Homeಅಂಕಣಗಳುಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

ಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

- Advertisement -
- Advertisement -

ಸಿಖ್ ಧರ್ಮದ ಗುರುಗ್ರಂಥವನ್ನು ಆಳವಾಗಿ ಅಭ್ಯಾಸ ಮಾಡಿರುವ, ಸಾವಿರಾರು ಉರ್ದು ಶಾಯರಿಗಳನ್ನು ಅನುವಾದಿಸಿರುವ, ನೂರಾರು ಹಿಂದೂ ಸಂನ್ಯಾಸಿಗಳನ್ನು ಸಂದರ್ಶಿಸಿರುವ, ಜೀವನವನ್ನು ಪ್ರೀತಿಸುವಷ್ಟೇ ಎಲ್ಲ ಜಾತಿ, ಧರ್ಮದ ಜನರನ್ನು ಬಹುವಾಗಿ ಪ್ರೀತಿಸುವ -ಟೀಕಿಸುವ ವ್ಯಕ್ತಿ ಖುಷವಂತ್ ಸಿಂಗ್.

ಖುಷವಂತರಿಗೆ 80 ವರ್ಷ ತುಂಬಿದಾಗ, ಅಪ್ಪ ಅವರನ್ನು ಕುರಿತು ಹೀಗೆ ಬರೆದಿದ್ದರು: “ಸಿಖ್ ಜನರ ಶಕ್ತಿ ಮತ್ತು ಅಸಹಾಯಕತೆ, ಮುಸ್ಲಿಮರ ತ್ರಾಣ ಮತ್ತು ಹುಂಬತನ, ಹಿಂದೂಗಳ ಗುಣ ಮತ್ತು ದೋಷ-ಎಲ್ಲವನ್ನೂ ಬಲ್ಲ ವ್ಯಕ್ತಿ ಖುಷವಂತ್. ಪಾಕಿಸ್ತಾನ ಮತ್ತು ಭಾರತವನ್ನು ಹತ್ತಿರ ತರುವಲ್ಲಿ, ಸಿಖ್ ಜನ ಭಾರತದಲ್ಲೇ ಉಳಿದು ನೆಮ್ಮದಿಯಾಗಿರುವಲ್ಲಿ ಖುಷವಂತ್ ಮಾಡಿದಷ್ಟು ಕೆಲಸ ಯಾವನೂ ಮಾಡಿಲ್ಲ. ಈ ದೇಶದಲ್ಲಿ ಶಾಂತಿಗಾಗಿ ನೊಬೆಲ್ ಬಹುಮಾನ ಸಿಗಬೇಕಿದ್ದರೆ ಅದು ಸಿಗಬೇಕಾದ್ದು ಖುಷವಂತ್‌ರಿಗೆ…..”

ಈಗ ತಮ್ಮ 88ನೇ ಹರೆಯದಲ್ಲಿರುವ ಖುಷವಂತ್, ದೇಶ ವಿಭಜನೆ ಸಮಯದಲ್ಲಿ ಅತಿಘೋರ ಕೋಮುದಳ್ಳುರಿಯನ್ನು ಕಣ್ಣಾರೆ ಕಂಡವರು; ಲಾಹೋರಿನಿಂದ ದೆಹಲಿಗೆ ವಲಸೆ ಬಂದು ತಾನು ಭಾರತದವನೋ ಪಾಕಿಸ್ತಾನದವನೋ ಎಂದು ದಿಗ್ಭ್ರಾಂತರಾದವರು; 1947ರ ಆಗಸ್ಟ್ 14/15ರ ರಾತ್ರಿ ಹೊಸರಾಷ್ಟ್ರದ ಉದಯದ ಸಂಭ್ರಮದಲ್ಲಿ ಅಪಾರ ಕನಸುಗಳನ್ನು ಹೊತ್ತು ಪಾಲ್ಗೊಂಡವರು.

PC : Amazon.in

ಈಗ, ದೇಶ ವಿಭಜನೆಯಾದ 56 ವರ್ಷಗಳಲ್ಲಿ, ಅದರಲ್ಲೂ ಮುಖ್ಯವಾಗಿ ಹೋದ ವರ್ಷ ಗುಜರಾತ್ ರಾಜ್ಯದಲ್ಲಿ ನಡೆದ ಕೋಮುದಳ್ಳುರಿಯನ್ನು ಕಂಡು ಕಂಗಾಲಾಗಿದ್ದಾರೆ ಖುಷವಂತ್. ತನ್ನ ಜೀವನದುದ್ದಕ್ಕೂ ಕೋಮುಸೌಹಾರ್ದತೆಗಾಗಿ ಶ್ರಮಿಸಿದ್ದ ಖುಷವಂತ್, ಕೋಮುವಾದಿಗಳ ಪ್ರಸ್ತುತ ಅಟ್ಟಹಾಸವನ್ನು ಕಂಡು ಮೊನ್ನೆ ’ದಿ ಎಂಡ್ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಹೊರತಂದಿದ್ದಾರೆ.

ನಾಲ್ಕು ಪ್ರಬಂಧಗಳ ಸಂಗ್ರಹವಾದ ಈ ಪುಸ್ತಕದ ಮುನ್ನುಡಿಯನ್ನು ಖುಷವಂತ್ ಹೀಗೆ ಆರಂಭಿಸುತ್ತಾರೆ: “ಭಾರತಕ್ಕೆ ಕತ್ತಲು ಮುಸುಕುತ್ತಿದೆ. 2002ರ ಆರಂಭದಲ್ಲಿ ಗಾಂಧಿ ಹುಟ್ಟಿದ ನಾಡು ಗುಜರಾತಿನಲ್ಲಿ ನಡೆದ ನರಮೇಧ ಹಾಗೂ ಆನಂತರದ ಚುನಾವಣೆಯಲ್ಲಿ ನರೇಂದ್ರ ಮೋದಿಯ ಜಯ ನಮ್ಮ ದೇಶಕ್ಕೆ ದುರಂತವನ್ನು ತಂದಿದೆ. ನಮ್ಮ ಆಧುನಿಕ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಫ್ಯಾಸಿಸ್ಟ್ ಧೋರಣೆಯನ್ನು ಹಿಂದೂ ಮೂಲಭೂತವಾದಿಗಳು ಪ್ರದರ್ಶಿಸುತ್ತಿದ್ದಾರೆ. ದೇಶ ವಿಭಜನೆಯ ನಂತರ ಮತ್ತೆಂದೂ ಅಂತಹ ನರಮೇಧ ನಡೆಯದೆಂದು ನಾನು ಭಾವಿಸಿದ್ದೆ. ಆದರೆ ಅದು ಸುಳ್ಳೆಂದು ಸಾಬೀತಾಗಿದೆ. ಮಹಾನ್ ದೇಶವಾಗುವ ಬದಲು ನಮ್ಮ ಭಾರತ ಕೆಳಮಟ್ಟಕ್ಕೆ ಕುಸಿಯುತ್ತಿದೆ, ಒಂದು ಅದ್ಭುತ ಪವಾಡ ನಮ್ಮನ್ನು ರಕ್ಷಿಸದಿದ್ದರೆ ದೇಶ ಒಡೆದುಹೋಗುತ್ತದೆ.”

ಜಾತ್ಯತೀತತೆಯಲ್ಲಿ ಅಪಾರ ನಂಬಿಕೆಯಿಟ್ಟುಕೊಂಡಿರುವ ಖುಷವಂತ್ ಸಿಂಗ್ ಹಿಂದಿನಿಂದಲೂ ಎಲ್ಲಾ ರೀತಿಯ ಧಾರ್ಮಿಕ ಮೂಲಭೂತವಾದವನ್ನು ಖಂಡಿಸುತ್ತಲೇ ಬಂದಿದ್ದಾರೆ. ಹಿಂದೂಗಳ ವಿರುದ್ಧ ಕೆಂಡಕಾರುತ್ತಿದ್ದ ಜರ್ನೇಲ್ ಸಿಂಗ್ ಬಿಂಧ್ರನ್‌ವಾಲೆನನ್ನು ಕಟುವಾಗಿ ಟೀಕಿಸಿದ್ದಕ್ಕೆ ಖಾಲಿಸ್ತಾನಿಗಳ ಹಿಟ್ ಲಿಸ್ಟ್‌ಗೆ ಸೇರ್ಪಡೆಯಾಗಿ 15 ವರ್ಷಗಳ ಕಾಲ ಖುಷವಂತ್ ಸಿಂಗ್‌ರವರು ಬಿಗಿಯಾದ ಭದ್ರತೆಯ ಮಧ್ಯೆ ಜೀವಿಸಬೇಕಾಗಿ ಬಂತು. ಈಗ ಅಲ್ಪಸಂಖ್ಯಾತರ ವಿರುದ್ಧ ಕೆಂಡಕಾರುತ್ತಿರುವ ನರೇಂದ್ರ ಮೋದಿ, ತೊಗಾಡಿಯಾ, ಬಾಳಠಾಕ್ರೆ, ಗಿರಿರಾಜ್ ಕಿಶೋರ್‌ರಂತಹ ಹಿಂದೂ ಮೂಲಭೂತವಾದಿಗಳ ವಿರುದ್ಧ ಮಾತನಾಡುತ್ತಿರುವುದಕ್ಕೆ ಅಶ್ಲೀಲ ಪತ್ರಗಳಿಗೂ, ಬಣ್ಣಬಣ್ಣದ ಶಾಪಗಳಿಗೂ ಗುರಿಯಾಗಿದ್ದಾರೆ ಖುಷವಂತ್.

ಪ್ರತಿಯೊಂದು ಧರ್ಮದ ವೈರಿ ಮತ್ತೊಂದು ಧರ್ಮವಲ್ಲ, ಬದಲಾಗಿ ತನ್ನ ಧರ್ಮದ ’ಶ್ರೇಷ್ಠತೆ’ಯನ್ನೇ ಇನ್ನೊಬ್ಬರ ಮೇಲೆ ಹೊರಿಸಲು ಯತ್ನಿಸುವವನು; ಪ್ರತಿ ಧರ್ಮವನ್ನು ಇತರರು ತೀರ್ಮಾನಿಸುವುದು ಆ ಧರ್ಮಗ್ರಂಥದಲ್ಲೇನಿದೆ ಅಥವಾ ಆ ಧರ್ಮದ ಗುರುಗಳು ಏನು ಹೇಳಿದ್ದಾರೆ ಎಂದು ವಿಶ್ಲೇಷಿಸಿಯಲ್ಲ. ಬದಲಾಗಿ ಆ ಧರ್ಮದ ಅನುಯಾಯಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಎಂದು ನಂಬಿರುವವರು ಖುಷವಂತ್. ಆದರೆ ಈಗ, ಬಾಬ್ರಿ ಮಸೀದಿಯನ್ನು ಕೆಡವುವವರು, ಕ್ರೈಸ್ತ ಮಿಷನರಿಗಳನ್ನು ಸುಟ್ಟುಹಾಕುವವರು, ಮುಸ್ಲಿಮರ ರಕ್ತವನ್ನು ಹೀರುವವರು, ತಮಗೆ ಸರಿಕಾಣದ ಪುಸ್ತಕ-ಸಿನಿಮಾ-ಚಿತ್ರಕಲೆಗಳ ವಿರುದ್ಧ ಪ್ರತಿಭಟಿಸುವುದು, ಇತಿಹಾಸವನ್ನು ತಿರುಚುವುದು…… ಇವೆ ಹಿಂದೂ ಧರ್ಮದ ಲಕ್ಷಣಗಳಂತೆ ಕಾಣಿಸುತ್ತಿದೆ ಎಂದು ಎಚ್ಚರಿಸುತ್ತಾರೆ ಖುಷವಂತ್.

“ಇವೆಲ್ಲವನ್ನು ಪ್ರತಿಭಟಿಸುವವರನ್ನು ತುಚ್ಛವಾಗಿ ಕಂಡರು, ಸ್ಯೂಡೋ ಜಾತ್ಯತೀತರು ಎಂಬ ಹಣೆಪಟ್ಟಿಯನ್ನು ನೀಡಿದರು. ಜಾತ್ಯತೀತತೆಯಲ್ಲಿ ನಂಬಿಕೆಯಿರುವವರು ಇದೆಲ್ಲವನ್ನು ಸಹಿಸಿದ್ದು ಏಕೆಂದರೆ ಇವರು ಸಂಘಟಿತರಾಗಿಲ್ಲದಿದ್ದಕ್ಕೆ. ಈಗ ನಾವು ನಮ್ಮ ದೇಶವನ್ನೇ ಆವರ ಕೈಗಿಟ್ಟಿದ್ದೇವೆ,” ಎಂದು ಪರಿತಪಿಸುತ್ತಾರೆ.

ಹಾಗೆಯೆ ಗೀತಾ ಹರಿಹರನ್ ಎಂಬ ಆಂಗ್ಲ ಲೇಖಕಿಯ ’ಇನ್ ಟೈಮ್ಸ್ ಆಫ್ ಸೀಜ್’ ಎಂಬ ಪುಸ್ತಕದಿಂದ ಒಂದು ಉದಾಹರಣೆಯನ್ನು ನೀಡುತ್ತಾರೆ. ರೆವರೆಂಡ್ ಮಾರ್ಟಿನ್ ನಿಮುಲ್ಲರ್ ಎಂಬ ಜರ್ಮನ್ ಪಾದ್ರಿಯನ್ನು ನಾಜಿಗಳು ಪೀಡಿಸಿದ್ದರು. ಅವನು ಹೀಗೆಂದಿದ್ದೇನು:

PC : The World Sikh News (ಜರ್ನೇಲ್ ಸಿಂಗ್ ಬಿಂಧ್ರನ್‌ವಾಲೆ)

“ಜರ್ಮನಿಯಲ್ಲಿ ನಾಜಿಗಳು ಪ್ರಥಮವಾಗಿ ಗುರಿಯಾಗಿಸಿಕೊಂಡಿದ್ದು ಕಮ್ಯುನಿಸ್ಟ್‌ಗಳನ್ನು. ಆದರೆ ನಾನು ಕಮ್ಯುನಿಸ್ಟ್ ಆಗಿಲ್ಲದಿದ್ದರಿಂದ ನಾನು ಸುಮ್ಮನಿದ್ದೆ.

ನಂತರ ನಾಜಿಗಳು ಯಹೂದಿಯರನ್ನು ಗುರಿಯಾಗಿಸಿಕೊಂಡಾಗ ನಾನು ಯಹೂದಿಯಲ್ಲವಾದ್ದರಿಂದ, ಆಗಲೂ ಸುಮ್ಮನಿದ್ದೆ.

ಆಮೇಲೆ ನಾಜಿಗಳು ಟ್ರೇಡ್ ಯೂನಿಯನಿಸ್ಟ್‌ಗಳನ್ನು ಹಿಡಿಯಲಾರಂಭಿಸಿದರು. ನಾನು ಯಾವ ಟ್ರೇಡ್ ಯೂನಿಯನ್‌ಗೂ ಸೇರಿಲ್ಲವಾದ್ದರಿಂದ ನಾನು ಸುಮ್ಮನೆ ಇದ್ದೆ.

ಮುಂದೆ, ಸಲಿಂಗಕಾಮಿಗಳನ್ನು ಸೆರೆ ಹಿಡಿಯಲಾರಂಭಿಸಿದಾಗಲೂ, ನಾನು ಸಲಿಂಗಕಾಮಿಯೇನಲ್ಲವಲ್ಲಾ ಎಂದು ಸುಮ್ಮನಿದ್ದೆ.

ಆನಂತರ, ನಾಜಿಗಳು ಕ್ಯಾಥೋಲಿಕ್‌ರನ್ನು ಗುರಿಮಾಡಿಕೊಂಡಾಗ, ಪ್ರಾಟೊಸ್ಟೆಂಟ್‌ನಾದ ನನಗೂ ಅದಕ್ಕೂ ಏನೂ ಸಂಬಂಧವಿಲ್ಲವಲ್ಲಾ ಎಂದು ಸುಮ್ಮನಾದೆ.

ಕೊನೆಗೆ ನಾಜಿಗಳು ನನ್ನನ್ನೇ ಗುರಿಮಾಡಿಕೊಂಡರು… ಆ ಹೊತ್ತಿಗೆ ನನ್ನ ಪರವಾಗಿ ಮಾತನಾಡಲು ಯಾರೂ ಉಳಿದಿರಲಿಲ್ಲ.”

ಈ ಪುಟ್ಟ ಟಿಪ್ಪಣಿ ಎಲ್ಲರಿಗೂ ಎಷ್ಟೊಂದು ಪಾಠ ಹೇಳುತ್ತದೆಯಲ್ಲವೇ? ಮುಸ್ಲಿಮರನ್ನು ಕೊಲ್ಲುತ್ತಿದ್ದರೆ ನನಗೇನು? ಕ್ರೈಸ್ತರನ್ನು ಬಡಿಯುತ್ತಿದ್ದರೆ ನನಗೇನು? ಬುಡಕಟ್ಟು ಜನಾಂಗದವರನ್ನು ನಾಶ ಮಾಡುತ್ತಿದ್ದರೆ ನನಗೇನು? ದಲಿತರನ್ನು ಶೋಷಿಸುತ್ತಿದ್ದರೆ ನನಗೇನು? ಲಿಂಗಾಯತರನ್ನು ಮೂಲೆಗುಂಪು ಮಾಡುತ್ತಿದ್ದರೆ ನನಗೇನು? ಒಕ್ಕಲಿಗರನ್ನು ಛಿದ್ರ ಮಾಡುತ್ತಿದ್ದರೆ ನನಗೇನು? ಎಂದು ನಾವೆಲ್ಲಾ ಸುಮ್ಮನೆ ಕೂತರೆ ನಮಗೂ ಮುಂದೆ ರೆವರೆಂಡ್ ಮಾರ್ಟಿನ್ ನಿಮುಲ್ಲರ್ ಗತಿಯೇ ಆಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಅಲ್ಲವೇ?

’ದಿ ಎಂಡ್ ಆಫ್ ಇಂಡಿಯಾ’ ಪುಸ್ತಕದ ಕೊನೆಯ ಪ್ರಬಂಧದ ಶೀರ್ಷಿಕೆ ’ಈಸ್ ದೇರ್ ಎ ಸಲ್ಯೂಷನ್?’ ಎಂಬುದು.

ಈ ಅಧ್ಯಾಯದಲ್ಲಿ ಹಲವಾರು ವಿವಿಧ ಧರ್ಮಗಳನ್ನು ಹೊಂದಿರುವ ಭಾರತೀಯರಿಗೆ ಹೊಸದೊಂದು ಧರ್ಮ ಬೇಕಿದೆ ಎಂದು ಪ್ರಸ್ತಾಪಿಸುತ್ತಾರೆ ಖುಷವಂತ್ ಸಿಂಗ್. “ಒಳ್ಳೆಯವ ಅಥವಾ ಕೆಟ್ಟವನಾಗುವುದಕ್ಕೂ ಹಾಗೂ ದೇವರಲ್ಲಿ ನಂಬಿಕೆಯಿಡುವುದಕ್ಕೂ ಏನೂ ಸಂಬಂಧವಿಲ್ಲ ಎಂಬುದು ನೆನಪಿಡಬೇಕಾದ ಮುಖ್ಯ ಸಂಗತಿ. ದೇವರಲ್ಲಿ ನಂಬಿಕೆಯಿಲ್ಲದೆಯೇ ನೀವೊಬ್ಬ ಸಂತನಾಗಬಹುದು ಹಾಗೆಯೇ ದೇವರಲ್ಲಿ ನಂಬಿಕೆಯಿರಿಸಿಕೊಂಡೂ ಕೂಡ ಒಬ್ಬ ತಿರಸ್ಕರಣೀಯ ಖಳನಾಗಲೂಬಹುದು. ನನ್ನ ಧರ್ಮದಲ್ಲಿ ದೇವರಿಗೆ ಯಾವುದೇ ಸ್ಥಾನವಿಲ್ಲ.” ಎನ್ನುತ್ತಾರೆ ನಿರೀಶ್ವರವಾದಿ ಖುಷವಂತ್.

ನಮ್ಮ ದೇಶಕ್ಕೆ ಬೇಕಾಗಿರುವ ಹೊಸ ಧರ್ಮದ ತಳಹದಿ ‘work ethic’ (ಕಾರ್ಯ ಸಿದ್ಧಾಂತ) ಆಗಿರಬೇಕು ಮಾತ್ರವಲ್ಲ, ಪ್ರತಿಯೊಬ್ಬರ ಧರ್ಮವೂ ಇನ್ನೊಬ್ಬ ವ್ಯಕ್ತಿಗೆ ಅಥವಾ ಜೀವವಿರುವ ಯಾವುದೇ ಪ್ರಾಣಿಗೆ ನೋವುಂಟು ಮಾಡಬಾರದು ಹಾಗೂ ತನ್ನ ಪರಿಸರವನ್ನು ಕಾಪಾಡುವುದು ಮುಖ್ಯವಾಗಬೇಕು; ಅಹಿಂಸೆಯೇ ಎಲ್ಲಕ್ಕಿಂತ ಉತ್ಕೃಷ್ಟ ಧರ್ಮ ಹಾಗೂ ಅಸಭ್ಯತೆಯ ಅಂತಿಮ ರೂಪವೇ ಹಿಂಸೆ ಎಂದು ಮಂಡಿಸುವ ಖುಷವಂತ್ ತಮ್ಮ ಪುಸ್ತಕವನ್ನು ಇಲ್ಲಾ ವೀಲರ್ ವಿಲ್‌ಕಾಕ್ಸ್ ಎಂಬವವರ ಹೇಳಿಕೆಯೊಂದಿಗೆ ಮುಗಿಸುತ್ತಾರೆ. ಅದು ಹೀಗಿದೆ:

“So many gods, so many creeds, so many paths that wind & wind. When just the art of being kind is all that the sad world needs.”

(ಖುಷ್ವಂತ್ ಸಿಂಗ್ ಅವರು ತಮ್ಮ 88 ವಯಸ್ಸಿನಲ್ಲಿ ಬರೆದ ಪುಸ್ತಕವನ್ನು ಉದಾಹರಿಸಿ ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣವನ್ನು ಇಲ್ಲಿ ಮರುಪ್ರಕಟಿಸಿದ್ದೇವೆ. ಖುಷ್ವಂತ್ 2014ರಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು)


ಇದನ್ನೂ ಓದಿ: ಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...