ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ವಿರುದ್ದ ರಾಜ್ಯಪಾಲರಿಗೆ ದೂರು ನೀಡಿದ್ದ ಸಚಿವ ಈಶ್ವರಪ್ಪ ಅವರ ಮೇಲೆ ಬಿಜೆಪಿ ಶಾಸಕರು ಮುಗಿಬಿದ್ದಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ನಿಂತಿದ್ದು, “ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಯ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ರಾಜ್ಯಪಾಲರಿಗೆ, ಪ್ರಧಾನಿಗಳಿಗೆ ದೂರು ಕೊಡುವುದು ಸರಿಯಲ್ಲ. ಉಪಚುನಾವಣೆ ಸಂದರ್ಭದಲ್ಲಿ ಈ ರೀತಿ ಆದರೆ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ. ಹೀಗಾಗಿ ನಾಲ್ಕು ಗೋಡೆ ಮಧ್ಯೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ವಿರುದ್ದವೇ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಈಶ್ವರಪ್ಪ!
“ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗ್ರಾಮೀಣಾಭಿವೃದ್ಧಿಗೆ ಅನುದಾನ ಬಿಡುಗಡೆಗೆ ಮಾಡುವಂತೆ ನಾವೆಲ್ಲಾ ಶಾಸಕರು ಮನವಿ ಮಾಡಿದ್ದೆವು, ಮುಖ್ಯಮಂತ್ರಿ ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ. ಆದರೆ ಈಶ್ವರಪ್ಪ ಹೇಳಿದಂತೆ ಅವರ ಇಲಾಖೆಯಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡಿಲ್ಲ” ಎಂದು ರೇಣುಕಾಚಾರ್ಯ ಹೇಳಿದ್ದಾರೆ.
“ನಾಯಕತ್ವ ಬದಲಾವಣೆಗೆ ಇದು ಮುನ್ನುಡಿ ಅಲ್ಲ. ಯಡಿಯೂರಪ್ಪನವರೇ ಮುಂದೆಯೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಈಗಾಗಲೇ ಈಶ್ವರಪ್ಪನವರೇ ಹೇಳಿದ್ದಾರೆ. ಹೀಗಾಗಿ ಈಶ್ವರಪ್ಪನವರ ದೂರಿಗೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ” ಎಂದು ಅವರು ಹೇಳಿದ್ದಾರೆ.
“ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ, ಒಗ್ಗಟ್ಟಾಗಿಯೇ ಇದ್ದೇವೆ. ಯಡಿಯೂರಪ್ಪನವರೇ ಮುಂದಿನ 2 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂಬುದರಲ್ಲಿ ಯಾರಿಗೂ ಯಾವುದೇ ಅನುಮಾನವಿಲ್ಲ. ಆದರೆ ಈಶ್ವರಪ್ಪ ಮಾತ್ರ ಈ ರೀತಿ ಮಾಡಿದ್ದು ಸರಿಯಲ್ಲ” ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಿಮಗೆ ಅಧಿಕಾರ ಸಿಕ್ಕಿದ್ದು ಅಲ್ಪನಿಗೆ ಐಶ್ವರ್ಯ ಸಿಕ್ಕಂತಾಗಿದೆ: ಸಿಎಂ v/s ಈಶ್ವರಪ್ಪ ಬಗ್ಗೆ ಕಾಂಗ್ರೆಸ್
ನಂತರ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಈ ಬಗ್ಗೆ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್‌ಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ ಅವರು, “ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ಅಂದರೆ ಕಾಂಗ್ರೆಸ್, ನೀರಿನಿಂದ ಹೊರಗೆ ಬಂದ ಮೇಲೆ ಮೀನು ಒದ್ದಾಡುತ್ತಲ್ಲ ಹಾಗೆಯೆ ಕಾಂಗ್ರೆಸ್‌ನವರ ಕಥೆಯೂ ಆಗಿದೆ. ಕಾಂಗ್ರೆಸ್ನಿಂದ A ಯಿಂದ Z ವರೆಗೆ ಎಲ್ಲರೂ ಖುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ಇವರು ನಮ್ಮ ಬಗ್ಗೆ ಏನು ಹೇಳೋದು?” ಎಂದು ಹೇಳಿದ್ದಾರೆ.
ರಾಯಣ್ಣ ಬ್ರಿಗೇಡ್ ಮುಖಂಡ ಈಶ್ವರಪ್ಪ ವಿರುದ್ದ ಗರಂ!
ಸ್ವತಃ ಈಶ್ವರಪ್ಪ ಅವರ ನೇತೃತ್ವದಲ್ಲೇ ಸ್ಥಾಪನೆಯಾದ ರಾಯಣ್ಣ ಬ್ರಿಗೇಡ್ ಮುಖಂಡ, ಶಾಸಕ ವಿರೂಪಾಕ್ಷ ಕೂಡಾ ತಿರುಗಿ ಬಿದ್ದಿದ್ದು, “ಈಶ್ವರಪ್ಪ ಮನಸ್ಸಿಗೆ ಏನಾದರೂ ನೋವಾಗಿದ್ದರೆ ಬಂದು ಅದನ್ನು ಸರಿಪಡಿಸಿಕೊಳ್ಳಬೇಕು. ಅದು ಬಿಟ್ಟು ಕ್ಯಾಬಿನೆಟ್ ಸಚಿವರಾಗಿ ಸಿಎಂ ಮೇಲೆ ಈ ರೀತಿ ದೂರು ಕೊಡುವುದು ಸರಿಯಲ್ಲ. ಹೀಗಾಗಿ ತಕ್ಷಣ ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು. ಇನ್ನು ಮುಂದೆ ಈಶ್ವರಪ್ಪ ಈ ರೀತಿ ಮಾಡದಂತೆ ನೋಡಿಕೊಳ್ಳಬೇಕು ಎಂದು ದೂರು ಕೊಡುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ 10 ಕೋಟಿ ಹಣ ಪಡೆದ ಆರೋಪ: ಬಹಿರಂಗ ಚರ್ಚೆಗೆ ಆಹ್ವಾನಿಸಿದ ಜಮೀರ್ ಅಹ್ಮದ್