ಪ್ರಸಕ್ತವಾಗಿ ಹಲವು ಪಕ್ಷಗಳು ನಡೆಸುತ್ತಿರುವ ಧರ್ಮ ರಾಜಕಾರಣಗಳು ನಿಜ ಭಾರತವನ್ನು ಅಕ್ಷರಶಃ ಕೊಂದುಹಾಕುತ್ತಿವೆ. ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ಜನರಲ್ಲಿ ನೆಲೆಸಿದ್ದ ಒಗ್ಗಟ್ಟನ್ನು ಹಳ್ಳಿಹಳ್ಳಿಗಳಲ್ಲೂ ಒಡೆದು ಎಲ್ಲೆಲ್ಲೂ ಆತಂಕದ ಕರಿಛಾಯೆ ಏಳಲು ಕಾರಣೀಕರ್ತರಾಗಿದ್ದಾರೆ. ಇಡೀ ದೇಶಾದ್ಯಂತ ’ಸಾಮರಸ್ಯ’ ಎಂಬುದು ಬರೇ ಚಂದದ ನುಡಿಗಟ್ಟಾಗಿ ಮಾತ್ರ ಉಳಿದಿರುವ ಈ ದಿನಮಾನಗಳಲ್ಲಿ ಹನುಮಂತ ಹಾಲಿಗೇರಿಯವರ ರಚನೆಯ, ಸಿದ್ದರಾಮ ಕೊಪ್ಪರ ನಿರ್ದೇಶನದ ’ಅಲೈದೇವ್ರು’ ನಾಟಕವು ಸಾಮರಸ್ಯದ ಬದುಕು ಇಂದಿನ ತುರ್ತು ಅಗತ್ಯ ಎಂಬುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಯಿತು.
ಶಿವಮೊಗ್ಗದ ಕುಪ್ಪಳಿಯಲ್ಲಿ ’ದೇಶಕ್ಕಾಗಿ ನಾವು’ ಸಂಘಟನೆ ಹಮ್ಮಿಕೊಂಡಿದ್ದ ಯುವಜನರ ಅಧ್ಯಯನ ಶಿಬಿರದಲ್ಲಿ ಬೆಂಗಳೂರಿನ ಜನರಂಗ ತಂಡವು ಈ ನಾಟಕವನ್ನು ಪ್ರಸ್ತುತಪಡಿಸಿತು. ಒಂದು ಮುಕ್ಕಾಲು ಗಂಟೆಯ ಈ ನಾಟಕದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವೆನಿಸಿಕೊಂಡಿರುವ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಸಂಕಟ, ನೋವು, ಅಭದ್ರತೆ, ಸಿಟ್ಟು, ಸೆಡವು, ವ್ಯಂಗ್ಯ, ಆಕ್ರೋಶಗಳನ್ನು ತಂಡದ ನಟರು ಪ್ರೇಕ್ಷಕರಿಗೆ ದಾಟಿಸಿ, ಅವರ ಕಣ್ಣುಗಳು ತೇವಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ವರ್ತಮಾನದ ರಾಜಕೀಯ ಹುನ್ನಾರಗಳಾದ ಪೌರತ್ವ ಕಾಯ್ದೆ, ಲವ್ ಜಿಹಾದ್, ಗೋಹತ್ಯೆ ನಿಷೇಧ ಮುಂತಾದವುಗಳು ಕುರಿತು ಎಲ್ಲೂ ಅಂತಿಮ ತೀರ್ಪನ್ನು ನೀಡದೇ, ಅಗ್ರೆಸಿವ್ ದಾರಿಯನ್ನು ಹಿಡಿಯದೇ, ಎರಡೂ ಮಗ್ಗಲುಗಳಿಂದ ಸಂವಾದ ನಡೆಸುವ ಶೈಲಿಯ ನಿರೂಪಣಾ ತಂತ್ರವನ್ನು ನಾಟಕ ಅನುಸರಿಸಿದ್ದು ವಿಶೇಷವಾಗಿತ್ತು.
ವರ್ಷವರ್ಷಗಳಿಂದ ಹಿಂದೂ ಮತ್ತು ಮುಸ್ಲಿಂ ಜನಾಂಗಗಳೆರಡೂ ಒಟ್ಟಾಗಿ ನಡೆಸುತ್ತಿದ್ದ ಊರಿನ ಜನಪದ ಮೊಹರಂ (ಅಲೈದೇವ್ರ ಹಬ್ಬ) ಹಬ್ಬವನ್ನು ಎರಡೂ ಕಡೆಯ ಮೂಲಭೂತವಾದಿಗಳಿಂದಾಗಿ ನಿಲ್ಲಿಸಲು ಶತಾಯಗತಾಯ ಪ್ರಯತ್ನಿಸಲಾಗುತ್ತದೆ. ಜನರು ಜಾಗೃತವಾಗಿದ್ದರೆ ಇಂತಹ ಒಡಕು ಎಬ್ಬಿಸುವ ಪ್ರಯತ್ನಗಳು ವಿಫಲವಾಗುತ್ತವೆ ಎಂಬ ಸಂದೇಶದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಈ ನಾಟಕದಲ್ಲಿ ಎಲ್ಲಿಯೂ ಯಾವುದೇ ಒಂದು ಧರ್ಮವನ್ನು ಟಾರ್ಗೆಟ್ ಮಾಡಿಲ್ಲ. ನಮ್ಮ ಹಳ್ಳಿಹಳ್ಳಿಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಡಲು ಕಾರಣಗಳು ಯಾವುವು, ಅದರ ಹಿಂದಿರುವ ಶಕ್ತಿಗಳಾವವು, ಅವುಗಳ ಮುಖವಾಡಗಳೇನು ಎಂಬುದನ್ನು ನಾಟಕ ಬಿಚ್ಚಿಡುತ್ತಾ ಹೋಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಜನರ ಬಾಹುಳ್ಯ ಪ್ರದೇಶಗಳಲ್ಲಿ ’ಯಾವಾಗ ಎಲ್ಲಿ ಗಲಾಟೆ-ಗಲಭೆಗಳಾಗಿಬಿಡುತ್ತವೋ’ ಎಂಬ ಆತಂಕ ಮಡುಗಟ್ಟಿದೆ. ಅವುಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಟ್ಟಿವೆ. ಎರಡೂ ಕಡೆಯಲ್ಲಿರುವ ಅತಿರೇಕದ ಧಾರ್ಮಿಕ ವಾದಿಗಳ ತೆವಲುಗಳಲ್ಲಿ ನಿರುಪದ್ರವಿ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮನುಷ್ಯ ಸಹಜ ಪ್ರೀತಿಯೂ ಧರ್ಮದ ಬಣ್ಣ ಬಳಿದುಕೊಳ್ಳುತ್ತಿದೆ. ಇಂತಹ ವಿಷಮ ದಿನಗಳ ತಲ್ಲಣಗಳನ್ನು ’ಅಲೈದೇವ್ರು’ ಒಂದು ಕಥೆಯಾಗಿ-ನಾಟಕ ಪ್ರದರ್ಶನವಾಗಿ ಸಮರ್ಥವಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಆದರೆ ರಂಗ ಪ್ರಯೋಗದ ದೃಷ್ಟಿಯಲ್ಲಿ ಇದು ಸಾಕಷ್ಟು ಮಾಗಬೇಕಿದೆ. ನಾಟಕದ ಕಂಟೆಂಟ್ ಮತ್ತು ಅವಧಿಯನ್ನು ಗಮನವಿಟ್ಟುಕೊಂಡು ಸಣ್ಣಪುಟ್ಟ ಬದಲಾವಣೆ ಮಾಡಬೇಕಿದೆ. ಸಣ್ಣಪುಟ್ಟ ಮಿತಿಗಳನ್ನು ಸರಿಪಡಿಸಿಕೊಂಡರೆ ಈ ನಾಟಕ ಈ ಕಾಲದ ಒಂದೊಳ್ಳೆ ಪ್ರಯತ್ನವೆನಿಸಿಕೊಳ್ಳದೆ ಇರದು. ಜೊತೆಗೆ ಇಂದು ಕೋಮು ವೈಷಮ್ಯದ ರೋಗಗಳಿಗೆ ಮದ್ದಾಗುವುದಕ್ಕೂ ಸಾಧ್ಯವಿದೆ.
ಈ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನಗೊಂಡಾಗ ಕೆಲವು ಮೂಲಭೂತವಾದಿಗಳಿಂದ ಅಪಸ್ವರ ಕೇಳಿಬಂದಿದ್ದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಕಾರಣದಿಂದಾಗಿ ಬಹುಶಃ ಧಾರ್ಮಿಕ ಸೂಕ್ಷ್ಮ ಪ್ರದೇಶಗಳೆಂದು ಕರೆಸಿಕೊಳ್ಳುವ ಊರುಗಳಲ್ಲಿ ಇದರ ಪ್ರದರ್ಶನಕ್ಕೆ ಆಯೋಜಕರು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ ಅಂತಹ ಪ್ರದೇಶಗಳಲ್ಲಿಯೇ ಇದು ಹೆಚ್ಚಚ್ಚು ಪ್ರದರ್ಶನಗೊಳ್ಳಬೇಕಿರುವ ಅಗತ್ಯವಿದೆ. ಎಲ್ಲಿ ಗಾಯವಾಗಿದೆಯೋ ಅಲ್ಲಿಯೇ ಮುಲಾಮು ಹಚ್ಚಬೇಕಾದುದು ಅನಿವಾರ್ಯ.
ಸಮಾಜದ ಬಹುಪಾಲು ಸಹೃದಯರು ಧಾರ್ಮಿಕ ಸಾಮರಸ್ಯದ ವಿಚಾರದಲ್ಲಿ ಜಾಣಮೌನ ವಹಿಸುವಾಗ, ಪರಸ್ಪರ ಅರಿತು ಬಾಳಬೇಕಾದ ಅಗತ್ಯಗಳನ್ನು ಗಟ್ಟಿಯಾಗಿ ಮಾತನಾಡದಿರುವಾಗ ಈ ಹೊತ್ತಿನ ತಲ್ಲಣವೊಂದನ್ನು ಇಷ್ಟು ಚಂದವಾಗಿ ಮತ್ತು ನೇರಾನೇರ ಹೇಳುವ ಧೈರ್ಯ ತೋರಿರುವ ರಂಗತಂಡಕ್ಕೆ ಅಭಿನಂದನೆಗಳು.
ಈ ಮಾತೊಂದನ್ನು ಹೇಳಲೇಬೇಕಿದೆಯೆನಿಸುತ್ತಿದೆ. ನಮ್ಮ ನಮ್ಮ ಜಾತಿ-ಮತಗಳನ್ನು ಮನೆಗಷ್ಟೇ
ಸೀಮಿತಗೊಳಿಸಿಕೊಳ್ಳಬೇಕಾಗಿರುವುದು ಶಾಂತಿ ಮತ್ತು ಸಾಮರಸ್ಯದ ದೃಷ್ಟಿಯಿಂದ ಅತೀ ಅಗತ್ಯ. ಇದನ್ನು ಅರ್ಥಮಾಡಿಕೊಳ್ಳದೇ ಪರಸ್ಪರ ಬಡಿದಾಡುತ್ತಿದ್ದರೆ ಮುಂದೆ ಯಾರೂ ಉಳಿಯಲಾರರು. ’ಸಿರಿಯಾ’ದಂತಹ ದೇಶಗಳಲ್ಲಿ ಧಾರ್ಮಿಕ ಮೂಲಭೂತವಾದ ಅದೆಷ್ಟರಮಟ್ಟಿಗೆ ಮುಗ್ಧಜೀವಗಳ ನೆಮ್ಮದಿಯನ್ನು ಕಿತ್ತುಕೊಂಡಿದೆ, ಅಲ್ಲಿನ ಸಾಮಾನ್ಯ ಜನರ ಬದುಕು ಅದೆಷ್ಟು ದಾರುಣವಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ. ಈ ಉದಾಹರಣೆಗಳಿಂದ ಎಚ್ಚೆತ್ತುಕೊಂಡು, ಭಾರತದ ಎಳೆಯ ಮತ್ತು ಯುವ ಮನಸ್ಸುಗಳಲ್ಲಿ ಅಗತ್ಯವಾಗಿ ಸಾಮರಸ್ಯದ ಅಗತ್ಯವನ್ನು ಒತ್ತಿಹೇಳಬೇಕಿದೆ. ಮತೀಯ ಶಕ್ತಿಗಳ ಕುಟಿಲತೆಗಳು ಹೊಸ ತಲೆಮಾರಿಗೆ ಅರ್ಥವಾಗಬೇಕಿರುವುದು ಇಂದಿನ ಜರೂರತ್ತಾಗಿದೆ. ಧಾರ್ಮಿಕ ಸಾಮರಸ್ಯವನ್ನು ಪುನರ್ ಕಟ್ಟುವ ದೃಷ್ಟಿಯಿಂದ ’ಅಲೈದೇವ್ರು’ ನಾಟಕ ಮಹತ್ವದ್ದಾಗಿ ಕಾಣುತ್ತದೆ.
ನಾಗರಾಜ ಕೂವೆ
ಕುವೆಂಪು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗಾರಾಜ ಅವರ ’ಕೈತುತ್ತು- ಭಾವನೆಗಳ ಹೊತ್ತು’, ’ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ…’ ಎಂಬ ಪುಸ್ತಕಗಳು ಪ್ರಕಟವಾಗಿವೆ. ಪಶ್ಚಿಮ ಘಟ್ಟ ಮತ್ತದರ ತಪ್ಪಲಿನ ಜನರ ಬದುಕು, ಜೀವವೈವಿಧ್ಯದ ಅಧ್ಯಯನ, ತಿರುಗಾಟ ಇವರ ಹವ್ಯಾಸಗಳು.



ನಾಟಕ ಪ್ರದರ್ಶನ ಹಲವು ಮಿತಿಯಿಂದ ಕೂಡಿದೆ. ನಟರು ಪಾತ್ರದಿಂದ ದೂರವೇ ಉಳಿದಿದ್ದಾರೆ. ವಸ್ತು ಸನ್ನಿವೇಶ ವಿನ್ಯಾಸದಲ್ಲಿ ನಿರ್ದೇಶಕರು ಗಮನಹರಿಸಿಲ್ಲ. ನಟರಿಗೆ ಸ್ಪಷ್ಟತೆಯ ಕೊರತೆ ಇದೆ. ಹಲವಾರು ಸಂಭಾಷಣೆ ಮಿಸ್ ಆಗುತ್ತದೆ. ರಂಗಪರಿಕರಗಳ ಬಳಕೆಯಲ್ಲಿ ಗೊಂದಲ ಉಂಟಾಗಿದೆ. ತಾಲೀಮಿನ ಅವಶ್ಯಕತೆ ಇದೆ. ಕೆಲವು ದೃಶ್ಯಗಳನ್ನು ಚೂಯಿಂಗ್ ಗಮ್ಮಿನಂತೆ ಎಳೆಯಲಾಗಿದೆ. ದೃಶ್ಯ ಸಂಯೋಜನೆ ಇಲ್ಲ.