Homeಮುಖಪುಟಕಸ, ಖಾಸಗೀಕರಣ ಮತ್ತು ಬಿಬಿಎಂಪಿಯ ಸಾಂಪ್ರದಾಯಿಕ ಬಜೆಟ್!

ಕಸ, ಖಾಸಗೀಕರಣ ಮತ್ತು ಬಿಬಿಎಂಪಿಯ ಸಾಂಪ್ರದಾಯಿಕ ಬಜೆಟ್!

- Advertisement -
- Advertisement -

ನವೆಂಬರ್ 15, 1999ರಂದು, ಬೆಂಗಳೂರಿನ ಪ್ರೀಮಿಯರ್ ಹೋಟೆಲ್ ವಿಂಡ್ಸರ್ ಮ್ಯಾನರ್‌ನಲ್ಲಿ ಆಯೋಜಿಸಿದ್ದ ಮೆಗಾ ಕಾರ್ಯಕ್ರಮವೊಂದರಲ್ಲಿ, ಆಗ ನಗರದ ಆಯುಕ್ತರಾಗಿದ್ದ ಕೆ. ಜೈರಾಜ್, ಮಹಾನಗರದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಖಾಸಗೀಕರಣಗೊಳಿಸಬೇಕು ಎಂಬ ಪ್ರತಿಪಾದನೆಯನ್ನು ಮಾಡಿದರು. ಆಗ ತಾನೆ ಹೊಸದಾಗಿ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಈ ಪ್ರಸ್ತಾಪವನ್ನು ಅನುಮೋದಿಸಿ ಅದನ್ನು ಮಂಡಿಸಿದರು. ಸಾರ್ವಜನಿಕ ಸೇವೆಗಳ ಖಾಸಗೀಕರಣವನ್ನು ಪ್ರತಿಪಾದಿಸುವ ಮತ್ತು ಈ ಕಾರ್ಯಕ್ರಮದ ಸಹ-ಪ್ರಾಯೋಜಕರಾಗಿದ್ದ ವಿಶ್ವ ಬ್ಯಾಂಕ್, ಇದರಿಂದ ಸಹಜವಾಗಿಯೇ ಖುಷಿ ಪಟ್ಟಿತು!

ನಂತರದ ವರ್ಷಗಳಲ್ಲಿ, ತ್ಯಾಜ್ಯ ಸೇವೆಗಳ ಖಾಸಗೀಕರಣವು ಬೆಂಗಳೂರಿನಾದ್ಯಂತ ಪಿಡುಗಾಯಿತು. ಸಾವಿರಾರು ಪೌರಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಂಡರು ಅಥವಾ ಉದ್ಯೋಗ ಭದ್ರತೆಯನ್ನು ಕಳೆದುಕೊಂಡರು. ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗುವುದರಿಂದ ಕಡಿಮೆ ಭ್ರಷ್ಟಾಚಾರ ಉಂಟಾಗುತ್ತದೆ ಮತ್ತು ನಗರ ಆರೋಗ್ಯಕರವಾಗಿರುತ್ತದೆ ಎಂಬ ಪ್ರಮೇಯದಲ್ಲಿ ತ್ಯಾಜ್ಯ ನಿರ್ವಹಣೆಯ ಖಾಸಗೀಕರಣವನ್ನು ಉತ್ತೇಜಿಸಲಾಯಿತು. ಆದರೆ ಆಗಿದ್ದೇನು ಗೊತ್ತೆ? ಕಾರ್ಮಿಕರ ವ್ಯಾಪಕ ಶೋಷಣೆ ನಡೆಯಿತು. ತ್ಯಾಜ್ಯ ನಿರ್ವಹಣಾ ಸೇವೆಗಳ ಭಾರಿ ಪ್ರಮಾಣದ ಲಾಭಕರ ’ಸ್ಪರ್ಧೆ’ ಏರ್ಪಟ್ಟಿತು. ಭ್ರಷ್ಟಾಚಾರ ಭುಗಿಲೆದ್ದಿತು ಮತ್ತು ಅಂತಿಮವಾಗಿ ವ್ಯವಸ್ಥೆಯ ಕುಸಿತ ಶುರುವಾಯಿತು. ಕಾಲಾನಂತರದಲ್ಲಿ, ಮಂಡೂರು, ಮಾವಲ್ಲಿಪುರ ಮತ್ತು ಇತರ ಒಂದು ಡಜನ್ ಸ್ಥಳಗಳಲ್ಲಿ ಬೃಹತ್ ಪ್ರಮಾಣದ ಕಸದ ಪರ್ವತಗಳು ಬೆಳೆದವು. ಈ ಕಸದ ಪರ್ವತಗಳ ಬಳಿ ವಾಸಿಸುತ್ತಿದ್ದವರ ಜೀವನ ಮತ್ತು ಜೀವನೋಪಾಯದಲ್ಲಿ ಅವ್ಯವಸ್ಥೆ ಉಂಟಾಯಿತು.

PC : Prajavani

ಇದಕ್ಕೆ ಯಾರಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೂರ್ಖತನವನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಈ ಜವಾಬ್ದಾರಿ ಪ್ರಧಾನವಾಗಿ ಮಾವಲ್ಲಿಪುರದ ದಲಿತ ಸಮುದಾಯಗಳ ಹೆಗಲ ಮೇಲೆ ಬಿದ್ದಿತು. ಅವರ ನೀರು, ಭೂಮಿ, ಪರಿಸರ ಮತ್ತು ಆರೋಗ್ಯಕ್ಕೆ ಹಾನಿಕರವಾಗಿದ್ದ ಬೆಂಗಳೂರಿನ ಕಸವನ್ನು ತಮ್ಮ ಹಳ್ಳಿಯ ಹೊರವಲಯ ಮತ್ತು ಸಾರ್ವಜನಿಕ ಜಾಗದಲ್ಲಿ ತಂದು ಸುರಿಯುವುದನ್ನು ಅವರು ವಿರೋಧಿಸಿ ಕಸ ವಿಲೇವಾರಿ ಟ್ರಕ್‌ಗಳನ್ನು ತಡೆದರು. ಅವರ ಆರೋಗ್ಯ ಮತ್ತು ಅವರ ಜಾನುವಾರುಗಳ ಮೇಲೆ ಈ ತ್ಯಾಜ್ಯ ಬೀರಿ ದುಷ್ಪರಿಣಾಮ ಬೃಹತ್ತಾಗಿತ್ತು. ಬಿಬಿಎಂಪಿಯ ತೋಳ್ಬಲ ಮತ್ತು ಪೋಲಿಸ್ ದೌರ್ಜನ್ಯದ ವಿರುದ್ಧ ಮಾನವ ಗೋಡೆಗಳನ್ನು ನಿರ್ಮಿಸಿ ಗ್ರ್ರಾಮಸ್ಥರು ಕಸದ ಡಂಪಿಂಗ್ ಅನ್ನು ನಿಲ್ಲಿಸಲು ಯಶಶ್ವಿಯಾದರು ನಿಜ. ಆದರೆ ತ್ಯಾಜ್ಯ ಅಲ್ಲಿಯೇ ಉಳಿದು ಕಲುಷಿತಗೊಳಿಸುತ್ತಲೇ ಇತ್ತು.

ಕಳೆದ ವರ್ಷ ಇ.ಎಸ್.ಜಿ (ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್) ನಡೆಸಿದ ಅಧ್ಯಯನ ಬಹಿರಂಗಪಡಿಸಿದಂತೆ, ಸಮೀಕ್ಷೆ ನಡೆಸಿದ 100 ಪ್ರಕರಣಗಳಲ್ಲಿ ಈ ವಿಷಕಾರಿ ಕಸ 45 ಸಾವುಗಳಿಗೆ ಕಾರಣವಾಗಿದೆ. ಸಾವಿನ ಮೂರನೇ ಒಂದು ಭಾಗ ಕ್ಯಾನ್ಸರ್‌ನಿಂದ, ಇನ್ನೊಂದು ಮೂರನೇ ಒಂದು ಭಾಗ ಮೂತ್ರಪಿಂಡದ ವೈಫಲ್ಯಗಳು ಮತ್ತು ಉಳಿದವು ಹೃದಯ ಸಂಬಂಧಿ ಕಾಯಿಲೆಗಳಿಂದ ಸಂಭವಿಸಿವೆ. ಇವೆಲ್ಲವೂ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವ ವಿಷಕಾರಿ ಪರಿಣಾಮಗಳನ್ನು ಸೂಚಿಸುತ್ತವೆ. ಈ ಪರಿಸ್ಥಿತಿಯ ಬಗ್ಗೆ ಮತ್ತು ಅದನ್ನು ಹೇಗೆ ಅದು ಪರಿಹರಿಸುತ್ತದೆ ಎಂಬುದರ ಬಗ್ಗೆ ಬಿಬಿಎಂಪಿಯ ಬಜೆಟ್‌ನಲ್ಲಿ ಒಂದು ಸಾಲೂ ಕೂಡ ಪ್ರಸ್ತಾಪ ಇಲ್ಲ! ಕರ್ನಾಟಕ ಹೈಕೋರ್ಟ್‌ನ 2013ರ ಆದೇಶದ ಪ್ರಕಾರ, ಅಲ್ಲಿನ ಎಲ್ಲಾ ತ್ಯಾಜ್ಯಗಳನ್ನು ಬಯೋ ಮೈನಿಂಗ್ ಮೂಲಕ ಪರಿಹರಿಸಿ ಮತ್ತು ಆ ಪ್ರದೇಶವನ್ನು ಮುಂಚಿನ ಪರಿಸ್ಥಿತಿಗೆ ಮರಳಿಸಬೇಕೆಂದಿದೆ.

ನಾವು ತ್ಯಾಜ್ಯ ನಿರ್ವಹಣೆಯನ್ನು ನಗರ ಆಡಳಿತದ ಸೂಚಕವಾಗಿ ಬಳಸಿದರೆ ಮತ್ತು 1999 ರಿಂದ 2021 ರವರೆಗಿನ ಅವಧಿಯನ್ನು ಸಮೀಕ್ಷೆ ಮಾಡಿದಾಗ, ಈ ವ್ಯವಸ್ಥೆಯು ಖಾಸಗೀಕರಣಗೊಳ್ಳುವ ಮೊದಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂಬುದು ಸಾಬೀತಾಗುತ್ತದೆ. ಇಲ್ಲಿ ಸಾಕಷ್ಟು ಲೋಪಗಳಿವೆ, ಭ್ರಷ್ಟಾಚಾರವಿದೆ ಮತ್ತು ಕಾಳಜಿಯ ಕೊರತೆಯಿದೆ. ಆದರೆ ಖಂಡಿತವಾಗಿಯೂ ನಾವು ಕಳೆದ ಎರಡು ದಶಕಗಳಲ್ಲಿ ಕಂಡಷ್ಟು ದುಸ್ಥಿತಿ ಒದಗಿರಲಿಲ್ಲ. ದಶಕಗಳ ಖಾಸಗೀಕರಣದ ಸಾಕ್ಷಿ ಎಂಬಂತೆ ಕಾರ್ಮಿಕರ ಅತಿಯಾದ ಶೋಷಣೆ ನಡೆದಿದೆ ಮತ್ತು ಈ ಮೊದಲು ಇಂತಹ ತೀವ್ರ ಶೋಷಣೆ ಖಂಡಿತವಾಗಿಯೂ ಇರಲಿಲ್ಲ.

PC : Prajavani

ನಾವು ಬಿಬಿಎಂಪಿ 2021-22ರ ಬಜೆಟ್ ಅನ್ನು ಪರಿಶೀಲಿಸಿದಾಗ, ಘನ ತ್ಯಾಜ್ಯ ನಿರ್ವಹಣೆಗೆ 1600 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಇದು ಒಟ್ಟು ಬಜೆಟ್‌ನ ಸುಮಾರು 16 ಪರ್ಸೆಂಟ್. ಆದರೆ ವಿವರಗಳಲ್ಲಿ ನಾವು ಪೌರಕರ್ಮಿಕರ ಕಲ್ಯಾಣಕ್ಕಾಗಿ ನಾಮಕಾವಸ್ಥೆ ಮತ್ತು ಅತಿ ಕಡಿಮೆ ಮೊತ್ತವನ್ನು ಮೀಸಲು ಇಡಲಾಗಿದೆ. ಎಷ್ಟಪ್ಪಾ ಅಂದ್ರೆ ಅದು ಕೇವಲ ರೂ. 50 ಕೋಟಿ ಅಷ್ಟೆ. ಕಸಬರಿಗೆ ಮತ್ತು ಇತರ ಸುರಕ್ಷತಾ ಸಾಧನ ಖರೀದಿಸಲು ಪೌರಕಾರ್ಮಿಕರಿಗೆ ತಿಂಗಳಿಗೆ 200 ರೂಪಾಯಿ ನಿಗದಿ ಮಾಡಲಾಗಿದೆ. ಉದ್ಯೋಗದಾತ ತನ್ನ ನೌಕರರನ್ನು ರಕ್ಷಿಸಬೇಕು ಮತ್ತು ನೌಕರರ ಮೇಲೆ ಆ ಭಾರವನ್ನು ಹೊರಿಸಬಾರದು ಎನ್ನುವ ಕಾರ್ಮಿಕ ಕಾನೂನುಗಳಿಗೆ ಇದು ವಿರುದ್ಧವಾಗಿದೆ.

ಬಿಬಿಎಂಪಿಯ ಕಡ್ಡಾಯ ತ್ಯಾಜ್ಯ ನಿರ್ವಹಣಾ ಪ್ರಯತ್ನವನ್ನು ನಿಗಮಕ್ಕೆ ವರ್ಗಾಯಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಬಜೆಟ್ ಎತ್ತಿ ತೋರಿಸುತ್ತದೆ. ಇದು ಖಾಸಗೀಕರಣದ ಮೊದಲ ಘಟ್ಟ. ಅದರಲ್ಲಿ ಬಿಬಿಎಂಪಿ ಶೇ.51 ಷೇರುಗಳನ್ನು ಮತ್ತು ಉಳಿದ ಪಾಲನ್ನು ರಾಜ್ಯ ಸರ್ಕಾರ ಹೊಂದಲಿದೆ. ಪ್ರಶ್ನೆಯೆಂದರೆ ತಮ್ಮ ಜೀವ ಪಣಕ್ಕಿಟ್ಟು ಬೆಂಗಳೂರು ನಗರದ ನೈರ್ಮಲ್ಯ ಕಾಪಾಡಲು ಹೆಣಗಾಡುತ್ತಿರುವ ಸುಮಾರು 30 ಸಾವಿರ ಪೌರ ಕಾರ್ಮಿಕರ ಸ್ಥಿತಿ ಏನಾಗಲಿದೆ ಎಂಬುದು. ಅನೇಕ ವಿಧಗಳಲ್ಲಿ, ಪೌರಕಾರ್ಮಿಕರ ಕುರಿತು ಬಿಬಿಎಂಪಿಯ ಇತ್ತೀಚಿನ ವರ್ಷಗಳಲ್ಲಿ ತೋರಿಸುತ್ತಿರುವ ಅಸಡ್ಡೆ ಅದು ತನ್ನ ಪಾತ್ರವನ್ನು ಕಲ್ಪಿಸಿಕೊಳ್ಳುವ ಬಗೆಯನ್ನು ಸೂಚಿಸುತ್ತದೆ. ಈ ಬಜೆಟ್ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರೀತಿಯ ಯೋಜನೆಯನ್ನೂ ಒಳಗೊಂಡಿದೆ.

ಅಹಮದಾಬಾದ್‌ನ ಸಬರಮತಿ ವಾಟರ್ ಫ್ರಂಟ್‌ನ ರೂಪದಲ್ಲಿ ಕೆ.ಆರ್. ಮಾರುಕಟ್ಟೆಯಿಂದ ಕೋರಮಂಗಲವರೆಗೆ ಮಳೆ ನೀರಿನ ಕೊಯ್ಲು ಮತ್ತು ರಾಜಾ ಕಾಲುವೆಗೆ ಸಂಬಂಧಿಸಿದಂತೆ ಪುನರುಜ್ಜೀವನ ಹಾಗೂ ಸುಂದರವಾಗಿಸುವ ’ಸಿಟಿಜನ್ಸ್ ವಾಟರ್‌ವೇ ಯೋಜನೆ’ಗೆ 175 ಕೋಟಿ ರೂ ಮೀಸಲು ಇಟ್ಟಿದ್ದಾರೆ! ಈ ಮೆಗಾ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಾರ್ವಜನಿಕ ವಲಯದಲ್ಲಿ ಹಂಚಿಕೊಳ್ಳುತ್ತಿಲ್ಲ! ಸಬರಮತಿ ವಾಟರ್ ಫ್ರಂಟ್ ಅನ್ನು ಅನುಕರಿಸುವುದು ಸಮಸ್ಯೆಗೆ ಪರಿಹಾರವಲ್ಲ. ಆ ಯೋಜನೆ ನರ್ಮದಾ ನದಿಗೆ ಕುತ್ತು ತಂದಿತ್ತು (ನೀರನ್ನು ನರ್ಮದಾದಿಂದ ತಿರುಗಿಸಲಾಯಿತು) ಮತ್ತು ನಿರ್ದಯವಾಗಿ ಒಕ್ಕಲೆಬ್ಬಿಸುವಿಕೆಗೆ ಕಾರಣವಾಗಿತ್ತು. ಇದಕ್ಕೆ ವಿರುದ್ಧವಾಗಿ, ಬೆಂಗಳೂರು ನಗರದಲ್ಲಿ 840 ಕಿಲೋಮೀಟರ್ ಉದ್ದದ ರಾಜಕಾಲುವೆ ಮತ್ತು ಕೆರೆಗಳನ್ನು ಪುನರುಜ್ಜೀವನಗೊಳಿಸುವ ನಿರ್ಣಾಯಕ ಕೆಲಸ, 2018 ರಲ್ಲಿ ಮುಖ್ಯಮಂತ್ರಿಯವರ ನವ ನಗರೋತ್ಥಾನ ಬಜೆಟ್ ಮತ್ತು ಇತರ ಶಾಸನಬದ್ಧ ಏಜೆನ್ಸಿಗಳ ಬಜೆಟ್ ಹಂಚಿಕೆಯನ್ನು ಇನ್ನೂ ಅವಲಂಬಿಸಿದೆ. ಆದ್ದರಿಂದ ಕೆರೆ ಪುನರುಜ್ಜೀವನಕ್ಕೆ ಹಣ ಎಲ್ಲಿಂದ ಹರಿದುಬರುತ್ತದೆ ಎಂದು ನಿರ್ಣಯಿಸುವುದು ಕಷ್ಟ.

ಬಜೆಟ್ ಭಾಷಣ ಓದುತ್ತಿರುವಾಗಲೇ, ಚಾಮರಾಜಪೇಟೆಯ ಶಾಲೆಯೊಂದರ ಬಗ್ಗೆ ನಿರ್ಧಾರವನ್ನು ತೆಗದುಕೊಳ್ಳಲಾಗುತ್ತಿತ್ತು –

ಮೊದಲ ಕನ್ನಡ ಮಾಧ್ಯಮ ಶಾಲೆಯಾದ ಮಾಡೆಲ್ ಪ್ರೌಢಶಾಲೆಯನ್ನು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ನಿರ್ಧಾರ ಅದಾಗಿತ್ತು! ದಿವಂಗತ ಹಿರಿಯ ನಟ ವಿಷ್ಣುವರ್ಧನ್ ಮತ್ತು ಭಾರತದ ಪ್ರಮುಖ ಕ್ರಿಕೆಟಿಗ ಜಿ ಆರ್ ವಿಶ್ವನಾಥ್ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು. ಆದರೆ ವಿಪರ್ಯಾಸವೆಂದರೆ ಕರ್ನಾಟಕದ ರಾಜಧಾನಿಯಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ಬಿಬಿಎಂಪಿಗೆ ಉಳಿಸಿ ಮುನ್ನಡೆಸಲು ಸಾಧ್ಯವಾಗಲಿಲ್ಲ. ಇದು 10 ಸಾವಿರ ಕೋಟಿ ಬಜೆಟ್, ಶಿಕ್ಷಣಕ್ಕೆ ಕೊಟ್ಟಿರೋದು ಕೇವಲ 88 ಕೋಟಿ ರೂಪಾಯಿ!

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೂಡ ಬಜೆಟ್ ಸಪ್ಪೆಯಾಗಿದೆ. 300 ಕೋಟಿ ರೂಪಾಯಿಗಳನ್ನು ಅದಕ್ಕೆ ಹಂಚಿಕೆಯಾಗಿದ್ದರೆ, ಅದರಲ್ಲಿ ಹೆಚ್ಚಿನ ರೊಕ್ಕ ಕೊವಿಡ್ ಸಾಂಕ್ರಾಮಿಕವನ್ನು ನಿಭಾಯಿಸಲು ಹೋಗುತ್ತದೆ. ಅಂತಹ ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸಲು ನಿರ್ಣಾಯಕವಾದ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲು ಯಾವುದೇ ಒತ್ತು ನೀಡಿಲ್ಲ ಈ ಬಜೆಟ್‌ನಲ್ಲಿ! ಬಜೆಟ್‌ನಲ್ಲಿ ಬೆಂಬಲವಿಲ್ಲದಂತಾಗಿ, ವ್ಯವಸ್ಥಿತವಾಗಿ ಗಮನ ಹರಿಸಲು ಸಾಧ್ಯವಾಗದೆ, ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈಗಾಗಲೇ ಸಮಸ್ಯೆಯಲ್ಲಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

PC : Deccan Herald

ಬಜೆಟ್ ಭಾಷಣದಿಂದ ತಿಳಿಯುವಂತೆ, ಯೋಜನೆಗಳನ್ನು ರೂಪಿಸುವಲ್ಲಿ ಮತ್ತು ಉದ್ಯಾನವನಗಳಂತಹ ಸಾರ್ವಜನಿಕ ಸ್ವತ್ತುಗಳನ್ನು ನಿರ್ವಹಿಸುವಲ್ಲಿ ವಿಕೇಂದ್ರೀಕರಣ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕುರಿತು ಮಾಡಿರುವ ಪ್ರಸ್ತಾವನೆ ಸ್ವಾಗತಾರ್ಹ. ಬೆಂಗಳೂರಿನ 1200 ಉದ್ಯಾನವನಗಳನ್ನು ನಿರ್ವಹಿಸುವ ಹೂಡಿಕೆಯು ಈ ಸಲ ದ್ವಿಗುಣಗೊಂಡಿದೆ. ಹಿಂದಿನ ವರ್ಷದ ಹಂಚಿಕೆಗೆ ಹೋಲಿಸಿದರೆ ಇದು 214 ಕೋಟಿ ರೂಗೆ ವೃದ್ಧಿಸಿದೆ. 10 ಲಕ್ಷ ಸಸಿಗಳನ್ನು ನೆಡಬೇಕೆಂದಿದೆ, ಆದರೆ ಬಜೆಟ್ ಹಂಚಿಕೆಯಲ್ಲಿ ಈ ಬಗ್ಗೆ ನಿರ್ದಿಷ್ಟ ಪ್ರಸ್ತಾಪವಿಲ್ಲ ಮತ್ತು ಅವುಗಳನ್ನು ನಿಜವಾಗಿಯೂ ಮರಗಳಾಗಿ ಪರಿವರ್ತಿಸುವ ಸ್ಪಷ್ಟ ಯೋಜನೆ ಇಲ್ಲ. ಸ್ಪಷ್ಟವಾಗಿ, ಸಂವಿಧಾನದಲ್ಲಿ ಕಲ್ಪಿಸಿದ್ದಂತೆ, ವಾರ್ಡ್ ಸಮಿತಿಗಳು ಪ್ರಜಾತಾಂತ್ರಿಕವಾಗಿ ಅಭಿವೃದ್ಧಿಪಡಿಸಿದ ವಾರ್ಡ್ ಅಭಿವೃದ್ಧಿ ಯೋಜನೆಗಳು ಆಧಾರವಾಗಿದ್ದರೆ ಮಾತ್ರ ಅಂತಹ ಎಲ್ಲಾ ಯೋಜನೆಗಳನ್ನು ಸಾಕಾರಗೊಳಿಸಬಹುದು. ಇಲ್ಲದಿದ್ದರೆ, ಇದು ಸಾರ್ವಜನಿಕ ಹಣವನ್ನು ಲೂಟಿ ಮಾಡಲು ಸುಲಭವಾಗಿ ಬಾಗಿಲು ತೆರೆಯಬಹುದು.

ಒಟ್ಟಾರೆಯಾಗಿ, ಮೆಗಾ ಯೋಜನೆಗಳನ್ನು ಉತ್ತೇಜಿಸುವ ಬಜೆಟ್ ಇದಾಗಿದೆ. 191 ಕಿಲೋಮೀಟರ್ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಮಾನದಂಡಗಳಿಗೆ ಏರಿಸಲು ಯಾವ ಮೂಲದಿಂದ ಹಣ ಸಂಗ್ರಹಿಸಲಾಗುವುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಾಷ್ಟ್ರೀಯ ಕಟ್ಟಡ ಸಂಹಿತೆಯ ಪ್ರಕಾರ ಹೇಗಾದರೂ ರಸ್ತೆ ನಿರ್ಮಾಣವು ಉತ್ತಮ ಗುಣಮಟ್ಟದ್ದಾಗಿರಬೇಕಲ್ಲವೇ ಎಂಬ ಪ್ರಶ್ನೆ ಉಳಿದೇ ಇರುತ್ತದೆ. ರಸ್ತೆ ನಿರ್ವಹಣಾ ಕಾರ್ಯಗಳಿಗಾಗಿ 1000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಆದರೆ, ಹಿಂದಿನ ರಸ್ತೆ ಕಾಮಗಾರಿಗಳಿಗೆ ಪ್ರಮಾಣ ಮಾಡಿದ್ದ ಗುಣಮಟ್ಟ ನಿಜವಾಗಿಯೂ ಸಾಕಾರವಾಗಿದೆಯೇ ಎಂಬುದರ ಬಗ್ಗೆ ಯಾವುದೇ ದಾಖಲೆ ಲಭ್ಯವಿಲ್ಲ. ಆದ್ದರಿಂದ ನಾವು ಕಳೆದ ವರ್ಷ ಮತ್ತು ಹಿಂದಿನ ವರ್ಷಗಳಲ್ಲಿ ಟಾರ್ ಮೇಲೆ ಟಾರ್ ಸುರಿದಂತೆ, ಪ್ರತಿ ಋತುವಿನಲ್ಲೂ ಫುಟ್‌ಪಾತ್ ಅನ್ನು ಕಿತ್ತು ಮತ್ತೆ ಹಾಕುವಂತೆ ಮಾಡುವ ಕೆಲಸ ಮತ್ತೆ ಪುನರಾವರ್ತಿತವಾಗುತ್ತದೆಯೇ ಎಂಬ ಪ್ರಶ್ನೆ ಉಳಿದಿದೆ. ಎಲ್ಲರಿಗೂ ತಿಳಿದಿರುವಂತೆ, ಇದು ಗುತ್ತಿಗೆದಾರರನ್ನು ಪ್ರಭಾವಿ ರಾಜಕೀಯ ಬಲವನ್ನಾಗಿ ಪರಿವರ್ತಿಸಿದ ಮಾರ್ಗಗಳಿವೆ ಮತ್ತು ಅವರು ನಮ್ಮನ್ನೀಗ ಆಳುತ್ತಿದ್ದಾರೆ ಕೂಡ!

ಚುನಾಯಿತ ಮಂಡಳಿಯ ಅನುಪಸ್ಥಿತಿಯಲ್ಲಿ ಹಿರಿಯ ಅಧಿಕಾರಿಗಳು ಸಿದ್ಧಪಡಿಸಿದ ಈ ಬಜೆಟ್, ಹಲವಾರು ಸಣ್ಣ ರಾಷ್ಟ್ರಗಳಿಗೆ ಸಮಾನವಾದ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರು ನಗರಕ್ಕೆ ಹೆಚ್ಚು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಆಳವಾದ ಪ್ರಜಾತಾಂತ್ರ್ರಿಕತೆ ಬೇಕಾಗಿದೆ ಎಂದು ಆಗ್ರಹಿಸುವಂತೆ ಮಾಡಿದೆ.

ಲಿಯೋ ಎಫ್. ಸಾಲ್ಡಾನಾ

ಲಿಯೋ ಎಫ್. ಸಾಲ್ಡಾನಾ
ಪರಿಸರ ಸಂರಕ್ಷಕ ಕಾರ್ಯಕರ್ತರು ಹಾಗೂ ’ಭಾರತದಲ್ಲಿ ಪರಿಸರಕ್ಕಾಗಿ ನ್ಯಾಯ’ ಮೈತ್ರಿ ಬಳಗದ ಭಾಗವಾಗಿದ್ದಾರೆ.


ಇದನ್ನೂ ಓದಿ: ಕುಮಾರಸ್ವಾಮಿ 10 ಕೋಟಿ ಹಣ ಪಡೆದ ಆರೋಪ: ಬಹಿರಂಗ ಚರ್ಚೆಗೆ ಆಹ್ವಾನಿಸಿದ ಜಮೀರ್ ಅಹ್ಮದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ರಾಜಕಾಲುವೆಯ ಎರಡೂ ಬದಿಗಳಲ್ಲಿ ೩೦-೪೦ ಅಡಿಗಳ ದಾರಿಯನ್ನು ಕಾಲುವೆ ಉದ್ದಕ್ಕೂ ಮಾಡಬೇಕು. ಈ ದಾರಿಯಲ್ಲಿ ಕಾಲುವೆಯ/ಕಣಿವೆಯ ಎರಡೂ ಬದಿಯ ಏರಿಯಾಗಳ ಮನೆ/ಉದ್ದಿಮೆಗಳಿಂದ ಹರಿದು ಬರುವ ಕೊಳಚೆ ನೀರನ್ನು ದಾರಿಯ ಉದ್ದಕ್ಕೂ ಅಳವಡಿಸಿರುವ/ಅಳವಡಿಸುವ ಕೊಳವೆಗಳಿಂದ (ಮನೆ ಕೊಳಚೆ,ಉದ್ದಿಮೆಗಳ ಕೊಳಚೆ ನೀರು ಸಾಗಿಸಲು ಬೇರೆ ಕೊಳವೆಸಾಲು ಅಳವಡಿಸಿ) ಕೊಳಚೆ ನೀರನ್ನು ಊರಾಚೆ ಒಯ್ದು ,ಅಲ್ಲಿ ತಿಳಿಗೊಳಿಸಿ ಕಣಿವೆಗೆ ಬಿಡಬೇಕು. ಕಾಲುವೆಯ ಎರಡೂ ಬದಿ ದಾರಿ ಮಾಡಲು ಹಣ ವೆಚ್ಚವಾಗುತ್ತದೆ.ಆದರೆ, ಇದನ್ನು ಹೊರತು ಮಾಡಿ ಬೇರೆ ದಾರಿಇಲ್ಲ.
    ಈ ದಾರಿಗಳು ವೆಹಿಕಲ್ ಗಳ ಓಡಾಟಕ್ಕೂ, ಹಾಗೂ ಕಾಲುವೆಯನ್ನು ಜೋಪಾನ ಮಾಡಲು ನೆರವಾಗುತ್ತವೆ.
    ಕೊಳಚೆ ನೀರು ರಾಜಕಾಲುವೆ ಸೇರದಂತೆ ಬೇರೆ ದಾರಿಗಳಿವೆಯೇ?. ಇದಕ್ಕಾಗುವ ವೆಚ್ಚದ ಬಗ್ಗೆ ತಕ್ಕ ಒರೆತವಾಗಬೇಕು.
    ಕಣಿವೆಗಳಿಗೆ ಅಲ್ಲಲ್ಲಿ ಕೆರೆಗಳನ್ನು ಕಟ್ಡಿರುವುದು ಇದೆ.
    ಇಂತೆಡೆ ಕೊಳಚೆ ನೀರು ಕೆರೆಗೆ ಸೇರದಂತೆ ತಕ್ಕ ಮಟ್ಡ(Level)ದಲ್ಲಿ ಕೊಳಚೆ ಕೊಳವೆಗಳನ್ನು ಹಾಯಿಸಿ, ಕೆರೆ ಏರಿ ದಾಟಿದ ಮೇಲೆ ಕಣಿವೆಗೆ ಸಮಾನಾಂತರವಾಗಿ ಮತ್ತೆ ಕೊಳವೆಗಳ ಮೂಲಕ ಕೊಳಚೆ ನೀರನ್ನು ಊರಾಚೆ ಒಯ್ಯ ಬೇಕು.
    ಇದನ್ನು ಬಿಟ್ಟು ಕೊಳಚೆ ನೀರನ್ನು ಕೆರೆಗೆ ಬಿಟ್ಡು ಕೆರೆಯನ್ನು ಶುದ್ದೀಕರಣ ಮಾಡುವುದು ತಕ್ಕದಲ್ಲದ ನಡೆ.

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...