ರಾಜ್ಯ ಸರ್ಕಾರದ ವಿರುದ್ದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರವು ಆರನೇ ದಿನಕ್ಕೆ ಕಾಲಿಟ್ಟಿದೆ. ನೌಕರರು ಆರನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದು, ತಮ್ಮ ಬೇಡಿಕೆಯ ಬಗ್ಗೆ ರಾಜ್ಯ ಸರ್ಕಾರ ಇದುವರೆಗೂ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದನ್ನು ವಿರೋಧಿಸಿ ನೌಕರರು, ಸೋಮವಾರದಂದು ತಮ್ಮ ಕುಟುಂಬ ಸಮೇತರಾಗಿ ರಾಜ್ಯದಾದ್ಯಂತ ವಿವಿಧ ಸರ್ಕಾರಿ ಕಚೇರಿಯ ಮುಂದೆ ತಟ್ಟೆ-ಲೋಟ ಬಡಿದು ಪ್ರತಿಭಟನೆ ನಡೆಸಿದರು.
ಬೆಂಗಳೂರು, ಮಂಡ್ಯ, ನೆಲಮಂಗಲ, ಚೆನ್ನಪಟ್ಟಣ, ಕೆ.ಆರ್. ನಗರ, ಹೊಳೆ ನರಸೀಪುರ ಮುಂತಾದ ಕಡೆ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿ ತಟ್ಟೆ, ಲೋಟ ಬಡಿದು ತಮ್ಮ ಸಂಕಷ್ಟವನ್ನು ಸರ್ಕಾರದ ಬಳಿ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರವನ್ನು ಮುರಿಯಲು ಪ್ರಯತ್ನಿಸುತ್ತಿರುವ ಸರ್ಕಾರ?; ಗೃಹ ಸಚಿವ ಹೇಳಿದ್ದೇನು?
ರಾಜ್ಯ ಸರ್ಕಾರ ಇದುವರೆಗೂ ಆರನೇ ವೇತನ ಆಯೋಗದ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಬಂದಿದ್ದು, ಮುಷ್ಕರ ಹಿನ್ನಲೆ ಖಾಸಗಿ ಬಸ್ಸುಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದೆ. ಜೊತೆಗೆ ಹಲವು ಬಿಜೆಪಿಯ ನಾಯಕರು ಕೆಎಸ್‌ಆರ್‌ಟಿಸಿ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಚರ್ಚೆಯನ್ನೂ ಮಾಡುತ್ತಿದ್ದಾರೆ.
ಈಗಾಗಲೆ ಮುಷ್ಕರ ನಿರತ ಹಲವು ನೌಕರರಿಗೆ ಸರ್ಕಾರವು ವರ್ಗಾವಣೆಯ ಶಿಕ್ಷೆ ನೀಡಿದ್ದು, ಎಸ್ಮಾ ಜಾರಿಯ ಮಾತುಗಳನ್ನು ಇನ್ನೂ ಆಡುತ್ತಲೇ ಇದೆ. ಶನಿವಾರದಂದು ಬೆಳಗಾವಿಯಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದ ನೌಕರರ ಸಂಘದ ಗೌರವಾಧ್ಯಕ್ಷ, ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ಅವರನ್ನು ಬಂಧನ ಕೂಡಾ ಮಾಡಲಾಗಿತ್ತು.
ಇದನ್ನೂ ಓದಿ: ‘ಮುಷ್ಕರ ಕೈಬಿಡದಿದ್ದರೆ ಕಠಿಣ ಕ್ರಮ’ – ಸಾರಿಗೆ ನೌಕರರಿಗೆ ಮುಖ್ಯಮಂತ್ರಿ ಎಚ್ಚರಿಕೆ


