ನಂದಿಗ್ರಾಮದ ಹಿಂಸಾಚಾರ ಈ ಸರ್ಕಾರವನ್ನು ಪತನದ ಇಳಿಜಾರಿಗೆ ನೂಕಿತ್ತು. ರಾಜ್ಯವನ್ನು ಕೈಗಾರಿಕೀಕರಣದ ಹಾದಿಗೆ ಹಚ್ಚುವ ಭರದಲ್ಲಿ ಕುರುಡಾಗಿ ಜೇನುಹುಟ್ಟಿಗೆ ಕೈ ಇಟ್ಟಿತ್ತು ವಾಮವಾದಿ ಆಡಳಿತ. 2011ರಲ್ಲಿ ಛಿದ್ರವಾದ ಕೆಂಪುಕೋಟೆಯ ಅಡಿಯಲ್ಲಿ ಇಡಲಾದ ಸಿಡಿಮದ್ದು ತಯಾರಾದದ್ದು ನಂದಿಗ್ರಾಮದ ಮೂಸೆಯಲ್ಲಿ. ಆದರೆ ಈ ಸಿಡಿಮದ್ದನ್ನು ಅರೆದು ಗಟ್ಟಿ ಮಾಡುವ ಕ್ರಿಯೆಯಲ್ಲಿ ಖುದ್ದು ಎಡರಂಗ ಸರ್ಕಾರ ಕೈಜೋಡಿಸಿದ್ದು ಬಹುದೊಡ್ಡ ವಿಡಂಬನೆ. ಈ ಪರಿಯ ಮೈಮರೆವಿನಲ್ಲಿ ಮುಳುಗಿದ್ದ ಎಡರಂಗಕ್ಕೆ ಕಾಲ ಕೆಳಗಿನ ನೋಟವೇ ಕಾಣದಾಗಿತ್ತು. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಲೇ ಹೋಯಿತು. ತಾನು ಜನರ ನಡುವೆ ಕೆಲಸ ಮಾಡಿ ಕಟ್ಟಿ ಬೆಳೆಸಿದ್ದ ಜನಶಕ್ತಿಯ ಕ್ರೋಧವನ್ನು ತನ್ನ ಮೈಮೇಲೆ ಎಳೆದುಕೊಂಡಿತು. ನೆಲಕ್ಕೆ ಆನಿಸಿ ಜನದನಿಯನ್ನು ಆಲಿಸಬೇಕಿದ್ದ ಕಿವಿಗಳಲ್ಲಿ ಟೊಳ್ಳುಗಾಳಿಯ ಸದ್ದೇ ತುಂಬಿ ಹೋಗಿತ್ತು. ದಮನದ ದಾರಿಯನ್ನು ಆರಿಸಿಕೊಂಡಿತು. ಎಡರಂಗದ ಕಾರ್ಯಕರ್ತರು ಪೊಲೀಸರ ವೇಷ ಧರಿಸಿದ್ದರು. ಅವರ ಕೈಯಲ್ಲಿ ಬಂದೂಕುಗಳಿದ್ದವು. ಹಿಂಸೆಯಲ್ಲಿ ಮುಳುಗೆದ್ದ ನಂದಿಗ್ರಾಮ ರಣರಂಗವಾಗಿತ್ತು. 14 ಮಂದಿ ಅಸುನೀಗಿದ್ದರು. ಎಡರಂಗ ಸರ್ಕಾರ 2011ರಲ್ಲಿ ಘೋರ ಪರಾಭವ ಕಂಡಿತ್ತು.
ಅಂದು ಮಮತಾ ಗೆಲುವಿನ ಪಯಣವನ್ನು ನಿರ್ಣಯಿಸಿದ್ದ ಅದೇ ನಂದಿಗ್ರಾಮ ಇಂದು ಆಕೆಯನ್ನು ಸತ್ವಪರೀಕ್ಷೆಗೆ ಗುರಿಪಡಿಸಿದೆ. ನಂದಿಗ್ರಾಮ ಮತ್ತು ಸಿಂಗೂರಿನಲ್ಲಿ ಕೃಷಿ ವ್ಯವಸ್ಥೆ ಮತ್ತು ಕೈಗಾರಿಕೀಕರಣದ ಕವಲುದಾರಿಯಲ್ಲಿ ನಿಂತಿತ್ತು ಬಂಗಾಳ. ಎಡರಂಗ ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗೊಡವೆಗೆ ಹೋಗದೆ ದುಡುಕಿತು. ಬಲವಂತ ಭೂಗ್ರಹಣದ ವಿರುದ್ಧ ಜನರೊಂದಿಗೆ ನಿಂತು ಮಮತಾ ಕಟ್ಟಿ ಬೆಳೆಸಿದ ಆಂದೋಲನವನ್ನು ಹಣಿಯಲು ಹೋಗಿ ಮಣ್ಣು ಮುಕ್ಕಿತು. ಆದರೆ ಅಂದು ಕೈಗಾರಿಕೆಗಳ ಸ್ಥಾಪನೆಗೆ ಕೃಷಿ ಭೂಮಿಯ ಬಲವಂತದ ಸ್ವಾಧೀನವನ್ನು ವಿರೋಧಿಸಿದ ಮಮತಾ ದೀದಿ ಕಳೆದ ಹತ್ತು ವರ್ಷಗಳ ತಮ್ಮ ಆಡಳಿತದಲ್ಲಿ ಮಾಡಿದ್ದಾದರೂ ಏನು? ಕೃಷಿ ಮತ್ತು ಕೈಗಾರಿಕೆಯ ಸಮನ್ವಯ ಅರ್ಥವ್ಯವಸ್ಥೆಯೊಂದನ್ನು ಜನವಿಶ್ವಾಸದ ಅಡಿಪಾಯದ ಮೇಲೆ ಕಟ್ಟಿ ಬೆಳೆಸಬೇಕಿತ್ತಲ್ಲವೇ? ಈ ಕಾರ್ಯದಲ್ಲಿ ಅವರು ಸಂಪೂರ್ಣ ವಿಫಲರಾದರು.
ಬಂಗಾಳದ ಅರ್ಥವ್ಯವಸ್ಥೆ ಹೆಚ್ಚೂಕಡಿಮೆ ಹದಿನಾಲ್ಕು ವರ್ಷಗಳ ಹಳೆಯ ನಂದಿಗ್ರಾಮ-ಸಿಂಗೂರುಗಳಲ್ಲೇ ಹೂತು ಹೋಗಿದೆ. ನಂದಿಗ್ರಾಮ ಹೊಮ್ಮಿಸಿದ ಸವಾಲುಗಳ ನೋಟಕ್ಕೆ ನೋಟ ಬೆರೆಸಿ ನೋಡಲಿಲ್ಲ ಮಮತಾ ಆಡಳಿತ. ಮಮತಾ ದಂಡು ಮತ್ತು ದಂಡನಾಯಕರು ನಡೆಸಿದ ಭ್ರಷ್ಟಾಚಾರವನ್ನೂ ತಮ್ಮ ಕೊರಳಿಗೆ ಸುತ್ತಿಕೊಂಡಿದ್ದಾರೆ. ಪರಿವರ್ತನೆಯ ಮಂತ್ರ ಜಪಿಸಿ ಅಧಿಕಾರಕ್ಕೆ ಬಂದವರು ಮಮತಾ. ಸರ್ಕಾರದ ಪರಿವರ್ತನೆ ಆಯಿತೇ ವಿನಾ ವ್ಯವಸ್ಥೆ ಬದಲಾಗಲಿಲ್ಲ. ಹಾಗೆಂದು ಮಮತಾ ಆಡಳಿತದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುವುದು ತಪ್ಪಾದೀತು. ಆದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ. ಅದರ ಸುತ್ತ ಬೆಸೆದಿದ್ದ ಆಶೋತ್ತರಗಳು ಚಿಗಿತು ಫಲ ನೀಡಲಿಲ್ಲ. ನಿಜ, ಮಮತಾ ಆಡಳಿತ ವಿರೋಧಿ ಅಲೆಯನ್ನೇನೂ ಎದುರಿಸಿಲ್ಲ.

ಎರಡು ಅವಧಿಗಳ ನಂತರವೂ ಅಂತಹ ಅಲೆ ಇಲ್ಲದಿರುವುದು ಸಾಧಾರಣ ಸಂಗತಿಯೇನೂ ಅಲ್ಲ. ತಾವು ಎಡಕ್ಕಿಂತ ಹೆಚ್ಚು ಎಡ ಎಂದು ತೋರಿಸಿಕೊಂಡ ದೀದಿ ನೀತಿ ನಿರ್ಧಾರಗಳಲ್ಲಿ ಮೂಲಭೂತ ಬದಲಾವಣೆಗೆ ಕೈ ಹಾಕಲಿಲ್ಲ. ಹೀಗಾಗಿ ನಿರಾಸೆಯ ಅಂತರ್ವಾಹಿನಿ ಜನಮಾನಸದಲ್ಲಿ ಹರಿದಿರುವುದು ಹೌದು. ಅದು ಭ್ರಮನಿರಸನದ ರೂಪನ್ನು ಇನ್ನೂ ತಳೆದಿಲ್ಲವೆಂದರೆ ಮಮತಾ ಸರ್ಕಾರದ ಹಲವಾರು ಜನಪ್ರಿಯ ಕಾರ್ಯಕ್ರಮಗಳೇ ಕಾರಣ. ಎಡರಂಗವೇ ಪ್ರತಿಪಕ್ಷವಾಗಿ ಉಳಿದಿದ್ದರೆ ಮಮತಾಗೆ ಎದುರೇ ಇರುತ್ತಿರಲಿಲ್ಲ. ಆದರೆ ಎಡರಂಗ ಮತ್ತು ಕಾಂಗ್ರೆಸ್ ಉಳಿಸಿರುವ ಶೂನ್ಯವನ್ನು ಮೋದಿ ಮತ್ತು ಅಮಿತ್ ಶಾ ಅವರ ಅತ್ಯುಗ್ರ ಅಕ್ರಮಣಕಾರಿ ಹಿಂದುತ್ವ ರಾಜಕಾರಣ ಕಬಳಿಸಿದೆ.
ಎದುರಾದದ್ದನ್ನೆಲ್ಲ ಉರುಳಿಸಿ ನೆಲಸಮ ಮಾಡುವ ದೈತ್ಯ ಬುಲ್ಡೋಜರ್ ರಾಜಕಾರಣವಿದು. ಹುಟ್ಟಾ ಬಂಡಾಯಗಾರ್ತಿ ಎಂಬ ಪಟ್ಟ ಪಡೆದಿರುವ ಮಮತಾ ಅವರನ್ನೂ ಅಲ್ಲಾಡಿಸಿರುವ ದಾಳಿಯಿದು. ಬೇರುಮಟ್ಟದಲ್ಲಿ ರಾಜಕಾರಣವನ್ನು ನಿಯಂತ್ರಿಸುವ ತೋಳ್ಬಲ-ಧನಬಲದ ಕಟ್ಟಾಳುಗಳನ್ನು ತೃಣಮೂಲದಿಂದ ಸೆಳೆದುಕೊಂಡಿದೆ ಬಿಜೆಪಿ. ಶಾರದ-ನಾರದ ಹಗರಣಗಳಲ್ಲಿ ಕಳಂಕಿತರಾದ ಹಲವು ತೃಣಮೂಲ ತಲೆಯಾಳುಗಳು ಇಂದು ಬಿಜೆಪಿ ಎಂಬ ’ಗಂಗೆ’ಯಲ್ಲಿ ಮುಳುಗಿ ’ಪವಿತ್ರ’ರಾಗಿದ್ದಾರೆ. ಹೀಗಾಗಿ ಬಿಜೆಪಿ ಕೇವಲ ’ಕಟ್ ಮನಿ’ ಭ್ರಷ್ಟಾಚಾರದ ವಿರುದ್ಧ ಕತ್ತಿ ಝಳಪಿಸುತ್ತಿದೆಯೇ ವಿನಾ ಶಾರದ- ನಾರದ ಚಿಟ್ ಫಂಡ್ ಹಗರಣಗಳ ಕುರಿತು ತುಟಿ ಹೊಲಿದುಕೊಂಡಿದೆ.
ಬೀಡುಬೀಸು ಪಕ್ಷಾಂತರ, ಹಣದಶಕ್ತಿಯ ಅಬ್ಬರ, ಕೇಂದ್ರದ ಅಧಿಕಾರದ ದಂಡದ ಯಥೇಚ್ಛ ಬಳಕೆ, ಕೋಮುವಾದಿ ಧ್ರುವೀಕರಣ ಹಾಗೂ ಮಿಥ್ಯಾಪ್ರಚಾರದ ಹಲವು ಹತಾರುಗಳನ್ನು ಝಳಪಿಸುತ್ತ ಬಿಜೆಪಿ ಬಂಗಾಳಕ್ಕೆ ಲಗ್ಗೆ ಹಾಕಿ ವರ್ಷಗಳೇ ಉರುಳಿವೆ. ತನ್ನ ಸನ್ನಾಹದಲ್ಲಿ ಅದು ಕಣ್ಣುಕುಕ್ಕುವ ಯಶಸ್ಸನ್ನು ಕಂಡಿದೆ ಕೂಡ. ಇಂದು ಬಂಗಾಳದ ಅಧಿಕಾರದ ಗದ್ದುಗೆಯ ಮೇಲೆ ಕೈಯಿರಿಸಿ ನಿಂತೀತೆಂದು ಹತ್ತು ವರ್ಷಗಳ ಹಿಂದೆ ಯಾರೂ ಊಹಿಸಿರಲಿಲ್ಲ.
ಇಂತಹ ಬಿಜೆಪಿ ಪ್ರವೇಶದ ನಂತರ ಪಶ್ಚಿಮ ಬಂಗಾಳದ ಬದಲಾದ ರಾಜಕಾರಣದ ವಿನ್ಯಾಸದ ಸುಳಿವುಗಳು ನಂದಿಗ್ರಾಮದ ಮಮತಾ ಬ್ಯಾನರ್ಜಿ-ಸುವೇಂದು ಅಧಿಕಾರಿ ಹಣಾಹಣಿಯಲ್ಲಿ ಕಾಣಸಿಗುತ್ತವೆ. ನಂದೀಗ್ರಾಮದ ಪರಿಶಿಷ್ಟ ಜಾತಿ-ಪಂಗಡಗಳ ಜನಸಂಖ್ಯೆಯ ಪ್ರಮಾಣ ಶೇ.16.5. ಈ ಸಮುದಾಯಗಳನ್ನೂ ಒಡೆದಿರುವ ಬಿಜೆಪಿ, ಹಿಂದೂ-ಮುಸ್ಲಿಮ್ ಧ್ರುವೀಕರಣ ಮತ್ತು ಭಾರೀ ಪ್ರಮಾಣದ ಪಕ್ಷಾಂತರದ ಮೂಲಕ ನಂದೀಗ್ರಾಮವನ್ನು ಗೆಲ್ಲಲು ಹೊರಟಿದೆ. ಈ ಮಾತು ಇಡೀ ಪಶ್ಚಿಮ ಬಂಗಾಳಕ್ಕೆ ಅಕ್ಷರಶಃ ವಿಸ್ತರಿಸಲಿದೆ. ನಂದಿಗ್ರಾಮದ ಕಂಪನಗಳು ರಾಜ್ಯಾದ್ಯಂತ ಹರಿಯಲಿವೆ. ಚುನಾವಣಾ ಫಲಿತಾಂಶಗಳ ನಂತರವೂ ಮುಂದುವರೆಯಲಿವೆ.
ಭಾರತದ ಸಹಬಾಳ್ವೆಯ ಆತ್ಮದ ಅಳಿವು ಉಳಿವಿಗಾಗಿ ನಡೆದಿರುವ ಬಂಗಾಳದ ಸಮರದ ಆತ್ಮ ನಂದಿಗ್ರಾಮ. ಇಲ್ಲಿ ಮಮತಾ ಸೋತರೆ ಈ ಉತ್ಪಾತದ ಕಂಪನಗಳು ದೇಶದ ಜನತಂತ್ರವನ್ನು ಅಸ್ಥಿರಗೊಳಿಸುವುದು ನಿಶ್ಚಿತ. ಬಿಜೆಪಿ ಬಯಸುತ್ತಿರುವ ಪ್ರತಿಪಕ್ಷಮುಕ್ತ ಭಾರತ ಬಾಗಿಲು ಬಡಿಯುತ್ತಿದೆ.


