ಸಿಡಿ ಪ್ರಕರಣ: ಸಂತ್ರಸ್ತೆ ಪರ ವಕೀಲ ಜಗದೀಶ್ ವಿರುದ್ಧವೇ ದೂರು ನೀಡಿದ ಎಸ್‌ಐಟಿ!

ಸಿಡಿ ಪ್ರಕರಣ ರಾಜ್ಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಪ್ರಕರಣದ ತನಿಖೆ ಮಾಡಲು ಸರ್ಕಾರ (ವಿಶೇಷ ತನಿಖಾ ತಂಡ) ಎಸ್‌ಐಟಿ ರಚಿಸಿದೆ. ಈ ಹಿಂದೆ ಎಸ್‌ಐಟಿ ಸರ್ಕಾರದ ಪರವಾಗಿದೆ ಎಂದು ಯುವತಿ ಸೇರಿದಂತೆ ಹಲವರು ಆರೋಪಿಸಿದ್ದರು. ಅದಾಗ್ಯೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಯುವತಿಯೂ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು. ಆದರೆ ಈಗ ಸಂತ್ರಸ್ತ ಯುವತಿ ಪರ ವಕೀಲರಾದ ಜಗದೀಶ್ ವಿರುದ್ಧ ಎಸ್‌ಐಟಿ ದೂರು ನೀಡಿದೆ.

“ವಕೀಲ ಕೆ.ಎನ್‌. ಜಗದೀಶ್ ಕುಮಾರ್ ವಿನಾಕಾರಣ ಇಲ್ಲಸಲ್ಲದ ಹೇಳಿಕೆ ನೀಡಿ ತನಿಖೆಗೆ ತೊಂದರೆ ಉಂಟು ಮಾಡುತ್ತಿದ್ದಾರೆ” ಎಂದು ಆರೋಪಿಸಿ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ತಂಡದ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ ಎಂದು ಮಾಧ್ಯವಮಗಳು ವರದಿ ಮಾಡಿವೆ.

ಆದರೆ ಎಸ್‌ಐಟಿ ಅಧಿಕಾರಿಗಳ ಬಗ್ಗೆಯೇ ಹಲವು ಆರೋಪ ಮಾಡುತ್ತಿರುವ ಜಗದೀಶ್, ಮಾಧ್ಯಮಗಳ ಎದುರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದಾರೆ. ಇದರಿಂದ ಮುಜುಗರಕ್ಕೀಡಾಗುತ್ತಿರುವ ಅಧಿಕಾರಿಗಳು, ಜಗದೀಶ್‌ ಅವರಿಂದ ಆಗುತ್ತಿರುವ ತೊಂದರೆ ಬಗ್ಗೆ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ಬಳಿ ಹೇಳಿಕೊಂಡಿದ್ದಾರೆ.

“ತನಿಖಾ ಸ್ಥಳ, ವಿಚಾರಣಾ ಕೊಠಡಿ ಬಳಿ ಜಗದೀಶ್‌ ಬರುತ್ತಿದ್ದಾರೆ. ಮಾಧ್ಯಮಗಳ ಎದುರು ಎಸ್‌ಐಟಿ ವಿರುದ್ಧವೇ ಮಾತನಾಡುತ್ತಿದ್ದಾರೆ. ಇದು ತನಿಖೆಗೆ ಅಡಚಣೆಯನ್ನುಂಟು ಮಾಡುತ್ತಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳು ಕೋರಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಗದೀಶ್‌ಕುಮಾರ್, “ಸಂತ್ರಸ್ತೆ ಮನವಿ ಮಾಡಿದ್ದರಿಂದ ಅವರ ಪರ ಕಾನೂನು ಪ್ರಕಾರ ಹೋರಾಡುತ್ತಾ ಮಾಧ್ಯಮಗಳ ಎದುರು ಮಾತನಾಡುತ್ತಿದ್ದೇನೆ. ನನ್ನಿಂದ ತನಿಖೆಗೆ ತೊಂದರೆಯಾಗುತ್ತಿದ್ದರೆ, ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಲಿ” ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ ಓದಿ: ರಾಜಸ್ಥಾನದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಬಿಜೆಪಿ ಬೆಂಬಲಿಗರ ಹಲ್ಲೆ- ಆರೋಪ

1 COMMENT

LEAVE A REPLY

Please enter your comment!
Please enter your name here