ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಮತ್ತು ಕೇಂದ್ರದ ಬಿಜೆಪಿ ವರಿಷ್ಟರಿಗೆ ಪತ್ರ ಬರೆದಿದ್ದ ಸಚಿವ ಕೆ.ಎಸ್ ಈಶ್ವರಪ್ಪ ಇಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ‘ನನಗೆ ರೆಬಲ್ ಆಗುವುದೇ ಗೊತ್ತಿಲ್ಲ, ಆದರೆ ನ್ಯಾಯ ಕೇಳುವುದನ್ನು ಬಿಡಲ್ಲ. ನಿಯಮ ಮತ್ತು ಪ್ರಕ್ರಿಯೆಯನ್ನು ಮೀರಬಾರದು ಎಂಬುದಷ್ಟೆ ನನ್ನ ಆಗ್ರಹ’ ಎಂದು ಹೇಳಿದ್ದಾರೆ.
“ನಾನು ನ್ಯಾಯ ಕೇಳಿದ್ದೇನೆ. ನಿಯಮ ಉಲ್ಲಂಘನೆಯಾಗಿರುವುದನ್ನು ನಾನು ಆಕ್ಷೇಪಿಸಿದ್ದೇನೆ ಅಷ್ಟೆ. ಆದರೆ ಸರ್ಕಾರದ ವಿರುದ್ಧ ನಾನು ಬಂಡಾಯ ಎದ್ದಿಲ್ಲ. ಅಥವಾ ಮುಖ್ಯಮಂತ್ರಿ ಮತ್ತು ನನ್ನ ನಡುವೆ ಯಾವುದೇ ವೈಯಕ್ತಿಕ ತಕರಾರಿಲ್ಲ. ಆದರೆ ಕೆಲವು ಮಾಧ್ಯಮಗಳು ನಾನು ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದೇನೆ ಎಂದು ವರದಿ ಮಾಡಿವೆ, ಅದು ಸುಳ್ಳು” ಎಂದು ಸ್ಪಷ್ಟನೆ ನೀಡಿದ್ದಾರೆ.
ಒಂದು ರಾಜ್ಯದಲ್ಲಿ ಹಣವನ್ನು ಯಾವುದೆ ಕೆಲಸಕ್ಕೆ ಬಳಸುವ ಪರಮಾಧಿಕಾರ ಸಿಎಂಗೆ ಇದೆ. ಆದರೆ ಒಂದು ಇಲಾಖೆಗೆ ಹಣ ಬಂದಮೇಲೆ ಅದು ಇಲಾಖೆಯ ಕೆಲಸ. ಈಗ ಸಿಎಂ ನಮ್ಮ ಇಲಾಖೆಗೆ ಬಂದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಬಜೆಟ್‌ನಲ್ಲಿ ಒಂದು ಇಲಾಖೆಗೆ ಬಿಡುಗಡೆಯಾಗಿರುವ ಹಣವನ್ನು ಇಲಾಖೆಯ ಸಚಿವರಿಗೆ ಗೊತ್ತಿಲ್ಲದೆ ಅಥವಾ ಮಾಹಿತಿ ನೀಡದೇ ಆ ಹಣವನ್ನು ಶಾಸಕರಿಗೆ ಅಥವಾ ಇತರೆ ಕೆಲಸಗಳಿಗೆ ಬಳಸಲಾಗಿದೆ. ಇದನ್ನು ಆರ್ಥಿಕ ಇಲಾಖೆಯೂ ಒಪ್ಪಿಕೊಂಡಿದೆ. ನಮ್ಮಿಂದ ತಪ್ಪಾಗಿದೆ ಎಂದೂ ಹೇಳಿದೆ. ಆದರೆ ಮುಖ್ಯಮಂತ್ರಿ ಹೇಳಿದ ಮೇಲೆ ಆ ಕೆಲಸ ಮಾಡಲೇಬೇಕಲ್ಲ ಎಂದು ಅವರು ಹೇಳಿದರು. ಹಾಗಾಗಿ ನ್ಯಾಯ ಕೇಳಿದ್ದೇನೆ ಅಷ್ಟೆ. ಈ ಕುರಿತು ಸಿಎಂ ಸೇರಿದಂತೆ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಈಶ್ವರಪ್ಪ v/s ಯಡಿಯೂರಪ್ಪ- ‘ಬಿಜೆಪಿ ಶಿಸ್ತಿನ ಪಕ್ಷ, ಶಿಸ್ತು ಉಲ್ಲಂಘನೆ ಆಗಬಾರದು’: ಗೃಹ ಸಚಿವ ಬೊಮ್ಮಾಯಿ
“ಯಡಿಯೂರಪ್ಪ ರಾಜೀನಾಮೆ ಕೊಡಲಿ ಅಥವಾ ಈಶ್ವರಪ್ಪ ರಾಜೀನಾಮೆ ಕೊಡಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅದು ಖಂಡಿತಾ ಸಾಧ್ಯವಿಲ್ಲ. ನಾನು ಯಡಿಯೂರಪ್ಪ ಯಾವಾಗಲೂ ಒಂದೇ” ಎಂದು ಹೇಳಿದ್ದಾರೆ.
ಯಡಿಯೂರಪ್ಪ ಮತ್ತು ಈಶ್ವರಪ್ಪನವರ ನಡುವಿನ ಭಿನ್ನಾಭಿಪ್ರಾಯ ಕುರಿತು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ಇದು ಹೊಸದಲ್ಲ, ಮೊದಲಿನಿಂದಲೂ ಇದೆ. ನಾವು ಒಂದೇ ತಟ್ಟೆಯಲ್ಲಿ ಊಟಮಾಡಿದ್ದೇವೆ, ಬಿಜಿನಸ್ ಪಾರ್ಟ್ನರ್ ನಾವು. ಯಡಿಯೂರಪ್ಪ ಬಿಜೆಪಿಯಿಂದ ಹೊರಗೆ ಹೋಗಿ ಕೆಜೆಪಿ ಕಟ್ಟಿದ್ದರು. ಆಗ ಅವರೂ ಬಿಜೆಪಿಯ ವಿರುದ್ಧ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದರು. ನಾವೂ ಕೂಡ ತಕ್ಕ ಉತ್ತರ ಕೊಟ್ಟಿದ್ದೆವು. ನಂತರ ಬಿಜೆಪಿಯೊಳಗೆ ವಿಲೀನವಾಗಬೇಕು ಎನ್ನುವ ವಿಷಯ ಬಂದಾಗ ನಾನು ಯಡಿಯೂರಪ್ಪನವರನ್ನು ನೋಡಿ, ‘ಮೊದಲೇ ಹೇಳಿದ್ದೆ ಕೆಜೆಪಿ ಬೇಡ ಎಂದು. ಈಗ ನೋಡಿ ನಮಗೂ ನಿಮಗೂ ತ್ರಾಸ’ ಎಂದು ಹೇಳಿದೆ. ಅದಕ್ಕೆ ನೋವಿನಿಂದಲೇ ಉತ್ತರಿಸಿದ ಯಡಿಯೂರಪ್ಪ, ‘ನಾನು ಕೆಜೆಪಿ ಕಟ್ಟಬೇಕೆಂದೂ, ತಾವು ಜೊತೆಗೆ ಬರುತ್ತೇವೆ ಎಂದೂ ಹಲವರು ಒತ್ತಾಯಿಸಿದ್ದರು. ಆದರೆ ಪಕ್ಷ ಕಟ್ಟಿದ ನಂತರ ಯಾರೂ ಹತ್ತಿರ ಸುಳಿಯಲಿಲ್ಲ’ ಎಂದು ಹೇಳಿದ್ದರು. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಯಡಿಯೂರಪ್ಪ ತನ್ನ ಸುತ್ತಲಿನವರ ಮಾತನ್ನು ಬೇಗ ನಂಬುತ್ತಾರೆ. ಬಹುಶಃ ಈಗಲೂ ಅದೇ ಆಗಿದೆ ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಇದನ್ನೂ ಓದಿ: ಈಶ್ವರಪ್ಪನವರು ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ


