ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಮಂಗಳವಾರ ರಾತ್ರಿ 8 ಗಂಟೆಯವರೆಗೆ 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಕೇಂದ್ರ ಪಡೆಗಳ ವಿರುದ್ಧ ಮಾಡಿದ ಆರೋಪ ಹಾಗೂ ಅಲ್ಪಸಂಖ್ಯಾತ ಮತದಾರರು ತಮ್ಮ ಮತಗಳನ್ನು ವಿಂಗಡಿಸಲು ಅವಕಾಶ ನೀಡದಂತೆ ಮಾಡಿದ್ದ ಮನವಿಯು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗವು ಹೇಳಿದೆ.
ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಯ ಬಗ್ಗೆ ಚುನಾವಣಾ ಆಯೋಗವು ಏಪ್ರಿಲ್ 7 ಮತ್ತು ಏಪ್ರಿಲ್ 8 ರಂದು ಮಮತಾ ಅವರಿಗೆ ನೋಟಿಸ್ ನೀಡಿತ್ತು.
ಚುನಾವಣಾ ಆಯೋಗವು ಏಪ್ರಿಲ್ 7 ರಂದು ನೀಡಿದ್ದ ನೋಟಿಸ್‌ನಲ್ಲಿ, ಅಲ್ಪಸಂಖ್ಯಾತ ಮತದಾರರು ತಮ್ಮ ಮತಗಳನ್ನು ವಿಭಜಿಸದಂತೆ ಕೇಳಿಕೊಂಡಿದ್ದರು ಎಂದು ಉಲ್ಲೇಖಿಸಿತ್ತು.
ಇದನ್ನೂ ಓದಿ: ಬಂಗಾಳ: ‘ಬಿಜೆಪಿ ಸೆಂಚುರಿ ಹೊಡೆದಿದೆ; ಮಮತಾ ಕ್ಲೀನ್ ಬೌಲ್ಡ್’ – ನರೇಂದ್ರ ಮೋದಿ
ಏಪ್ರಿಲ್ 8 ರಂದು ನೀಡಿದ್ದ ನೋಟಿಸ್‌ನಲ್ಲಿ, ಮಮತಾ ಅವರು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗಳು ಅವಾಂತರಗಳನ್ನು ಸೃಷ್ಟಿಸಿದರೆ ಅವರನ್ನು ಘೆರಾವ್ ಮಾಡಲು ಮಹಿಳೆಯರನ್ನು ಕೇಳಿದ್ದಾರೆ ಎಂದು ಉಲ್ಲೇಖಿಸಿತ್ತು.
ಇವೆರೆಡಕ್ಕೂ ಮಮತಾ ಬ್ಯಾನರ್ಜಿ ಅವರು ಉತ್ತರಿಸಿದ್ದರಾದರೂ, ಚುನಾವಣಾ ಆಯೋಗವು, ಮಮತಾ ಬ್ಯಾನರ್ಜಿ ನೀಡಿದ್ದ ಉತ್ತರದಲ್ಲಿ ತನ್ನ ಭಾಷಣದ ಪ್ರಮುಖ ಭಾಗಗಳನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಹೇಳಿತ್ತು.
ಆದ್ದರಿಂದ ಮಮತಾ ಬ್ಯಾನರ್ಜಿ ಅವರು ನೀತಿ ಸಂಹಿತೆ, ಜನರ ಪ್ರಾತಿನಿಧ್ಯ ಕಾಯ್ದೆ-1951 ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗವು ಅಭಿಪ್ರಾಯಪಟ್ಟಿತ್ತು. ಅವರ ಹೇಳಿಕೆಗಳನ್ನು ಖಂಡಿಸಿದ ಆಯೋಗ, ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ಬಳಸುವುದನ್ನು ನಿಲ್ಲಿಸುವಂತೆ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದೆ. ಜೊತೆಗೆ ಸೋಮವಾರ ರಾತ್ರಿ 8 ಗಂಟೆಯಿಂದ 24 ಗಂಟೆಗಳ ಕಾಲ ಪ್ರಚಾರ ಮಾಡುವುದನ್ನು ನಿಷೇಧಿಸಿದೆ.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದ ಚುನಾವಣೆ ನಡೆಯಲಿದ್ದು, ನಾಲ್ಕು ಹಂತಗಳು ಈಗಾಗಲೇ ಮುಗಿದಿದೆ. ಏಪ್ರಿಲ್ 17 ರಂದು ಐದನೇ ಹಂತದ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಜಾತಿ ಆಧಾರಿತ ಹಿಂಸಾಚಾರ ಹೆಚ್ಚಾಗುತ್ತಿದೆ ಎಂದ ಪತ್ರಕರ್ತನ ಮೇಲೆ ಸೈಬರ್ ಭಯೋತ್ಪಾದನೆ FIR!


