ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಡುವೆಯೂ ಪಟ್ಟು ಬಿಡದೆ ಉತ್ತರಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗಿರುವ 30 ಸಾಧುಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆಲ್ ಇಂಡಿಯಾ ಅಖಾಡ ಪರಿಷದ್ ಮುಖಂಡ ಮಹಾಂತ್ ನರೇಂದ್ರ ಗಿರಿಯವರಿಗೂ ಕೊರೊನಾ ತಗುಲಿದ್ದು ಅವರನ್ನು ರಿಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮತ್ತೊಬ್ಬ ಪ್ರಭಾವಿ ಸಾಧು ಮಧ್ಯಪ್ರದೇಶದ ಮಹಾ ನಿರ್ವಾನಿ ಅಖಾಡದ ಸ್ವಾಮಿ ಕಪಿಲ್ ದೇವ್‌ರವರು ಕೊರೊನಾದಿಂದಾಗಿ ಡೆಹ್ರಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರನ್ನು ರಿಷಿಕೇಶದಿಂದ ಇಲ್ಲಿಗೆ ವರ್ಗಾವಣೆ ಮಾಡಲಾಗಿತ್ತು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ 13 ಧಾರ್ಮಿಕ ಗುಂಪುಗಳಲ್ಲಿ ಎರಡನೇ ಅತಿ ದೊಡ್ಡ ಗುಂಪಾದ ನಿರಂಜನಿ ಅಖಾಡವು ಇದೇ ಶನಿವಾರದಿಂದ ಕುಂಭಯಾತ್ರೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಕುಂಭಮೇಳವೂ ಇನ್ನೂ 15 ದಿನಗಳ ಕಾಲ ಜರುಗಲಿದೆ. ಮುಂದಿನ ಮುಖ್ಯ ಶಾಹಿ ಸ್ನಾನ ಏಪ್ರಿಲ್ 27 ರಂದು ಜರುಗಲಿದೆ.
ಇದುವರೆಗೂ ಕೇವಲ 5 ದಿನಗಳ ಅವಧಿಯಲ್ಲಿ ಕುಂಭಮೇಳ ಪ್ರದೇಶದ 2,167 ಜನರು ಕೊರೊನಾ ಸೋಂಕಿಗೆ ಒಳಪಟ್ಟಿದ್ದಾರೆ. ಕೊರೊನಾ ಬಹುವೇಗದಲ್ಲಿ ಹರಡುತ್ತಿರುವ ಸಂದರ್ಭದಲ್ಲಿ ಕುಂಭಮೇಳ ನಡೆಸುವುದು ಸರಿಯಲ್ಲ ಎಂಬ ಟೀಕೆಗಳ ಎಲ್ಲಾ ವಲಯದಿಂದಲೂ ಕೇಳಿಬಂದಿವೆ.
ಆದರೆ ಉತ್ತರಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಕೊರೊನಾ ಏರಿಕೆಯ ನಡುವೆಯೂ ಕುಂಭಮೇಳ ನಡೆಸುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ, ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕೆಲ ಅಖಾಡಗಳು ಕುಂಭಮೇಳದಿಂದ ಹಿಂದೆ ಸರಿಯುತ್ತಿವೆ ಮತ್ತು ಕುಂಭಮೇಳ ನಿಲ್ಲಿಸಲಾಗುತ್ತದೆ ಎಂದು ಊಹಾಪೋಹಗಳನ್ನು ತಳ್ಳಿ ಹಾಕಿದ ಅವರು ಕುಂಭಮೇಳ ಮುಂದುವರೆಸುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ರೋಗಿಗಳ ಅಂತ್ಯಸಂಸ್ಕಾರ ಕಾಣಿಸದಂತೆ ಸ್ಮಶಾನಕ್ಕೆ ಶೀಟ್ ಗೋಡೆ ಹಾಕಿಸಿದ ಉತ್ತರ ಪ್ರದೇಶ ಸರ್ಕಾರ!


