ದಕ್ಷಿಣ ಭಾರತದ ಖ್ಯಾತ ಸಿನಿಮಾ ನಟ ರಜನಿಕಾಂತ್‌ಗೆ 2019ನೇ ಸಾಲಿನ ’ಫಾಲ್ಕೆ’ ಪ್ರಶಸ್ತಿಯನ್ನು ಘೋಷಿಸಿರುವುದು ಅವರ ಅಭಿಮಾನಿಗಳಿಗೆ ತಂದಿರುವ ತುಂಬು ಸಂತಸದ ಜೊತೆಜೊತೆಯಲ್ಲಿಯೇ ವಿಷಾದವೊಂದನ್ನೂ ಹುಟ್ಟುಹಾಕಿದೆ. ಭಾರತ ಸರ್ಕಾರ ಪ್ರತಿ ವರ್ಷ ಆಯಾ ಸಾಲಿನ ಅತ್ಯುತ್ತಮ ಸಿನಿಮಾಗಳಿಗೆ, ನಟನಟಿಯರಿಗೆ, ಹಿನ್ನೆಲೆ ಗಾಯಕರಿಗೆ ಮತ್ತು ಇನ್ನಿತರ ವಿಭಾಗಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಪ್ರತಿ ಬಾರಿ ಪ್ರಶಸ್ತಿ ಘೋಷಣೆಯಾದಾಗಲೆಲ್ಲ, ಆಯ್ಕೆ ಸಮಿತಿ ಅನುಸರಿಸಿದ ಮಾನದಂಡ, ಪ್ರಾದೇಶಿಕ ಅಸಮಾನತೆ, ಸ್ವಜನಪಕ್ಷಪಾತ ಈ ರೀತಿಯ ವಿಚಾರಗಳು ಮುನ್ನಲೆಗೆ ಬಂದು ಹೆಚ್ಚು ಚರ್ಚೆಯಾಗುತ್ತಿದ್ದದ್ದು ಸಾಧಾರಣ ಸಂಗತಿಯಾಗಿತ್ತು.

ಆದರೆ ಈ ಬಾರಿಯ ಪ್ರಶಸ್ತಿ ಘೋಷಣೆ ಮಾತ್ರ ಬೇರೆ ಕಾರಣಕ್ಕೆ ಚರ್ಚೆಯಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಪ್ರಭುತ್ವ, ಇನ್ನೂ ನಿರ್ದಿಷ್ಟವಾಗಿ ಒಕ್ಕೂಟ ಸರ್ಕಾರ ತನ್ನ ಖಾಸಗಿ ಹಿತಾಸಕ್ತಿಗೆ, ಅದನ್ನು ಪ್ರತಿನಿಧಿಸುವ ಪಕ್ಷಕ್ಕೆ ಅನುಕೂಲವಾಗುವಂತೆ ಈ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಳಸಿಕೊಂಡಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಜೀವಮಾನದ ಶ್ರೇಷ್ಠ ಸಾಧನೆ ಮಾಡಿದ ವ್ಯಕ್ತಿಗೆ ಕೊಡಮಾಡುವ ಹಾಗು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳಲ್ಲೇ ಅತ್ಯುನ್ನತವಾದದ್ದು ಎಂದು ಪರಿಗಣಿಸುವ ಫಾಲ್ಕೆ ಪ್ರಶಸ್ತಿಯನ್ನ ’ಭಾರತದ ಸಿನಿಮಾ ಜನಕ’ ಎಂದೇ ಖ್ಯಾತರಾದ ’ದಾದಾ ಸಾಹೇಬ್ ಫಾಲ್ಕೆ’ ಅವರ ಹೆಸರಿನಲ್ಲಿ 1969ರಲ್ಲಿ ಅನುಷ್ಠಾನಗೊಳಿಸಲಾಯಿತು. ಇದುವರೆಗೂ 51 ಬಾರಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇದರಲ್ಲಿ ಸಿಂಹಪಾಲು ಹಿಂದಿ ಸಿನಿಮಾ ಸಾಧಕರಿಗೆ ನೀಡಲಾಗಿದೆ (ಒಟ್ಟು 51ರಲ್ಲಿ 34 ಬಾರಿ). ಎರಡನೇ ಸ್ಥಾನ ಬೆಂಗಾಲಿ ಸಿನಿಮಾ ಸಾಧಕರಿಗೆ, ಅವರಲ್ಲೂ ಹಿಂದಿ ಸಿನಿಮಾದಲ್ಲಿ ಕೆಲಸ ಮಾಡಿದ ಹಲವರಿದ್ದಾರೆ. ಆಯ್ಕೆ ಸಮಿತಿ ಈ ಪ್ರಶಸ್ತಿಗೆ ಇದುವರೆಗೂ ಅನುಸರಿಸಿಕೊಂಡು ಬಂದಿರುವ ಮಾನದಂಡಗಳನ್ನು ಪರಿಗಣಿಸಿದರೆ ರಜನಿಕಾಂತ್ ಸಾಧನೆಯಲ್ಲಿ ಕೊರತೆಯೇನೂ ಕಾಣುವುದಿಲ್ಲ. ಇವರ 45 ವರ್ಷಗಳ ಸುದೀರ್ಘ ಸಿನಿಮಾ ವೃತ್ತಿ ಜೀವನ ಮತ್ತು ಆ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಈ ಪ್ರಶಸ್ತಿಗೆ ನೂರಕ್ಕೆ ನೂರು ಅರ್ಹರು. ಆದರೆ, ಪ್ರಶಸ್ತಿ ಘೋಷಿಸಿದ ಸಂದರ್ಭ ಮಾತ್ರ ಹಲವು ಅನುಮಾನಗಳಿಗೆ ಎಡೆಮಾಡಿದೆ.

ಸೂಪರ್ ಸ್ಟಾರ್ ರಜನಿಕಾಂತ್

ರಜನಿಕಾಂತ್ ಜನಿಸಿದ್ದು ಡಿಸೆಂಬರ್ 12, 1950ರಲ್ಲಿ. ಬೆಂಗಳೂರಿನಲ್ಲಿ ಜನಿಸಿದ ಇವರದ್ದು ಒಂದು ಸಾಧಾರಣ ಮರಾಠಿ ಕುಟುಂಬ. ಇವರ ಪೂರ್ವಿಕರು ಯಾರೂ ಸಿನಿಮಾ ಕ್ಷೇತ್ರದಲ್ಲಿ ಇದ್ದವರಲ್ಲ ಅಥವಾ ರಜನಿಯಲ್ಲಿದ್ದ ಕಲೆ/ಪ್ರತಿಭೆಯನ್ನು ಗುರುತಿಸಿ ಕರೆದು ಅವಕಾಶ ನೀಡುವಷ್ಟು ಪ್ರಭಾವಿ ಹಿನ್ನೆಲೆ ಉಳ್ಳವರಾಗಿರಲಿಲ್ಲ. ತಂದೆ ಪೊಲೀಸ್ ಪೇದೆ ವೃತ್ತಿಯಲ್ಲಿದ್ದರೆ, ತಾಯಿ ಮನೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಸಿನಿಮಾ ಕ್ಷೇತ್ರ ಪ್ರವೇಶ ಮಾಡುವ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ವೃತ್ತಿಯಲ್ಲಿದ್ದವರು. ಬಾಲ್ಯದಿಂದಲೇ ನಟನೆ ಬಗ್ಗೆ ಆಸಕ್ತಿಯಿದ್ದ ರಜನಿ ಬೆಂಗಳೂರಿನ ಗವಿಪುರಂ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಮಹಾಭಾರತ ನಾಟಕದಲ್ಲಿ ಏಕಲವ್ಯ ಪಾತ್ರಧಾರಿಯಾಗಿ ನಟಿಸಿ, ಕನ್ನಡದ ವರಕವಿ ಬೇಂದ್ರೆ ಅವರಿಂದ ಪ್ರಶಂಸೆಗೆ ಪಾತ್ರರಾದವರು. ಮುಂದೆ ಅವರ ಶಾಲಾ-ಕಾಲೇಜು ದಿನಗಳಲ್ಲಿ ಹಲವಾರು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.

ಮುಂದೊಂದು ದಿನ ತನ್ನ ಬಸ್ ಕಂಡಕ್ಟರ್ ವೃತ್ತಿ ತ್ಯಜಿಸಿ ಕಲಾವಿದನಾಗಬೇಕೆಂಬ ಕನಸಿನ ಮೂಟೆಯೊಂದಿಗೆ ಅಂದಿನ ’ಭಾರತ ಸಿನಿಮಾದ ಮೆಕ್ಕ’ ಮದ್ರಾಸ್‌ಗೆ ಸಿನಿಮಾ ಕಲಿಕೆ ಮಾಡಲು ತೆರಳಲು ಅನುವಾದಾಗ ಮನೆಯವರ ವಿರೋಧ ವ್ಯಕ್ತವಾಗುತ್ತದೆ. ಕೊನೆಗೆ ಸಹೋದ್ಯೋಗಿಯ ಸಹಾಯದಿಂದ ರಜನಿ ಮದ್ರಾಸ್ ತಲುಪುತ್ತಾರೆ. ರಜನಿಯ ಸಿನಿಮಾ ಜರ್ನಿಯನ್ನು ಸ್ಥೂಲವಾಗಿ ನಾಲ್ಕು ಹಂತಗಳಾಗಿ ವಿಂಗಡಿಸಿಕೊಂಡರೆ, ಮೊದಲನೆಯದು ಕಲಾವಿದನಾಗಿ ನೆಲೆ ಕಂಡುಕೊಳ್ಳಲು ನಡೆಸಿದ ಹೋರಾಟದ ದಿನಗಳು, ಎರಡನೆಯದು ಒಬ್ಬ ಕಥಾನಾಯಕನ ಪಾತ್ರಧಾರಿಯಾಗಿ ನಿರ್ದೇಶಕನ ಅಚ್ಚುಮೆಚ್ಚಿನ ನಟನಾಗಿದ್ದು, ಮೂರು ತನ್ನ ವಿಶಿಷ್ಟ ಸ್ಟೈಲ್ ಮತ್ತು ಮ್ಯಾನರಿಸಂನಿಂದ ಅಪಾರ ಅಭಿಮಾನಿಗಳನ್ನ ಪಡೆದುಕೊಂಡಿದ್ದು ಮತ್ತು ನಾಲ್ಕನೆಯದಾಗಿ ರಜನಿ ಬೇರೆ ಅಲ್ಲ ಅವನು ಸಿನಿಮಾದಲ್ಲಿ ನಟಿಸಿದ ಪಾತ್ರ ಬೇರೆಯಲ್ಲ ಅನ್ನುವ ಮಟ್ಟಿಗೆ ಪ್ರೇಕ್ಷಕರು/ಅಭಿಮಾನಿಗಳು ಭ್ರಮಿಸುವಂತೆ ಎರಡನ್ನೂ ಸಮೀಕರಿಸಿ ನಿರ್ದೇಶಕರು ರಜನಿಯನ್ನ ತೆರೆ ಮೇಲೆ ವಿಜೃಂಭಿಸಿದ್ದು.

ರಜನಿ ಕಲಾವಿದನಾಗಿ ಬೆಳೆದ ಪ್ರಾರಂಭದ ದಿನಗಳು ಕಷ್ಟಕರವಾಗಿದ್ದವು. ರಜನಿ ಮೊದಲು ನಟಿಸಿದ ಸಿನಿಮಾ ಕೆ ಬಾಲಚಂದರ್ ನಿರ್ದೇಶನದ ’ಅಪೂರ್ವ ರಾಗಂಗಳ್’ (1975). ಪಾತ್ರ ಬಹಳ ಸಣ್ಣದಾದರು ರಜನಿಯ ನಟನೆ ಹೆಚ್ಚು ಪ್ರಶಂಸೆಗೆ ಒಳಗಾಯಿತು. ’ದ ಹಿಂದು’ ಪತ್ರಿಕೆ ’ಹೊಸ ನಟ ರಜನಿಕಾಂತ್ ನಟನೆ ಘನತೆಯಿಂದ ಕೂಡಿದೆ ಮತ್ತು ಪ್ರಭಾವಶಾಲಿಯಾಗಿದೆ’ ಎಂದು ವಿಮರ್ಶೆ ಮಾಡಿತು. ಈ ಸಿನಿಮಾ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ಎರಡನೆಯದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕನ್ನಡ ಸಿನಿಮಾ ’ಕಥಾ ಸಂಗಮ’ (1976). ನಂತರ, ಅದಾಗಲೆ ಸ್ಟಾರ್‌ಗಳಾಗಿದ್ದ ಕಮಲ್ ಹಾಸನ್ ಮತ್ತು ಶ್ರೀದೇವಿ ನಟನೆಯ ಭಾರತಿರಾಜ ನಿರ್ದೇಶನದ ’ಪದಿನಾರು ವಯದಿನಿಲೆ’ (1977) ಸಿನಿಮಾದ ಒಂದು ಸಣ್ಣ ಪಾತ್ರದಲ್ಲಿ ರಜನಿ ನಟಿಸುತ್ತಾರೆ. ನಟನಾವೃತ್ತಿ ಪ್ರಾರಂಭಿಸಿ ಮೂರು ವರ್ಷವಾಗಿದ್ದರೂ ವಾಸ ಮಾಡಲು ಒಂದು ನೆಲೆ ಇರಲಿಲ್ಲ ಅನ್ನುವ ಮಾತುಗಳು ಕೂಡ ಇವೆ. ಸಿನಿಮಾ ನಟನಾಗಬೇಕೆಂಬ ಏಕಮೇವ ಉದ್ದೇಶದಿಂದ ಅದಮ್ಯ ಆತ್ಮವಿಶ್ವಾಸದೊಂದಿಗೆ ಬರಿಗೈಯಲ್ಲಿ ಬೆಂಗಳೂರು ಬಿಟ್ಟಿದ್ದ ರಜನಿಗೆ ಶೂಟಿಂಗ್ ಮುಗಿದಮೇಲೆ ಎಲ್ಲೂ ಉಳಿಯಲು ಸ್ಥಳವಿರಲಿಲ್ಲ. ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ಉಳಿಯುತ್ತಿದ್ದರು ಎಂಬ ವಿಷಯವನ್ನು ಅವರ ಸಹವರ್ತಿಗಳು ನೆನಪಿಸಿಕೊಳ್ಳುತ್ತಾರೆ.

1977ರ ಕೆ ಎಂ ಬಾಲಕೃಷ್ಣ ನಿರ್ದೇಶನದ ’ಆರು ಪುಷ್ಫಗಳ್’ ನಟ ವಿಜಯ್ ಕುಮಾರ ಜೊತೆ ಪ್ರಧಾನ ಭೂಮಿಕೆಯಲ್ಲಿನ ರಜನಿಕಾಂತ್ ನಟನೆ ನೋಡಿ ನಿರ್ಮಾಪಕ ಕಲೈಗ್ನಾನಂ ತಮ್ಮ ಮುಂದಿನ ಚಿತ್ರದಲ್ಲಿ ರಜನಿಯೇ ಹೀರೊ ಎಂದು ನಿರ್ಧರಿಸಿಬಿಡುತ್ತಾರೆ. ಎಂ ಭಾಸ್ಕರ್ ನಿರ್ದೇಶನದ 1978ರ ’ಭೈರವಿ’ ರಜನಿಕಾಂತ್ ಪೂರ್ಣ ಪ್ರಮಾಣದ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ. ಈ ಚಿತ್ರದಲ್ಲಿನ ನಟನೆಗೆ ಆಫರ್ ಬಂದಾಗ ರಜನಿ ಪ್ರಾರಂಭದಲ್ಲಿ ಹಿಂಜರಿಯುತ್ತಾರೆ – ಹೇಗೋ ಸಣ್ಣಪುಟ್ಟ ಪಾತ್ರ ಮಾಡಿಕೊಂಡು ಇಂಡಸ್ಟ್ರಿಯಲ್ಲಿ ಈಗಷ್ಟೇ ನೆಲೆಯೂರಲು ಪ್ರಯತ್ನಿಸುತ್ತಿದ್ದೀನಿ, ದಯವಿಟ್ಟು ಬಿಟ್ಟುಬಿಡಿ ಎಂದು ಕೇಳಿಕೊಳ್ಳುತ್ತಾರೆ. ರಜನಿ ಪ್ರತಿಭೆ ಮೇಲೆ ಅಪಾರ ವಿಶ್ವಾಸ ಹೊಂದಿದ್ದ ಕಲೈಗ್ನಾನಂ ಮತ್ತು ಎಂ ಭಾಸ್ಕರ್ ಬಹಳ ಒತ್ತಾಯ ಮಾಡಿದ ನಂತರ ಹೀರೊ ಆಗಿ ನಟಿಸಲು ಸಮ್ಮತಿಸುತ್ತಾರೆ. ಅಂದಿನ ಪ್ರಸಿದ್ಧ ನಿರ್ಮಾಪಕ ಚಿನ್ನಪ್ಪ ದೇವರ್ ಅವರು ಅದಾಗಲೆ ಎಂಜಿಆರ್ ಅವರ ಬಹಳಷ್ಟು ಸಿನಿಮಾಗಳನ್ನ ನಿರ್ಮಾಣ ಮಾಡಿರುತ್ತಾರೆ, ’ಆರು ಪುಷ್ಫಗಳ್’ ಸಿನಿಮಾಗೆ ತಾವು ಕೂಡ ಸ್ವಲ್ಪ ಹಣ ಹೂಡಲು ಒಪ್ಪಿರುತ್ತಾರೆ. ಯಾವಾಗ ಸಿನಿಮಾದ ಹೀರೊ ರಜನಿಕಾಂತ್ ಎಂದು ತಿಳಿಯುತ್ತದೆಯೋ, ಅವರು ಹಣ ಹೂಡಿಕೆಗೆ ನಿರಾಕರಿಸುವುದಷ್ಟೇ ಅಲ್ಲ, ನಿರ್ಮಾಪಕ ಕಲೈಗ್ನಾನಂಗೆ ರಜನಿಕಾಂತ್ ಅವರನ್ನು ಹೀರೊ ಆಗಿ ತೆಗೆದುಕೊಳ್ಳದಂತೆ ಸಲಹೆ ನೀಡುತ್ತಾರೆ. ಇದಕ್ಕೆ ಮಣಿಯದ ಕಲೈಗ್ನಾನಂ ಕೊನೆಗೂ ರಜನಿಯವರನ್ನ ಹೀರೋ ಮಾಡಿಯೇಬಿಡುತ್ತಾರೆ.

ಉಮಾ ಚಂದ್ರನ್ ಅವರ ಕಾದಂಬರಿಯನ್ನು ಆಧರಿಸಿ ಬಂದ ನಿರ್ದೇಶಕ ಮಹೇಂದ್ರನ್ ಅವರ ಚೊಚ್ಚಲ ನಿರ್ದೇಶನದ 1978ರ ’ಮುಲ್ಲುಮ್ ಮಲರಮ್‌’ನ ’ಕಾಳಿ’ ಪಾತ್ರದ ನಟನೆ ರಜನಿಕಾಂತ್‌ಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟ ಸಿನಿಮಾ. ತಮಿಳು ಸಿನಿಮಾಗಳ ಸಾಂಪ್ರದಾಯಿಕ ರಚನೆಗಳನ್ನು ಹೊಡೆದು ಕಟ್ಟಿದ ಒಂದು ಕಲ್ಟ್ ಸಿನಿಮಾ ಎಂದೇ ಮುಲ್ಲುಮ್ ಮಲರಮ್ ಹೆಸರಾಯಿತು. ಈ ಸಿನಿಮಾದ ನಟನೆಗಾಗಿ ತಮಿಳುನಾಡು ರಾಜ್ಯ ಸರ್ಕಾರದ ’ವಿಶೇಷ ಪ್ರಶಸ್ತಿ’ ರಜನಿಗೆ ಲಭಿಸುತ್ತೆ. ರಜನಿಕಾಂತ್ ಕೆಲ ವರ್ಷಗಳ ಹಿಂದೆ ನೀಡಿದ ಒಂದು ಸಂದರ್ಶನದಲ್ಲಿ ತನ್ನ ವೃತ್ತಿ ಜೀವನದ ಮಹತ್ವದ ಐದು ಸಿನಿಮಾಗಳಲ್ಲಿ ’ಮುಲ್ಲುಮ್ ಮಲರಮ್’ ಕೂಡ ಒಂದು ಮತ್ತು ಮೆಚ್ಚಿನ ನಿರ್ದೇಶಕ ಮಹೇಂದ್ರನ್ ಎಂದು ಹೇಳಿಕೊಂಡಿದ್ದಾರೆ. ಈ ಸಿನಿಮಾದ ನಂತರ ಕೆಲವು ಸೋಲುಗಳ ನಡುವೆಯೂ ರಜನಿಕಾಂತ್ ಹಿಂತಿರುಗಿ ನೋಡಿದ್ದೇ ಇಲ್ಲ. ಇನ್ನೇನಿದ್ದರೂ ಸೂಪರ್‌ಸ್ಟಾರ್ ಆಗಿ ತಮಿಳುನಾಡಿನ ಜನ ಮಾನಸದಲ್ಲಿ ಉಳಿದದ್ದು ದಂತಕತೆ.

ರಜನಿಕಾಂತ್ 1990ರ ದಶಕದ ಪ್ರಾರಂಭದಿಂದ ನಿರ್ದೇಶಕನ ನಟನಾಗಿಬಿಡುತ್ತಾರೆ. ನಿರ್ದೇಶಕ ಎಸ್.ಪಿ ಮುತ್ತುರಾಮನ್ ಮತ್ತು ರಜನಿಕಾಂತ್ ಕಾಂಬಿನೇಷನ್‌ನಲ್ಲಿ ’ಮುರುಟ್ಟು ಕಾಲೈ’ (1980) ಮತ್ತು ’ನೆಟ್ರಿಕ್ಕನ್ (1981) ಈ ಎರಡು ಸಿನಿಮಾಗಳು ವ್ಯಾವಹಾರಿಕ ಯಶಸ್ಸಿನಿಂದ ಬಹಳ ದೊಡ್ಡ ಹೆಸರು ತಂದುಕೊಡುತ್ತವೆ. ಮುಂದಿನ ದಿನಗಳಲ್ಲಿ ಈ ಇಬ್ಬರ ಕಾಂಬಿನೇಷನ್‌ನಲ್ಲಿ ಸರಿಸುಮಾರು 25 ಸಿನಿಮಾಗಳು ತೆರೆಕಾಣುತ್ತವೆ. ರಜನಿಯ ಪ್ರಾರಂಭದ ಸಿನಿಮಾಗಳಲ್ಲಿನ ಪಾತ್ರಗಳಿಗೂ ಮತ್ತು 1980ರ ನಂತರದ ಸಿನಿಮಾಗಳಲ್ಲಿನ ಪಾತ್ರಗಳಿಗೂ ಒಂದು ಸ್ಥಿತ್ಯಂತರವನ್ನು ಕಾಣಬಹುದಾಗಿದೆ. 1980ರ ದಶಕದಲ್ಲಿ ಕೆ ಬಾಲಚಂದರ್, ಮಹೇಂದ್ರನ್ ಮುಂತಾದ ನಿರ್ದೇಶಕರು ಪೂರ್ಣ ಕಮರ್ಷಿಯಲ್ ಎಲಿಮೆಂಟಿನ ಮಸಾಲ ಸಿನಿಮಾಗಳಿಗೆ ಪರ್ಯಾಯವಾಗಿ ದೃಶ್ಯ ಮಾಧ್ಯಮವನ್ನ ಕಟ್ಟಿ, ಸಂಗೀತ, ಸಂಭಾಷಣೆ, ಚಿತ್ರಕಥೆ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡವರು.

ಸಮಾಜದ ಸಮಸ್ಯೆಗಳನ್ನು ಪ್ರತಿನಿಧಿಸಲೋಸುಗ ಮುಖ್ಯವಾಹಿನಿ ಸಿನಿಮಾಗಳು ಎಂದು ಕರೆಸಿಕೊಂಡವಕ್ಕೆ ಪರ್ಯಾಯವಾದುದ್ದನ್ನ ಕಟ್ಟಿ ಜನಪ್ರಿಯಗೊಳಿದ್ದರು. (ಆದರೆ ಈ ಸಿನಿಮಾಗಳು ಯಾವ ವರ್ಗ-ಸಮುದಾಯಗಳನ್ನು ಮಾತ್ರ ಪ್ರತಿನಿಧಿಸಿದವು ಎಂಬುದರ ಬಗ್ಗೆ ಗಂಭೀರವಾದ ಅಧ್ಯಯನದ ಅವಶ್ಯಕತೆ ಇದೆ). ಇವೆಲ್ಲಾ ಪ್ರಯೋಗಗಳ ಹೊರತಾಗಿ, 1982ರಲ್ಲಿ ಮೂಡಿಬಂದ ಕಮಲ್ ಹಾಸನ್ ನಾಯಕ ನಟನಾಗಿ ಅಭಿನಯಿಸಿದ ಎಸ್ ಪಿ ಮುತ್ತುರಾಮನ್ ನಿರ್ದೇಶನದ ’ಸಕಲಕಲಾ ವಲ್ಲಭನ್’ ಎಂಬ ಪಕ್ಕಾ ಕಮರ್ಷಿಯಲ್ ದೃಷ್ಟಿಕೋನದ ಮಸಾಲ ಸಿನಿಮಾದ ಅಭೂತಪೂರ್ವ ಯಶಸ್ಸು ಕಂಡಿತು. ಇದು ಮುಂದಿನ ಕೆಲ ವರ್ಷಗಳ ಕಾಲ ಈ ಕಲ್ಟ್ ಮಾದರಿಯ ಬ್ರಿಡ್ಜ್ ಸಿನಿಮಾಗಳ ಬೆಳವಣಿಗೆಯನ್ನೆ ಕುಂಠಿತಗೊಳಿಸಿಬಿಟ್ಟಿತು.

ಯಾವಾಗ ರಜನಿಕಾಂತ್ ತಮಿಳುನಾಡಿನ ಸಿನಿಮಾ ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಉಳಿದರೋ ಅವರ ಸಿನಿಮಾದಲ್ಲಿ ಪಾತ್ರಗಳ ಆಯ್ಕೆ ಕೂಡ ಬೇರೆ ಆಯಿತು. ಬಹುಶಃ ಪ್ರೇಕ್ಷಕರು ಯಾವುದನ್ನು ರಜನಿಯಲ್ಲಿ ಹೆಚ್ಚು ಇಷ್ಟಪಡುತ್ತಿದ್ದರೊ ಅದೇ ಅಂಶಗಳನ್ನ ಇಟ್ಟುಕೊಂಡು ಸುರೇಶ್ ಕೃಷ್ಣ, ಕೆ ಎಸ್ ರವಿಕುಮಾರ್ ಅಂತಹ ನಿರ್ದೇಶಕರು ತಮ್ಮ ಚಿತ್ರಕಥೆಗಳನ್ನು ಬರೆಯಲು ಪ್ರಾರಂಭಿಸಿದರು. ರಜನಿಯ ಸ್ಟೈಲ್, ಅವರ ಮ್ಯಾನರಿಸಂ, ಅತಿಯಾದ ಹಿರೋಯಿಸಂ, ಈ ಅಂಶಗಳು ಪ್ರೇಕ್ಷಕರಿಗೆ ಏಕತಾನತೆ ಅನಿಸಲೇ ಇಲ್ಲ. ಇವಿಲ್ಲದಿದ್ದರೆ ರಜನಿ ಸಿನಿಮಾಗಳು ಯಶಸ್ಸು ಕಾಣುವುದಿಲ್ಲ ಎಂಬ ಮಿಥ್ ಪ್ರಬಲವಾಗುತ್ತಾ ಹೋಯ್ತು. 1991ರ ನಂತರ ಧರ್ಮದೊರೈ (1991), ಅಣ್ಣಾಮಲೈ (1992), ಯಜಮಾನ್ (1993) ಭಾಷ (1995), ಮುತ್ತು (1995), ಅರುಣಾಚಲಂ (1997) ಮತ್ತು ಪಡೆಯಪ್ಪ (1999) – ಈ ಎಲ್ಲಾ ಸಿನಿಮಾಗಳು ರಜನಿಯ ನಟನೆ ಮತ್ತು ಆ ನಟನ ಬಗ್ಗೆ ಜನರಲ್ಲಿದ್ದ ಕಲ್ಪನೆಗಳನ್ನು ಸಮೀಕರಿಸಿ, ಜನರಲ್ಲಿ ಒಂದು ರೀತಿಯ ಭ್ರಮಾಲೋಕವನ್ನು ಸೃಷ್ಟಿ ಮಾಡಿದವು ಅನಿಸುತ್ತೆ. ಈ ಸಿನಿಮಾಗಳ ನಾಯಕ ಪಾತ್ರದಲ್ಲಿನ ಉದಾತ್ತ ಮತ್ತು ತ್ಯಾಗದ ಗುಣಗಳು ಸ್ವತಃ ರಜನಿಕಾಂತ್ ಅವರಲ್ಲೆ ಮನೆಮಾಡಿವೆ ಎಂಬುದಕ್ಕೆ ಕಥೆಗಳು ಹುಟ್ಟಿಕೊಳ್ಳಲು ಶುರುವಾಯಿತು.

ಪಡೆಯಪ್ಪ ಸಿನಿಮಾದ ನಂತರ ಕೆಲ ವರ್ಷಗಳು ರಜನಿಕಾಂತ್ ತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ. ಈ ಅವಧಿಯಲ್ಲಿಯೇ ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರೊಂದಿಗಿನ ಮನಸ್ತಾಪಕ್ಕಾಗಿ ರಜನಿ ರಾಜಕೀಯ ಪ್ರವೇಶ ಪಡೆಯುತ್ತಾರೆ ಎಂಬ ಚರ್ಚೆ ಶುರುವಾಯಿತು. ಇದಕ್ಕೆ ಇಂಬು ನೀಡುವಂತೆ 2002ರಲ್ಲಿ ತೆರೆಕಂಡ ಸ್ವತಃ ರಜನಿ ನಿರ್ಮಾಣದ ’ಬಾಬಾ’ ಸಿನಿಮಾದಲ್ಲಿ ಇದರ ಬಗ್ಗೆ ಒಂದು ಸೂಚನೆಯೂ ಇತ್ತು. ಈ ಸಿನಿಮಾದಲ್ಲಿ ರಜನಿಕಾಂತ್ ದೈಹಿಕವಾಗಿ ಸಾಕಷ್ಟು ಕೃಶಿವಾಗಿದ್ದರು. 2005ರಲ್ಲಿ ’ಚಂದ್ರಮುಖಿ’, ನಂತರ ಶಂಕರ್ ನಿರ್ದೇಶನದ ’ಎಂದಿರನ್’ ಸಿನಿಮಾಗಳು ಯಶಸ್ಸು ಕಂಡವು.

ಆದರೆ, ಪ.ರಂಜಿತ್ ನಿರ್ದೇಶನದಲ್ಲಿ ನಟಿಸಿದ 2016ರ ’ಕಬಾಲಿ’ ಮತ್ತು 2018ರ ’ಕಾಲ’ ರಜನಿಕಾಂತ್ ವೃತ್ತಿಜೀವನದ ಎರಡು ವಿಶಿಷ್ಟ ಸಿನಿಮಾಗಳು. ಇದಕ್ಕೆ ಎರಡು ಕಾರಣಗಳಿವೆ. ಒಂದು ಬಹಳ ಮುಖ್ಯವಾಗಿ ರಜನಿಕಾಂತ್ ಯಾವ ಸಮುದಾಯವನ್ನ ತೆರೆಯ ಮೇಲೆ ಪ್ರತಿನಿಧಿಸಿದರು ಎಂಬುದು, ಎರಡು ಒಬ್ಬ ಯುವ ನಿರ್ದೇಶಕನಿಗೆ ಸಂಪೂರ್ಣವಾಗಿ ತಮ್ಮನ್ನ ತಾವು ಅರ್ಪಿಸಿಕೊಂಡು ಸೂಪರ್ ಸ್ಟಾರ್ ಸಿನಿಮಾ ಆಗುವುದರಿಂದ ಅವನ್ನು ತಪ್ಪಿಸಿದ್ದು. ಈ ಎರಡು ಸಿನಿಮಾಗಳಲ್ಲಿ ರಜನಿಕಾಂತ್ ಸ್ಟೈಲ್ ಮತ್ತು ಅವರ ಮ್ಯಾನರಿಸಂ ಇಲ್ಲವೇ ಇಲ್ಲ ಅಂತಲ್ಲ, ನಿರ್ದೇಶಕರಿಗೂ ಇದರಿಂದ ತಪ್ಪಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಆದರೆ ರಜನಿಯ ಸ್ಟಾರ್‌ಗಿರಿಯನ್ನು ಬಳಸಿಕೊಂಡೆ ಜನ ಸಮುದಾಯಕ್ಕೆ ತನ್ನ ಪ್ರಗತಿಪರ ವಿಚಾರಧಾರೆಯನ್ನು ದಾಟಿಸಲು ನಿರ್ದೇಶಕರಿಗೆ ಸಾಧ್ಯವಾಗಿತ್ತು.

ರಜನಿಕಾಂತ್ ಮತ್ತು ರಾಜಕೀಯ

ಭಾರತದಲ್ಲಿ ಸಿನಿಮಾ ನಟನೆಯಿಂದ ರಾಜಕೀಯಕ್ಕೆ ಪ್ರವೇಶ ಪಡೆದ ಬಹುಪಾಲು ಜನರಲ್ಲಿ ಆ ಕ್ಷೇತ್ರಕ್ಕೆ ಅಗತ್ಯವಿದ್ದ ಮುತ್ಸದ್ಧಿತನ ಇರಲೇ ಇಲ್ಲ. ರಾಜಕೀಯ ಅನ್ನುವುದು ಅವರಿಗೆ ನಿವೃತ್ತಿ ನಂತರದ ಆಶ್ರಯವಾಯಿತು. ತಮ್ಮ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರಲ್ಲಿದ್ದ ಅಭಿಮಾನವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವುದೇ ಅವರನ್ನು ರಾಜಕೀಯಕ್ಕೆ ಅಹ್ವಾನಿಸಿದ ಪಕ್ಷಗಳ ಮೂಲ ಉದ್ದೇಶವಾಯಿತು. ಬಹುತೇಕರಿಗೆ ಭಾರತದ ರಾಜಕೀಯ-ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳು, ಜನರ ಸಂಕಷ್ಟಗಳು ತಿಳಿದಿರಲಿಲ್ಲ. ಕನಿಷ್ಟ ತಾವು ಪ್ರತಿನಿಧಿಸುವ ಕ್ಷೇತ್ರದ ಬಗ್ಗೆಯೂ ಅವರಿಗೆ ಅಷ್ಟಾಗಿ ತಿಳಿವಳಿಕೆ ಇರಲಿಲ್ಲ. ರಜನಿಕಾಂತ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಬೇರೆ ಸಿನಿಮಾ ಸೆಲೆಬ್ರಿಟಿಗಳಿಗೆ ಹೋಲಿಸಿದರೆ ರಜನಿಕಾಂತ್ ರಾಜಕೀಯ ಪ್ರವೇಶ ಕೊಂಚ ವೈರುಧ್ಯದ್ದು. ತಮಿಳು ನಾಡಿನ ರಾಜಕೀಯಕ್ಕೆ ದ್ರಾವಿಡ ಚಳವಳಿ, ಪೆರಿಯಾರ್ ಅಂತವರ ವೈಚಾರಿಕ ಅಲೋಚನೆಯ ಪ್ರಭಾವವಿದೆ.

PC : ThePrint

ಸಂಸ್ಕೃತಿ, ಭಾಷೆ, ಬಗ್ಗೆ ಇರುವ ಸ್ವಾಭಿಮಾನದ ಜೊತೆಗೆ ಇನ್ನೂ ಅಲ್ಲಿ ಪೆರಿಯಾರ್ ಅವರ ವೈಚಾರಿಕತೆಯ ಪ್ರಭಾವ ಉಳಿದೇ ಇದೆ ಮತ್ತು ಪ್ರಭಾವಿಸುವ ಶಕ್ತಿ ಹೊಂದಿದೆ. ಆದರೆ ರಜನಿಕಾಂತ್ ಪ್ರತಿನಿಧಿಸಲು ಹೊರಟಿದ್ದು ಮಾತ್ರ ಅದಕ್ಕೆ ವಿರುದ್ಧವಾದ ಪಕ್ಷವನ್ನ. ಅವರೆಲ್ಲೂ ತಾನು ಒಂದು ನಿರ್ದಿಷ್ಟ ಸೈದ್ಧಾಂತಿಕ ಪಕ್ಷ ಕಟ್ಟುತ್ತೇನೆ ಅಥವಾ ಒಂದು ನಿರ್ದಿಷ್ಟ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಹೇಳಿಕೊಳ್ಳದಿದ್ದರೂ ಅವರು ರಾಜಕೀಯ ಪಕ್ಷ ಕಟ್ಟುತ್ತೇನೆ ಎಂದು ಹೊರಟ ಅಜುಬಾಜು ಸಂದರ್ಭಗಳಲ್ಲಿ, ಯಾವ ಪಕ್ಷದ ಬೆಂಬಲವಾಗಿ ನಿಲ್ಲುತ್ತಿದ್ದಾರೆಂಬುದು ಸೂಚ್ಯವಾಗುತ್ತಿತ್ತು. ಅವರ ಪ್ರತಿಯೊಂದು ಮಾತುಗಳಲ್ಲೂ ರಾಜಕೀಯ ಅನಕ್ಷರತೆ, ಕಂದಾಚಾರ, ಇಡೀ ತಮಿಳುನಾಡು ನನ್ನ ಪರವಾಗಿದೆ ಎಂಬ ಭ್ರಮೆ ಎದ್ದು ಕಾಣುತ್ತಿತ್ತು. ಅದರಲ್ಲೂ ’ಕೂಡಕೂಲಂ ಅಣುಸ್ಥಾವರ’ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಸರ್ಕಾರ ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ ರಜನಿಕಾಂತ್ ಅವರು ಕೊಟ್ಟ ಹೇಳಿಕೆಯಂತೂ ಜೀವವಿರೋಧಿಯಾದದ್ದು. ಒಬ್ಬ ನಟನನ್ನ ಆರಾಧಿಸಿದ ಮತ್ತು ಅವನನ್ನು ಆ ಎತ್ತರಕ್ಕೆ ಬೆಳೆಸಿದ ಸಮುದಾಯದ ಮೇಲೆ ಕನಿಷ್ಟ ಕೃತಜ್ಞತೆಯೂ ಇಲ್ಲದೆ ಕೇವಲ ತನ್ನ ರಾಜಕೀಯ ಹಿತಾಸಕ್ತಿಗೆ ನೀಡಿದ ಆ ಮಾನವತೆ ವಿರೋಧಿ ಹೇಳಿಕೆ ನಮ್ಮಂತ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದ್ದು ಸುಳ್ಳಲ್ಲ. ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲೂ ಗಲಭೆ ನಡೆದ ಸಂದರ್ಭದಲ್ಲಿ (ಇತ್ತೀಚಿಗೆ ಅಲ್ಲ ಬಹಳ ಹಿಂದೆ) ಪ್ರಭುತ್ವವಾಗಿ ಮಾತನಾಡಿದ ರಜನಿಕಾಂತ್ ನಾವು ಇಷ್ಟ ಪಟ್ಟ ನಟ ಇವರೇನಾ ಅನಿಸಿಬಿಟ್ಟಿತು.

ದಕ್ಷಿಣ ಭಾರತದ ಕಲಾವಿದರಿಗೆ ಪ್ರಶಸ್ತಿ ವಿಚಾರದಲ್ಲಿ ಭಾರತ ಸರ್ಕಾರದ ಧೋರಣೆ ಯಾವಾಗಲೂ ನಿರ್ಲಕ್ಷ್ಯತೆಯಿಂದ ಕೂಡಿರುತ್ತದೆ. ಆದರೆ ಈ ಬಾರಿ ದಕ್ಷಿಣದ ಒಬ್ಬ ಪ್ರಸಿದ್ಧ ನಟನಿಗೆ ’ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನ ಕರುಣಿಸಿಬಿಟ್ಟಿದ್ದಾರೆ. ಆ ನಟ ಈ ಪ್ರಶಸ್ತಿಗೆ ನೂರಕ್ಕೆ ನೂರು ಯೋಗ್ಯರು. ಪ್ರಶಸ್ತಿಗೆ ಇವರಿಗಿಂತ ಒಂದಿಬ್ಬರನ್ನ ಮೊದಲು ಪರಿಗಣಿಸಬೇಕಿತ್ತು ಅಂತ ಅನಿಸಿರಲೂಬಹುದು. ಆದರೆ ಈ ಪ್ರಶಸ್ತಿ ಹಿಂದೆ ಇರುವ ರಾಜಕೀಯದ ವಾಸನೆ ಮಾತ್ರ ಬಹಳ ಅಸಹ್ಯಕರವಾಗಿದೆ. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಪ್ರಶಸ್ತಿ ಘೋಷಣೆಯಾಗದೆ. ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಪಕ್ಷ ತನ್ನ ಸ್ವಹಿತಾಶಕ್ತಿಗೆ ಈ ಪ್ರಶಸ್ತಿಯನ್ನು ಬಳಸಿಕೊಂಡಿರುವುದು ಸಂಭ್ರಮಿಸಲೂ ಆಗದ ಸ್ಥಿತಿಗೆ ಹಲವರನ್ನು ದೂಕಿದೆ. ಇದು ಒಬ್ಬ ಕಲಾವಿದನನ್ನು ಗೌರವಿಸುವ ಉದ್ದೇಶಕ್ಕಿಂತಲೂ ಆ ಭಾಗದ ಜನರ ಓಟುಗಳಿಸಲು ಮಾಡಿದ ಗಿಮಿಕ್ ಆಗಿದ್ದು, ಇದು ಆ ನಟನಿಗೆ ಅಷ್ಟೇ ಅಲ್ಲ, ಕಲೆಗೆ ಮತ್ತು ಕಲಾಭಿಮಾನಿಗಳಿಗೆ ಮಾಡಿದ ಅವಮಾನ. ಕಂಗನಾ ರಣಾವತ್ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ. ಉತ್ತಮ ಕಲಾವಿದೆಯಾಗಿದ್ದರೂ, ಒಕ್ಕೂಟ ಸರ್ಕಾರದಲ್ಲಿ ಆಳುವ ಪಕ್ಷದ ಪರ ಮತ್ತು ಅವರ ಐಡಿಯಾಲಜಿಯ ಪರವಾಗಿ ಬಹಿರಂಗವಾಗಿ ಪ್ರಚಾರ ಮಾಡುವವರು. ಈ ಬಾರಿ ಅವರಿಗೂ ರಾಷ್ಟ್ರೀಯ ಪ್ರಶಸ್ತಿಯನ್ನು ದಯಪಾಲಿಸಲಾಗಿದೆ. ಇದೊಂದು ರೀತಿಯಲ್ಲಿ ’ಟೋಕನ್ ಅಡ್ವಾನ್ಸ್’.

ರಜನಿ
PC: Dinamalar

ರಜನಿಕಾಂತ್ ಅವರ ಕೆಲವು ಭಾಷಣಗಳು ಮತ್ತು ಸಂದರ್ಶನಗಳಲ್ಲಿನ ಮಾತುಗಳನ್ನು ಕೇಳಿದರೆ ಅವರ ಅಲೋಚನೆಯೇ ಗೊಂದಲವಾಗಿದೆಯೆಂದು ಭಾಸವಾಗುತ್ತದೆ. ಬಾಲ್ಯದಲ್ಲಿ ರಾಮಕೃಷ್ಣ ಆಶ್ರಮದ ಸಂಪರ್ಕ, ಇತ್ತೀಚಿಗೆ ಹಿಮಾಲಯಕ್ಕೆ ಹೋಗಿ ಬರುತ್ತೇನೆ, ಆಧ್ಯಾತ್ಮದ ಮೇಲೆ ಹೆಚ್ಚು ಒಲವಿದೆ ಎಂದು ಪದೇಪದೇ ಹೇಳುತ್ತಿರುತ್ತಾರೆ. ಮಣಿರತ್ನಂ ನಿರ್ದೇಶನದ ’ದಳಪತಿ’ (1991) ಸಿನಿಮಾದಲ್ಲಿನ ’ಸೂರ್ಯ’ ಪಾತ್ರದಲ್ಲಿ ರಜನಿಕಾಂತ್ ನಟನೆ ಬಹಳ ಇಷ್ಟ. ಆದರೆ ಅವರ ಇತ್ತೀಚಿನ ರಾಜಕೀಯ ನಡೆಗಳು ಮತ್ತು ಹೇಳಿಕೆಗಳಿಂದ, ರಜನಿಕಾಂತ್ ಯಾರಿಗೆ ದಳಪತಿ ಆಗಲು ಹೊರಟಿದ್ದಾರೆ ಎಂಬುದನ್ನು ನೆನೆಸಿಕೊಂಡರೆ ವಿಷಾದದ ಭಾವ ದಟ್ಟವಾಗುತ್ತದೆ.

ಈ ಎಲ್ಲಾ ಸಂಗತಿಗಳನ್ನು ಬರೆಯುತ್ತಿರುವಾಗಲೇ ತಮಿಳುನಾಡಿಲ್ಲಿ ಮತದಾನ ಶುರುವಾಗಿದೆ. ತಮಿಳಿನ ಪ್ರಖ್ಯಾತ ನಟ ವಿಜಯ್ ಬೆಲೆ ಏರಿಕೆಯಂತಹ, ಆಳುವ ಪ್ರಭುತ್ವದ ಜನ ವಿರೋಧಿ ನೀತಿಗಳನ್ನು ಪ್ರತಿಭಟಿಸಲು ಸಾಂಕೇತಿಕವಾಗಿ ಸೈಕಲ್ ಏರಿ ಮತಗಟ್ಟೆಗೆ ಬಂದಿದ್ದಾರೆ. ಇದು ತಮಿಳುನಾಡಿಗೆ ದ್ರಾವಿಡ ಚಳವಳಿ ತಂದುಕೊಟ್ಟಿರುವ ರಾಜಕೀಯ ಪ್ರಜ್ಞೆ. ಒಬ್ಬ ಜನಪ್ರಿಯ ಸಿನಿಮಾ ನಟ ಈ ರೀತಿಯಲ್ಲೂ ಜನಸಮುದಾಯಕ್ಕೆ ಸ್ಪಂದಿಸಬಹುದು ಎಂಬುದಕ್ಕೆ ನಟ ವಿಜಯ್ ಅವರ ಈ ನಡವಳಿಕೆಯೇ ಸಾಕ್ಷಿ.


ಇದನ್ನೂ ಓದಿ: ಸೂಪರ್‌ ಸ್ಟಾರ್ ರಜನಿಕಾಂತ್‌ಗೆ ಒಲಿದ 2019ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಬಾಲು ವಿ ಎಲ್ ಮತ್ತು ಯದುನಂದನ್ ಕೀಲಾರ

LEAVE A REPLY

Please enter your comment!
Please enter your name here