Homeಅಂಕಣಗಳುಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

ಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

- Advertisement -
- Advertisement -

ಮೊನ್ನೆ ಬೆಂಗಳೂರಿನಲ್ಲಿ ಒಂದು ಅಪರೂಪದ ಸಂಜೆಯನ್ನು ಅರುಂಧತಿ ನಾಗ್‌ರವರು ಏರ್ಪಡಿಸಿದ್ದರು. ಅಂದಿನ ಕಾರ್ಯಕ್ರಮದಲ್ಲಿ, ಅವರ ಕನಸಿನ ’ರಂಗಶಂಕರ’ಕ್ಕಾಗಿ ಕಾರ್ಪೊರೆಟ್ ಕಂಪನಿಗಳಿಂದ ಹಣವನ್ನು ಸಂಗ್ರಹಿಸುವ ಉದ್ದೇಶ ಅವರದ್ದಾಗಿದ್ದರೂ, ಕೆಲವು ಸ್ನೇಹಿತರನ್ನೂ ಆಹ್ವಾನಿಸಿದ್ದರು.

ಕಳೆದ ಹಲವಾರು ವರ್ಷಗಳಿಂದ ಅರು (ಅರುಂಧತಿ ನಾಗ್) ಈ ರಂಗಮಂದಿರಕ್ಕಾಗಿ ಏನೆಲ್ಲಾ ಸರ್ಕಸ್ ನಡೆಸಿದ್ದಾರೆ ಎಂಬುದು ನನಗೆ ಗೊತ್ತು. ಕನಸುಗಾರರಾಗಿದ್ದ ಶಂಕರ್ ನಾಗ್ ಬದುಕಿದ್ದಿದ್ದರೆ ಆತ ತನ್ನ ಆಕಾಂಕ್ಷೆಗಳ ಬೆನ್ನೇರಿ ಇಷ್ಟೊತ್ತಿಗಾಗಲೇ ಪಾಪರ್ ಆಗಿರುತ್ತಿದ್ದರು ಎಂಬುದರ ಬಗ್ಗೆ ನನಗೆ ಸಂಶಯವಿಲ್ಲ. ಆದರೆ ಅರು ಮಾತ್ರ ಈ ’ರಂಗಶಂಕರ’ದ ಕನಸಿನಲ್ಲೇ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ. ಈ ರಂಗಮಂದಿರ ಆಕೆಯ ದಿವಂಗತ ಪತಿ ಶಂಕರ್ ನೆನಪಿಗೆ ಮಾತ್ರವಲ್ಲ, ಅದರಿಂದ ರಂಗಕ್ಷೇತ್ರಕ್ಕೆ ತನ್ನ ಅಲ್ಪಕಾಣಿಕೆಯನ್ನಾದರೂ ಸಲ್ಲಿಸಬೇಕು ಎಂಬ ಆಕಾಂಕ್ಷೆ ಅರು ಅವರದ್ದು.

ಈ ನಿಟ್ಟಿನಲ್ಲಿ ಅರು ಮೊನ್ನೆ ತನ್ನ ಸ್ನೇಹಿತರಾದ ಶಬನಾ ಅಜ್ಮಿ ಮತ್ತು ಜಾವೇದ್ ಆಖ್ತರ್ ಅವರನ್ನು ಆಹ್ವಾನಿಸಿದ್ದರು.

ಜಾವೇದ್ ಅಖ್ತರ್‌ರವರ ಜಾತ್ಯತೀತ ನಿಲುವುಗಳ ಬಗ್ಗೆಯಾಗಲೀ, ಅವರ ಸಾಹಿತ್ಯಕ ಸಾಧನೆಗಳ ಬಗ್ಗೆಯಾಗಲೀ ಇಲ್ಲಿ ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಹಿಂದೂ ಮೂಲಭೂತವಾದ ಹೆಚ್ಚಾಗುತ್ತಿರುವ ಈಗಿನ ಸೂಕ್ಷ್ಮ ಸಂದರ್ಭದಲ್ಲಿ ಮುಸ್ಲಿಮ್ ಬುದ್ಧಿಜೀವಿಗಳು ಕೂಡಾ ಇಸ್ಲಾಂನ ಮೂಲಭೂತವಾದಿಗಳನ್ನು ಟೀಕಿಸಲು ಹಿಂಜರಿಯುತ್ತಿದ್ದಾರೆ. ಆದರೆ ಜಾವೇದ್ ಅಖ್ತರ್ ಮತ್ತು ಶಬನಾ ಅಜ್ಮಿ ತಾವು ನಿಷ್ಟಾವಂತ ಭಾರತೀಯ ಜಾತ್ಯತೀತವಾದಿಗಳು ಎಂಬುದನ್ನು ಮತ್ತೆ ಮತ್ತೆ ಹೇಳುವ ಧೈರ್ಯ ತೋರುತ್ತಿದ್ದಾರೆ. ಶಬನಾ ಅಜ್ಮಿ ಅವರು “ಇಮಾಮ್ ಭುಕಾರಿಯವರು ಆಫ್ಘಾನಿಸ್ತಾನದ ತಾಲಿಬಾನ್‌ಗೆ ಬೆಂಬಲ ನೀಡುವುದಿದ್ದರೆ ಭಾರತದ ಸರ್ಕಾರ ಅವರನ್ನು ಆಫ್ಘಾನಿಸ್ತಾನಕ್ಕೆ ಎತ್ತಿಹಾಕುವುದೇ ಒಳ್ಳೆಯದು” ಎಂದು ಹೇಳಿದ್ದಾರೆ, ಜಾವೇದ್ ಅಖ್ತರ್ ಅವರನ್ನು ಪಾಕಿಸ್ತಾನದ ಬರಹಗಾರರೊಬ್ಬರು “ನಿಮಗೆ ಭಾರತದಲ್ಲಿ ಮುಸ್ಲಿಂ ಲೇಖಕನಾಗಿ ಕಷ್ಟವಾಗಿಲ್ಲವೇ?” ಎಂದು ಕೇಳಿದಾಗ, “ನಾನು ಪಾಕಿಸ್ತಾನಿಯಾದ ನಿನ್ನನ್ನು ಮಾತನಾಡಿಸುವಾಗ ಭಾರತೀಯನಾಗಿ ಮಾತನಾಡುವೆ. ಆದರೆ ನನ್ನ ದೇಶದಲ್ಲಿ ಶಿವಸೇನೆಯ ಬಾಳಠಾಕ್ರೆಯೊಂದಿಗೆ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಚರ್ಚಿಸುವಾಗ ಭಾರತೀಯ ಮುಸ್ಲಿಂನಾಗಿ ಮಾತನಾಡುವೆ. ನನ್ನಿಂದ ಭಾರತದ ವಿರುದ್ಧ ಯಾವುದೇ ಹೇಳಿಕೆ ನಿನಗೆ ಲಭಿಸುವುದಿಲ್ಲ.” ಎಂದೇ ಗುಡುಗಿದ್ದರು.

ಮೊನ್ನೆ ಜಾವೇದ್ ತಮ್ಮ ಉರ್ದು ಪದ್ಯಗಳ ಸಂಕಲನವಾದ ’ತರ್ಕಶ್‌’ನಿಂದ ಆಯ್ದ ಕವನಗಳನ್ನು ಓದಿದಾಗ, ಅವರ ಮಡದಿ ಶಬನಾ ಆ ಪದ್ಯಗಳ ಇಂಗ್ಲಿಷ್ ಅನುವಾದಗಳನ್ನು ಓದಿದರು. ಅವುಗಳಲ್ಲಿ ನನಗೆ ಬಹಳ ಇಷ್ಟವಾದ ಎರಡು ಪದ್ಯಗಳು ’ದಂಗೆಯ ಬಳಿಕ’ ಮತ್ತು ’ಪ್ರಾರ್ಥನೆ’. ಇವುಗಳನ್ನು ನಾನೇ ಅನುವಾದ ಮಾಡುವುದಕ್ಕಿಂತ, ಈ ಪದ್ಯಗಳನ್ನು ಈಗಾಗಲೇ ಕನ್ನಡಕ್ಕೆ ಅನುವಾದಿಸಿರುವ ಖ್ಯಾತ ಕವಿಯತ್ರಿ ಹಾ.ಮ.ಕನಕರವರನ್ನು ಮಾತನಾಡಿಸಿದೆ. ತಕ್ಷಣವೇ ಕನಕ ಆ ಎರಡು ಪದ್ಯಗಳ ಅನುವಾದಗಳನ್ನು ಈಮೇಲ್ ಮೂಲಕ ಕಳುಹಿಸಿದರು. ಅವುಗಳಲ್ಲಿ ಮೊದಲನೆಯದು ’ದಂಗೆಯ ಬಳಿಕ’.

ಗಾಢ ನೀರವತೆ
ಸದ್ದಿಲ್ಲದೇ ಮನೆಗಳಿಂದ
ದಟ್ಟ ಹೊಗೆ ಕಪ್ಪಗೆ
ಮಲಿನ ಎದೆಯಿಂದ
ದೂರದೂರಕ್ಕೆ ಹರಡುತ್ತಾ
ಗಾಢ ನೀರವತೆ

ಶವದಂತೆ ಮಲಗಿರುವ ರಸ್ತೆ
ಮುಂದೆ ಗಾಡಿ
ಅಡಿಮೇಲಾಗಿ
ಗಾಲಿಗಳನ್ನು ಗಾಳಿಗೆ ಎತ್ತಿ
ನೋಡುತ್ತಿದೆ ಆಕಾಶದತ್ತ ಬೆಕ್ಕಸ ಬೆರಗಾಗಿ
ಆಗಿದ್ದನ್ನೆಲ್ಲ ನಂಬಲೇ ಆಗದಂತೆ
ಗಾಢ ನೀರವತೆ

ಧೂಳೀಪಟವಾದ ಅಂಗಡಿ
ಚೀತ್ಕಾರದ ನಂತರ
ತೆರೆದಂತೇ ಇರುವ ಬಾಯಿ
ಮುರಿದ ಕಿಟಕಿ ಸಂದಿನಿಂದ
ಚದುರಿರುವ
ಬಳೆಯ ಚೂರುಗಳನ್ನು
ದುಗುಡ ತುಂಬ ಆಸೆಯಿಂದ ನಿರುಕಿಸುತ್ತಿದೆ

ನಿನ್ನೆಯವರೆಗೆ ಈ ಚೂರುಗಳೇ ಆ ಬೊಚ್ಚು ಬಾಯ
ನೂರು ವರ್ಣದ ಹಲ್ಲುಗಳಾಗಿದ್ದವು
ಗಾಢ ನೀರವತೆ
ಗಾಢ ನೀರವತೆಯು ಹೀಗಂದಿತು
ಕೇಳು ಧೂಳಿಪಟವಾದ ಅಂಗಡಿಯೇ
ಹೊಗೆಯಾಡುತ್ತಿರುವ ಮನೆಯೇ
ಮುರಿದ ಗಾಡಿಯೇ
ನೀವೊಂದೇ ಅಲ್ಲ
ಇಲ್ಲಿ ಇನ್ನೂ ಇವೆ
ಮುರಿದುಹೋದಂತವು
ದುಃಖಿಸೋಣ ಅವುಗಳಿಗೆ

ಆದರೆ ಮೊದಲು ಇವರಿಗಾಗಿ ಅಳೋಣ
ಲೂಟಿ ಮಾಡಲು ಬಂದು
ತಾವೇ ಲೂಟಿಯಾದರಲ್ಲ
ಏನು ಲೂಟಿಯಾಯಿತು
ಎಂಬ ಅರಿವೂ ಇಲ್ಲ
ಅವರಿಗೆ
ಮಂದದೃಷ್ಟಿ
ಶತಶತಮಾನದ ಸಂಸ್ಕೃತಿ
ಆ ಬಡಪಾಯಿಗಳಿಗೆ ಕಾಣಲೇ ಇಲ್ಲ.

ಜಾವೇದ್ ಅವರು ಈ ಪದ್ಯವನ್ನು ಓದಿದ ನಂತರ, ಪ್ರೇಕ್ಷಕರಲ್ಲಿದ್ದ ಓರ್ವ ಮಹಿಳೆ “ಈ ಪದ್ಯವನ್ನು ನೀವು ಗುಜರಾತ್‌ನ ಕೋಮುಗಲಭೆಯ ನಂತರ ಬರದಿರಾ?” ಎಂದು ಕೇಳಿದರು. ವಿಷಾದ ತುಂಬಿದ್ದ ಜಾವೇದ್ ಅಖ್ತರ್‌ರವರ ಉತ್ತರ: “ಇಲ್ಲ, ಈ ಪದ್ಯವನ್ನು ನಾನು ಬರೆದದ್ದು 1992ರಲ್ಲಿ. ಆದರೇನಂತೆ, ನಮ್ಮ ದೇಶದಲ್ಲಿನ ಕೋಮುವಾದಿಗಳು ಈ ಪದ್ಯವನ್ನು ಇವತ್ತಿಗೂ ಪ್ರಸ್ತುತವಾಗಿರಿಸಿದ್ದಾರೆ.”

ನನಗೆ ಮೆಚ್ಚುಗೆಯಾದ ಜಾವೇದ್ ಅಖ್ತರ್‌ರವರ ಇನ್ನೊಂದು ಪದ್ಯ ’ಪಾರ್ಥನೆ’ಯ ಅನುವಾದ ಹೀಗಿದೆ:

ಆನಂತ ಆಕಾಶದ ಆಳ ಸಮುದ್ರಗಳಲ್ಲಿ
ದ್ವೀಪವೊಂದೆಲ್ಲಾದರೂ ಇದೆಯೆಂದಾದರೆ
ಉಸಿರಾಡುತ್ತಿದ್ದಾರೆಂದಾದರೆ ಯಾರಾದರೂ
ಯಾವುದೋ ಎದೆಬಡಿತ ಇದೆಯೆಂದಾದರೆ
ಎಲ್ಲಿ ಬುದ್ಧಿವಂತಿಕೆಯು ಅರಿವಿನ ಬಟ್ಟಲ ತುಟಿಗಿಟ್ಟಿರುವುದೋ
ಅಲ್ಲಿಯ ಮಂದಿ
ಆನಂತ ಆಕಾಶದ ಆಳ ಸಾಗರದಲ್ಲಿ
ಇಳಿಸಲಿದ್ದಾರೆ ತಮ್ಮಯ ನೌಕೆ
ದ್ವೀಪವೊಂದರ ಶೋಧದಲ್ಲಿ
ಯಾರೋ ಉಸಿರಾಡುತ್ತಿರುವಲ್ಲಿ
ಎದೆಬಡಿತವಿರುವಲ್ಲಿ
ನನ್ನ ಪ್ರಾರ್ಥನೆ ಇದು
ಆ ದ್ವೀಪದ ಜನರ ಮೈ ಬಣ್ಣ
ಭಿನ್ನವಿರಲಿ
ಈ ದ್ವೀಪದವರ ಎಲ್ಲಾ ಬಣ್ಣಗಳಿಗಿಂತ
ಮೈಮಾಟವೂ
ಮುಖ ಮೋರೆಯೂ ಭಿನ್ನವಿರಲಿ
ನನ್ನ ಪ್ರಾರ್ಥನೆ
ಇದ್ದರೆ ಅಲ್ಲಿಯೂ ಜಾತಿ
ಈ ದ್ವೀಪಕ್ಕಿಂತ ಭಿನ್ನವಿರಲಿ

ನನ್ನ ಪ್ರಾರ್ಥನೆ ಇದು
ಅನಂತ ಆಕಾಶದ ಆಳ ಸಮುದ್ರವನ್ನು ದಾಟಿ
ಒಂದು ದಿನ
ಆ ಅಪರಿಚಿತ ಕುಲದ
ಅಂತರಿಕ್ಷ ನೌಕೆಯಲ್ಲಿ
ಈ ದ್ವೀಪದವರೆಗೆ ಬಂದು
ಸತ್ಕರಿಸಿ ಅವರನ್ನು ನಾವು
ಬೆರಗಿನಿಂದ ನೋಡುವೆವು
ಅವರು ಬಳಿ ಬಂದು
ನಮಗೆ ಸನ್ನೆಯಲ್ಲಿ ತಿಳಿಸಲಿ
ಅವರಿಗಿಂತ ನಾವು ಎಷ್ಟು ಭಿನ್ನವೆಂದು
ಎಲ್ಲರೂ ನಾವು
ಒಂದೇ ಥರವೆಂದು

ನನ್ನ ಪ್ರಾರ್ಥನೆ
ಈ ದ್ವೀಪದಲ್ಲಿ ವಾಸಿಸುವವರೆಲ್ಲ
ಆ ಅಪರಿಚಿತ ಕುಲದವರು ಹೇಳಿದ್ದನ್ನು ಆಗ ನಂಬಲಿ

ಜಾವೇದ್ ಅಖ್ತರ್‌ರವರ ದುಃಖ ಯಾವುದರ ಬಗ್ಗೆ ಎಂದರೆ: ಇವತ್ತು ಉರ್ದು ಭಾಷೆಗೆ ಧರ್ಮದ ಲೇಪವನ್ನು ಹೆಚ್ಚಿರುವುದು. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ: “ಜಗತ್ತಿನ ಯಾವುದೇ ಭಾಷೆಗೆ ಧರ್ಮದ ನಂಟಿಲ್ಲ. ಆದರೆ, ಈ ಎರಡು ರಾಷ್ಟ್ರ ಎಂಬ ಪೆದ್ದ ಸಿದ್ಧಾಂತದಿಂದಾಗಿ ಉರ್ದು ಎಂದರೆ ಅದು ಮುಸ್ಲಿಂರ ಭಾಷೆ ಎಂದೇ ಪರಿಗಣಿಸಲಟ್ಟಿತು. ಯಾವುದೇ ಪ್ರದೇಶವನ್ನು ನೀವು ಎರಡು ದೇಶಗಳಾಗಿ ವಿಭಜಿಸಬಹುದು. ಆದರೆ ಭಾಷೆಯೊಂದನ್ನು ಹೇಗೆ ವಿಭಜಿಸುತ್ತೀರಿ?

ಒಬ್ಬರಿಗೆ ಕ್ರಿಯಾಪದಗಳನ್ನು, ಮತ್ತೊಬ್ಬರಿಗೆ ನಾಮಪದಗಳನ್ನು ಕೊಡುತ್ತೀರೇನು? ಅದಕ್ಕಿಂತ ಮುಖ್ಯವಾದ ಅಂಶ ಯಾವುದೆಂದರೆ, ಉರ್ದು ನಿಜವಾಗಲೂ ಜಾತ್ಯತೀತ ಭಾಷೆ. ಉರ್ದು ಸಾಹಿತ್ಯದ ಎಲ್ಲ ಮಹಾನ್ ಸಾಹಿತಿಗಳು ನಾಸ್ತಿಕರು ಮತ್ತು ಜಾತ್ಯತೀತವಾಗಿದ್ದವರು. ಕುರಾನ್ ಪ್ರಥಮವಾಗಿ ಉರ್ದುಗೆ ಅನುವಾದವಾಗಿದ್ದು ಕೇವಲ 1791ರಲ್ಲಿ. ಆಗ ಉರ್ದುವನ್ನು ಅಸಂಸ್ಕೃತರ (heathen) ಭಾಷೆ ಎಂದೇ ಮುಲ್ಲಾಗಳು ಅಭಿಪ್ರಾಯಪಟ್ಟಿದ್ದರು. ಕುರಾನ್‌ನನ್ನು ಅಸಂಸ್ಕೃತರ ಭಾಷೆಗೆ ಅನುವಾದಿಸಿದ್ದವನ ಬಗ್ಗೆ ಮುಲ್ಲಾಗಳಿಗೆ ಎಷ್ಟು ಆಕ್ರೋಶವಿತ್ತೆಂದರೆ, ಆತನ ವಿರುದ್ಧ ಫತ್ವಾವನ್ನೇ ಹೊರಡಿಸಿದ್ದರು. ಆದರೂ, ಸ್ವತಂತ್ರ ಭಾರತದಲ್ಲಿ ಉರ್ದು ಭಾಷೆಯನ್ನು ಕೋಮುವಾದಿಗಳ ಬಲಿಪೀಠದ ಮೇಲೆ ತ್ಯಾಗ ಮಾಡಲಾಯಿತು. ಇವತ್ತು ನಿಜವಾಗಲೂ ಹಿಂದೂಸ್ತಾನಿಯಾದವನು ಕೋಮುವಾದಿ ಆಗಿರಲು ಸಾಧ್ಯವಿಲ್ಲ. ಏಕೆಂದರೆ ಈ ಭೂಮಿ ಕೋಮುವಾದಿ ಅಲ್ಲ. ಆದರೂ ಉರ್ದು ಹೆಸರಲ್ಲಿ, ಮುಸ್ಲಿಂ ಧರ್ಮದ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ಗುಜರಾತ್‌ನ ನರೇಂದ್ರ ಮೋದಿ ಸರ್ಕಾರ ದ್ವೇಷ ಸಾಧಿಸುತ್ತಿದೆ. ಆದರೆ ಅವರು ನಿಜವಾಗಲೂ ವಿರೋಧಿಸುವುದು ಕೇವಲ ಅಲ್ಪಸಂಖ್ಯಾತರನ್ನಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು. ಅವರ ಆಕಾಂಕ್ಷೆ ಏನಿದ್ದರೂ ಸರ್ವಾಧಿಕಾರಿ ಸರ್ಕಾರವನ್ನು ಸ್ಥಾಪಿಸುವುದಾಗಿದೆ. ಆದರೆ ಭಾರತೀಯರು ಅದಕ್ಕೆ ಎಂದೂ ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು.

(ಇದು ಗೌರಿಯವ ಕಂಡಹಾಗೆ ಅಂಕಣವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಗೌರಿ ಕಾರ್ನರ್: ಪಿ. ಸಾಯಿನಾಥ್‌ರೊಂದಿಗೆ ಮಾತುಕತೆ; ಸರ್ಕಾರ ತನ್ನ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...