ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಇಲಾಖೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದ ವಿವಾದದ ಕುರಿತು ಗುರುವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಗೃಹಸಚಿವ ಬಸವರಾಜ ಬೊಮ್ಮಾಯಿ, “ನಮ್ಮದು ಶಿಸ್ತಿನ ಪಕ್ಷ. ಶಿಸ್ತು ಉಲ್ಲಂಘನೆ ಆಗಬಾರದು. ಸಿಎಂ ನೇತೃತ್ವದಲ್ಲಿ ಆಡಳಿತ ಮಾಡುತ್ತಿದ್ದೇವೆ, ಜನಕಲ್ಯಾಣ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ, “ಅನುದಾನ ಬಿಡುಗಡೆ ವಿಚಾರ ಆಡಳಿತಾತ್ಮಕವಾದದ್ದು. ಈ ವಿಚಾರದ ಬಗ್ಗೆ ಭಿನ್ನಾಭಿಪ್ರಾಯ, ಆಕ್ಷೇಪಗಳಿದ್ದರೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಲಿ” ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪನವರು ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ
“ಕಳೆದ ವರ್ಷ ಕೋವಿಡ್‌ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಇತ್ತೀಚೆಗೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಶಾಸಕರ ಒತ್ತಡದ ಮೇರೆಗೆ ಶಾಸಕರಿಗೆ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ಸಿಎಂ ಹಣಕಾಸು ಖಾತೆಯ ಸಚಿವರೂ ಆಗಿರುವುದರಿಂದ ಅವರೇ ಶಾಸಕರಿಗೆ ಹಣವನ್ನು ಬಿಡುಗಡೆ ಮಾಡಿದ್ದಾರೆ” ಎಂದು ಯಡಿಯೂರಪ್ಪ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.
“ಅನುದಾನ ಬಿಡುಗಡೆ ವಿಚಾರದಲ್ಲಿ ಆಕ್ಷೇಪಗಳಿದ್ದರೆ ಅದನ್ನು ಸಿಎಂ ಜೊತೆ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು. ಇದು ಆಡಳಿತಾತ್ಮಕ ವಿಷಯ ರಾಜ್ಯಪಾಲರ ಅಂಗಳಕ್ಕೆ ತೆಗೆದುಕೊಂಡು ಹೋಗಿರುವುದು ಸೂಕ್ತ ಅಲ್ಲ. ನಮ್ಮದು ಶಿಸ್ತಿನ ಪಕ್ಷ. ಶಿಸ್ತು ಉಲ್ಲಂಘನೆ ಆಗಬಾರದು. ಸಿಎಂ ನೇತೃತ್ವದಲ್ಲಿ ಆಡಳಿತ ಮಾಡುತ್ತಿದ್ದೇವೆ, ಜನಕಲ್ಯಾಣ ಕೆಲಸ ಮಾಡುತ್ತಿದ್ದೇವೆ” ಎಂದು ಬೊಮ್ಮಾಯಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರಿಗೆ ದೂರು: ಈಶ್ವರಪ್ಪ ವಿರುದ್ದ ಮುಗಿಬಿದ್ದ ಬಿಜೆಪಿ ಶಾಸಕರು