ದೇಶದಲ್ಲೇ ಅತ್ಯಂತ ಹೆಚ್ಚು ಕೊರೊನಾ ಸೋಂಕಿರುವ ರಾಜ್ಯವಾದ ಮಹಾರಾಷ್ಟ್ರದ ಹಲವಾರು ವ್ಯಾಕ್ಸಿನೇಷನ್ ಕೇಂದ್ರಗಳು ಲಸಿಕೆಗಳ ಕೊರತೆಯನ್ನು ಅನುಭವಿಸುತ್ತಿವೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ. ಲಸಿಕೆಯ ಕೊರತೆಯಿಂದಾಗಿ ಜನರನ್ನು ಹಿಂತಿರುಗುವಂತೆ ಹೇಳಲಾಗುತ್ತಿದೆ ಎಂದು ಹೇಳಿದ್ದಾರೆ.
“ಡೋಸೇಜ್ ಕೊರತೆಯಿಂದಾಗಿ ಜನರನ್ನು ವಾಪಸ್ ಕಳುಹಿಸಬೇಕಾಗಿದೆ. ಕೇಂದ್ರವು ಲಸಿಕೆ ಪ್ರಮಾಣವನ್ನು ಪೂರೈಸುವ ವೇಗವನ್ನು ಹೆಚ್ಚಿಸಬೇಕಾಗಿದೆ” ಎಂದು ಅವರು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಕೊರೊನಾ ಸೋಂಕಿಗೆ ಯುವಜನರು ಹೆಚ್ಚು ಪೀಡಿತರಾಗಿದ್ದಾರೆ ಎಂದು ಹೇಳಿರುವ ಅವರು, “20 ರಿಂದ 40 ವರ್ಷದೊಳಗಿನ ಜನರಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕಬೇಕು ಎಂದು ನಾವು ಕೇಂದ್ರದಿಂದ ಒತ್ತಾಯಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗ ಖಾತ್ರಿ ಯೋಜನೆ: ಜಿಗ್ನೇಶ್ ಮೇವಾನಿ ಪ್ರತಿನಿಧಿಸುವ ವಡಗಾವ್ ತಾಲೂಕಿಗೆ ಮೊದಲ ಸ್ಥಾನ
ಕಡಿಮೆ ಅವಧಿಯಲ್ಲಿ ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ರೂಪಾಂತರಿ ಕೊರೊನಾ ವೈರಸ್ ಹರಡುತ್ತಿರುವ ಬಗ್ಗೆ ಆರೋಗ್ಯ ಇಲಾಖೆಯು ಶಂಕಿಸಿದೆ. ಇದನ್ನು ಕಂಡುಹಿಡಿಯಲು ಹಲವು ಮಾದರಿಗಳನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ವ್ಯಾಸ್ ಕೂಡ ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ದಿನಗಳಲ್ಲಿ ಲಸಿಕೆ ದಾಸ್ತಾನು ಮುಗಿಯುತ್ತವೆ ಎಂದು ಹೇಳಿದ್ದರು. “ಕೇಂದ್ರವು ಪರಿಸ್ಥಿತಿಯ ಬಗ್ಗೆ ತಿಳಿದಿದೆ ಮತ್ತು ನಾವು ಅದನ್ನು ಲಿಖಿತವಾಗಿ ತಿಳಿಸಿದ್ದೇವೆ” ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆಯ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ 80 ಲಕ್ಷ ಡೋಸ್ ಲಸಿಕೆಗಳನ್ನು ನೀಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಕೊರೊನಾ ಇಲ್ಲ, ಮಾಸ್ಕ್ ಬೇಡ ಹೇಳಿಕೆ ನೀಡಿ ಟ್ರೋಲ್ ಆದ ಬಿಜೆಪಿ ಸಚಿವ


