ್ಯಾದಿಗಳು ಬಹುದೊಡ್ಡ ವಸಾಹತು ಬೆಳೆಗಳಾದವು. ಈಗಿನ ಪ್ರಪಂಚದಲ್ಲಿ ದೇಶದಿಂದ ದೇಶದ ಮಧ್ಯೆ ನಡೆಯುವ ಒಟ್ಟು ಸರಕು ವಹಿವಾಟಿನ ಶೇ.10ರಷ್ಟು ಸೂಯೆಜ್ ಕಾಲುವೆಯಲ್ಲಿ ನಡೆಯುತ್ತಿದೆಯಾದರೂ ಯೂರೋಪಿನ ವಸಾಹತು ಉತ್ತುಂಗದಲ್ಲಿ ಇದರ ಪ್ರಮಾಣ ಬಹಳ ದೊಡ್ಡದಿತ್ತು.
ಇದೇ ರೀತಿ ಅಮೆರಿಕಾದ ಪೂರ್ವ ಕಡಲತೀರಕ್ಕೂ (ಅಟ್ಲಾಂಟಿಕ್ ಮಹಾಸಾಗರ) ಪಶ್ಚಿಮ ಕಡಲತೀರಕ್ಕೂ (ಪೆಸಿಫಿಕ್ ಮಹಾಸಾಗರ) ಸಂಪರ್ಕ ಕಲ್ಪಿಸಲು ಅಮೇರಿಕ ಪನಾಮ ಎಂಬ ಪುಟ್ಟ ರಾಷ್ಟದೊಂದಿಗಿನ ದಬ್ಬಾಳಿಕೆ ಹೇಳತೀರದ್ದು. ಮೊದಲ ಬಾರಿಗೆ ಫ್ರೆಂಚರು ಕಾಲುವೆ ನಿರ್ಮಿಸಲು ಹೋಗಿ ಅರ್ಧದಲ್ಲೇ ನಿಲ್ಲಿಸಿದ್ದರು. ನಂತರ ಫ್ರೆಂಚ್ ಹೂಡಿಕೆದಾರರು ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸಿದ ಒಪ್ಪಂದವೊಂದರಲ್ಲಿ, ಕಾಲುವೆ ವಲಯವನ್ನು ಒಳಗೊಂಡ 10 ಮೈಲಿ ಭೂಮಿಯ ಮೇಲೆ ಅಮೆರಿಕನ್ನರಿಗೆ ಸಾರ್ವಭೌಮ ನಿಯಂತ್ರಣವನ್ನು ನೀಡಲಾಯಿತು. ಪನಾಮಿಯನ್ನರನ್ನು ಮಾತುಕತೆಗಳಲ್ಲಿ ಅಥವಾ ಒಪ್ಪಂದದಲ್ಲಿ ಸೇರಿಸಲಿಲ್ಲ. ಅಮೆರಿಕನ್ನರು ತಕ್ಷಣವೇ ಕಾಲುವೆ ವಲಯವನ್ನು ಮಿಲಿಟರಿ ಆಡಳಿತಕ್ಕೆ ಒಳಪಡಿಸಿದರು. ಕೆರಿಬಿಯನ್ ಕಪ್ಪುವರ್ಣಿಯರು, ಭಾರತ ಮತ್ತು ಏಷ್ಯಾದ ದೇಶಗಳು ಕಾರ್ಮಿಕರನ್ನು ಕರೆದುಕೊಂಡು ಪನಾಮಾದ ಜನಬಾಹುಳ್ಯದ ರೀತಿಯನ್ನೇ ಬದಲಾಯಿಸಲಾಯಿತು ಮತ್ತು ಅಲ್ಲೇ ಉಳಿದವರು ಪನಾಮಾದ ಹೊಸ ಕೆಳವರ್ಗವಾಗಿ ಮಾರ್ಪಟ್ಟರು.
ವರ್ಣಭೇದ ವಿಭಜನೆಯ ವ್ಯವಸ್ಥೆಯನ್ನು ಪನಾಮದಲ್ಲಿ ಜಾರಿಗೆ ತರಲಾಯಿತು. 1913ರಲ್ಲಿ ಕಾಲುವೆ ಪೂರ್ಣಗೊಂಡ ನಂತರ ಅಮೆರಿಕ ಪನಾಮ ರಾಜಕೀಯದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಲು ಅಲ್ಲಿನ ಜನರನ್ನು ದಮನಿಸತೊಡಗಿತು. ನಂತರದ ದಶಕಗಳಲ್ಲಿ ಪನಾಮಿಯನ್ನರು ಮತ್ತು ಅಮೆರಿಕ ನಡುವೆ ಹಿಂಸಾತ್ಮಕ ಘರ್ಷಣೆಗಳು ಬೆಳೆದವು ಮತ್ತು 1964ರಲ್ಲಿ ಕಾಲುವೆ ವಲಯದಲ್ಲಿ ವಿದ್ಯಾರ್ಥಿಗಳು ಪನಾಮ ಧ್ವಜವನ್ನು ಹಾರಿಸಲು ಪ್ರಯತ್ನಿಸಿದಾಗ ಅದು ಮೊದಲ ಪ್ರಮುಖ ಮುಖಾಮುಖಿ ಹೋರಾಟವಾಯಿತು. ನೂರಾರು ಪ್ರತಿಭಟನಾಕಾರರು ಕೊಲ್ಲಲ್ಪಟ್ಟರು ಮತ್ತು ಸಾವಿರಾರು ಜನರು ಗಾಯಗೊಂಡರು ಹಾಗೂ 1968ರಲ್ಲಿ ಮಿಲಿಟರಿ ದಂಗೆಯಿಂದ ಪನಾಮ ಸರ್ಕಾರವನ್ನು ಉರುಳಿಸಲಾಯಿತು. ಮತ್ತೆ 1989ರಲ್ಲಿ ಪನಾಮ ಕಾಲುವೆಯ ಸಾರ್ವಭೌಮತ್ವಕ್ಕೆ ಪನಾಮೇನಿಯನ್ನರು ಹೋರಾಟ ಮಾಡಿದಾಗ 5000 ಜನರ ಮಾರಣಹೋಮ ನಡೆಸಲಾಯಿತು. ಈಗಲೂ ಆ ಕಾಲುವೆ ಅಮೆರಿಕಾದ ಮಿಲಿಟರಿ ಹಿಡಿತದಲ್ಲಿದೆ.
ಇದೇ ರೀತಿ ಸಿಂಗಾಪುರ ಮಲೇಷ್ಯಾ ಪಕ್ಕದ ಮಲಕ್ಕಾ ಕೊಲ್ಲಿ, ಅರಬ್ಬೀ ಸಮುದ್ರ ಸೇರುವ ಪರ್ಷಿಯನ್ ಕೊಲ್ಲಿ, ಕಪ್ಪು ಸಮುದ್ರವನ್ನು ಮೆಡಿಟರೇನಿಯನ್ ಸಮುದ್ರಕ್ಕೆ ಸೇರಿಸುವ ಬೊಸ್ಪೊರ್ಸ್ ಕೊಲ್ಲಿ, ಕೆಂಪು ಸಮುದ್ರವನ್ನು ಅರಬ್ಬೀ ಸಮುದ್ರಕ್ಕೆ ಸೇರಿಸುವ ಬಾಬ್ ಎಲ್-ಮಂದೇಬ್ ಕೊಲ್ಲಿ ಇಂದು ಸಂಘರ್ಷ ಕೇಂದ್ರಗಳಾಗಿವೆ. ಜಾಗತಿಕ ಮಟ್ಟದಲ್ಲಿ ಪ್ರಪಂಚದ ಅರ್ಧದಷ್ಟು ಬಂದರುಗಳಿಗೆ ಈಗ ಕಟ್ಟಲಾಗುತ್ತಿರುವ ದೊಡ್ಡ ಹಡಗುಗಳನ್ನು ಒಳಗೊಳ್ಳುವ ಸಾಮರ್ಥ್ಯವಿಲ್ಲ. ಮುಂಬರುವ ದಿನಗಳಲ್ಲಿ ಒಂದೋ ಇರುವ ಬಂದರನ್ನು ಮೇಲ್ದರ್ಜೆಗೆ ಅಪಾರ ಪ್ರಮಾಣದ ಬಂಡವಾಳದಿಂದ ನವೀಕರಿಸಿಕೊಳ್ಳಬೇಕು ಅಥವಾ ಸರಕು ವಹಿವಾಟಿನಲ್ಲಿ ಹಿಂದುಳಿಯಬೇಕು. ಮುಂಬರುವ ಜಾಗತೀಕರಣದ ಪೈಪೋಟಿಯಲ್ಲಿ ಇದು ಮಹತ್ವದ ತಿರುವು ಪಡೆದುಕೊಳ್ಳಲಿದೆ. ಪ್ರಪಂಚಾದ್ಯಂತ ಅಮೇರಿಕ ಅಥವಾ ಪಾಶ್ಚಾತ್ಯ ದೇಶಗಳ ವಸಾಹತು ಮೂಲಸೌಕರ್ಯದ ವ್ಯವಸ್ಥೆ ಕುಸಿಯುತ್ತಿರಬೇಕಾದರೆ ಚೀನಾದ ಮೂಲಸೌಕರ್ಯ ಮತ್ತು ವಸಾಹತು ಬೆಳೆಯುತ್ತಿದೆ.
ಚೀನಾ ತನ್ನ ಮೂಲಸೌಕರ್ಯದ ವ್ಯವಸ್ಥೆಯನ್ನು ವಿಶ್ವಾದ್ಯಂತ ವಿಸ್ತರಿಸುತ್ತಿದೆ. ಆಫ್ರಿಕಾ ಖಂಡದಲ್ಲೇ ಇದು 20 ದೊಡ್ಡ ಬಂದರುಗಳನ್ನು ಸೃಷ್ಟಿಸಿದೆ. ಚೀನಾದಿಂದ ಯೂರೋಪಿಗೆ ನೆಲದ ಮೇಲೆ ರೈಲ್ವೆ ಸಂಪರ್ಕದ ಯೋಜನೆಯ ಪ್ರಸ್ತಾಪ ಮುಂದಿಟ್ಟಿದೆ ಮತ್ತು ರಷ್ಯಾವರೆಗಿನ ಸಂಪರ್ಕವನ್ನು ಸಾಧಿಸಿದೆ. ಶ್ರೀಲಂಕಾದ ಹಂಬಂತೋಟ ಬಂದರನ್ನು ಕೂಡ ಅತ್ಯಾಧುನಿಕವಾಗಿ ನಿರ್ಮಿಸಿದೆ ಮತ್ತು ಅಲ್ಲಿನ ಸರ್ವಾಧಿಕಾರಕ್ಕೆ ಬೆನ್ನೆಲುಬಾಗಿ ನಿಂತಿದೆ. ಅಮೆರಿಕ ನಿಯಂತ್ರಣದಲ್ಲಿರುವ ಪನಾಮ ಕಾಲುವೆಗೆ ಪರ್ಯಾಯವಾಗಿ ದಕ್ಷಿಣ ಅಮೆರಿಕಾದ ನಿಕರಾಗುವಾ ದೇಶದ ಮಧ್ಯದಲ್ಲಿ ಪೆಸಿಫಿಕ್ ಮಹಾಸಾಗರ ಮತ್ತು ಅಟ್ಲಾಂಟಿಕ್ ಮಹಾಸಾಗರವನ್ನು ಸೇರಿಸುವ ಕಾಲುವೆಯ ಯೋಜನೆಯನ್ನು ಮಾಡುತ್ತಿದೆ. ಚೀನಾ ಮಹಾಸಾಗರವನ್ನು ಬಂಗಾಳ ಕೊಲ್ಲಿಗೆ ಸೇರಿಸುವ ಕ್ರಾ ಇಸ್ತಮಸ್ ಕಾಲುವೆ ಯೋಜನೆಯನ್ನು ರೂಪಿಸುತ್ತಿದೆ. ಇವೆಲ್ಲವೂ ತನ್ನ ಎರಡನೇ ಸಿಲ್ಕ್ ರೋಡ್ ಯೋಜನೆಯ ಭಾಗವಾಗಿ ತನ್ನ ಉತ್ಪನ್ನಗಳ ಮಾರಾಟ ಮತ್ತು ಸಹಯೋಗಕ್ಕಾಗಿ ಎಂದು ಪ್ರತಿಪಾದಿಸುತ್ತಿದೆ. ರಶಿಯಾ ಕೂಡ ಇದರ ಭಾಗವಾಗಿ ಪೋಲಾರ್ ಸಿಲ್ಕ್ ರೋಡ್ (ಆರ್ಟಿಕ್ ಮೂಲಕ) ಪ್ರಸ್ತಾಪಿಸಿದೆ.
ಈ ಅನಿರೀಕ್ಷಿತ ಘಟನೆಯಿಂದ ಜಾಗತೀಕರಣಗೊಂಡಿರುವ ಪ್ರಪಂಚದ ಸಂಕೀರ್ಣತೆ ತೆರೆದುಕೊಂಡಿದೆಯಾದರು ಮುಂದಿರುವ ಅಸಮಾನ ಪೈಪೋಟಿಯನ್ನು ಸಂಘರ್ಷಗಳಾಗದಂತೆ ತಡೆಯಲು ಜಾಗತಿಕ ಸಮಾಜ ಸಜ್ಜಾಗಬೇಕು. ಕುಸಿಯುತ್ತಿರುವ ಪಾಶ್ಚಾತ್ಯ ಆರ್ಥಿಕತೆಯ (ಅಮೆರಿಕಾ ಮತ್ತು ಯೂರೋಪು) ನೇತಾರರು, ಪ್ರಪಂಚದಲ್ಲಿ ಮೂಲಸೌಕರ್ಯವನ್ನು ಮೇಲೆತ್ತಲು ಮತ್ತು ಚೀನಾ ಮತ್ತೊಂದು ಸಾಮ್ರಾಜ್ಯಶಾಹಿಯಾಗದಂತೆ ನೋಡಿಕೊಳ್ಳಬೇಕೆಂದರೆ ಒಂದು ಪೂರ್ವಷರತ್ತಿದೆ. ಅದು ತನ್ನ ಬಿಗಿಮುಷ್ಟಿಯಲ್ಲಿಟ್ಟುಕೊಂಡಿರುವ ಜಾಗತಿಕ ದಕ್ಷಿಣದ ಮೇಲಿನ ಹಿಡಿತ ಸ್ಥಗಿತಗೊಳಿಸಿ ತನ್ನ ಲೂಟಿಕೋರ ವಿಸ್ತರಣಾವಾದಿ ಧೋರಣೆಯನ್ನು ತೊರೆಯಬೇಕು. ಪ್ರಜಾಪ್ರಭುತ್ವೀಯ ಮೌಲ್ಯಗಳನ್ನು ಬಾಯಿಪಾಠವಾಗಿ ಹೇಳದೆ ನಿಜ ನಿಜಾರ್ಥದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು. ಪರಸ್ಪರ ಸಹಯೋಗ ಸಹಕಾರವಷ್ಟೇ ನಮ್ಮ ಮುಂದಿರುವ ಆಯ್ಕೆ.

ಭರತ್ ಹೆಬ್ಬಾಳ
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.


