ʼಹರಿಯಾಣದ ಹಿಸಾರ್‌ನಲ್ಲಿ ಜಾತಿ ಆಧಾರಿತ ಹಿಂಸಾಚಾರ ಹೆಚ್ಚಾಗುತ್ತಿದೆʼ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಪತ್ರಕರ್ತನ ಮೇಲೆ ಸೈಬರ್‌ ಭಯೋತ್ಪಾದನೆ ಮತ್ತು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಪ್ರಚೋದನೆ ಆರೋಪದಲ್ಲಿ ದೂರು ದಾಖಲಾಗಿದೆ.

ಹರಿಯಾಣದಲ್ಲಿ ಸ್ಥಳೀಯ ವೆಬ್‌ಸೈಟ್‌ ನಡೆಸುತ್ತಿರುವ ರಾಜೇಶ್‌ ಕುಂದು ಎಂಬ ಪತ್ರಕರ್ತನ ಮೇಲೆ ಸಾಮಾಜಿಕ ಜಾಲತಾಣದ ಪೋಸ್ಟ್‌ ಆಧಾರದಲ್ಲಿ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಹಿಸಾರ್‌ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ ಎಂದು ದಿವೈರ್‌ ವರದಿ ಮಾಡಿದೆ.

“ಈ ಒಂದು ವಾರದಲ್ಲಿ ಹಿಸಾರ್‌ ಜಾತಿ ಆಧಾರಿತ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಇದೇ ಮಾದರಿಯಲ್ಲಿ ಇಡೀ ರಾಜ್ಯದಲ್ಲಿ ಮತ್ತು ದೇಶದಲ್ಲಿ ಹಿಂಸಾಚಾರ ನಡೆಸಲು ಇದು ಬ್ಲೂ ಪ್ರಿಂಟ್‌ ಆಗಿದೆ” ಎಂದು ರಾಜೇಶ್‌ ಕುಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಸಾರ್ವಜನಿಕರನ್ನು ಪ್ರಚೋದಿಸುವಂತಹ ಸಂದೇಶಗಳನ್ನು ವಾಟ್ಸಾಪ್ ಗುಂಪುಗಳಿಗೆ ಮತ್ತು ಫೇಸ್‌ಬುಕ್ ಮೂಲಕ ರಾಜೇಶ್ ಕುಂದು ಅವರ ಮೊಬೈಲ್ ಫೋನ್ ಸಂಖ್ಯೆಯಿಂದ ಕಳುಹಿಸಲಾಗಿದೆ ಮತ್ತು ಇದು ಶಾಂತಿಯನ್ನು ಕಾಪಾಡುವಲ್ಲಿ ಪರಿಣಾಮ ಬೀರುತ್ತದೆ, ಆದ್ದರಿಂದ ಆತನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಪೊಲೀಸ್ ವಕ್ತಾರ ವಿಕಾಸ್ ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ, ಏಪ್ರಿಲ್‌ 09 ರಂದು ಐಪಿಸಿಯ 153 ಎ (ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಐಪಿಸಿಯ 153 ಬಿ (ಪ್ರಚೋದನೆಗಳು, ರಾಷ್ಟ್ರೀಯ ಏಕೀಕರಣಕ್ಕೆ ಧಕ್ಕೆ) ಮತ್ತು ಐಟಿ ಕಾಯ್ದೆಯ 66 ಎಫ್ (ಸೈಬರ್-ಭಯೋತ್ಪಾದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜೇಶ್ ಕುಂದು ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದನ್ನು ಕಾಂಗ್ರೆಸ್‌ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಕುಮಾರಿ ಸೆಲ್ಜಾ, ಕಾಂಗ್ರೆಸ್ ನ ದೀಪಂದರ್ ಸಿಂಗ್ ಹೂಡಾ ಮತ್ತು ಐಎನ್ಎಲ್‌ಡಿಯ ಅಭಯ್ ಸಿಂಗ್ ಚೌತಲಾ ಸೇರಿದಂತೆ ಪ್ರತಿಪಕ್ಷ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನವನ್ನು ರಾಜೇಶ್‌ ಕುಂದು ಬೆಂಬಲಿಸಿದ್ದರು. ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರೈತ ಹೋರಾಟದ ಬಗ್ಗೆ ಬರೆಯುತ್ತಿದ್ದರು ಮತ್ತು ತಮ್ಮ ವೆಬ್‌ಸೈಟ್‌ನಲ್ಲಿ ಈ ಕುರಿತು ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಹಾಗಾಗಿ ಅವರನ್ನು ಗುರಿಯಾಗಿಸಿ ಈ ಸುಳ್ಳು ದೂರು ದಾಖಲಿಸಲಾಗಿದೆ ಎಂದು  ಹರಿಯಾಣದ ಪ್ರತಿಪಕ್ಷಗಳು ಆರೋಪಿಸಿವೆ.

“ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಆಂದೋಲನವನ್ನು ಸರ್ಕಾರ ಮುರಿಯಲು ಸಾಧ್ಯವಾಗದಿದ್ದಾಗ, ಅದು ಪತ್ರಕರ್ತ ರಾಜೇಶ್ ಕುಂದು ವಿರುದ್ಧ ಎಫ್ಐಆರ್ ದಾಖಲಿಸಿದೆ. ಅವರು ರೈತರ ಧ್ವನಿಯಾಗಿದ್ದಾರೆ. ಈ ಧ್ವನಿಯನ್ನು ನಿಗ್ರಹಿಸಲು ಅಥವಾ ರೈತರ ಆಂದೋಲನವನ್ನು ದಮನಿಸಲು ಕೇಂದ್ರದಿಂದ ಸಾಧ್ಯವಿಲ್ಲ” ಎಂದು ರಣದೀಪ್‌ ಸಿಂಗ್ ಸುರ್ಜೇವಲಾ ಟ್ವೀಟ್‌ ಮಾಡಿದ್ದಾರೆ.

ಹಿಸಾರ್‌ನಲ್ಲಿನ ಪತ್ರಕರ್ತರು ತುರ್ತು ಸಭೆ ನಡೆಸಿದ್ದು, ರಾಜೇಶ್‌ ಕುಂದು ಪರ ಐಕ್ಯಮತ್ಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಎಫ್‌ಐಆರ್‌ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಪತ್ರಕರ್ತನ ಮೇಲಿನ ದೂರನ್ನು ಚಂಡೀಗಢ ಪ್ರೆಸ್ ಕ್ಲಬ್ ಖಂಡಿಸಿದೆ.

“ರಾಜೇಶ್ ಕುಂದು ಅವರು ಜವಾಬ್ದಾರಿಯುತ ಪ್ರಜೆಯಾಗಿ ಮತ್ತು ಪತ್ರಕರ್ತರಾಗಿ ತಮ್ಮ ವಿಶ್ವಾಸಾರ್ಹ ಮೂಲಗಳ ಮೂಲಕ ಪಡೆದ ಮಾಹಿತಿಯ ಆಧಾರದ ಮೇಲೆ ಹಿಂಸಾಚಾರದ ಭೀತಿಯ ಬಗ್ಗೆ ಪೋಸ್ಟ್ ಮಾಡುವ ಮೂಲಕ ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೋಸ್ಟ್‌ ಮೂಲಕ ಜನರಲ್ಲಿ ಅರಿವು ಮೂಡಿಸಲು ಮತ್ತು ಮುಂದೊದಗಬಹುದಾದ ಅಹಿತಕರ ಪರಿಸ್ಥಿತಿಯನ್ನು ತಪ್ಪಿಸಬಹುದು ಎಂಬುದು ಅವರ ಉದ್ದೇಶವಾಗಿದೆ. ಇಂತಹ ವ್ಯಕ್ತಿಯ ಮೇಲೆ ಎಫ್‌ಐಆರ್‌ ದಾಖಲಿಸುವುದು ಸರಿಯಲ್ಲ” ಎಂದು ಪತ್ರಕರ್ತರು ಕಿಡಿಕಾರಿದ್ದಾರೆ.

“ಪತ್ರಕರ್ತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಅತ್ಯಂತ ಖಂಡನೀಯ. ಅಲ್ಲದೆ ಸ್ವತಂತ್ರ ಪತ್ರಕರ್ತರನ್ನು ಭಯಗೊಳಿಸಲು ಪೊಲೀಸರು ಹಿಸಾರ್‌ನ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇವೆ” ಎಂದು ಚಂಡೀಗಢ ಪ್ರೆಸ್ ಕ್ಲಬ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: ರೈತ ಹೋರಾಟ: ಕೇಂದ್ರದೊಂದಿಗೆ ಮಾತುಕತೆಗೆ ಸಿದ್ದವಿದ್ದೇವೆ, ಹಕ್ಕೊತ್ತಾಯಗಳು ಅವೆ ಇರಲಿವೆ- ರಾಕೇಶ್‌ ಟಿಕಾಯತ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

LEAVE A REPLY

Please enter your comment!
Please enter your name here