ಕುಂಭಮೇಳವನ್ನು ಸಾಂಕೇತಿಕವಾಗಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ತರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, “ಎರಡು ಪುಣ್ಯ ಸ್ನಾನಗಳು ನಡೆದಿವೆ ಮತ್ತು ಕೊರೊನಾ ಬಿಕ್ಕಟ್ಟಿನಿಂದಾಗಿ ಕುಂಭವನ್ನು ಸಾಂಕೇತಿಕವಾಗಿ ಇಡಬೇಕೆಂದು ನಾನು ಪ್ರಾರ್ಥಿಸಿದ್ದೇನೆ. ಇದು ಈ ಬಿಕ್ಕಟ್ಟಿನಿಂದ ಹೋರಾಟಕ್ಕೆ ಬಲವನ್ನು ನೀಡುತ್ತದೆ” ಎಂದಿದ್ದಾರೆ.
“ಆಚಾರ್ಯ ಮಹಾಮಂಡಲೇಶ್ವರ ಧಾರ್ಮಿಕ ಸಭಾದ ಪೂಜ್ಯ ಸ್ವಾಮಿ ಅವಧೇಶನಂದ್ ಗಿರಿಜಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದೆ. ಎಲ್ಲಾ ಸಂತರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಎಲ್ಲಾ ಸಂತರು ಆಡಳಿತಕ್ಕೆ ಉತ್ತಮ ರೀತಿಯ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ ನಾನು ಸಂತ ಜಗತ್ತಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಮೋದಿ ತಿಳಿಸಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ್ದ ಸಾಧುಗಳಿಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇತರ 80 ಮಂದಿ ಸಾಧುಗಳಿಗೆ ಕೊರೊನಾ ದೃಢಪಟ್ಟಿದೆ. ಲಕ್ಷಾಂತರ ಮಂದಿ ಸೇರುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ್ದ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಕೊರೊನಾ ಸೋಂಕು ಹರಡಿದೆ ಎಂದು ವರಿದಯಾಗಿದೆ.
ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಕುಂಭಮೇಳವನ್ನು ಸ್ಥಗಿತಗೊಳಿಸಬೇಕು ಎಂದು ಎಲ್ಲಾ ಕಡೆಯಿಂದಲೂ ಒತ್ತಡ ಬರುತ್ತಿದೆ. ಕುಂಭಮೇಳ ಉತ್ಸವದ ಬಗ್ಗೆ ಆರೋಗ್ಯ ತಜ್ಞರು ಎಚ್ಚರಿಕೆಯನ್ನು ನೀಡುತ್ತಲೇ ಇದ್ದಾರೆ. ಕುಂಭಮೇಳಕ್ಕೆ ದೇಶಾದ್ಯಂತದ ಯಾತ್ರಾರ್ಥಿಗಳು ಬಂದು ತಮ್ಮ ರಾಜ್ಯಗಳಿಗೆ ಮತ್ತು ಹಳ್ಳಿಗಳಿಗೆ ಮರಳುತ್ತಿರುವುದರಿಂದ ಇದು “ಸೂಪರ್-ಸ್ಪ್ರೆಡರ್” ಆಗಿ ಬದಲಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಆದರೆ ಉತ್ತರಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಕುಂಭಮೇಳ ಮುಂದುವರಿಯುವುದನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಮಾಸ್ಕ್ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; ಕುಂಭಮೇಳದಲ್ಲಿ ಭಾಗವಹಿಸಿದ್ದ ಸಾಧು ಕೊರೊನಾಗೆ ಬಲಿ, 80 ಸಾಧುಗಳಿಗೆ ಸೋಂಕು ದೃಢ


