ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್, ವೇರ್‌ಹೌಸಿಂಗ್ ಸೊಸೈಟಿಯಲ್ಲಿ 39 ಕೋಟಿ ಹಗರಣ ನಡೆದಿದ್ದು, ಆರೋಗ್ಯ ಸಚಿವ ಸುಧಾಕರ್ ಅವರ ಅಣತಿಯಂತೆ ಆಪ್ತ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಸಚಿವರಿಗೆ ಕೋಟ್ಯಾಂತರ ರೂ ಕಿಕ್‌ಬ್ಯಾಕ್ ಸಂದಾಯವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರದ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಸರ್ಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಸೌಲಭ್ಯ ನೀಡಲು ಖರೀದಿಸುವ ಜೈವಿಕ ರಸಾಯನ ಶಾಸ್ತ್ರ ಮತ್ತು ಹೆಮಟೋಲಜಿ ಉಪಕರಣಗಳ ಟೆಂಡರ್ ಅನ್ನು ಆಪ್ತ ಕಂಪನಿಗೆ ನೀಡುವ ಉದ್ದೇಶದಿಂದ ಸಚಿವರ ಅಣತಿಯಂತೆ ಇಲಾಖೆ ಅಧಿಕಾರಿಗಳು ಭಾರಿ ಅಕ್ರಮ ನಡೆಸಿದ್ದಾರೆ” ಎಂದು ದೂರಿದ್ದಾರೆ.
ಟೆಂಡರ್ ನಂ. KDL/EQPT/ TND/LE-3 ಭಾಗ HAE/103/2020-21 (IND-720) ದಿನಾಂಕ 23/09/2020 ಮತ್ತು ಟೆಂಡರ್ ನಂ. KDL/EQPT/ Re-TND/LE-5 ಭಾಗ HA/104/2020-21 (IND-721) ದಿನಾಂಕ 23/09/2020 ರಂತೆ ಒಂದು ಅಲ್ಪಾವದಿ ಟೆಂಡರ್ ಅನ್ನು ರದ್ದು ಮಾಡಿ ರೀ ಟೆಂಡರ್ ಮಾಡುವಾಗ, ಟೆಂಡರ್ ಸ್ಪೆಸಿಫಿಕೇಶನ್ ಬದಲಿಸಲು ಅವಕಾಶವಿಲ್ಲ. ಹೀಗಿರುವಾಗ ಏಕೆ ಬದಲಾವಣೆ ಮಾಡಿದ್ದಾರೆ? ಟೆಂಡರ್ ನಲ್ಲಿ ಕೇವಲ ಒಂದೇ ಬಿಡ್ ಬಂದರೂ ಅದನ್ನು ಆಯ್ಕೆ ಸಮಿತಿ ಹೇಗೆ ಪರಿಗಣಿಸಿದೆ? ಇದರಲ್ಲಿ ಸುಧಾಕರ್ ಪಡೆದಿರುವ ಕಿಕ್ ಬ್ಯಾಕ್ ಎಷ್ಟು? ಎಂದು ಪ್ರಶ್ನಿಸಿದ್ದಾರೆ.
ಜೈವಿಕ ರಸಾಯನ ಶಾಸ್ತ್ರ ಮತ್ತು ಹೆಮಟೋಲಜಿ ಒಂದು ಉಪಕರಣವನ್ನು ದೆಹಲಿ ಸರ್ಕಾರ 1,80,540 ಕ್ಕೆ ಖರೀದಿಸಿದೆ. ಹಿಮಾಚಲ ಪ್ರದೇಶ ಸರ್ಕಾರ 1,30,000 ಕ್ಕೆ ಖರೀದಿಸಿದೆ ಮತ್ತು ದೆಹಲಿಯ ಮುನಿಸಿಪಾಲಿಟಿ 1,44,000 ಕ್ಕೆ ಖರೀದಿಸಿದೆ. ಹೀಗಿರುವಾಗ ನಮ್ಮ ಕರ್ನಾಟಕ ಸರ್ಕಾರ ಉಪಕರಣ ಒಂದಕ್ಕೆ 2,96,180 ನೀಡಿ ಖರೀದಿ ಆದೇಶ ಮಾಡಿದೆ. ಒಟ್ಟಾರೆ 1195 ಉಪಕರಣ ಖರೀದಿ ಮಾಡಬೇಕಾಗಿರುವುದರಿಂದ ನಮ್ಮ ಸರ್ಕಾರ 19.85 ಕೋಟಿ ಹೆಚ್ಚುವರಿಯಾಗಿ ನೀಡಬೇಕಾಗಿದೆ ಎಂದು ಆಪ್ ಆರೋಪಿಸಿದೆ.
5 Parts ಹೆಮಟಾಲಜಿ ಸೆಲ್ ಕೌಂಟರ್ ಖರೀದಿಗೆ ಆಯ್ಕೆಯಾದ ಕಂಪನಿ ಸಿಸ್ಮೆಕ್ಸ್. ಕೇರಳ ಸರ್ಕಾರಕ್ಕೆ ಇದೇ ಸಂಸ್ಥೆ 4.60 ಲಕ್ಷಕ್ಕೆ ಮಾರಾಟ ಮಾಡಿದ್ದು, ಕರ್ನಾಟಕ ಸರ್ಕಾರಕ್ಕೆ 8.35 ಲಕ್ಷಕ್ಕೆ ವ್ಯಾಪಾರ ಕುದುರಿಸಿದೆ. 165 ಉಪಕರಣಕ್ಕೆ 6.18 ಕೋಟಿಯಷ್ಟು ಹೆಚ್ಚುವರಿ ಭರಿಸಬೇಕಾಗಿದೆ ಎಂದು ಆಪ್ ಕಿಡಿಕಾರಿದೆ. ಈ ಎರಡು ಉಪಕರಣಗಳ ಖರೀದಿಯಲ್ಲಿ ಸುಮಾರು 25 ಕೋಟಿ ಗೂ ಹೆಚ್ಚು ಮೊತ್ತವನ್ನು ಸರಕಾರವು ಹೆಚ್ಚಾಗಿ ಪಾವತಿಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಸಿಸ್ಮೆಕ್ಸ್ ಎಂಬ ಕಂಪನಿಯು ಈ ಎರಡು ರೀತಿಯ ಉಪಕರಣವನ್ನು ಬೇರೆ ರಾಜ್ಯಕ್ಕೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದೆ. ಆದರೆ ನಮ್ಮ ರಾಜ್ಯಕ್ಕೆ ಡಬಲ್ ರೇಟ್ ನಲ್ಲಿ ಮಾರಿದ್ದರೂ ಇಲಾಖೆ ಕಣ್ಣುಮುಚ್ಚಿ ಕುಳಿತು ಖರೀದಿ ಆದೇಶ ನೀಡಿದ್ದಾದರೂ ಏಕೆ? ಕೊವಿಡ್ ಸಂದರ್ಭದಲ್ಲಿ ಎಲ್ಲಾ ಖರೀದಿಗಳನ್ನು ತರಾತುರಿಯಲ್ಲಿ ಮಾಡಬೇಕು ಎಂಬ ನೆಪ ಹೇಳಿ, ಸಚಿವರು ಮತ್ತು ಅಧಿಕಾರಿಗಳು ಪ್ರತಿ ಖರೀದಿಯಲ್ಲಿ ಕೋಟಿ ಕೋಟಿ ಬಾಚಿಕೊಂಡಿದ್ದಾರೆ. ಇದರ ಸತ್ಯಾಸತ್ಯತೆ ಹೊರಬರಬೇಕಾದರೆ ಸಮಗ್ರವಾಗಿ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಮೋಹನ್ ದಾಸರಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವೈರಸ್‌ಗೆ ಲಸಿಕೆ ಎಲ್ಲಿಂದ ತರುವುದು?: ಸಿದ್ದರಾಮಯ್ಯ