Homeಮುಖಪುಟಐತಿಹಾಸಿಕ ಕಾಗೋಡು ಸತ್ಯಾಗ್ರಹಕ್ಕೆ 70 ವರ್ಷ: ನಾಳೆ ಸ್ಮರಣಾ ಸಮಾವೇಶ

ಐತಿಹಾಸಿಕ ಕಾಗೋಡು ಸತ್ಯಾಗ್ರಹಕ್ಕೆ 70 ವರ್ಷ: ನಾಳೆ ಸ್ಮರಣಾ ಸಮಾವೇಶ

ಮೇಲ್ಜಾತಿ ಜಮೀನ್ದಾರಿ ಭೂಮಾಲೀಕರು, ಅವರ ಪರವಿದ್ದ ಸರ್ಕಾರಿ ವ್ಯವಸ್ಥೆಯ ವಿರುದ್ಧ ಸಾಮಾನ್ಯ ಗೇಣಿದಾರ ರೈತರ ಸ್ವಾಭಿಮಾನಿ ಹೋರಾಟವೇ ಕಾಗೋಡು ಸತ್ಯಾಗ್ರಹ.

- Advertisement -
- Advertisement -

ರೈತ ಚಳವಳಿಗೆ ಹೊಸ ಹುರುಪು, ಸ್ವಾಭಿಮಾನ ತುಂಬಿದ ಚಾರಿತ್ರಿಕ ಕಾಗೋಡು ಸತ್ಯಾಗ್ರಹಕ್ಕೆ 70 ವ‍ರ್ಷ ತುಂಬುತ್ತಿರುವ ನೆನೆಪಿನಲ್ಲಿ ಏಪ್ರಿಲ್ 18ರ ಭಾನುವಾರ ಶಿವಮೊಗ್ಗ ಜಿಲ್ಲೆಯ ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದ ಆವರಣದಲ್ಲಿ ಸ್ಮರಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಐತಿಹಾಸಿಕ ಕಾಗೋಡು ಸತ್ಯಾಗ್ರಹದ ಸ್ಮರಣಾರ್ಥ ‘ರೈತ ಚಳವಳಿ – ರಾಜಕಾರಣ ಮುಂದಣ ಹೆಜ್ಜೆ’ ವಿಷಯದ ಕುರಿತು ಸಮಾಲೋಚನಾ ಸಮಾವೇಶವನ್ನು ಕಾಗೋಡು ರೈತ ಚಳವಳಿ ಸಂಸ್ಮರಣಾ ಸಮಿತಿ ಮತ್ತು ಡಾ.ರಾಮಮನೋಹರ ಲೋಹಿಯಾ ಟ್ರಸ್ಟ್‌(ರಿ) ಜಂಟಿಯಾಗಿ ಆಯೋಜಿಸಿವೆ.

ಸಮಾವೇಶದಲ್ಲಿ ರಾಷ್ಟ್ರೀಯ ರೈತ ನಾಯಕರಾದ ಪ್ರೊ.ಯೋಗೇಂದ್ರ ಯಾದವ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪ, ಹಿರಿಯ ಸಮಾಜವಾದಿ ನಾಯಕ ಬಿ.ಆರ್ ಪಾಟೀಲ್, ರೈತ ನಾಯಕರಾದ ಚಾಮರಸ ಮಾಲಿ ಪಾಟೀಲ್, ಹಿರಿಯ ರೈತ ನಾಯಕ ಬಾಬಾಗೌಡ ಪಾಟೀಲ, ರೈತ ನಾಯಕರಾದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ಎಸ್.ಆರ್ ಹಿರೇಮಠ್, ಕೃಷಿ ಬೆಲೆ ನಿಗಧಿ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಪ್ರಕಾಶ್ ಕಮ್ಮರಡಿ ಭಾಗವಹಿಸುವರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏನಿದು ಕಾಗೋಡು ಸತ್ಯಾಗ್ರಹ?

ಮೇಲ್ಜಾತಿ ಜಮೀನ್ದಾರಿ ಭೂಮಾಲೀಕರು ಹಾಗೂ ಅವರ ಪರವಿದ್ದ ಸರ್ಕಾರಿ ವ್ಯವಸ್ಥೆಯ ವಿರುದ್ಧ ತೀರಾ ದುರ್ಬಲ ವರ್ಗದ ಸಾಮಾನ್ಯ ಗೇಣಿದಾರ ರೈತರ ಆ ಸ್ವಾಭಿಮಾನಿ ಹೋರಾಟವೇ ಕಾಗೋಡು ಸತ್ಯಾಗ್ರಹ. ಜಮೀನ್ದಾರಿ ಭೂ ಮಾಲೀಕ ವರ್ಗದ ವಿರುದ್ಧದ ಜಾಗತಿಕ ಖ್ಯಾತಿಯ ನಕ್ಸಲ್ ಬಾರಿ ಕ್ರಾಂತಿ ದೂರದ ಪಶ್ಚಿಮಬಂಗಾಳದಲ್ಲಿ ನಡೆಯುವುದಕ್ಕೆ ಸುಮಾರು ಒಂದೂವರೆ ದಶಕಕ್ಕೆ ಮುನ್ನವೇ ಮಲೆನಾಡಿನ ಸಾಗರದಲ್ಲಿ ನಡೆದ ಭೂಮಾಲೀಕರ ವಿರುದ್ಧದ ರೈತರ ಈ ರಕ್ತರಹಿತ ಕ್ರಾಂತಿ, ದೇಶದ ಭೂ ಸುಧಾರಣಾ ಕಾಯ್ದೆಗಳಿಗೆ ಪ್ರೇರಣೆಯಾದ ಮಹತ್ವದ ಚಾರಿತ್ರಿಕ ಘಟನೆ.

ಭೂಮಾಲೀಕರ ಒಡೆತನದ ಭೂಮಿಯನ್ನು ವರ್ಷಪೂರ್ತಿ ಉತ್ತಿಬಿತ್ತಿ ಬೆಳೆದರೂ ಬಂದ ಫಸಲಿನಲ್ಲಿ ನ್ಯಾಯಯುತ ಪಾಲು ಸಿಗದೆ, ಜೊತೆಗೆ ಭೂಮಿಯ ಒಡೆಯರ ದಬ್ಬಾಳಿಕೆ ಮತ್ತು ದೌರ್ಜನ್ಯದಿಂದ ರೋಸಿ ಹೋದ ಗೇಣಿದಾರರು, ಹಳ್ಳಿಯ ಬಡ ಶಾಲಾ ಮಾಸ್ತರರೊಬ್ಬರ ಪ್ರೇರಣೆಯಿಂದ ಸಿಡಿದೆದ್ದು, ಇಡೀ ದೇಶದಲ್ಲೇ ಮೊದಲ ಬಾರಿಗೆ ‘ಉಳುವವನೇ ಹೊಲದೊಡೆಯ’ ಎಂಬ ಸಮಾಜವಾದಿ ಆಶಯದ ಕಾಯ್ದೆ ಜಾರಿಗೆ ಕಾರಣವಾದ ಕಾಗೋಡು ಸತ್ಯಾಗ್ರಹವನ್ನು ಆರಂಭಿಸಿದ್ದು 1951ರ ಏಪ್ರಿಲ್ 18ರಂದು!

ಕರ್ನಾಟಕದಲ್ಲಿ ರೈತ ಸಂಘ ಎಂಬ ಅಧಿಕೃತ ರೈತ ಸಂಘಟನೆಯನ್ನು ಕಟ್ಟಿದ ಹೆಗ್ಗಳಿಕೆಯ ಎಚ್ ಗಣಪತಿಯಪ್ಪ ಎಂಬ ಅಂದಿನ ಯುವ ಶಿಕ್ಷಕ, ಆ ಸಂಘದ ಮೂಲಕವೇ ಕಾಗೋಡು ಚಳವಳಿಯ ಕ್ರಾಂತಿಯ ಕಹಳೆ ಮೊಳಗಿಸಿದರು. ರೈತರ ಬಂಡಾಯವಾಗಿ ಆರಂಭವಾದ ಜಮೀನ್ದಾರರ ವಿರುದ್ಧದ ಹೋರಾಟಕ್ಕೆ ಸತ್ಯಾಗ್ರಹದ ಆಯಾಮ ನೀಡಿ, ಅಹಿಂಸಾ ಚೌಕಟ್ಟಿನಡಿ ಶಿಸ್ತುಬದ್ಧ ಚಳವಳಿಯಾಗಿ ರೂಪಿಸಿದವರು ಸಮಾಜವಾದಿ ಹೋರಾಟಗಾರ ಮತ್ತು ದೇಶದ ಅಪರೂಪದ ರಾಜಕಾರಣಿ ಶಾಂತವೇರಿ ಗೋಪಾಲಗೌಡರು. ಶಾಂತವೇರಿ ಗೋಪಾಲಗೌಡ, ಎಚ್ ಗಣಪತಿಯಪ್ಪ ಮುಂತಾದ ಹತ್ತಾರು ನಾಯಕರು ಸಮಾಜವಾದಿ ತಳಹದಿಯ ಮೇಲೆ ಚಳವಳಿಗೆ ಒಂದು ತಾತ್ವಿಕ ಚೌಕಟ್ಟು ರೂಪಿಸಿ ವಿಸ್ತರಿಸಿದ ಹೋರಾಟವನ್ನು ರಾಷ್ಟ್ರ ರಾಜಕಾರಣದ ಚರ್ಚೆಯ ವಸ್ತುವಾಗಿ ಪರಿವರ್ತಿಸಿದ್ದು ರಾಮ ಮನೋಹರ ಲೋಹಿಯಾ ಅವರ ಭಾಗವಹಿಸುವಿಕೆ.

ಹೋರಾಟದ ರೂವಾರಿ ಎಚ್ ಗಣಪತಿಯಪ್ಪ ಅವರೇ ಒಂದು ಕಡೆ ಹೇಳಿಕೊಂಡಂತೆ, “ಆಗ ಜಾರಿಯಲ್ಲಿದ್ದ ಗೇಣಿ ಪದ್ಧತಿಯ ಪ್ರಕಾರ, ಒಡೆಯ ಎಷ್ಟು ಗೇಣಿ ನಿರ್ಧರಿಸುತ್ತಾನೋ ಅಷ್ಟನ್ನು ತಕರಾರಿಲ್ಲದೆ ಕೊಡಬೇಕಿತ್ತು. ಗೇಣಿ ಕೊಟ್ಟಿದ್ದಕ್ಕೆ ರಶೀದಿ ಕೇಳುವಂತಿರಲಿಲ್ಲ. ಗೇಣಿದಾರರು ತಾವು ಸಾಗುವಳಿ ಮಾಡುವ ಭೂಮಿಗೆ ಅದರ ಒಡೆಯನ ಅನುಮತಿ ಇಲ್ಲದೆ ಪ್ರವೇಶಿಸುವಂತಿರಲಿಲ್ಲ. ಭೂಮಿ ಯಾವ ಕಾರಣಕ್ಕೂ ಗೇಣಿದಾರರ ಅಧೀನದಲ್ಲಿರುತ್ತಿರಲಿಲ್ಲ. ಯಾಕೆಂದರೆ ಭೂಮಿಯ ಸಾಗುವಳಿದಾರನಿಗೆ ಅದರ ಒಡೆಯರು ಯಾವ ಕಾರಣಕ್ಕೂ ಕರಾರುಪತ್ರ ಬರೆದುಕೊಡುತ್ತಿರಲಿಲ್ಲ…”

ಎಚ್ ಗಣಪತಿಯಪ್ಪ

ತಾನೇ ಉತ್ತುಬಿತ್ತುವ ಭೂಮಿಯ ಮೇಲೆ ಒಂದಿನಿತೂ ಹಕ್ಕು ಇರದ ರೈತ, ಅಕ್ಷರಶಃ ಜೀತದಾಳುವಿನಂತೆ ದುಡಿದು ಒಡೆಯರ ಸಂಪತ್ತಿನ ಕಣಜ ತುಂಬಿಸಬೇಕಿತ್ತು. ಕೇವಲ ಭೂಮಿಯ ಹಕ್ಕು ಮತ್ತು ದುಡಿಮೆಯ ಕುರಿತ ಆರ್ಥಿಕ ಸಂಗತಿಯಷ್ಟೇ ಅಲ್ಲದೆ, ಈ ಪದ್ಧತಿಯಲ್ಲಿ ಲಿಂಗಾಯಿತ, ಬ್ರಾಹ್ಮಣ ಮುಂತಾದ ಮೇಲ್ಜಾತಿ ಒಡೆಯರು ಮತ್ತು ಪ್ರಮುಖವಾಗಿ ದೀವರು ಮತ್ತಿತರ ಕೆಳಜಾತಿಯ ನಡುವೆ ಸಾಕಷ್ಟು ಸಾಮಾಜಿಕ ದಬ್ಬಾಳಿಕೆ, ಕಟ್ಟುಪಾಡು, ಶೋಷಣೆಯ ವರಸೆಗಳೂ ಚಾಲ್ತಿಯಲ್ಲಿದ್ದವು.

ಗೇಣಿ ಭತ್ತ ಪಡೆಯುವಾಗ ಒಂದು ಅಳತೆಯ ಕೊಳಗ (ಭತ್ತ ಮುಂತಾದ ದವಸಧಾನ್ಯ ಅಳತೆ ಸಾಧನ), ಗೇಣಿದಾರರಿಗೆ ಸಾಲವಾಗಿ ಭತ್ತ ಕೊಡುವಾಗ ಒಂದು ಅಳತೆಯ ಕೊಳಗ ಬಳಸುತ್ತಿದ್ದರು. ಬಿಟ್ಟಿ ದುಡಿಮೆ, ತೊಟ್ಟಿಲ ಮಗುವಾದರೂ ಒಡೆಯರ ಮನೆಮಂದಿಗೆ ಅಣ್ಣಯ್ಯ, ಅಕ್ಕಯ್ಯ ಎಂದೇ ಕರೆಯುವುದು, ಅಪ್ಪಿತಪ್ಪಿ ಒಡೆಯರ ಬಿಟ್ಟಿ ಕೆಲಸದ ನಡುವೆ ಅವರ ಮನೆಯ ಊಟ ಮಾಡುವುದಾದರೆ ಕೊಟ್ಟಿಗೆಯಲ್ಲಿ ಅಥವಾ ಅವರ ನಾಯಿ ಕಟ್ಟುವ ಜಾಗದಲ್ಲಿ ಊಟ ಮಾಡುವುದು, ಅದೂ ಬಾಳೆ ಎಲೆಯಲ್ಲಿ ಉಂಡ ಬಳಿಕ ಆ ಜಾಗವನ್ನು ಗಂಜಲ ಹಾಕಿ ಸಾರಿಸಬೇಕು ಎಂಬ ಅಲಿಖಿತ ನಿಯಮಗಳಿದ್ದವು. ಈ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕಟ್ಟಿ ಹಾಕಿ ಛಡಿ ಏಟು ಕೊಡಲಾಗುತ್ತಿತ್ತು. ಮೊಳಕಾಲಿನ ಕೆಳಗೆ ಗಂಡಸರು ಪಂಚೆ ಅಥವಾ ಹೆಂಗಸರು ಸೀರೆ ಉಡುವುದನ್ನು ಕಂಡರೆ ಒಡೆಯರ ಕಣ್ಣು ಕೆಂಪಾಗುತ್ತಿದ್ದವು. ಚಪ್ಪಲಿ ತೊಟ್ಟು ಒಡೆಯರ ಎದುರು ಓಡಾಡುವಂತಿರಲಿಲ್ಲ.

ಅಂತಹ ಜಮೀನ್ದಾರಿ ಅಟ್ಟಹಾಸದ ಪರಿಸ್ಥಿತಿಯಲ್ಲಿ, ಸಾಗರ ತಾಲೂಕಿನ ಕಾಗೋಡು ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಭರವಸೆಯೇ ಉಡುಗಿಹೋಗಿದ್ದ ಗೇಣಿದಾರರಲ್ಲಿ ಹೋರಾಟದ ಕೆಚ್ಚನ್ನು ಮೂಡಿಸಿ, ಸಂಘಟಿಸಿ ದೇಶದ ರೈತರ ಪಾಲಿನ ವರವಾದ ಭೂ ಸುಧಾರಣಾ ಕಾಯ್ದೆಗೆ ಕಾರಣವಾಗುವ ಚಳವಳಿಯನ್ನು ಕಟ್ಟಿದ್ದು ಗಣಪತಿಯಪ್ಪನವರ ಸಾಧನೆ. ಅವರೇ ಹೇಳಿಕೊಂಡಂತೆ, ಕಾಗೋಡು ಪಕ್ಕದ ಹಿರೇನೆಲ್ಲೂರಿನಲ್ಲಿ 1947-48ರಲ್ಲಿ ಕಾಣಿಸಿಕೊಂಡ ಜ್ವರ ಮತ್ತಿತರ ಕಾಯಿಲೆಗಳಿಗೆ ದೇವರು ಮುನಿದಿರುವುದೇ ಕಾರಣ ಎಂದು ಊರಿನ ಈಶ್ವರ ದೇವರ ಭಿನ್ನ ಲಿಂಗವನ್ನು ತೆಗೆದು, ಹೊಸ ಲಿಂಗ ಪ್ರತಿಷ್ಠಾಪಿಸಲು ಗ್ರಾಮದ ಒಡೆಯರು ಮತ್ತು ಅವರ ಗೇಣಿದಾರ ಒಕ್ಕಲು ನಿರ್ಧರಿಸಿದರು. ಉತ್ಸವಕ್ಕೆ ಸಿದ್ಧತೆಗಳು ನಡೆದು ಎಲ್ಲರೂ ಹಣ ಮತ್ತು ಧವಸಧಾನ್ಯ ನೀಡಿದರು. ಹಾಗೇ ನೀಡಿದ್ದರಲ್ಲಿ ಊರಿನ ಹತ್ತು ಮಂದಿ ಒಡೆಯರಿಗಿಂತ ಅರವತ್ತು-ಎಪ್ಪತ್ತು ಗೇಣಿದಾರರ ಪಾಲೇ ಹೆಚ್ಚಿತ್ತು.

ರಾಮಮನೋಹರ ಲೋಹಿಯಾ

ಆದರೆ, ಉತ್ಸವದ ಆಹ್ವಾನಪತ್ರಿಕೆಯಲ್ಲಿ ಮಾತ್ರ ವೀರಶೈವ ಮಂಡಳಿ ಎಂದು ಅಚ್ಚು ಹಾಕಿಸಲಾಗಿತ್ತು. ಅದು ಅನ್ಯಾಯ ಎಂದು ಗಣಪತಿಯಪ್ಪನವರಿಗೆ ಅನಿಸಿತು. ಕೂಡಲೇ ಗ್ರಾಮದ ಗೇಣಿದಾರರಲ್ಲೇ ಒಂದಿಷ್ಟು ಮುಂದಾಳತ್ವ ವಹಿಸಿದ್ದ ಬರಸಿನ ದ್ಯಾವಪ್ಪ, ಕಳ್ಳಕುಡಿ ದ್ಯಾವನಾಯ್ಕ, ಸಿರೆನ್ ತಿಮ್ಮಾ ನಾಯ್ಕ ಮತ್ತು ಗುತ್ತಿ ಕರಿಯಾ ನಾಯ್ಕರನ್ನು ಭೇಟಿ ಮಾಡಿ, ಒಡೆಯರ ಪ್ರಕಾರ ಈ ಉತ್ಸವ ಕೇವಲ ಅವರೇ ಮಾಡುತ್ತಿರುವುದಾಗಿದೆ. ಆದರೆ, ಅದಕ್ಕೆ ಹಣ-ಧವಸಧಾನ್ಯವನ್ನು ಅವರಿಗಿಂತ ನೀವೇ ಹೆಚ್ಚು ಕೊಟ್ಟಿದ್ದೀರಿ, ಇದು ಅನ್ಯಾಯವಲ್ಲವೆ? ಎಂದು ಪ್ರಶ್ನಿಸಿ, ಅವರ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು. ಆದರೆ, ಏಕಾಏಕಿ ಒಡೆಯರ ಎದುರು ನಿಂತು ಇದು ನ್ಯಾಯವೇ ಎಂದು ಕೇಳುವ ಧೈರ್ಯವಾಗಲೀ, ಅಂತಹ ಸಾಮಾಜಿಕ ಅವಕಾಶವಾಗಲೀ ಆ ಬಡ ಗೇಣಿದಾರರಿಗೆ ಇರಲಿಲ್ಲ.

ಆಗ ಗಣಪತಿಯಪ್ಪನವರು ಅದೇ ಆಹ್ವಾನಪತ್ರಿಕೆಯಲ್ಲಿ ವೀರಶೈವ ಮಂಡಳಿ ಎಂಬುದನ್ನು ಕಿತ್ತುಹಾಕಿ, ಆ ಜಾಗದಲ್ಲಿ ದೀವರ ಮಂಡಳಿ ಎಂದು ಬದಲಾಯಿಸಿ ಗೇಣಿದಾರರು ತಮ್ಮ ನೆಂಟರಿಷ್ಟರಿಗೆ ಕೊಟ್ಟು ಆಹ್ವಾನಿಸಲು ಹೇಳಿದರು. ಈ ಘಟನೆಯನ್ನೇ ದೀವರ ಸಮುದಾಯದ ಗೇಣಿದಾರರಲ್ಲಿ ಸ್ವಾಭಿಮಾನದ ಕೆಚ್ಚು ಹೊತ್ತಿಸಲು ಬಳಸಿಕೊಂಡು ಅವರು, ಆ ಕಾಲದಲ್ಲೇ ಸುಮಾರು ಹತ್ತು ಸಾವಿರ ಆಹ್ವಾನಪತ್ರಿಕೆ ಮುದ್ರಿಸಿ ಆ ಭಾಗದಲ್ಲೆಲ್ಲಾ ಹಂಚಿದರು!

ಸಹಜವಾಗಿಯೇ ಗೇಣಿದಾರರ ಈ ‘ಉದ್ಧಟತನ’ ಒಡೆಯರ ಆಕ್ರೋಶಕ್ಕೆ ಕಾರಣವಾಯಿತು. ಅವರ ‘ಸೊಕ್ಕನ್ನು’ ಮುರಿಯಲು ಒಡೆಯರೆಲ್ಲಾ ಒಟ್ಟಾಗಿ ಊರಿನ ನಟ್ಟನಡುವೆಯ ಗೇಣಿದಾರನೊಬ್ಬನ ಮನೆಗೆ ಬೆಂಕಿ ಇಡೀ ಕುಟುಂಬವನ್ನೇ ಸಜೀವ ದಹನ ಮಾಡಲು ಮುಂದಾದರು. ಆಗ ಗೇಣಿದಾರರೆಲ್ಲಾ ಒಗ್ಗೂಡಿ ಸಿಡಿದೆದ್ದು ಒಡೆಯರ ವಿರುದ್ಧ ತೋಳೇರಿಸಿ, ಹಿಮ್ಮೆಟ್ಟಿಸಿದರು! ಇದು ಇಡೀ ಸೀಮೆಯ ಒಡೆಯ ಮತ್ತು ಗೇಣಿದಾರರ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಒಂದು ಸಂಘಟಿತ ಪ್ರತಿರೋಧದ ಘಟನೆಯಾಯ್ತು. ಆ ಬಳಿಕ ಗಣಪತಿಯಪ್ಪ ಅವರಿಗೂ ಗೇಣಿದಾರರ ಮೇಲೆ ವಿಶ್ವಾಸ ಮೂಡಿತು ಮತ್ತು ಅದಕ್ಕಿಂತ ಮುಖ್ಯವಾಗಿ ಗೇಣಿದಾರರಿಗೆ ತಮ್ಮ ಸಂಘಟಿತ ಬಲದ ಮೇಲೆ ಸ್ವತಃ ನಂಬಿಕೆ ಹುಟ್ಟಿತು. ಅದೇ ಪ್ರತಿರೋಧದ ಬಿಸಿಯಲ್ಲೇ 1948ರ ಜನವರಿ 4ರಂದು ಸಮೀಪದ ಮರತ್ತೂರಿನಲ್ಲಿ ಬೃಹತ್ ಗೇಣಿದಾರ ರೈತರ ಸಮಾವೇಶ ಸಂಘಟಿಸಿ, ಅಂದೇ ‘ಸಾಗರ ತಾಲೂಕು ರೈತ ಸಂಘ’ ವನ್ನು ಅಸ್ತಿತ್ವಕ್ಕೆ ತರಲಾಯಿತು!

ಮುಂದೆ ಇಡೀ ಕಾಗೋಡು ಚಳವಳಿಗೆ ಭೂಮಿಕೆ ಸಿದ್ಧಪಡಿಸಲು ಈ ರೈತ ಸಂಘವೇ ವೇದಿಕೆಯಾಯಿತು. 1951ರ ಏಪ್ರಿಲ್ ನಲ್ಲಿ ಕಾಗೋಡು ಗ್ರಾಮದಲ್ಲಿ ಸತ್ಯಾಗ್ರಹ ಆರಂಭಿಸುವವರೆಗೂ ಗೇಣಿದಾರರ ಸಂಘಟನೆ ಮೂಲಕ ಹೋರಾಟದ ಕಾವನ್ನು ಉಳಿಸಿಕೊಂಡು ಬಂದದ್ದು ಇದೇ ರೈತ ಸಂಘ. ಗಣಪತಿಯಪ್ಪ ಅವರಷ್ಟೇ ಅಲ್ಲದೆ, ಡಿ ಮೂಕಪ್ಪ ಮತ್ತಿತರ ನೇತೃತ್ವದಲ್ಲಿ, ಗೇಣಿ ಪದ್ಧತಿ ಶೋಷಣೆಯಿಂದ ರೈತರನ್ನು ಮುಕ್ತಗೊಳಿಸುವ ಉದ್ದೇಶದಿಂದ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ನಿರಂತರವಾಗಿ ಪ್ರತಿಗ್ರಾಮ ಮಟ್ಟದಲ್ಲಿ ಸಭೆ, ಸಮಾವೇಶ ನಡೆಸಿದ ಸಂಘದ ಚಟುವಟಿಕೆಗಳಿಗೆ ಶಾಂತವೇರಿ ಗೋಪಾಲಗೌಡರು ಮತ್ತು ಅವರ ಸಮಾಜವಾದಿ ಗೆಳೆಯರು ಬೆಂಬಲವಾಗಿ ನಿಂತರು.

ಶಾಂತವೇರಿ ಗೋಪಾಲಗೌಡರು

ಗೇಣಿ ನೀಡಿದ್ದಕ್ಕೆ ರಶೀದಿ ನೀಡಬೇಕು, ದೊಡ್ಡ ಕೊಳಗದಲ್ಲಿ ಗೇಣಿ ಕೊಡಲಾಗದು, ಬಿಟ್ಟಿ ದುಡಿಮೆ ಮಾಡುವುದಿಲ್ಲ, ಬೆಳೆ ನಷ್ಟವಾದರಲ್ಲಿ ಆ ವರ್ಷದ ಗೇಣಿ ಕೊಡಲಾಗದು ಎಂಬ ಗೇಣಿದಾರರ ವಾದಕ್ಕೆ, ಪ್ರತಿಯಾಗಿ ಒಡೆಯರು ದಬ್ಬಾಳಿಕೆ, ಬೆದರಿಕೆ ಮೂಲಕ ಪ್ರತ್ಯುತ್ತರ ನೀಡತೊಡಗಿದರು. ಸಾಗರ ತಾಲೂಕು ಹಿಡುವಳಿದಾರರ ಸಂಘ ಎಂಬ ಸಂಘಟನೆ ಮೂಲಕ ಭೂ ಮಾಲೀಕರು ಒಗ್ಗೂಡಿ ತಮ್ಮ ಪ್ರಭಾವ ಬಳಸಿ ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಂಡು ರೈತರ ಮೇಲೆ ದಬ್ಬಾಳಿಕೆ ನಡೆಸತೊಡಗಿದರು. ಆ ಮೂಲಕ ಶತಮಾನಗಳ ಗೇಣಿ ಪದ್ಧತಿಗೆ ಕಂಟಕಪ್ರಾಯವಾದ ಚಳವಳಿಯನ್ನು ಹತ್ತಿಕ್ಕುವುದು ಅವರ ಉದ್ದೇಶವಾಗಿತ್ತು.

ಆ ವರ್ಷದ ಏಪ್ರಿಲ್ 16ರಂದು ತಡಗಳಲೆ ಗ್ರಾಮದಲ್ಲಿ ರೈತ ಸಂಘದ ಸದಸ್ಯರಾಗಿದ್ದ ಗೇಣಿದಾರರಿಗೆ ಭೂಮಿಗೆ ಇಳಿಯಗೊಡದೆ, ಕೆಲಸಕ್ಕೆ ಹೋದ ಅವರ ಮೇಲೆ ಹಲ್ಲೆ ನಡೆಸಿ ಭೂ ಮಾಲೀಕರು ನೇಗಿಲು ನೊಗ ತುಂಡುತುಂಡಾಗಿ ಕತ್ತರಿಸಿ ಹಾಕಿದರು. ಸಂಘದ ಸೂಚನೆಯ ಹಿನ್ನೆಲೆಯಲ್ಲಿ ರೈತರು ಪ್ರತಿಹಿಂಸೆಗೆ ಇಳಿಯದೇ ತಾಳ್ಮೆ ವಹಿಸಿದರು. ಆದರೆ, ಈ ಘಟನೆ ಇಡೀ ಸೀಮೆಯ ರೈತರನ್ನು ರೊಚ್ಚಿಗೇಳಿಸಿತು. ಇನ್ನಷ್ಟು ಸಂಘಟಿತರಾಗಿ ಹೋರಾಡುವ ಪಣತೊಟ್ಟ ಗೇಣಿದಾರರು, ಮಾರನೇ ದಿನ ಸಾಗರ ಪಟ್ಟಣದಲ್ಲಿ ತುಂಡಾದ ನೇಗಿಲು-ನೊಗಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಾರನೇ ದಿನ, ಏಪ್ರಿಲ್ 18ರಂದು ಕಾಗೋಡು ಗ್ರಾಮದ ಒಡೆಯರ ಮಾಲೀಕತ್ವದ ಗೇಣಿ ಜಮೀನಿನಲ್ಲಿ ಸತ್ಯಾಗ್ರಹ ಆರಂಭವಾಯಿತು. ನೇಗಿಲು-ನೊಗ ಕಟ್ಟಿ ಎತ್ತುಗಳನ್ನು ಹೊಡೆದುಕೊಂಡು ಭೂಮಿ ಉಳುಮೆ ಮಾಡಲು ಹೋದ ರೈತರನ್ನು ಭೂ ಮಾಲೀಕರು ಮತ್ತು ಅವರ ಪರವಾಗಿದ್ದ ಪೊಲೀಸರು ಹೊಡೆದು- ಬಡಿದು ಹಿಮ್ಮೆಟ್ಟಿಸತೊಡಗಿದರು. ಒಂದಾದ ಮೇಲೆ ಒಂದು ತಂಡದಂತೆ ರೈತರು ನಿರಂತರವಾಗಿ ಭೂಮಿಗೆ ಪ್ರವೇಶಿಸಲು ಪ್ರಯತ್ನಿಸುತ್ತಲೇ ಇದ್ದರು. ಒಂದು ಹಂತದಲ್ಲಿ ಭೂ ಮಾಲೀಕರು ಮತ್ತು ಪೊಲೀಸರು ರೈತರ ಮೇಲೆ ಪ್ರಹಾರ ಆರಂಭಿಸಿದರು. ಪೊಲೀಸರ ಲಾಠಿ ಏಟಿಗೆ ನೂರಾರು ರೈತರು, ರೈತ ಮಹಿಳೆಯರು, ಮಕ್ಕಳು ಗಾಯಗೊಂಡರು.

ಆ ಬಳಿಕ ನಡೆದದ್ದು ಇತಿಹಾಸ. ನಂತರ ಶಾಂತವೇರಿ ಗೋಪಾಲಗೌಡರು, ರಾಮ ಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ, ಖಾದ್ರಿ ಶಾಮಣ್ಣ, ಕಡಿದಾಳು ಮಂಜಪ್ಪ, ಸಿಜಿಕೆ ರೆಡ್ಡಿ ಮುಂತಾದವರು ಹೋರಾಟಕ್ಕೆ ಚಳವಳಿಯ ಸ್ವರೂಪ ನೀಡಿದರು. ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ನಡೆದ ಚಳವಳಿ ಇಡೀ ಕರ್ನಾಟಕದ ರೈತಪರ, ಸಮಾಜವಾದಿ ನಾಯಕರು, ಬರಹಗಾರರು, ಚಿಂತಕರು ಮತ್ತು ಸಾಮಾಜಿಕ ಹೋರಾಟಗಾರರನ್ನು ಸೆಳೆಯಿತು. ಆರಂಭದಲ್ಲಿ ಭೂಮಾಲೀಕರ ಪರ ಇದ್ದ ಸರ್ಕಾರಗಳು ಕೂಡ ರಾಷ್ಟ್ರ ನಾಯಕರ ಚಳವಳಿ ಪ್ರವೇಶದೊಂದಿಗೆ ತಮ್ಮ ವರಸೆ ಬದಲಾಯಿಸಿದವು. ಗೇಣಿದಾರರ ಹೋರಾಟಕ್ಕೆ ಮಣಿದವು. ಸುಮಾರು ಆರು ತಿಂಗಳ ಕಾಲ ನಡೆದ ಸತ್ಯಾಗ್ರಹಕ್ಕೆ ಅಂತಿಮವಾಗಿ ಜಯ ಸಿಕ್ಕಿತು.

ಸಾವಿರಾರು ಎಕರೆ ಜಮೀನನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಲಕ್ಷಾಂತರ ಮಂದಿ ತಳಸಮುದಾಯಗಳ ಶ್ರಮಿಕರನ್ನು ತಮ್ಮ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ ಹೀನ ಗೇಣಿ ಪದ್ಧತಿ ರದ್ದಾಗಿ, ಉಳುವವನೆ ಹೊಲದೊಡೆಯ ಎಂಬ ಕ್ರಾಂತಿಕಾರಕ ಭೂ ಸುಧಾರಣೆ ಕಾಯ್ದೆ ಜಾರಿಗೆ ಬರಲು ಆ ನಂತರ ದಶಕಗಳೇ ಹಿಡಿದರೂ, ಚಳವಳಿ ರಾಜಕೀಯವಾಗಿ ಅಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ಮಲೆನಾಡಿಗಷ್ಟೇ ಅಲ್ಲದೆ, ರಾಜ್ಯಾದ್ಯಂತ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿತು.

ಆವರೆಗೆ ಭೂಮಾಲೀಕರ ಆಣತಿಯಂತೆ ಪಂಚೆ ಉಡಬೇಕಿದ್ದ, ಸೀರೆ ತೊಡಬೇಕಿದ್ದ, ಶಾಲೆಯಿಂದ ಹೊರಗುಳಿಯಬೇಕಿದ್ದ ಸಮುದಾಯಗಳ ಹೊಸ ತಲೆಮಾರು ಆಧುನಿಕ ಶಿಕ್ಷಣ, ಆಧುನಿಕ ಚಿಂತನೆ, ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಿತು. ಪರಿಣಾಮವಾಗಿ ಸಮಾಜವಾದಿ ಚಳವಳಿ ಮತ್ತು ಸಿದ್ಧಾಂತಕ್ಕೆ ಮಲೆನಾಡಿನದಲ್ಲಿ ದೊಡ್ಡ ಮಟ್ಟದ ಜನಬೆಂಬಲವೂ ದಕ್ಕಿತು. ಜಮೀನ್ದಾರಿ ಸ್ತರದ ಸಮುದಾಯಗಳು ಕ್ರಮೇಣ ಸಮಾಜವಾದಿ ಹೋರಾಟದ ಭಾಗವಾದವು. ಯಾರು ಶೋಷಕರಾಗಿ ಶತಮಾನಗಳ ಶೋಷಣೆಯನ್ನು ಸಮರ್ಥಿಸಿಕೊಂಡುಬಂದಿದ್ದರೋ ಅಂತಹ ಜನಗಳು ಸಹ ಶೋಷಣೆಯ ವಿರುದ್ಧ ದನಿ ಎತ್ತುವ ಬದಲಾವಣೆಗೆ ಕಾಗೋಡು ಚಳವಳಿ ಮತ್ತು ಸಮಾಜವಾದಿ ಹೋರಾಟಗಳು ಕಾರಣವಾದವು.

ಕೃಪೆ: ಟ್ರುತ್ ಇಂಡಿಯಾ ಕನ್ನಡಶಶಿ ಸಂಪಳ್ಳಿ


ಇದನ್ನೂ ಓದಿ: (ರೈತ) ಚಳುವಳಿಯ ಬಿಕ್ಕಟ್ಟು : ಕೆ. ಪಿ. ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...