Homeಮುಖಪುಟಹಳತು ವಿವೇಕ: ಭಾರತದಲ್ಲಿ ಪ್ರಜಾಪ್ರಭುತ್ವಕ್ಕಿರುವ ನಿರೀಕ್ಷೆಗಳು: ಡಾ. ಬಿ ಆರ್ ಅಂಬೇಡ್ಕರ್

ಹಳತು ವಿವೇಕ: ಭಾರತದಲ್ಲಿ ಪ್ರಜಾಪ್ರಭುತ್ವಕ್ಕಿರುವ ನಿರೀಕ್ಷೆಗಳು: ಡಾ. ಬಿ ಆರ್ ಅಂಬೇಡ್ಕರ್

- Advertisement -
- Advertisement -

(ಈ ದಾಖಲೆಯ ಬಗ್ಗೆ ಟಿಪ್ಪಣಿ : ಇದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು
1956ರ ಮೇ 20ರಂದು ವಾಯಿಸ್ ಆಫ್ ಅಮೆರಿಕಾಗೆ ನೀಡಿದ ಉಪನ್ಯಾಸ)

ನನಗೆ ಇಂದು ವಹಿಸಿದ ವಿಷಯ; ‘ಭಾರತದಲ್ಲಿ ಪ್ರಜಾಪ್ರಭುತ್ವಕ್ಕಿರುವ ನಿರೀಕ್ಷೆಗಳೇನು?’ ಹೆಚ್ಚಿನ ಭಾರತೀಯರು ಭಾರತವು ಈಗಾಗಲೇ ಒಂದು ಪ್ರಜಾಪ್ರಭುತ್ವ ಎಂಬಂತೆ ಅತ್ಯಂತ ಹೆಮ್ಮೆಯಿಂದ ಮಾತನಾಡುತ್ತಾರೆ. ವಿದೇಶಿಯರು ಸಹ, ಭಾರತಕ್ಕೆ ರಾಜತಾಂತ್ರಿಕ ಗೌರವ ಸಲ್ಲಿಸಲು ಡಿನ್ನರ್ ಟೇಬಲ್‍ನಲ್ಲಿ ಕುಳಿತುಕೊಂಡಾಗ, ಭಾರತದ ಶ್ರೇಷ್ಠ ಪ್ರದಾನಮಂತ್ರಿ ಮತ್ತು ಭಾರತದ ಶ್ರೇಷ್ಠ ಪ್ರಜಾಪ್ರುಭತ್ವದ ಬಗ್ಗೆ ಮಾತನಾಡುತ್ತಾರೆ.

ಇದರಿಂದ, ಅಂದುಕೊಳ್ಳುವುದೇನೆಂದರೆ, ಎಲ್ಲಿ ಗಣರಾಜ್ಯವಿರುತ್ತದೋ, ಅಲ್ಲಿ ಪ್ರಜಾಪ್ರಭುತ್ವ ಇರಲೇಬೇಕು ಎಂಬುದು. ಹಾಗೂ ಎಲ್ಲಿ ಸಾರ್ವತ್ರಿಕ ವಯಸ್ಕ ಮತದಾನದಿಂದ ಜನರಿಂದ ಆಯ್ಕೆಯಾದ ಸಂಸತ್ತು ಇರುತ್ತದೋ ಮತ್ತು ಪ್ರತೀ ಹಲವು ವರ್ಷಗಳ ಅಂತರದಲ್ಲಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಸಂಸತ್ತಿನಲ್ಲಿ ಕಾನೂನುಗಳನ್ನು ರಚಿಸಿದರೆ ಅಲ್ಲಿ ಪ್ರಜಾಪ್ರಭುತ್ವ ಇದೆ ಎಂದುಕೊಳ್ಳುವುದು. ಬೇರೆ ಪದಗಳಲ್ಲಿ ಹೇಳಬೇಕೆಂದರೆ, ಪ್ರಜಾಪ್ರಭುತ್ವ ಎಂಬುದನ್ನು ಒಂದು ರಾಜಕೀಯ ಸಾಧನವಾಗಿ ಅರ್ಥಮಾಡಿಕೊಳ್ಳಲಾಗುತ್ತಿದೆ ಹಾಗೂ ಈ ರಾಜಕೀಯ ಸಾಧನ ಎಲ್ಲಿರುತ್ತೋ ಅಲ್ಲಿ ಪ್ರಜಾಪ್ರಭುತ್ವ ಇದೆ ಎಂಬುದು.

ಭಾರತದಲ್ಲಿ ಪ್ರಜಾಪ್ರಭುತ್ವ ಇದೆಯೋ ಅಥವಾ ಇಲ್ಲವೋ? ಸತ್ಯ ಏನು? ಪ್ರಜಾಪ್ರಭುತ್ವವನ್ನು ಗಣರಾಜ್ಯದೊಂದಿಗೆ ಮತ್ತು ಸಂಸದೀಯ ಸರಕಾರದೊಂದಿಗೆ ಸಮೀಕರಿಸುವುದದರಿಂದ ಉಂಟಾಗುವ ಗೊಂದಲಗಳನ್ನು ತೆಗೆದುಹಾಕದ ಹೊರತು ಯಾವ ಸಕಾರಾತ್ಮಕ ಉತ್ತರವನ್ನೂ ನೀಡಲಾಗುವುದಿಲ್ಲ.

ಪ್ರಜಾಪ್ರಭುತ್ವ ಎಂಬುದು ಗಣರಾಜ್ಯ ಮತ್ತು ಅದರೊಂದಿಗೆ ಸಂಸದೀಯ ಸರಕಾರ ಎಂಬುದಕ್ಕಿಂತ ಬಹಳ ಭಿನ್ನವಾಗಿದೆ. ಪ್ರಜಾಪ್ರಭುತ್ವದ ಬೇರುಗಳು ಸರಕಾರದ, ಸಂಸತ್ತಿನ ಅಥವಾ ಇಂಥವುಗಳ ಸ್ವರೂಪದಲ್ಲಿ ಇರುವುದಿಲ್ಲ. ಪ್ರಜಾಪ್ರಭುತ್ವ ಎಂಬುದ ಸರಕಾರದ ಒಂದು ಸ್ವರೂಪ ಅನ್ನುವುದಕ್ಕಿಂತಲೂ ಹೆಚ್ಚಿನದ್ದಾಗಿದೆ. ಇದು ಸಹಜೀವನದ (ಅಸೋಸಿಯೇಟೆಡ್ ಲಿವಿಂಗ್) ಪ್ರಾಥಮಿಕ ವಿಧಾನವಾಗಿದೆ. ಪ್ರಜಾಪ್ರಭುತ್ವದ ಬೇರುಗಳನ್ನು ಸಾಮಾಜಿಕ ಸಂಬಂಧಗಳಲ್ಲಿ ಹುಡುಕಬೇಕು, ಒಂದು ಸಮಾಜವನ್ನು ನಿರ್ಮಿಸುವ ಜನರ ಮಧ್ಯೆ ಇರುವ ಸಹಜೀವನದ ದೃಷ್ಟಿಯಲ್ಲಿ ಹುಡುಕಬೇಕಿದೆ.

ಸಮಾಜ (ಸೊಸೈಟಿ) ಎಂಬ ಪದ ಏನನ್ನು ಸೂಚಿಸುತ್ತದೆ? ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಾವು ಸಮಾಜದ ಬಗ್ಗೆ ಮಾತನಾಡುವಾಗ, ನಾವು ಅದರ ಮೂಲ ಸ್ವಭಾವದಿಂದ ಅರ್ಥಮಾಡಿಕೊಳ್ಳುತ್ತೇವೆ. ಈ ಒಗ್ಗಟ್ಟಿನೊಂದಿಗೆ ಜೊತೆಗೂಡುವ ಗುಣಗಳು ಯಾವುವೆಂದರೆ, ಸಾರ್ವಜನಿಕ ಉದ್ದೇಶಗಳ ಕಲ್ಯಾಣಕ್ಕಾಗಿ ಬಯಕೆ, ನಿಷ್ಠೆ ಹಾಗೂ ಸಹಾನುಭೂತಿಯ ಪರಸ್ಪರ ಹೊಂದಾಣಿಕೆ ಮತ್ತು ಸಹಕಾರ ಉದ್ದೇಶಕ್ಕಾಗಿರುವ ಪ್ರಶಂಸಾರ್ಹ ಸಮುದಾಯ.

ಈ ಆದರ್ಶಗಳು ಭಾರತೀಯ ಸಮಾಜದಲ್ಲಿ ಕಾಣಸಿಗುತ್ತವೆಯೇ? ಭಾರತೀಯ ಸಮಾಜ ವ್ಯಕ್ತಿಗಳಿಂದ ಕೂಡಿದ ಸಮಾಜವಲ್ಲ. ತಮ್ಮ ಜೀವನದಲ್ಲಿ ಪ್ರತ್ಯೇಕವಾಗಿರುವ ಜಾತಿಗಳ ಅಸಂಖ್ಯಾತ ಸಂಗ್ರಹದಿಂದ ಭಾರತೀಯ ಸಮಾಜ ಕೂಡಿದೆ ಹಾಗೂ ಇದಕ್ಕೆ ಹಂಚಿಕೊಳ್ಳಲು ಯಾವುದೇ ಸಮಾನ ಅನುಭವಗಳಿಲ್ಲ ಮತ್ತು ಸಹಾನುಭೂತಿಯ ಯಾವ ಬಂಧವನ್ನೂ ಹೊಂದಿಲ್ಲ. ಇಂತಹ ವಾಸ್ತವವನ್ನು ಪರಿಗಣಿಸಿದರೆ, ಈ ಅಂಶದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಬರುವುದಿಲ್ಲ. ಜಾತಿಪದ್ಧತಿಯ ಅಸ್ತಿತ್ವವು ಸಮಾಜ ಮತ್ತು ಆ ಕಾರಣದಿಂದಲೇ ಪ್ರಜಾಪ್ರಭುತ್ವದ ಆ ಆದರ್ಶಗಳ ಸ್ಪಷ್ಟ ನಿರಾಕರಣೆಯಾಗಿದೆ.

ಭಾರತೀಯ ಸಮಾಜದಲ್ಲಿ ಜಾತಿವ್ಯವಸ್ಥೆಯು ಎಷ್ಟು ಹುದುಗಿದೆಯೆಂದರೆ, ಇಲ್ಲಿರುವ ಎಲ್ಲವೂ ಜಾತಿಯ ಆಧಾರದ ಮೇಲೆಯೇ ಸಂಘಟಿಸಲಾಗಿದೆ. ಭಾರತೀಯ ಸಮಾಜವನ್ನು ಪ್ರವೇಶಿಸಿದ ಕೂಡಲೇ ಜಾತಿ ಎಂಬುದು ಅತ್ಯಂತ ಸ್ಪಷ್ಟವಾದ ರೂಪದಲ್ಲಿ ಎದ್ದುಕಾಣುತ್ತದೆ. ಅವನು ಅಥವಾ ಅವಳು ತನ್ನ ಜಾತಿಗೆ ಸೇರಿಲ್ಲ ಎಂಬ ಕಾರಣಕ್ಕಾಗಿ ಒಬ್ಬ ಭಾರತೀಯ ವ್ಯಕ್ತಿ ಇನ್ನೊಬ್ಬ ಭಾರತೀಯನೊಂದಿಗೆ ಊಟ ಮಾಡಲು ಅಥವಾ ಮದುವೆಯಾಗಲು ಸಾಧ್ಯವಿಲ್ಲ. ಅವನು ಅಥವಾ ಅವಳು ತನ್ನ ಜಾತಿಗೆ ಸೇರಿಲ್ಲ ಎಂಬ ಕಾರಣಕ್ಕಾಗಿ ಒಬ್ಬ ಭಾರತೀಯ ವ್ಯಕ್ತಿ ಇನ್ನೊಬ್ಬ ಭಾರತೀಯನನ್ನು ಮುಟ್ಟುವಂತಿಲ್ಲ. ಹೋಗಿ ರಾಜಕೀಯವನ್ನು ಸೇರಿಕೊಳ್ಳಿ ಆಗ ನೀವು ಜಾತಿ ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ಕಾಣಬಲ್ಲಿರಿ. ಒಬ್ಬ ಭಾರತೀಯ ಚುನಾವಣೆಗಳಲ್ಲಿ ಹೇಗೆ ಮತ ಚಲಾಯಿಸುತ್ತಾನೆ? ಅವನು ತನ್ನ ಜಾತಿಗೆ ಸೇರಿದ ಅಭ್ಯರ್ಥಿಗೆ ಮಾತ್ರ ಮತಚಲಾಯಿಸುತ್ತಾನೆ. ಭಾರತೀಯ ಕಾಂಗ್ರೆಸ್ ಕೂಡ ಇತರ ಯಾವುದೇ ರಾಜಕೀಯ ಪಕ್ಷಗಳಿಗಿಂತ ಹೆಚ್ಚಾಗಿ ಚುನಾವಣೆಗಳ ಉದ್ದೇಶಕ್ಕಾಗಿ ಜಾತಿ ಪದ್ಧತಿಯನ್ನು ಬಳಸಿಕೊಳ್ಳುತ್ತದೆ. ಆಯಾ ಕ್ಷೇತ್ರಗಳ ಸಾಮಾಜಿಕ ಸಂರಚನೆಯೊಂದಿಗೆ ಸಂಬಂಧಿಸಿದ ಅದರ ಅಭ್ಯರ್ಥಿಗಳ ಪಟ್ಟಿಯನ್ನು ಪರೀಕ್ಷಿಸಿ ಆಗ ಆಯಾ ಕ್ಷೇತ್ರದಲ್ಲಿರುವ ಬಹುಸಂಖ್ಯಾತರ ಜಾತಿಗೆ ಅವನು ಸೇರಿದವನಾಗಿರುತ್ತಾನೆ.

ನಿಜಾರ್ಥದಲ್ಲಿ ಜಾತಿಯ ಅಸ್ತಿತ್ವದ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತುವ ಕಾಂಗ್ರೆಸ್ ಪಕ್ಷವೇ ಜಾತಿ ಪದ್ಧತಿಯನ್ನು ಎತ್ತಿಹಿಡಿಯುತ್ತಿದೆ.

ಕೈಗಾರಿಕೆಗಳ ಕ್ಷೇತ್ರಕ್ಕೆ ಹೋಗಿ. ನಿಮಗೆ ಅಲ್ಲೇನು ಕಾಣುವುದು? ಆಯಾ ಕೈಗಾರಿಕೆಯ ಮಾಲೀಕರ ಜಾತಿಗೆ ಸೇರಿದ ಉನ್ನತ ಮಟ್ಟದಲ್ಲಿರುವ ಎಲ್ಲ ವ್ಯಕ್ತಿಗಳೇ ಅತ್ಯಂತ ಹೆಚ್ಚಿನ ಸಂಬಳವನ್ನು ಪಡೆಯುತ್ತಿರುತ್ತಾರೆ. ಇತರರು ಏಣಿಯ ಕೆಳಹಂತದಲ್ಲಿ ಅತ್ಯಂತ ಕಡಿಮೆ ಸಂಬಳ ಪಡೆಯುತ್ತ ತಮ್ಮ ಜೀವನವನ್ನು ದೂಕುತ್ತಿರುತ್ತಾರೆ. ನೀವು ವಾಣಿಜ್ಯ ಕ್ಷೇತ್ರಕ್ಕೆ ಹೋದರೂ ಇದೇ ದೃಶ್ಯ ಕಂಡುಬರುವುದು. ಇಡೀ ವಾಣಿಜ್ಯ ಘಟಕವು ಒಂದು ಜಾತಿಯ ಶಿಬಿರವಾಗಿರುತ್ತದೆ, ಅಲ್ಲಿ ಇತರರಿಗೆ ನೋ ಎಂಟ್ರಿ ಫಲಕವನ್ನು ಹಾಕಿರಲಾಗುತ್ತೆ.

ಚಾರಿಟಿಯ ಕ್ಷೇತ್ರಕ್ಕೆ ಹೋಗಿ ನೋಡಿ. ಒಂದೆರಡು ಅಪವಾದಗಳನ್ನು ಹೊರತುಪಡಿಸಿದರೆ, ಇತರ ಎಲ್ಲವೂ ಕೋಮುವಾರು ಆಗಿರುವುದು ಕಂಡುಬರುತ್ತದೆ. ಒಬ್ಬ ಪಾರ್ಸಿ ಸತ್ತಾಗ, ತನ್ನ ಹಣವನ್ನು ಆತ ಇತರ ಪಾರ್ಸಿಗಳಿಗಾಗಿ ಬಿಟ್ಟಿರುತ್ತಾನೆ. ಒಬ್ಬ ಜೈನ ವ್ಯಕ್ತಿ ಸತ್ತರೆ, ಆತ ತನ್ನ ಜೈನರಿಗೆ ಹಣವನ್ನು ಬಿಡುತ್ತಾನೆ. ಒಬ್ಬ ಮಾರವಾಡಿ ಸತ್ತರೆ ತನ್ನ ಹಣವನ್ನು ಇತರ ಮಾರವಾಡಿಗೆ ಬಿಟ್ಟಿರುತ್ತಾನೆ. ಒಬ್ಬ ಬ್ರಾಹ್ಮಣ ಸತ್ತರೆ, ತನ್ನ ಹಣವನ್ನು ಬ್ರಾಹ್ಮಣರಿಗೆ ಬಿಟ್ಟಿರುತ್ತಾನೆ. ಹಾಗಾಗಿ, ರಾಜಕೀಯದಲ್ಲಿ, ಕೈಗಾರಿಕೆಗಳಲ್ಲಿ, ವಾಣಿಜ್ಯದಲ್ಲಿ ಮತ್ತು ಶಿಕ್ಷಣದಲ್ಲಿ ದಬ್ಬಾಳಿಕೆಗೆ ಒಳಗಾದವರಿಗೆ ಮತ್ತು ವರ್ಣವ್ಯವಸ್ಥೆಯ ಹೊರಗಿನವರಿಗೆ ಯಾವುದೇ ಅವಕಾಶವಿಲ್ಲ.

ಜಾತಿ ಪದ್ಧತಿಯ ಇನ್ನೂ ಇತರ ವಿಶೇಷ ಲಕ್ಷಣಗಳಿವೆ, ಅವುಗಳು ಅತ್ಯಂತ ದುಷ್ಟ ಪರಿಣಾಮಗಳನ್ನು ಹೊಂದಿದ್ದು ಹಾಗೂ ಪ್ರಜಾಪ್ರಭುತ್ವದ ವಿರುದ್ಧ ಹೋರಾಡುತ್ತವೆ. ಇಂತಹ ಒಂದು ಗುಣಲಕ್ಷಣ ಇರುವುದು, ಶ್ರೇಣೀಕೃತ ಅಸಮಾನತೆ ಎಂದು ಕರೆಯಲಾಗುವ ಪ್ರಕ್ರಿಯೆಯೊಂದಿಗೆ ತಳಕು ಹಾಕಿಕೊಂಡಿದೆ. ಜಾತಿಗಳು ತಮ್ಮ ಸ್ಥಾನಮಾನದಲ್ಲಿ ಸಮಾನವಾಗಿಲ್ಲ. ಅವುಗಳು ಒಂದರ ಮೇಲೆ ಒಂದು ನಿಂತಿರುತ್ತವೆ. ಅವುಗಳು ಪರಸ್ಪರ ಅಸೂಯೆಯನ್ನು ಹೊಂದಿರುತ್ತವೆ. ಇಲ್ಲಿ ದ್ವೇಷವು ಆರೋಹಣ ಕ್ರಮದಲ್ಲಿದ್ದರೆ, ತಿರಸ್ಕಾರವು ಅವರೋಹಣ ಕ್ರಮದಲ್ಲಿರುತ್ತದೆ. ಜಾತಿ ಪದ್ಧತಿಯ ಈ ಗುಣಲಕ್ಷಣವು ಅತ್ಯಂತ ಹಾನಿಕಾರಕ ಪರಿಣಾಮಗಳನ್ನು ಹೊಂದಿದೆ. ಇದು ಇಚ್ಛಾಶಕ್ತಿಯನ್ನು ಮತ್ತು ಸಹಾಯದ ಸಹಕಾರವನ್ನು ನಾಶಗೊಳಿಸುತ್ತದೆ.

ಜಾತಿ ಪದ್ಧತಿಯಲ್ಲಿ ಇರುವಂತೆ ವರ್ಗ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಪ್ರತ್ಯೇಕತೆ ಇರುವುದಿಲ್ಲ, ಹೀಗೆ ಜಾತಿ ಮತ್ತು ವರ್ಗ ಭಿನ್ನವಾಗಿವೆ. ಇದು ಜಾತಿ ಪದ್ಧತಿಯಲ್ಲಿ ಅಸಮಾನತೆಯೊಂದಿಗೆ ಇರುವ ಎರಡನೇ ದುಷ್ಟ ಪರಿಣಾಮ. ಇದು ಎರಡು ಜಾತಿಗಳ ಮಧ್ಯದಲ್ಲಿ ಇರುವ ಪ್ರತಿಕ್ರಿಯೆ ಮತ್ತು ಉತ್ತೇಜನ(ಪ್ರಚೋದನೆ) ಕೇವಲ ಒಂದು ಕಡೆಯಿಂದ ಮಾತ್ರ ಬರುತ್ತದೆ ಎಂಬ ವಾಸ್ತವಾಂಶದಲ್ಲಿ ಕಾಣಿಸಿಕೊಳ್ಳುತ್ತದೆ. ಮೇಲ್ಜಾತಿಗಳು ಒಂದು ಗುರುತಿಸಲ್ಪಟ್ಟ ರೀತಿಯಲ್ಲಿ ವರ್ತಿಸುತ್ತಾರೆ ಹಾಗೂ ಕೆಳಜಾತಿಗಳು ಒಂದು ಸ್ಥಾಪಿತ ರೀತಿಯಲ್ಲಿಯೇ ಪ್ರತಿಕ್ರಿಯಿಸಬೇಕು. ಇದರರ್ಥ, ಉತ್ತೇಜನವನ್ನು ಪಡೆಯಲು ಮತ್ತು ಭಿನ್ನ ಜಾತಿಗೆ ಪ್ರತಿಕ್ರಿಯೆ ಮರಳಿ ನೀಡಲು ಸಮಾನವಾದ ಅವಕಾಶ ಇಲ್ಲದೇ ಇರುವುದು. ಇದರ ಪರಿಣಾಮವಾಗಿ, ಆ ಪ್ರಭಾವಗಳು ಕೆಲವರನ್ನು ಮಾಲೀಕರಾಗಲು ಶಿಕ್ಷಣ ನೀಡದರೆ, ಕೆಲವರನ್ನು ಗುಲಾಮರಾಗುವಂತೆ ಕಲಿಸುತ್ತವೆ. ಎರಡೂ ಬದಿಗಿರುವವರ ಅನುಭವ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ ಏಕೆಂದರೆ ಅಲ್ಲಿ ವಿವಿಧ ರೀತಿಯ ಜೀವನ ಅನುಭವದ ಮುಕ್ತ ಕೊಡುಕೊಳ್ಳುವಿಕೆಯನ್ನು ತಡೆಯಲಾಗಿದೆ. ಇದರ ಪರಿಣಾಮವಾಗಿ, ಸಮಾಜವು ಒಂದು ಸವಲತ್ತು ಉಳ್ಳವರ ಮತ್ತು ಶೋಷಿತರ ವರ್ಗವಾಗಿ ಪ್ರತ್ಯೇಕಗೊಳ್ಳುತ್ತದೆ. ಇಂತಹ ಪ್ರತ್ಯೇಕತೆಯು ಸಾಮಾಜಿಕರಣವನ್ನು ತಡೆಯುತ್ತದೆ.

ಇನ್ನು ಜಾತಿ ಪದ್ಧತಿಯ ಮೂರನೇ ಗುಣಲಕ್ಷಣವು ಪ್ರಜಾಪ್ರಭುತ್ವದ ಮೂಲಬೇರುಗಳನ್ನೇ ಕತ್ತರಿಸುವ ಅಪಾಯವನ್ನು ಹೊಂದಿದೆ. ಅದು, ಒಂದು ಜಾತಿಯನ್ನು ಒಂದು ಉದ್ಯೋಗಕ್ಕೆ ಸೀಮಿತಗೊಳಿಸುವುದು. ಯಾವಾಗ ಪ್ರತಿ ವ್ಯಕ್ತಿಯೂ ಇತರರಿಗೆ ಉಪಯುಕ್ತವಾಗುವ ರೀತಿಯಲ್ಲಿ ಪ್ರಕೃತಿ ನೀಡಿದ ಯೋಗ್ಯತೆಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದರೆ ಸಮಾಜವು ನಿಸ್ಸಂಶಯವಾಗಿಯೂ ಸ್ಥಿರವಾಗಿ ಸಂಘಟಿತವಾಗಿರುತ್ತದೆ. ಹಾಗೂ ಈ ಯೋಗ್ಯತೆಯನ್ನು ಕಂಡುಹಿಡಿದು ಮತ್ತು ಅವರನ್ನು ಸಾಮಾಜಿಕ ಬಳಕೆಗೆ ಪ್ರಗತಿಪರವಾಗಿ ತರಬೇತಿ ನೀಡುವುದು ಸಮಾಜದ ಕೆಲಸವಾಗಿದೆ. ಒಬ್ಬ ವ್ಯಕ್ತಿಯಲ್ಲಿ ಸಾಮರ್ಥ್ಯಗಳು ಮತ್ತು ಒಬ್ಬ ವ್ಯಕ್ತಿಯನ್ನು ನಿರೂಪಿಸುವ ಅಪರಿಮಿತ ಬಹುತ್ವಗಳಿರುತ್ತವೆ. ಒಂದು ಸಮಾಜವು ಪ್ರಜಾತಾಂತ್ರಿಕವಾಗಿರಬೇಕಾದರೆ ಒಬ್ಬ ವ್ಯಕ್ತಿಯ ಎಲ್ಲಾ ಸಾಮರ್ಥ್ಯಗಳನ್ನು ಬಳಕೆ ಮಾಡುವ ಮುಕ್ತ ಅವಕಾಶಗಳಿರಬೇಕು. ಶ್ರೇಣೀಕರಣವು ಒಬ್ಬ ವ್ಯಕ್ತಿಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಹಾಗೂ ಉದ್ದೇಶಪೂರ್ವಕವಾಗಿ ಕುಂಠಿತಗೊಳಿಸುವುದು ಪ್ರಜಾಪ್ರಭುತ್ವವದ ಉದ್ದೇಶಪೂರ್ವಕ ನಿರಾಕರಣೆಯಾಗುತ್ತದೆ.

ಜಾತಿ ಪದ್ಧತಿಯನ್ನು ಕೊನೆಗಾಣಿಸುವುದು ಹೇಗೆ? ಇದಕ್ಕೆ ಇರುವ ಮೊದಲ ಅಡ್ಡಿ, ಜಾತಿ ಪದ್ಧತಿಯ ಆತ್ಮವಾಗಿರುವ ಶ್ರೇಣೀಕೃತ ಅಸಮಾನತೆಯ ವ್ಯವಸ್ಥೆಯಲ್ಲಿ ಅಡಗಿದೆ. ಜನರನ್ನು ಎರಡು ವರ್ಗಗಳಾಗಿ ವಿಭಜಿಸಿದರೆ, ಉನ್ನತ ವರ್ಗ ಮತ್ತು ಕೆಳ ವರ್ಗ ಎಂದು ವಿಭಜಿಸಿದರೆ, ಆಗ ಕೆಳವರ್ಗವು ಸೇರಿಕೊಂಡು ಮೇಲ್ವರ್ಗದೊಂದಿಗೆ ಹೋರಾಟ ಮಾಡುವುದು ಸುಭ. ಆದರೆ ಇಲ್ಲಿ ಒಂದು ಕೆಳ ವರ್ಗವಿಲ್ಲ. ವರ್ಗವು ಕೆಳಗಿನ ಮತ್ತು ಅದಕ್ಕಿಂತ ಕೆಳಗಿನ ವರ್ಗಗಳನ್ನು ಹೊಂದಿದೆ. ಕೆಳಗಿನವರು ತಮಗಿಂತ ಕೆಳಗಿನವರೊಂದಿಗೆ ಸೇರುವುದು ಸಾಧ್ಯವಿಲ್ಲ. ಏಕೆಂದರೆ, ಆ ತಮಗಿಂತ ಕೆಳಗಿನವರು ಮೇಲ್ಮಟ್ಟಕ್ಕೆ ಏರುವ ಸಾಧ್ಯತೆಯ ಬಗ್ಗೆ ಹೆದರಿಕೆ ಹೊಂದಿರುತ್ತಾನೆ, ತನ್ನ ಉನ್ನತ ಸ್ಥಾನವನ್ನು ತನ್ನ ಜಾತಿಯನ್ನು ಕಳೆದುಕೊಳ್ಳಬಹುದು ಎಂಬ ಹೆದರಿಕೆ ಇರುತ್ತದೆ.

ಎರಡನೆಯ ಅಡ್ಡಿ, ಭಾರತೀಯ ಸಮಾಜವು ತನ್ನ ಸಾಮಾನ್ಯ ಒಳಿತು ಏನೆಂಬುದನ್ನು ತಿಳಿಯುವಲ್ಲಿ ಅಸಮರ್ಥವಾಗಿ, ಒಗ್ಗಟ್ಟಾಗಿ ಕಾರ್ಯನಿರ್ವಹಿಸುವುದಕ್ಕೆ ಆಗದೆ ಕುಂಠಿತವಾಗಿರುವುದು. ಪ್ಲ್ಯಾಟೊ ಹೇಳಿದ್ದೇನೆಂದರೆ, ಸಮಾಜದ ರಚನೆಯು ಅಂತಿಮವಾಗಿ ಅಸ್ತಿತ್ವದ ಅಂತ್ಯದ ಬಗ್ಗೆ ಇರುವ ಜ್ಞಾನದ ಮೇಲೆ ಅವಲಂಬಿಸಿರುತ್ತದೆ. ಅದರ ಅಂತ್ಯದ ಬಗ್ಗೆ ನಮಗೆ ಗೊತ್ತಿಲ್ಲದಿದ್ದರೆ, ಅದು ಒಳ್ಳೆಯದು ಎಂದು ನಮಗೆ ಗೊತ್ತಿಲ್ಲದಿದ್ದರೆ, ನಾವುಗಳು ಆಕಸ್ಮಿಕ ಮತ್ತು ತಿಕ್ಕಲುತನದ ಕರುಣೆಯ ಮೇಲೆ ಅವಲಂಬಿತರಾಗಿರಬೇಕಾಗುತ್ತದೆ. ನಮಗೆ ಅದರ ಅಂತ್ಯದ ಬಗ್ಗೆ, ಒಳಿತಿನ ಬಗ್ಗೆ ಗೊತ್ತಿಲ್ಲದಿದ್ದಲ್ಲಿ, ನಾವು ಯಾವುದನ್ನು ಪ್ರಚಾರ ಮಾಡಬೇಕು, ಯಾವ ಸಾಧ್ಯತೆಗಳಿವೆ ಎಂಬುದನ್ನು ತರ್ಕಬದ್ಧವಾಗಿ ನಿರ್ಣಯಿಸುವ ಮಾನದಂಡಗಳಿರುವುದಿಲ್ಲ. ಪ್ರಶ್ನೆ ಏನೆಂದರೆ, ಭಾರತೀಯ ಸಮಾಜ, ತನ್ನ ಜಾತಿಬದ್ಧ ಸ್ಥಿತಿಯಲ್ಲಿ ಏನನ್ನು ಸಾಧಿಸಬಹುದು ಎಂಬುದು ಅಂತಿಮ, ಮೂಲಭೂತ ಪ್ರಶ್ನೆ. ಒಂದು ನ್ಯಾಯಯುತ ಮತ್ತು ಸೌಹಾರ್ದಯುತ ಸಾಮಾಜಿಕ ವ್ಯವಸ್ಥೆಯಲ್ಲಿ ಇಂತಹ ಜ್ಞಾನವು ರಕ್ಷಿಸಬಹುದೇ ಎಂಬ ಮೀರಿಕೊಳ್ಳಲಾಗದ ಅಡೆತಡೆ ಬಾಧಿಸಸುತ್ತದೆ. ಜಾತಿ ಪದ್ಧತಿಯ ಅಡಿಯಲ್ಲಿ ಸೌಹಾರ್ದಯುತ ಸಾಮಾಜಿಕ ವ್ಯವಸ್ಥೆ ಇರಲು ಸಾಧ್ಯವೇ? ಎಲ್ಲೆಡೆ ಭಾರತೀಯರ ಮನಸ್ಸು ಹುಸಿ ಮೌಲ್ಯ ಮತ್ತು ತಪ್ಪು ದೃಷ್ಟಿಕೋನಗಳಿಂದ ವಿಚಲಿತಗೊಂಡಿದೆ ಹಾಗೂ ದಾರಿತಪ್ಪಿದೆ. ಒಂದು ಅಸ್ತವ್ಯಸ್ತವಾದ ಮತ್ತು ಗುಂಪುಗಾರಿಕೆಯುಳ್ಳ ಒಂದು ಸಮಾಜವು ಹಲವಾರು ಬೇರೆಬೇರೆಯಾದ ಮಾದರಿ ಮತ್ತು ಆದರ್ಶಗಳನ್ನು ರಚಿಸುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಜಾತಿಯ ಪ್ರಶ್ನೆಯ ಮೇಲೆ ಭಾರತೀಯ ವ್ಯಕ್ತಿಗೆ ಮಾನಸಿಕ ಸ್ಥಿರತೆ ಹೊಂದಿರುವುದ ಅಸಾಧ್ಯ.

ಶಿಕ್ಷಣದಿಂದ ಜಾತಿಯನ್ನು ನಾಶಗೊಳಿಸಲು ಸಾಧ್ಯವೇ? ಇದಕ್ಕೆ ಉತ್ತರ ‘ಹೌದು’ ಮತ್ತು ‘ಇಲ್ಲ’! ಒಂದು ವೇಳೆ ಇಂದು ನೀಡುತ್ತಿರುವ ರೀತಿಯಲ್ಲಿ ಶಿಕ್ಷಣವನ್ನು ನೀಡಿದರೆ, ಅದರಿಂದ ಜಾತಿಯ ಮೇಲೆ ಯಾವ ಪರಿಣಾಮವೂ ಆಗದು. ಅದು ಹೇಗಿದೆಯೋ ಹಾಗೆಯೇ ಇರುತ್ತದೆ. ಇದರ ಸ್ಪಷ್ಟ ಉದಾಹರಣೆ ಬ್ರಾಹ್ಮಣ ಜಾತಿ. ಅಲ್ಲಿ ಸಂಪೂರ್ಣ ಸಾಕ್ಷರತೆ ಇದೆ, ಹೆಚ್ಚಿನವರು ಉನ್ನತ ಶಿಕ್ಷಣ ಪಡೆದವರು, ಆದಾಗ್ಯೂ ಒಬ್ಬ ಬ್ರಾಹ್ಮಣನೂ ತಾನು ಜಾತಿಯ ವಿರುದ್ಧ ಎಂದು ತೋರಿಸಿಕೊಂಡಿಲ್ಲ. ವಾಸ್ತವದಲ್ಲಿ, ಮೇಲ್ಜಾತಿಗೆ ಸೇರಿದ ಶಿಕ್ಷಿತ ವ್ಯಕ್ತಿಯು ತಾನು ಶಿಕ್ಷಿತನಾಗಿಲ್ಲದಾಗ ಇದ್ದ ಜಾತಿ ಪದ್ಧತಿಯನ್ನು ಉಳಿಸಿಕೊಳ್ಳಲು ತನ್ನ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾನೆ. ಏಕೆಂದರೆ, ಶಿಕ್ಷಣವು ಒಂದು ಉನ್ನತ ಹುದ್ದೆಗೆ ಹೆಚ್ಚುವರಿ ಅವಕಾಶ ತೆರೆದುಕೊಂಡು ಜಾತಿಪದ್ಧತಿಯ ಮುಂದುವರಿಕೆಗೆ ಹೆಚ್ಚಿನ ಆಸಕ್ತಿ ನೀಡುತ್ತದೆ.

ಈ ದೃಷ್ಟಿಕೋನದಿಂದ, ಜಾತಿಯನ್ನು ವಿನಾಶಗೊಳಿಸುವುದಕ್ಕೆ ಶಿಕ್ಷಣವು ಸಾಧನವಾಗುವುದಿಲ್ಲ. ಇಲ್ಲಿಯ ತನಕದ್ದು ಶಿಕ್ಷಣದ ನಕಾರಾತ್ಮಕ ಅಂಶ. ಆದರೆ ಭಾರತೀಯ ಸಮಾಜ ಕೆಳವರ್ಗಕ್ಕೆ ಅನ್ವಯಿಸಿದಲ್ಲಿ ಶಿಕ್ಷಣವು ಒಂದು ಆಸ್ತಿಯಾಗಬಲ್ಲದು. ಅದು ಬಂಡಾಯದ ಕೆಚ್ಚನ್ನು ಹೆಚ್ಚಿಸಬಹದು. ಅಜ್ಞಾನದ ಈ ಪ್ರಸಕ್ತ ಸ್ಥಿತಿಯಲ್ಲಿ ಅವರೇ ಜಾತಿ ವ್ಯವಸ್ಥೆಯ ಬೆಂಬಲಿಗರಾಗಿದ್ದಾರೆ. ಒಂದು ಸಲ ಅವರ ಕಣ್ಣು ತೆರೆದುಕೊಂಡರೆ, ಜಾತಿ ಪದ್ಧತಿಯ ವಿರುದ್ಧ ಹೋರಾಡಲು ಅವರು ಸಿದ್ಧರಾಗುತ್ತಾರೆ.

ಪ್ರಸಕ್ತ ನೀತಿಯ ದೋಷವೇನೆಂದರೆ, ಶಿಕ್ಷಣವನ್ನು ದೊಡ್ಡ ಪ್ರಮಾಣದಲ್ಲಿ ನೀಡಲಾಗುತ್ತಿದ್ದರೂ, ಅದನ್ನು ಭಾರತೀಯ ಸಮಾಜದ ಸರಿಯಾದ ಸ್ತರಕ್ಕೆ ನೀಡಲಾಗುತ್ತಿಲ್ಲ. ಒಂದು ವೇಳೆ, ಜಾತಿಪದ್ಧತಿಯನ್ನು ಮುಂದುವರೆಸುವಲ್ಲಿ ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿದ ಭಾರತೀಯ ಸಮಾಜದ ಆ ಸ್ತರಕ್ಕೆ ಶಿಕ್ಷಣ ನೀಡಿದರೆ ಜಾತಿಪದ್ಧತಿಯನ್ನು ಗಟ್ಟಿಗೊಳಿಸಲಾಗುವುದು. ಇನ್ನೊಂದೆಡೆ, ಜಾತಿ ಪದ್ಧತಿಯನ್ನು ನಾಶಗೊಳಿಸುವಲ್ಲಿ ಆಸಕ್ತಿ ಹೊಂದಿರುವ ಬಾರತೀಯ ಸಮಾಜದ ಕೆಳಸ್ತರದಲ್ಲಿರುವವರಿಗೆ ಶಿಕ್ಷಣ ನೀಡಿದರೆ, ಜಾತಿ ಪದ್ಧತಿಯು ವಿನಾಶಗೊಳ್ಳುವುದು. ಈಗಿನ ಸಮಯದಲ್ಲಿ, ಭಾರತೀಯ ಸರಕಾರ ಮತ್ತು ಅಮೇರಿಕದ ಫೌಂಡೇಷನ್‍ಗಳಿಂದ ಶಿಕ್ಷಣಕ್ಕೆ ನೀಡುತ್ತಿರುವ ಸಹಾಯವು ಜಾತಿಪದ್ಧತಿಯನ್ನು ಗಟ್ಟಿಗೊಳಿಸಲಿದೆ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಹಾಗೂ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುವುದು ಬಡತನವನ್ನು ನಿರ್ಮೂಲನೆ ಮಾಡುವ ದಾರಿ ಅಲ್ಲ. ಜಾತಿಪದ್ಧತಿಯನ್ನು ನಿರ್ಮೂಲನೆ ಮಾಡುವುದರಲ್ಲಿ ಶಿಕ್ಷಣವನ್ನು ಸಾಧನವಾಗಿ ಬಳಸಿಕೊಳ್ಳುವುದಕ್ಕೂ ಇದೇ ಮಾತು ಅನ್ವಯಿಸುತ್ತದೆ. ಜಾತಿಪದ್ಧತಿಯನ್ನು ಉಳಿಸಿಕೊಳ್ಳುವ ಬಯಕೆ ಹೊಂದಿದವರಿಗೆ ಶಿಕ್ಷಣ ನೀಡುವುದು ಪ್ರಜಾಪ್ರಭುತ್ವದ ಭರವಸೆಯನ್ನು ಹೆಚ್ಚಿಸಿದಂತಲ್ಲ ಆದರೆ ಅದರ ಬದಲಿಗೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೆಚ್ಚಿನ ಆಪತ್ತು ಒಡ್ಡಿದಂತೆ.

ಅನುವಾದ: ರಾಜಶೇಖರ್ ಅಕ್ಕಿ


ಇದನ್ನೂ ಓದಿ: ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ಕೂಡ ಬಳಸಿಲ್ಲ: ಓವೈಸಿ ವಾಗ್ಧಾಳಿ

0
ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ 'ಅಲ್ಪಸಂಖ್ಯಾತರು' ಎಂಬ ಪದವನ್ನು ಕೂಡ ಬಳಸಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಮುಸ್ಲಿಮರನ್ನು ಅಂಚಿಗೆ ತಳ್ಳಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ...