ವಾಷಿಂಗ್ಟನ್‌ನಲ್ಲಿರುವ ಅಮೆರಿಕ ಸಂಸತ್ತು ಕ್ಯಾಪಿಟಲ್ ಕಟ್ಟಡಕ್ಕೆ ವ್ಯಕ್ತಿಯೊಬ್ಬ ಕಾರನ್ನು ವೇಗವಾಗಿ ನುಗ್ಗಿಸಿರುವ ಘಟನೆ ನಡೆದಿದ್ದು, ಇಲ್ಲಿ ಸಂಭವಿಸಿದ ಅವಘಡದಲ್ಲಿ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಹಿರಿಯ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಂತರ ವಾಹನ ಚಾಲಕನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಅಮೆರಿಕ ಕ್ಯಾಪಿಟಲ್ ಪೊಲೀಸ್ (ಯುಎಸ್‌ಸಿಪಿ) ಮಾಹಿತಿ ನೀಡಿದೆ.
‘ಗುಡ್ ಫ್ರೈಡೇ’ ದಿನದಂದೇ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ಸ್ಥಳೀಯ ಸಮಯ ಸುಮಾರು 1 ಗಂಟೆಗೆ ಹೊತ್ತಿಗೆ ವೇಗವಾಗಿ ಬಂದ ನೀಲಿ ಸೆಡಾನ್ ಕಾರು ಬ್ಯಾರಿಕೇಡ್ ಹೊಡೆದುರುಳಿಸಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಡಿಕ್ಕಿ ಹೊಡೆದಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮೃತ ಪೊಲೀಸ್ ಅಧಿಕಾರಿ ಬಿಲ್ಲಿ ಇವಾನ್ಸ್ ಎಂದು ಗುರುತಿಸಲಾಗಿದ್ದು, 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.
BREAKING : Car smashes into one of US #Capitol entrances, ambulance on site, 2 people carried on stretcher and chopper came in and left.
Developing… video shows car: pic.twitter.com/R8PVeAYGDA
— Joyce Karam (@Joyce_Karam) April 2, 2021
ಇದನ್ನೂ ಓದಿ: ’ಕ್ಯಾಪಿಟಲ್’ ಮೇಲೆ ಬಲಪಂಥೀಯತೆಯ ದಾಳಿ; ಈ ವಿದ್ಯಮಾನಗಳಿಗೆ ಕಾರಣವಾಗಿದ್ದೇನು?
ಮೃತ ಅಧಿಕಾರಿಗೆ ಸಂತಾಪ ಸೂಚಿಸಿರುವ ಅಮೆರಿಕ ಅಧ್ಯಕ್ಷ ಜೊ ಬೈಡೆನ್, ಇದು ಹೃದಯ ವಿದ್ರಾವಕ ಘಟನೆ ಎಂದಿದ್ದಾರೆ. ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇವಾನ್ಸ್ ಸಂತಾಪ ಸೂಚಿಸಿದ್ದು, ‘ನಮ್ಮ ಪ್ರಜಾಪ್ರಭುತ್ವದ ಹುತಾತ್ಮ’ ಎಂದು ಬಣ್ಣಿಸಿದ್ದಾರೆ.
ಪೊಲೀಸ್ ಅಧಿಕಾರಿಗೆ ಗೌರವ ಸೂಚಕವಾಗಿ ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡದಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಯಿತು. ಅಲ್ಲದೆ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಜನವರಿ 6ರಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ನಡೆಸಿದ ದಂಗೆಯಲ್ಲಿ ಬ್ರಿಯಾನ್ ಸಿಕ್ನಿಕ್ ಎಂಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರು. ಒಂದು ವಾರದ ಬಳಿಕ ಹೋವರ್ಡ್ ಲೈಬೆನ್‌ಗುಡ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈಗ ಕಾರು ಚಾಲನೆ ಮಾಡಿದ ವ್ಯಕ್ತಿಯನ್ನು 25 ವರ್ಷದ ನೋವಾ ಗ್ರೀನ್ ಎಂದು ಗುರುತಿಸಲಾಗಿದೆ. ಚಾಲಕ ಕೈಯಲ್ಲಿ ಚಾಕುವನ್ನು ಹಿಡಿದಿದ್ದ ಎಂಬುದು ವಿಡಿಯೊದಲ್ಲಿ ದಾಖಲಾಗಿದೆ ಎಂದು ಕ್ಯಾಪಿಟಲ್ ಪೊಲೀಸ್ ಮುಖ್ಯಸ್ಥ ಯೋಗಾನಂದ ಪಿಟ್‌ಮ್ಯಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಘಟನೆಯ ಬಗೆ ತನಿಖೆ ನಡೆಸಲಾಗುತ್ತಿದೆ. ಚಾಲಕ ಮಾನಸಿಕ ಆರೋಗ್ಯ ಸಮಸ್ಯೆಗಳು ಇತ್ತೇ ಎಂಬುದನ್ನು ಪರಿಶೀಸಲಾಗುತ್ತಿದೆ.
ದಾಳಿಕೋರನ ಗುರುತು ಅಥವಾ ಅವನ ಪ್ರೇರಣೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ ಇದರಲ್ಲಿ ಭಯೋತ್ಪಾದಕ ಸಂಪರ್ಕವನ್ನು ಶಂಕಿಸಲಾಗಿಲ್ಲ ಎಂದು ವಾಷಿಂಗ್ಟನ್ ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯಸ್ಥ ರಾಬರ್ಟ್ ಕಾಂಟೀ ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕ ಕ್ಯಾಪಿಟಲ್ ಗಲಭೆ: ತ್ರಿವರ್ಣ ಧ್ವಜ ಹಾರಿಸಿದವರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು
Super