Homeಅಂಕಣಗಳುಜೈಲಿನಾಗ ರೊಟ್ಟಿ ತಣ್ಣಗೆ ಇರಬಹುದು, ಆದರ ಖಾಸಗಿ ಜೈಲು ಕಂಪನಿಗಳ ಷೇರು ಮಾತ್ರ ಬಿಸಿ ದೋಸೆಯಂತೆ...

ಜೈಲಿನಾಗ ರೊಟ್ಟಿ ತಣ್ಣಗೆ ಇರಬಹುದು, ಆದರ ಖಾಸಗಿ ಜೈಲು ಕಂಪನಿಗಳ ಷೇರು ಮಾತ್ರ ಬಿಸಿ ದೋಸೆಯಂತೆ ಖರ್ಚು ಆದವು

‘ಅಪರಾಧ ಅನ್ನೋದು ಯಾವತ್ತೂ ಕಮ್ಮಿ ಆಗೋದಿಲ್ಲ. ಹಿಂಗಾಗಿ ಖಾಸಗಿ ಜೈಲು ಯಾವತ್ತೂ ಬಂದ್ ಆಗೋದಿಲ್ಲ. ಅವುಗಳ ಒಳಗ ಹಣ ಹೂಡಿದರ ನಷ್ಟ ಇಲ್ಲ’ ಅಂತ. ನಮ್ಮ ಟ್ರಂಪ್ ಅಣ್ಣಾವ್ರು ಅಧ್ಯಕ್ಷರಾದ ಮ್ಯಾಲೆ ಖಾಸಗಿ ಜೈಲುಗಳ ಷೇರು ಮೌಲ್ಯ ಶೇಕಡಾ 100 ರಷ್ಟು ಹೆಚ್ಚು ಆಗೇದ.

- Advertisement -
- Advertisement -

‘ಅಪರಾಧ ಲಾಭದಾಯಕವಲ್ಲ’ (ಕ್ರೈಂ ಡಸ್ ನಾಟ್ ಪೇ) ಎನ್ನುವುದು ಹಳೆಯ ನಾಣ್ಣುಡಿ. ಇಂಥಾ ನಾಣ್ಣುಡಿಗಳ ನಾಡಾದ ಬ್ರಿಟನ್‌ದಾಗ ‘ಅಪರಾಧದಷ್ಟು ಲಾಭದಾಯಕ ಇನ್ನೊಂದು ಇಲ್ಲ’ ಅನ್ನೋ ಗಾದಿ ಮಾತು ಹುಟ್ಟಿಕೊಂಡದ.

ಅದು ಯಾಕಪಾ ಅಂದ್ರ ಅಲ್ಲಿ ಖಾಸಗಿ ಜೈಲು ಅದಾವು. ಬ್ರಿಟನ್ನಿನ ಒಟ್ಟು 130 ಜೈಲುಗಳಲ್ಲಿ 14 ಖಾಸಗಿ ಜೈಲು. ಮೊದಲುಮೊದಲಿಗೆ ಸರ್ಕಾರಿ ಜೈಲಿನ ಕಸ ಗುಡಿಸುವ, ಅಲ್ಲಿ ಊಟ ಒದಗಿಸುವ ಏಜೆನ್ಸಿಗಳಾಗಿ ನೇಮಕವಾದ ಈ ಕಂಪನಿಗಳು ಈಗ ಪೂರ್ಣಪ್ರಮಾಣದ ಖಾಸಗಿ ಜೈಲುಗಳನ್ನು ಕಟ್ಟಿವೆ. ಸರಕಾರದಿಂದ ಒಬ್ಬ ಕೈದಿಗೆ ಇಷ್ಟು ಅಂತ ಖರ್ಚು ಪಡೆಯುವ ಈ ಕಂಪನಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಆಗಲಿಕ್ಕೆ ಹತ್ತಿದ್ದಾವು.

ಇನ್ನೂ ಬ್ರಿಟನ್‌ನ ಹಳೆ ಮಂದಿ ಬಿಟ್ಟು ಹೋಗಿ ಕಟ್ಟಿಕೊಂಡಿರುವ ನಿರಾಶ್ರಿತರ ಶಿಬಿರ ಅಮೆರಿಕದಾಗ ಪರಿಸ್ಥಿತಿ ಏನೂ ಬ್ಯಾರೆ ಇಲ್ಲ. ಅಲ್ಲಿನ 23 ಲಕ್ಷ ಕೈದಿಗಳ ಪೈಕಿ ಸುಮಾರು ಶೇಕಡಾ ಒಂಬತ್ತು ಕೈದಿಗಳು ಖಾಸಗಿ ಜೈಲಿನ ಒಳಗೆ ಇರ್ತಾರ.

ಏನು ಅಂದರೂ ಅಮೆರಿಕ ಬ್ರಿಟನ್‌ಗಿಂತ ಒಂದು ಕೈ ಮುಂದೆ ಇರೋದು. ಇನ್ನ ಬ್ರಿಟನ್ ಹಾಗೂ ಅಮೆರಿಕದ ಜಗಳ ಇಂದುನಿನ್ನೆಯದಲ್ಲ. ಅದು 1609ರಾಗ ಮೇ ಫ್ಲವರ್ ಹಡಗಿನ ಯಾತ್ರೆಯಿಂದ ಶುರು ಆಗಿದ್ದು. ಇನ್ನೂ ನಿಂತಿಲ್ಲ.

PC : Politico, (ಬೋರಿಸ್ ಜಾನ್ಸನ್ & ಡೊನಾಲ್ಡ್ ಟ್ರಂಪ್)

ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಂಗತೆ ನಮ್ಮ ದೋಸ್ತ ಬಿಳಿಮನೀ ಟ್ರಂಪಣ್ಣನವರ ಅವರು “ನಿನ್ನ ಕೂದಲ ಜಾಸ್ತಿ ಹಳದಿನೋ, ನನ್ನ ಕೂದಲ ಜಾಸ್ತಿ ಹಳದಿನೋ” ಅಂತ ಹೇಳಿ ಜಿದ್ದಿಗೆ ಬಿದ್ದಿರತಾರ. ಟ್ರಂಪ್ ಅವರು ಕಲರು – ಖದರು ಎರಡೂ ಜಾಸ್ತಿ ಅಂತ ಗೊತ್ತ ಆದ ಮ್ಯಾಲೆ ಬೋರಿಸ್ ಅವರು ತಮ್ಮ ಕೂದಲ ಬಾಚಿಕೊಳ್ಳೋದು ಬಿಟ್ಟುಬಿಟ್ಟಾರ. ಅದು ಹೋಗಲಿ ಬಿಡರಿ.

ಇನ್ನ ಬೋರಿಸ್ ಅಣ್ಣಾ ಅವರು ಮೊದಲನೇ ಸಲ ಚುನಾವಣೆ ಎದುರಿಸದೆ ಪ್ರಧಾನಿ ಆಗಿದ್ದು ನೋಡಿ ಹೊಟ್ಯಾಗ್ ಸಂಕಟ ಆಗಿ ಟ್ರಂಪ್ ಅವರು ಚುನಾವಣೆಯಲ್ಲಿ ಸೋತರೂ ಇನ್ನೂ ಅಧಿಕಾರದಲ್ಲಿ ಉಳಕೊಂಡು ಬಿಟ್ಟಾರ. ಜನವರಿ 20ನೇ ತಾರೀಖಿಗೆ ಅವರನ್ನ ಅವರ ಸಾಮಾನು ಸಮೇತ ಹೊರಗ ಹಾಕತಾರ. ಅದುನೂ ಬ್ಯಾರೆ ಮಾತು.

ಬ್ರಿಟನ್‌ನವರು ಖಾಸಗಿ ಜೈಲು ಪ್ರಾರಂಭ ಮಾಡಿದಾರ ಅಂತ ಗೊತ್ತಾದ ಕೂಡಲೇ ಅಮೆರಿಕದವರು ಇನ್ನೂ ಒಂದು ಹೆಜ್ಜಿ ಮುಂದೆ ಹೋದರು. ತಮ್ಮಲ್ಲಿನ ಖಾಸಗಿ ಜೈಲಿನ ಕಂಪನಿಗಳು ಅಲ್ಲಿನ ಷೇರ್ ಮಾರುಕಟ್ಟೆಯಲ್ಲಿ ಷೇರು ಮಾರಾಟ ಮಾಡಲಿಕ್ಕೆ ಅನುಕೂಲ ಮಾಡಿಕೊಟ್ಟರು.

ಜೈಲಿನಾಗ ರೊಟ್ಟಿ ತಣ್ಣಗೆ ಇರಬಹುದು, ಆದರ ಖಾಸಗಿ ಜೈಲು ಕಂಪನಿಗಳ ಷೇರು ಮಾತ್ರ ಬಿಸಿ ದೋಸೆಯಂತೆ ಖರ್ಚು ಆದವು. ಆ ಕಂಪನಿಗಳಲ್ಲಿ ಹಣ ಹೂಡುವುದು ಲಾಭದಾಯಕ ಆಗಿ ಖಾಸಗಿ ಕಂಪನಿಗಳ ಸಂಖ್ಯೆ ಕಳೆದ 30 ವರ್ಷಗಳಲ್ಲಿ 40 ಶೇಕಡಾ ಹೆಚ್ಚು ಆದವು.

ಭಾಷೆಯ ಬಳಕೆಯೊಳಗ ಭಾಳ ಶಾಣೆ ಇರುವ ಅಮೆರಿಕದವರು ಜೈಲ್ ಅನ್ನು ಜೈಲ್ ಅಂತ ಕರೆಯೋದಿಲ್ಲ. ಅವರು ಅದನ್ನ ‘ಅಪಕೃತ್ಯ ಮಾಡಿದವರ ಮನಪರಿವರ್ತನಾ ಕೇಂದ್ರ, ‘ಪ್ರಮಾದ ಎಸಗಿದವರ ನಿರ್ವಹಣಾ ಘಟಕ’, ‘ಮೊದಲ ಸಲ ತಪ್ಪು ಮಾಡಿದವರ ತಾತ್ಕಾಲಿಕ ಆಶ್ರಯ ತಾಣ’, ‘ನಿರ್ಬಂಧ ಹಾಗೂ ಸುಧಾರಣ ಗೃಹಗಳು’ ಅಂತ ಎಲ್ಲಾ ಮಜಾ ಹೆಸರಿನಿಂದ ಕರಿತಾರ. ಆ ಹೆಸರು ನೋಡಿ, ಅವರು ಗಳಿಸೊ ಲಾಭ ನೋಡಿ, ಅಲ್ಲಿಯ ಜನ ಆ ಕಂಪನಿಗಳ ಷೇರು ಖರೀದಿ ಮಾಡತಾರ. ಅದನ್ನ ಸರಕಾರಪ್ರೇರಿತ ಸಾಮಾಜಿಕ ಉದ್ದಿಮೆ ಅಂತ ಪರಿಗಣಿಸಿಬಿಟ್ಟಾರ.

ಷೇರು ಮಾರುಕಟ್ಟೆ ಒಳಗ ಒಂದು ಮಾತು ಅದ. ‘ಯಾವ ಕಂಪನಿ ಬಂದ್ ಆದರೂ ಕೂಡ ಆಹಾರ, ವಸತಿ, ಮದ್ದುಗುಂಡು, ತಂಬಾಕು, ಹೆಂಡ, ಔಷಧಿ ತಯಾರು ಮಾಡುವ ಕಂಪನಿಗಳು ಮಾತ್ರ ಯಾವತ್ತೂ ಬಂದ್ ಆಗೋದಿಲ್ಲ. ಆ ಕಂಪನಿಗಳ ಒಳಗ ದುಡ್ಡು ಹಾಕಿದರ ನಷ್ಟ ಅನ್ನೂದ ಇಲ್ಲ’ ಅಂತ.

ಅದಕ್ಕ ಇನ್ನೊಂದು ಮಾತು ಸೇರಿಕೊಂಡದ. ‘ಅಪರಾಧ ಅನ್ನೋದು ಯಾವತ್ತೂ ಕಮ್ಮಿ ಆಗೋದಿಲ್ಲ. ಹಿಂಗಾಗಿ ಖಾಸಗಿ ಜೈಲು ಯಾವತ್ತೂ ಬಂದ್ ಆಗೋದಿಲ್ಲ. ಅವುಗಳ ಒಳಗ ಹಣ ಹೂಡಿದರ ನಷ್ಟ ಇಲ್ಲ’ ಅಂತ. ನಮ್ಮ ಟ್ರಂಪ್ ಅಣ್ಣಾವ್ರು ಅಧ್ಯಕ್ಷರಾದ ಮ್ಯಾಲೆ ಖಾಸಗಿ ಜೈಲುಗಳ ಷೇರು ಮೌಲ್ಯ ಶೇಕಡಾ 100 ರಷ್ಟು ಹೆಚ್ಚು ಆಗೇದ. ‘ಇದು ಒಂದು ಆಕರ್ಷಕ ಹೂಡಿಕೆಯ ಅವಕಾಶ, ಮರೆಯದಿರಿ, ಮರೆತು ನಿರಾಶರಾಗದಿರಿ’, ಅಂತ ಅವರ ಬೆಂಬಲಿಗರು ಹೇಳಿಕೊಂಡು ಓಡಾಡಲಿಕ್ಕೆ ಹತ್ಯಾರ.

ಭರತ ಭೂಮಿಯ ಎಲ್ಲಾ ಸರಕಾರಿ ಸಂಸ್ಥೆಗಳಿಗೂ ಸಾಮೂಹಿಕ ಕೊನೆಗಾಲ ಬಂದೇತಿ. ಪಂಥ ಪ್ರಧಾನ ಸೇವಕರ ಸರಕಾರ ಛಲೋ ಛಲೋ ಸರ್ಕಾರಿ ಸಂಸ್ಥೆಗಳನ್ನ ಹಿಡಕೊಂಡು ಖಾಸಗಿಗೆ ಮಾರಲಿಕ್ಕೆ ಹೊಂಟೆತಿ. ಅದಾನಿ ಅವರಿಗೆ ಏರಪೋರ್ಟ್ ಅಥಾರಿಟೀ ಅವರ ವಿಮಾನನಿಲ್ದಾಣಗಳನ್ನ, ಅಂಬಾನಿ ಅವರಿಗೆ ಒಎನ್‌ಜಿಸಿ ತೈಲ ಬಾವಿಗಳನ್ನ, ರೈಲ್ವೆ ಇಲಾಖೆಯನ್ನು ಇನ್ಯಾರಿಗೋ ಕೊಡುವ ಹುನ್ನಾರ ಶುರು ಆಗಿಬಿಟ್ಟದ.

ಆದರ ಇದು ಸರಳವಾಗಿ, ಪಾರದರ್ಶಕವಾಗಿ ನಡೆದಿಲ್ಲ. ವಿಮಾನ ನಿಲ್ದಾಣ ನಿರ್ವಹಣೆ ಮಾಡಲಿಕ್ಕೆ ಯಾವ ಅನುಭವ ಬೇಕಾಗಿಲ್ಲ ಅಂತ ಕಾಯಿದೆ ಬದಲಿಸಿ ಅದಾನಿ ಅಣ್ಣಾ ಅವರಿಗೆ ಕೊಟ್ಟಾರ. ತಮಗ ಸಿಕ್ಕ ಗುತ್ತಿಗೆಯನ್ನು ಅವರು ಜರ್ಮನಿ ಕಂಪನಿಗೆ ಕೊಟ್ಟರು. ವಿಮಾನ ತಯಾರಿ ಅನುಭವ ಇಲ್ಲದ ಅನಿಲ್ ಅಣ್ಣಾ ಅವರ ಇನ್ನೂ ಹಲ್ಲು ಮೂಡದ ಕಂಪನಿಗೆ ಯುದ್ಧ ವಿಮಾನ ತಯಾರಿ ಜವಾಬ್ದಾರಿ ಕೊಟ್ಟಾರ. ಅವರು ಇನ್ನೂ ವಿಮಾನದ ಗಾಲಿಸಹಿತ ಮಾಡಿಲ್ಲ.

ಸದಾ ಲಾಭದಲ್ಲಿ ಇರುವ, ಸುಮಾರು ಆರು ಲಕ್ಷ ಕೋಟಿ ಮೌಲ್ಯದ ಭಾರತ ಪೆಟ್ರೋಲಿಯಂ ಕಂಪನೀನ ಬರೆ ಒಂದು ಲಕ್ಷ ಕೋಟಿಗೆ ಮಾರಲಿಕ್ಕೆ ಇಟ್ಟಾರ. ಏರ್ ಇಂಡಿಯಾ ಮಾರಾಟ ಮಾಡಬೇಕು ಅಂತ ಹೇಳಿ ಅದರ ಮೇಲಿನ ಸಾಲ ಇನ್ನೊಂದು ಕಂಪನಿಗೆ ವರ್ಗಾವಣೆ ಮಾಡಿಬಿಟ್ಟಾರ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ರಾಜಸ್ತಾನದೊಳಗ ಮದ್ದಾನಿ ಕಂಪನಿಗಳು ಆಹಾರ ಸಂಗ್ರಹ, ಸಂಸ್ಕರಣೆ, ಸಾಗಾಣಿಕೆಯ ಸಗಟು ಹಾಗೂ ಚಿಲ್ಲರೆ ಮಾರಾಟ ಕಂಪನಿಗಳನ್ನ ಶುರು ಮಾಡಿ ವ್ಯವಹಾರ ಮಾಡಲಿಕ್ಕೆ ಹತ್ತಿಬಿಟ್ಟಾವು.

ಇವು ಈಗ ಆಗಿ ಹೋದ ಮಾತುಗಳು. ಇನ್ನೂ ಮುಂದ ಏನು ಏನು ಬರ್ತದ ಅಂತ ನೋಡೋಣ.

ಯೋಜನಾ ಆಯೋಗದ ಸಮಾಧಿ ಮ್ಯಾಲೆ ಕಟ್ಟಿರುವ ಎರಡು ಅಂತಸ್ತಿನ ಕಟ್ಟಡದೊಳಗ ಇರೋ ನೀತಿ ಆಯೋಗದ ಸಲಹಾ ಸಮಿತಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳನ್ನ ಖಾಸಗೀಕರಣ ಮಾಡಬೇಕು ಅಂತ ಹೇಳಿಬಿಟ್ಟದ. ಇದು ಲಗುನ ಲಾಗು ಆಗಬಹುದು. ತಮ್ಮ ಜೀವನದೊಳಗ ಒಂದು ಸಲಾನೂ ಸರ್ಕಾರಿ ಆಸ್ಪತ್ರೆಗೆ ಹೋಗದೆ ನಿವೃತ್ತಿ ಆದ ಮಧ್ಯಮ ವರ್ಗದವರಿಗೆ ಇದು ಸರಿ ಅಂತ ಅನ್ನಿಸಲೂಬಹುದು.

PC: Indian Education Dairy, (ಎನ್‌ಇಪಿ)

ಭಾರತದ ಇತಿಹಾಸದೊಳಗ ಮೊದಲ ಬಾರಿಗೆ ಶಿಕ್ಷಣ ಆಯೋಗ ನೇಮಿಸದೆ ತಯಾರು ಮಾಡಿದ ಹೊಸ ಶಿಕ್ಷಣ ನೀತಿಯೊಳಗ (ಹೊಶಿನೀ-ಎನ್‌ಇಪಿ) ಒಂದು ಮಾತು ಅದ. ಈಗ ದೇಶದೊಳಗ ಸುಮಾರು 50,000 ಉನ್ನತ ಶಿಕ್ಷಣ ಸಂಸ್ಥೆಗಳು ಅದಾವು. ಇದು ಭಾಳ ಜಾಸ್ತಿ ಆತು. ಇಷ್ಟೇನು ಬ್ಯಾಡ. ಇವು 2025ರೊಳಗೆ 15,000 ಇದ್ದರ ಸಾಕು. ಎಲ್ಲ ಕ್ಷೇತ್ರದಂತೆ ಶಿಕ್ಷಣದೊಳಗ ಸಹಿತ ಖಾಸಗಿ ಸಹಭಾಗಿತ್ವದಾಗ ಸರಕಾರ ಕೆಲಸ ಮಾಡಬೇಕು. ವಿಶ್ವವಿದ್ಯಾಲಯಗಳು ಸಂಲಗ್ನತೆ, ಮೇಲುಸ್ತುವಾರಿ ಎಲ್ಲಾ ಬಿಟ್ಟು, ಬರೆ ಸಂಶೋಧನೆ – ಸೆಮಿನಾರು, ಮಣ್ಣು ಮಸಿ ಅಂತ ವಿಶೇಷ ಕೆಲಸ ಮಾಡಬೇಕು. ಕಾಲೇಜುಗಳಿಗೆ ಸ್ವಾಯತ್ತತೆ ಕೊಡಬೇಕು ಅಂತ ಹೇಳಿದ್ದಾರ.

ಹೊಶಿನೀ ಆಣತಿಯಂತೆ ನಮ್ಮ ಉನ್ನತ ಶಿಕ್ಷಣ ಸಚಿವ ಚಿಕ್ಕಲ್ಯ ನಾರಾಯಣಪ್ಪ ಅಶ್ವಥನಾರಾಯಣ ಅವರು ನಾವು ಪಿಯುಸಿಯಿಂದ ಹಿಡಿದು ಸ್ನಾತಕೋತ್ತರದವರೆಗೆ ಎಲ್ಲರಿಗೂ ಸ್ವಾಯತ್ತತೆ ಕೊಡ್ತೇವಿ ಅಂತ ಹೇಳಿದ್ದಾರ.

ಸ್ವಾಯತ್ತ ಕಾಲೇಜುಗಳು ತಮಗೆ ಇಷ್ಟ ಬಂದ್ ಹಂಗ ಶುಲ್ಕ ವಸೂಲು ಮಾಡಬಹುದು. ತಮಗೆ ತಿಳಿದ ರೀತಿಯಲ್ಲಿ ಪರೀಕ್ಷೆ ನಡೆಸಬಹುದು. ಅವರ ಮೇಲೆ ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ಮಂಡಳಿ ಉಸ್ತುವಾರಿ ಮಾಡೋ ಹಂಗ ಇಲ್ಲ. ಸರಕಾರ ನೀಡಿದ ಚೌಕಟ್ಟಿನ ಒಳಗ ಅವರು ಇದ್ದರ ಸಾಕು ಅನ್ನೋದು ನಿಯಮ.

ಇದು ಉಳ್ಳವರಿಗೆ ಸರಿಯಾಗಬಹುದು. ಇಲ್ಲದವರಿಗೆ? ಬಿಜೆಪಿ ಅವರು ವಿರೋಧ ಪಕ್ಷದೊಳಗ ಇದ್ದಾಗ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ನಿಯಂತ್ರಿಸಬೇಕು ಅಂತ ಹೇಳ್ತಾ ಇದ್ದರು. ಹಿಂದೊಮ್ಮೆ ಬಿಜೆಪಿ ನಾಯಕರೊಬ್ಬರು ಬೆಂಗಳೂರಿನಾಗ ಡೊನೇಶನ್ ವಿರುದ್ಧ ಚಳವಳಿ ಮಾಡಿದ್ದರು. ಅಲ್ಲೆ “ಜಾಲಪ್ಪ-ಶಿವಶಂಕರಪ್ಪ ರೊಕ್ಕ ಎಲ್ಲಿಂದ ತರ್ಲೇಪ್ಪ” ಅಂತ ಘೋಷಣೆ ಕೂಗಿದ್ದರು. ಅದು ಹಿಟ್ಟು ಅಗಿಬಿಟ್ಟು ಎಲ್ಲಾ ಕಡೆ ಸುತ್ತಾಡಿತ್ತು. ತಾವು ಅಧಿಕಾರಕ್ಕ ಬಂದಾಗ ಅವರು ಘೋಷಣೆ ಬದಲು ಮಾಡಿಬಿಟ್ಟಾರ.

ಸರಕಾರ ಕಮ್ಮಿ ಕೆಲಸ ಮಾಡಬೇಕು. ಖಾಸಗಿ ಸಹಭಾಗಿತ್ವ ಹೆಚ್ಚಬೇಕು. ಇದು ಪಂಥ ಪ್ರಧಾನ ಸೇವಕರ ಕನಸು ಅಂತ ಸಚಿವ ಗಡ್ಕರಿ ಅವರು ಹೇಳಿದ್ದಾರ. ಖಾಸಗೀಕರಣದ ಕನಸು ಕಂಡ ಭಾಳ ಜನ ಪ್ರಧಾನಿ- ರಾಷ್ಟ್ರಪತಿಗಳು ಇತಿಹಾಸದೊಳಗ ಬಂದುಹೋಗಿಬಿಟ್ಟಾರ. ಅವರೊಳಗ ಒಬ್ಬರ ನೆನಪು ಮಾಡಿಕೊಳ್ಳೋಣ.

PC : Biography, (ಮಾರ್ಗರೆಟ್ ಹಿಳದಾ ಥ್ಯಾಚರ)

ಮಾರ್ಗರೆಟ್ ಹಿಳದಾ ಥ್ಯಾಚರ ಅವರು ಎಪ್ಪತ್ತು-ಎಂಬತ್ತರ ದಶಕದೊಳಗ ಬ್ರಿಟನ್ನು ಹಾಗೂ ಉತ್ತರ ಐರ್ಲೆಂಡ್‌ನ ಪ್ರಧಾನಿ ಆಗಿದ್ದರು. ಅವರು ನೀರು, ವಿದ್ಯುತ್, ರೈಲು, ಆಹಾರ ಪೂರೈಕೆ, ಕಬ್ಬಿಣ ಮತ್ತು ಅದಿರು, ಅರಣ್ಯ ನಿರ್ವಹಣೆ, ನದಿ ನೀರು ನಿರ್ವಹಣೆ, ರಸ್ತೆ-ಕಟ್ಟಡ-ಅಣೆಕಟ್ಟು ನಿರ್ಮಾಣ ಎಲ್ಲವನ್ನೂ ಖಾಸಗೀಕರಣ ಮಾಡಿದರು. ಇಡೀ ವಿಶ್ವದಲ್ಲಿಯೇ ಮೊದಲ ಖಾಸಗಿ ಜೈಲು ಉದ್ಘಾಟನೆ ಮಾಡಿದ ನಾಯಕರು ಅವರು. ಉಕ್ಕಿನ ಮಹಿಳೆ ಅನ್ನುವ ಬಿರುದು ಪಡೆದ ಅವರು ಯುವ ವಯಸ್ಸಿನಲ್ಲಿ ರಸಾಯನ ಶಾಸ್ತ್ರ ವಿಜ್ಞಾನಿಯಾಗಿ ಕೆಲಸ ಮಾಡಲಿಕ್ಕೆ ಇಂಪೆರಿಯಲ್ ಕೆಮಿಕಲ್ ಅನ್ನೋ ಕಂಪನಿಗೆ ಆರ್ಜಿ ಹಾಕಿದರು. ಅವರು ಇವರನ್ನು ಸಂದರ್ಶಿಸಿದರು ಆದರೆ ಕೆಲಸ ಕೊಡಲಿಲ್ಲ. ಆ ಸಂದರ್ಶನದ ವಿವರ ಬಹಿರಂಗ ಆದ ಮ್ಯಾಲೆ ಗೊತ್ತಾಯತು. ಅಲ್ಲಿನ ಸಂದರ್ಶಕ ಮಂಡಳಿಯೊಳಗ ಇದ್ದ ಮನೋವಿಜ್ಞಾನಿಯೊಬ್ಬರು, ಈ ಯುವತಿ ‘ತುಂಬ ಹಠಮಾರಿ, ದುರಾಗ್ರಹಿ ಹಾಗೂ ತಾನೇ ಸರ್ವಸ್ವ ಎನ್ನುವ ಸ್ವಭಾವದವಳು. ಇವರು ಒಂದು ತಂಡದ ಸದಸ್ಯರಾಗಿ ಕೆಲಸ ಮಾಡುವುದು ಕಷ್ಟ’ ಅಂತ ವರದಿ ನೀಡಿದ್ದರು.

ಥ್ಯಾಚರ ಬಗ್ಗೆ ಇನ್ನೊಂದು ಜೋಕು ಇದೆ. ಅದು ‘ದಿ ವೆಜಿಟೆಬಲಸ್’ ಅನ್ನುವ ಸಿಟ್ ಕಾಂ ಟಿವಿ ಕಾರ್ಯಕ್ರಮದೊಳಗ ಬಂದಿತ್ತು. ಪ್ರಧಾನಿ ಥ್ಯಾಚರ ಅವರು ತಮ್ಮ ಸಂಪುಟ ಸದಸ್ಯರನ್ನ ಹೊಟೇಲ್‌ಗೆ ಊಟಕ್ಕ ಕರಕೊಂಡು ಹೋಗತಾರ. ಅಲ್ಲೆ ವೇಟರ್ ಬಂದು ನೀವು ಏನು ತೊಗೊಳ್ಳುತ್ತೀರಿ ಅಂತ ಕೇಳಿದಾಗ ಫಿಶ್ ಹಾಗೂ ಚಿಪ್ಸ್ ಅಂತ ಹೇಳತಾರ. ಆ ವೇಟರ್ (‘ಅಂಡ್ ದಿ ವೆಜಿಟೆಬಲಸ್’) ಮತ್ತೆ ತರಕಾರಿಗಳು ಅಂತ ಕೇಳತಾನ. ಅಂದ್ರ ನೀವು ಎನರ ತರಕಾರಿ-ಸೂಪು- ಸಾಸು ತೊಗೋತೀರಾ ಅಂತ. ಆಗ ಥ್ಯಾಚರ ಅವರು ಅವರಿಗೂ ಅದನ್ನೇ ಕೊಡರಿ. ಅವರ ಕಡೆ ಇಂಥ ಸಣ್ಣ ನಿರ್ಧಾರ ತೊಗೊಳ್ಳಲಿಕ್ಕೆ ಸಹಿತ ಆಗೋದಿಲ್ಲ ಅಂತ ಆರ್ಡರ್ ಮಾಡತಾರ.

ಇದರಾಗ ಜೋಕು ಎನಪ ಅಂದ್ರ ಯೂರೋಪಿನಾಗ ಸ್ವಂತ ವಿಚಾರ ಶಕ್ತಿ ಇಲ್ಲದ – ಬೇರೆಯವರ ಕೈಗೊಂಬೆ ಅಗಿರೋ ಮನುಷ್ಯರಿಗೆ ವೆಜಿಟೆಬಲಸ್ ಅಂತ ಕರಿತಾರ.

ಯೂರೋಪಿನವರಗಿಂತ ಹೆಚ್ಚು ತರಕಾರಿ ತಿನ್ನೋ ನಮಗೆ ಈ ಜೋಕು ಸರಳವಾಗಿ ಅರ್ಥ ಆಗಬಹುದೇ ಮನೋಲ್ಲಾಸಿನಿ?


ಇದನ್ನೂ ಓದಿ: ಉಪಸಭಾಪತಿ ಧರ್ಮೇಗೌಡರನ್ನು ಕೊಂದವರಾರು?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...