Homeಅಂಕಣಗಳುಬಹುಜನ ಭಾರತ: ಕಲ್ಲನಾಗರಕೆ ಹಾಲೆರೆವವರ ಡಾಂಭಿಕತನ!

ಬಹುಜನ ಭಾರತ: ಕಲ್ಲನಾಗರಕೆ ಹಾಲೆರೆವವರ ಡಾಂಭಿಕತನ!

- Advertisement -
- Advertisement -

ಅಂಬೇಡ್ಕರ್ ಸಿದ್ಧಾಂತವ ನಿತ್ಯ ಬದುಕಿನಲಿ ವಧಿಸಿ ಅವರ ಹೆಸರಿನ ಸ್ಮಾರಕಗಳ ನಿರ್ಮಿಸುವುದು ಕಪಟ ನಾಟಕ
1956ರಲ್ಲಿ ಮರೆಯಾದದ್ದು ಬಾಬಾಸಾಹೇಬರ ನಶ್ವರ ದೇಹವೇ ವಿನಾ ಅವರ ಪ್ರಖರ ಜೀವಪರ ವಿಚಾರಗಳಲ್ಲ ಎಂಬ ಕಠೋರ ಸತ್ಯವನ್ನು ಆಳುವವರ ಕಣ್ಣುಗಳು ಕಾಣದಾಗಿವೆ. ಈ ನೆಲವನ್ನು ಈವರೆಗೆ ಆಳಿಕೊಂಡು ಬಂದಿರುವ ಬಹುತೇಕ ಎಲ್ಲ ಸರ್ಕಾರಗಳು ಮಾಡಿಕೊಂಡು ಬಂದಿರುವ ತಪ್ಪನ್ನೇ ನರೇಂದ್ರ ಮೋದಿ ಮತ್ತು ಅವರ ಸಂಗಾತಿಗಳು ಮಾಡುತ್ತಿದ್ದಾರೆ.

ತುಳಿದಿಟ್ಟ ಸಮುದಾಯಗಳು ಎದೆಯೊಳಗೆ ಧರಿಸಿರುವ ದೀಪವಾಗಿ ಬಾಬಾಸಾಹೇಬರು ಧಗಧಗಿಸಿ ಹೊಳೆದಿದ್ದಾರೆ. ಸಮಸಮಾಜವನ್ನು ಅರಸುವ ಆಂದೋಲನಗಳಲ್ಲಿ, ಸ್ವಾತಂತ್ರ್ಯ ಸಮಾನತೆ ಸೋದರಭಾವ ಸಾರುವ ಸಂವಿಧಾನದಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ. ಬದುಕಿರುವ ಈ ಅಂಬೇಡ್ಕರರನ್ನು ಕಣ್ಣು ತೆರೆದು ಕಾಣಬೇಕಿದೆ. ಹಾಗೆ ಕಣ್ಣು ತೆರೆಯುವುದನ್ನು ಒಲ್ಲದವರು ಯಥಾಸ್ಥಿತಿಯ ಪೋಷಕರು ಮತ್ತು ಫಲಾನುಭವಿಗಳು. ಹಾಗೆ ಸತ್ಯವನ್ನು ಕಣ್ಣಲ್ಲಿ ಕಟ್ಟಿಟ್ಟು ನೋಡುವುದಾದರೆ ಅಸಮಾನತೆಯ ತಳಪಾಯದ ಮೇಲೆ ಅವರು ಕಟ್ಟಿಕೊಂಡು ಬಂದಿರುವ ಶೋಷಣೆಯ ಸೌಧಗಳು ಬುಡಮೇಲಾಗಲಿವೆ.

ಹೀಗಾಗಿ ನಶ್ವರ ದೇಹಕ್ಕೆ ಮತ್ತು ನಾಮಧೇಯಕ್ಕೆ ಪ್ರತಿಮೆಗಳು, ಮಹಲುಗಳು, ಭವನಗಳು, ಭವ್ಯ ಸ್ಮಾರಕಗಳನ್ನು ಕಟ್ಟಿಸಿ ನಿಲ್ಲಿಸಲಾಗುತ್ತಿದೆ. ಅಂಬೇಡ್ಕರ್ ಅವರನ್ನು ಗೌರವಿಸುವವರು ನಾವು ಎಂದು ಎದೆಬಡಿದು ಹೇಳಿಕೊಳ್ಳಲಾಗುತ್ತಿದೆ.

ಏಣಿ ಶ್ರೇಣಿಗಳು, ಭೇದ ಭಾವಗಳ ಸಾಮಾಜಿಕ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರದೆ ಆರ್ಥಿಕ ಸುಧಾರಣೆಯಾದರೂ ಹೇಗೆ ಸಾಧ್ಯ ಎಂಬ ಅಂಬೇಡ್ಕರ್ ಪ್ರಶ್ನೆ ಇಂದಿಗೂ ಪ್ರಸ್ತುತ. ಬಹುತೇಕ ರಾಜಕೀಯ ಪಕ್ಷಗಳಿಗೆ ಅಂಬೇಡ್ಕರ್ ರೂಪವಾಗಿ ಬೇಕೇ ವಿನಾ ಸಾರವಾಗಿ ಅಲ್ಲ. “ಕಲ್ಲ ನಾಗರಕೆ ಹಾಲೆರೆವ” ಮತ್ತು “ಉಣ್ಣದ ಲಿಂಗಕ್ಕೆ ಬೋನವ ಹಿಡಿವ” ಡಾಂಭಿಕತನವನ್ನು ನಮ್ಮ ರಾಜಕೀಯ ಪಕ್ಷಗಳು ಅಂಬೇಡ್ಕರರ ಕುರಿತು ಪ್ರದರ್ಶಿಸಿವೆ. ಜಾತಿ ವ್ಯವಸ್ಥೆಯ ವಿರುದ್ಧ ಅಂಬೇಡ್ಕರ್ ಸಿಡಿಸಿದ ವಿಚಾರಗಳು ಈ ಪಕ್ಷಗಳಿಗೆ ಬೇಕಿಲ್ಲ. ಅವುಗಳನ್ನು ಮಡಿಕೋಲಿನಿಂದಲೂ ಮುಟ್ಟಿಲ್ಲ.

PC :ShareChat

ಹಿಂದೂ ಸಮಾಜ ನಿರ್ವಂಚನೆಯಿಂದ ದಲಿತರನ್ನು ಸರಿಸಮನಾಗಿ ನಡೆಸಿಕೊಳ್ಳಬೇಕು ಎಂಬ ಅಂಬೇಡ್ಕರ್ ಆಗ್ರಹಕ್ಕೆ ಇಂದಿಗೂ ರಾಜಕೀಯ ಪಕ್ಷ-ಪರಿವಾರಗಳು ಜಾಣ ಕಿವುಡು ಮತ್ತು ಕುರುಡನ್ನೇ ತೋರಿವೆ. ಶೂದ್ರರು ಸೃಷ್ಟಿಯಾದದ್ದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರ ಸೇವೆಗೆ ಎಂದು ಸಾರಿದ್ದ ಪ್ರಾಚೀನ ಭಾರತದ ಕಾನೂನು ಸಂಹಿತೆ ಮನುಸ್ಮೃತಿಯನ್ನು ಅಂತರಂಗದಲ್ಲಿ ಆರಾಧಿಸುವ ವಿಚಾರಧಾರೆಗೆ ಸೇರಿದವರು ನರೇಂದ್ರ ಮೋದಿ. ಇದೇ ಮನುಸ್ಮೃತಿಯ ಪ್ರತಿಯನ್ನು ಸಾಂಕೇತಿಕವಾಗಿ ಸುಟ್ಟಿದ್ದವರು ಅಂಬೇಡ್ಕರ್.

ಅಸಮಾನತೆಯ ನರಕಕೂಪದಿಂದ ನಿಜ ಸಮಾನತೆಯ ಎತ್ತರವನ್ನು ಭಾರತ ಏರಬೇಕೆಂಬ ಅಂಬೇಡ್ಕರ್ ಕನಸು ಇಂದಿಗೂ ನನಸಾಗಿಲ್ಲ. ಅವರು ನೀಡಿದ ಈ ದಸ್ತಾವೇಜನ್ನು ತಿದ್ದಿ ಬರೆಯುತ್ತೇವೆಂದು ಎದೆ ಸೆಟೆಸುವುದು ಈ ನಾಯಕನಿಗೆ ಮಾಡುವ ಅವಮಾನ. ಏಕಕಾಲಕ್ಕೆ ಹಲವು ನಾಲಗೆಗಳಲ್ಲಿ ನುಡಿಯುವ ಧೂರ್ತತನವನ್ನು ಆಳುವವರು ಬಿಡಬೇಕು. ಒಂದೇ ನಾಲಗೆಯಲ್ಲಿ ಮಾತಾಡಬೇಕು. ಏಕಕಾಲಕ್ಕೆ ಬೇಟೆನಾಯಿಯೊಂದಿಗೆ ಬೆನ್ನಟ್ಟುವ ಮತ್ತು ಪ್ರಾಣ ಉಳಿಸಿಕೊಳ್ಳಲು ಧಾವಿಸುವ ಮೊಲದೊಂದಿಗೆ ಓಡುವ ಆಷಾಡಭೂತಿತನದ ಮರ್ಮವೇನು?

ಆಚರಣೆಯಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಇಡಿಯಾಗಿ ವಿರೋಧಿಸಿ, ನಿತ್ಯದ ಬದುಕಿನಲ್ಲಿ ದಲಿತ ದ್ವೇಷವನ್ನು ಕಾರುವ ಜಾತಿ ವರ್ಗಗಳ ಜೊತೆ ನಿಲ್ಲುವವರು ಅಂಬೇಡ್ಕರ್ ಅವರಿಗೆ ತೋರುವ ಆದರವು ಅಪ್ಪಟ ಕಪಟ.

ದಲಿತರ ಮತಗಳನ್ನು ಸೆಳೆಯುವ ಕೇವಲ ಪ್ರತಿಮೆ- ಪ್ರತೀಕ- ಸ್ಮಾರಕ ರೂಪಕಗಳಾಗಿ ಮಾತ್ರವೇ ಪಕ್ಷ ಪರಿವಾರಗಳು ಅಂಬೇಡ್ಕರ್ ವರ್ಚಸ್ಸನ್ನು ದೋಚತೊಡಗಿವೆ. ನಿಜದ ಬಾಬಾಸಾಹೇಬರನ್ನೂ ಅವರ ಪ್ರಖರ ವಿಚಾರಗಳನ್ನು ದಿನನಿತ್ಯ ಬಗೆ ಬಗೆಯಲ್ಲಿ ವಧಿಸಲಾಗುತ್ತಿದೆ.

ಹನ್ನೆರಡನೆಯ ಶತಮಾನದಲ್ಲಿ ಸಮಸಮಾಜವನ್ನು ಕನಸಿ ಅದನ್ನು ನನಸಾಗಿಸಲು ಕ್ರಾಂತಿಯನ್ನೇ ನಡೆಸಿ ಪಟ್ಟಭದ್ರ ಹಿತಗಳಿಗೆ ಬಲಿಯಾದ ಬಸವಣ್ಣನವರ ಈ ವಚನ ಈಗಲೂ ಅತ್ಯಂತ ಪ್ರಸ್ತುತ.

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು; ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ! ಉಂಬ ಜಂಗಮ ಬಂದರೆ ನಡೆ ಎಂಬರು; ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ! ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದರೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ! ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ. ನೀಡ ನೀಡಿ ಕೆಟ್ಟರು ನಿಜವಿಲ್ಲದೆ. ಮಾಡುವ ನೀಡುವ ನಿಜಗುಣವುಳ್ಳಡೆ. ಕೂಡಿಕೊಂಬ ನಮ್ಮ ಕೂಡಲಸಂಗಮದೇವ.


ಇದನ್ನೂ ಓದಿ: ಹಳತು ವಿವೇಕ: ಭಾರತದಲ್ಲಿ ಪ್ರಜಾಪ್ರಭುತ್ವಕ್ಕಿರುವ ನಿರೀಕ್ಷೆಗಳು: ಡಾ. ಬಿ ಆರ್ ಅಂಬೇಡ್ಕರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಲೇಖನವನ್ನು ಡಾಬಸ್ಪೇಟೆ ವಾಯ್ಸ್ ನ ಮುಂದಿನ ಸಂಚಿಕೆಯಲ್ಲಿ (ಮೇ 2021) ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

Must Read

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಉಳಿದುಕೊಳ್ಳುವ ಹೆಸರು ರವೀಶ್ ಕುಮಾರ್..

0
ಪ್ರಭುತ್ವಕ್ಕೆ ಸತ್ಯ ನುಡಿಯುತ್ತಿದ್ದ ಖ್ಯಾತ ಪರ್ತಕರ್ತ ರವೀಶ್ ಕುಮಾರ್ ಎನ್‌ಡಿಟಿವಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಎನ್‌ಡಿಟಿವಿ ಅದಾನಿ ತೆಕ್ಕೆಗೆ ಹೋದುದ್ದೆ ಅವರ ರಾಜೀನಾಮೆಗೆ ಪ್ರಮುಖ ಕಾರಣ. ರವೀಶ್ ಕುಮಾರ್‌ರವರಿಗೆ ಗೌರಿ ಸ್ಮಾರಕ ಟ್ರಸ್ಟ್...