ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ತೈಲ ಮಾರಾಟ ಕಂಪನಿಗಳು (ಒಎಂಸಿಗಳು) ಪ್ರಮುಖ ನಗರಗಳಲ್ಲಿ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 14-16 ಪೈಸೆ ಕಡಿತಗೊಳಿಸಿದವು. ಕಳೆದ 15 ದಿನಗಳಲ್ಲಿ ದರಗಳಲ್ಲಿ ಯಾವ ಬದಲಾವಣೆಯನ್ನೂ ಮಾಡಿರಲಿಲ್ಲ. ಆದರೆ ಚುನಾವಣೆಯ ನಂತರ ಮತ್ತೆ ಪೆಟ್ರೋಲ್-ಡಿಸೇಲ್ ದರಗಳು ಏರುಗತಿಯಲ್ಲೇ ಇರಲಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಚುನಾವಣೆಗೂ ಪೆಟ್ರೋಲ್-ಡಿಸೇಲ್ ದರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಂಪನಿಗಳು ಹೇಳುತ್ತವಾದರೂ ಪ್ರತಿ ಪ್ರಮುಖ ಚುನಾವಣೆಯಲ್ಲಿ ದರ ಸ್ಥಿರವಾಗಿರುವುದನ್ನು ಅಥವಾ ಅಲ್ಪ ಇಳಿಕೆಯಾಗುವುದನ್ನು ಇತ್ತೀಚಿನ ವರ್ಷಗಳಲ್ಲಿ ನೋಡುತ್ತ ಬಂದಿದ್ದೇವೆ. ಚುನಾವಣೆಯ ಸಮಯದಲ್ಲಿ ಬೆಲೆ ಸ್ಥಗಿತದ ಪರಿಣಾಮವಾಗಿ ಚುನಾವಣೆ ಮುಗಿದ ನಂತರ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೆಚ್ಚಿನ ಬೆಲೆ ನೀಡಬೇಕಾಗಿರುವುದನ್ನು ಇತಿಹಾಸ ತೋರಿಸಿದೆ ಎಂದು ವರದಿ ತಿಳಿಸಿದೆ.
ಚುನಾವಣೆಯ ಸಮಯದಲ್ಲಿ ಇಂಧನ ಬೆಲೆಗಳು ಏಕೆ ಕಡಿಮೆ?
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಗದಿಪಡಿಸಲು ತೈಲ ಮಾರಾಟ ಕಂಪನಿಗಳು ಮುಕ್ತವಾಗಿದ್ದರೂ ಕೂಡ ಅವು ಆಗಾಗ್ಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸುತ್ತವೆ ಅಥವಾ ಇಂಧನ ಬೆಲೆಗಳು ರಾಜಕೀಯ ವಿಷಯವಾಗಿ ಪರಿಣಮಿಸುವುದರಿಂದ ಚುನಾವಣೆಗಳ ಸಮಯದಲ್ಲಿ ಅವುಗಳನ್ನು ಸ್ಥಿರವಾಗಿ ಇಡುತ್ತವೆ. ಇದು ಸಹಜವಾಗಿ ಕೇಂದ್ರದಲ್ಲಿ ಆಳುವ ಪಕ್ಷದ ಹಿತಾಸಕ್ತಿ ಕಾಪಾಡುವುದೇ ಆಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾ ತೈಲದ ಬೆಲೆಯ ಆಧಾರದಲ್ಲಿ ಇಲ್ಲಿ ಇಂಧನ ದರ ಇರುತ್ತವೆ ಎಂಬುದು ಇತ್ತೀಚಿನ ತಿಂಗಳುಗಳಲ್ಲಿ ಹುಸಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಹೊರೆ ಮಾತ್ರ ಸ್ಥಿರವಾಗಿ ಇದ್ದೇ ಇದೆ.
ಕಚ್ಚಾ ತೈಲದ ಬೆಲೆಯಲ್ಲಿ ಗಮನಾರ್ಹ ಏರಿಳಿತವಾದರೂ ಕೂಡ ಇತ್ತೀಚಿನ 47 ದಿನಗಳ ಅವಧಿಯಲ್ಲಿ ಕೇವಲ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗಿದೆ. ಚುನಾವಣೆ ಘೋಷಣೆಯಾದ ಪರಿಣಾಮ ಈ ಪ್ರಕ್ರಿಯೆ ನಡೆದಿದೆ ಎಂದು ತಜ್ಞರು ಹೇಳುತ್ತಾರೆ.
ಚುನಾವಣೆಯ ನಂತರ ಹೇಗೆ ಬದಲಾಗುತ್ತವೆ?
ಚುನಾವಣೆ ನಂತರ ತೈಲ ಮಾರಾಟ ಕಂಪನಿಗಳು ತಮ್ಮ ಮಾರುಕಟ್ಟೆ ಮಾರ್ಜಿನ್‌ಗಳನ್ನು ಸಾಮಾನ್ಯ ಮಟ್ಟಕ್ಕೆ ಪುನಃಸ್ಥಾಪಿಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಚ್ಚಾ ತೈಲ ಬೆಲೆಯ ಯಾವುದೇ ಕುಸಿತದ ಪ್ರಯೋಜನವನ್ನು ಗ್ರಾಹಕರಿಗೆ ತಲುಪಿಸಲು ತೈಲ ಮಾರಾಟ ಕಂಪನಿಗಳು ನಿಧಾನವಾಗಿರುವುದರಿಂದ ಚುನಾವಣೆ ನಂತರ ಗ್ರಾಹಕರು ಹೆಚ್ಚು ಪಾವತಿಸಬೇಕಾಗಬಹುದು ಎಂದು ತಜ್ಞರು ಹೇಳುತ್ತಾರೆ.
ತೈಲ ಮಾರಾಟ ಕಂಪನಿಗಳು ಮತ್ತು ಚುನಾವಣೆ
ಚುನಾವಣೆಯ ಸಮಯದಲ್ಲಿ ಹೂಡಿಕೆದಾರರು ಇಂತಹ ಕ್ರಮಗಳನ್ನು ನಿರೀಕ್ಷಿಸುತ್ತಾರೆ ಮತ್ತು ನಂತರದ ಅವಧಿಯಲ್ಲಿ ಮರಳಿ ಪ್ರಮಾಣಿತ ಮಾರ್ಜಿನ್‌ಗಳಿಗೆ ಹಿಂತಿರುಗುತ್ತಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಫೆಬ್ರವರಿ 27 ರ ಆರಂಭದಿಂದ ಒಎಂಸಿಗಳು ಬೆಲೆಗಳ ಪರಿಷ್ಕರಣೆಯನ್ನು ನಿಲ್ಲಿಸಿದಾಗ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ನ ಷೇರಿನ ಬೆಲೆ ಶೇಕಡಾ 8 ರಷ್ಟು ಕುಸಿದಿದ್ದರೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ನ ಷೇರಿನ ಬೆಲೆ ಶೇ. 10 ಕುಸಿದಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಶೇ 1.4 ರಷ್ಟು ಕುಸಿದಿದೆ.
ಅಂತಹ ಪ್ರಕ್ರಿಯೆಗಳು ಒಎಂಸಿಗಳ ದೀರ್ಘಕಾಲೀನ ಮೌಲ್ಯಮಾಪನಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ, ಮುಖ್ಯವಾಗಿ ಖಾಸಗೀಕರಣಗೊಳ್ಳಲಿರುವ ಬಿಪಿಸಿಎಲ್ ಕಂಪನಿಯ ಮೇಲೆ ಇದರ ಪರಿಣಾಮ ಹೆಚ್ಚು ಎನ್ನಲಾಗಿದೆ.
“ರಾಜಕೀಯವಾಗಿ ಲಾಭದಾಯಕವಾದಾಗಲೆಲ್ಲಾ ಸರ್ಕಾರವು ನಿಮ್ಮ ಮಾರ್ಕೆಟಿಂಗ್ ಮಾರ್ಜಿನ್‌ಗಳನ್ನು ಕಡಿತಗೊಳಿಸಿದಾಗ ಯಾರಾದರೂ ಹೆಚ್ಚಿನ ಮೌಲ್ಯಮಾಪನವನ್ನು (ಖಾಸಗೀಕರಣಗೊಳ್ಳಲಿರುವ ಬಿಪಿಸಿಎಲ್ ಕಂಪನಿಗೆ) ಏಕೆ ನೀಡುತ್ತಾರೆ ಎಂದು ವಿಶ್ಲೇಷಕರೊಬ್ಬರು ಹೇಳಿದ್ದಾರೆ. ಖಾಸಗೀಕರಣದ ನಂತರವೂ, ಉಳಿದ ಸರ್ಕಾರಿ ಸ್ವಾಮ್ಯದ ರಿಫೈನರ್‌ಗಳು – ಐಒಸಿಎಲ್ ಮತ್ತು ಎಚ್‌ಪಿಸಿಎಲ್- ಚುನಾವಣೆಯ ಸಮಯದಲ್ಲಿ ಬೆಲೆಗಳನ್ನು ಕಡಿತಗೊಳಿಸಿದರೆ, ಬಿಪಿಸಿಎಲ್ ಕೂಡ ಆ ಬೆಲೆಗಳೊಂದಿಗೆ ಹೊಂದಿಕೆಯಾಗಬೇಕಾಗುತ್ತದೆ.
ಇದನ್ನೂ ಓದಿ: ಇವಿಎಂ ಸುರಕ್ಷತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಡಿಎಂಕೆ ಮುಖ್ಯಸ್ಥ ಸ್ಟಾಲಿನ್!


