ಕಾಂಗ್ರೆಸ್‌ನ ಮೈತ್ರಿಕೂಟ ಪಕ್ಷಕ್ಕೆ ಬೆದರಿಕೆಯೊಡ್ಡಿದ ಆರೋಪದ ಹಿನ್ನೆಲೆಯೆಲ್ಲಿ ರಾಜ್ಯ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಹಿಮಂತ ಬಿಸ್ವಾ ಶರ್ಮಾ ಅವರಿಗೆ 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಅಸ್ಸಾಂ ಚುನಾವಣಾ ಆಯೋಗ ನಿಷೇಧ ಹೇರಿದೆ.
ಕಾಂಗ್ರೆಸ್ ನೀಡಿದ ದೂರಿನ ಮೇರೆಗೆ ಚುನಾವಣಾ ಆಯೋಗ ಶುಕ್ರವಾರ ತಡರಾತ್ರಿ ತನ್ನ ಆದೇಶ ಹೊರಡಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಹೆಸರನ್ನು ದುರುಪಯೋಗಪಡಿಸಿಕೊಂಡು ಹಗ್ರಾಮ ಮೊಹಿಲರಿ ಅವರನ್ನು ಜೈಲಿಗೆ ಕಳುಹಿಸುವುದಾಗಿ ಶರ್ಮಾ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ದೂರಿದೆ. ಹಗ್ರಾಮ ಮೊಹಿಲರಿ ನೇತೃತ್ವದ ಬಿಪಿಎಫ್ (ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್) ವಿರೋಧ ಪಕ್ಷದ ಮೈತ್ರಿಕೂಟದಲ್ಲಿದೆ.
ಗುರುವಾರ ಚುನಾವಣಾ ಆಯೋಗವು ಶರ್ಮಾ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಅದಕ್ಕೆ ಅವರು ಇಂದು ಉತ್ತರಿಸಿದ್ದಾರೆ. ಅವರ ವಿವರಣೆ ತೃಪ್ತಿಕರವಾಗಿಲ್ಲ ಎಂದು ಪರಿಗಣಿಸಲಾಗಿದೆ. ಮಾರ್ಚ್ 28 ರಂದು ತನ್ನ ಭಾಷಣದಲ್ಲಿ ಶರ್ಮಾ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
I am asked by ECI to stop campaigning for next 48 hours. Therefore all my meetings scheduled for tomorrow stand cancelled.
— Himanta Biswa Sarma (@himantabiswa) April 2, 2021
ಇದನ್ನೂ ಓದಿ: ಸಿಡಿ ಪ್ರಕರಣ: ಸಂತ್ರಸ್ತೆ ಪರ ವಕೀಲ ಜಗದೀಶ್ ವಿರುದ್ಧವೇ ದೂರು ನೀಡಿದ ಎಸ್‌ಐಟಿ!
“ಹಗ್ರಾಮ ಮೊಹಿಲರಿ ಉಗ್ರವಾದ ಚಟುವಟಿಕೆಯಲ್ಲಿ ತೊಡಗಿದರೆ… ಆತ ಜೈಲಿಗೆ ಹೋಗುತ್ತಾನೆ. ಇದು ನೇರವಾದ ಮಾತು… ಈಗಾಗಲೇ ಸಾಕಷ್ಟು ಪುರಾವೆಗಳು ದೊರೆತಿವೆ. ಈ ಪ್ರಕರಣವನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಗೆ ನೀಡಲಾಗುತ್ತಿದೆ. ಕೊಕ್ರಜಹಾರ್ ನಲ್ಲಿ ಕಾರಿನೊಳಗೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪ್ರಕರಣವನ್ನು ಎನ್ಐಎಗೆ ನೀಡಲಾಗುತ್ತಿದೆ. ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದಲ್ಲಿ ಹಗ್ರಾಮ ಸಹಿತ ಯಾರಿಗೂ ಅಶಾಂತಿ ಸೃಷ್ಟಿಸಲು ಅವಕಾಶ ನೀಡುವುದಿಲ್ಲ”ಎಂದು ಶರ್ಮಾ ಹೇಳಿದ್ದರು.
ಮಂಗಳವಾರ ನಡೆಯಲಿರುವ ಮೂರನೇ ಮತ್ತು ಅಂತಿಮ ಹಂತದ ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ಈ ಕ್ರಮ ಕೈಗೊಂಡಿದೆ. ಜೊತೆಗೆ ಚುನಾವಣಾ ಆಯೋಗವು ಅವರ ಸಹೋದರ ಮತ್ತು ಗೋಲ್ಪಾರ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವಾ ಶರ್ಮಾ ಅವರನ್ನು ಜಿಲ್ಲೆಯಿಂದ ವರ್ಗಾಯಿಸಿದೆ.
ಆಯೋಗವು ಶುಕ್ರವಾರ ಹೊರಡಿಸಿದ ಆದೇಶದಲ್ಲಿ, ಸುಶಾಂತ ಬಿಸ್ವಾ ಶರ್ಮಾ ಅವರನ್ನು ರಾಜ್ಯ ಕೇಂದ್ರ ಕಚೇರಿಯಲ್ಲಿ ಸೂಕ್ತ ಹುದ್ದೆಗೆ ವರ್ಗಾಯಿಸಲಾಗುವುದು ಮತ್ತು ಐಪಿಎಸ್ ಅಧಿಕಾರಿ ವೀರ ವೆಂಕಟ ರಾಕೇಶ್ ರೆಡ್ಡಿ ಅವರನ್ನು ಗೋಲ್ಪಾರ ಜಿಲ್ಲೆಯ ಹೊಸ ಪೊಲೀಸ್ ವರಿಷ್ಠಾಧಿಕಾರಿಯಾಗಿ ತಕ್ಷಣವೇ ನೇಮಿಸಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಬಿಜೆಪಿ ಬೆಂಬಲಿಗರ ಹಲ್ಲೆ- ಆರೋಪ


