Homeಚಳವಳಿ(ರೈತ) ಚಳುವಳಿಯ ಬಿಕ್ಕಟ್ಟು : ಕೆ. ಪಿ. ಸುರೇಶ್

(ರೈತ) ಚಳುವಳಿಯ ಬಿಕ್ಕಟ್ಟು : ಕೆ. ಪಿ. ಸುರೇಶ್

ರೈತ ಚಳವಳಿ ಕೊನೆಗೂ ದಲಿತ ಚಳವಳಿಯನ್ನು ತಬ್ಬಿ ಸಾಗಲಾಗಲಿಲ್ಲ. ಭೂರಹಿತ ಕಾರ್ಮಿಕರ ಅತಂತ್ರ ಬದುಕಿನ ಆತಂಕಗಳನ್ನು ಗುರುತಿಸಲಿಲ್ಲ.

- Advertisement -
- Advertisement -

ವ್ಯವಸ್ಥೆಯ ಒರಟು ದಬ್ಬಾಳಿಕೆ ಹೆಚ್ಚಿದಷ್ಟು ಚಳವಳಿಯ ಕಾವು ಜಾಸ್ತಿ; ಆಡಳಿತಗಾರನ ದೃಷ್ಟಿ ಮಬ್ಬಾದಷ್ಟೂ ಚಳವಳಿಗಳ ಕಾರ್ಯಸೂಚಿ ಹೆಚ್ಚು ಸ್ಫುಟವಾಗಿರುತ್ತೆ ಅಂತ ಒಂದು ಮಾತಿದೆ. ಬಹುತೇಕ ಚಳವಳಿಗಳ ಯಶಸ್ಸು ಈ ಕಾರಣಗಳ ಮೇಲೆ ನಿಂತಿದೆ. ಆದರೆ ಈ ಎರಡನ್ನೂ ಇಂದ್ರಿಯಗ್ರಾಹ್ಯವಾಗಿ ಮಂಡಿಸುವ ನಾಯಕತ್ವ ಇಲ್ಲದಿದ್ದರೆ ಆಂಶಿಕ ಗ್ರಹಿಕೆಯಲ್ಲೇ ದಿನ ಹೋಗುತ್ತದೆ.

ಆಂಶಿಕ ಗ್ರಹಿಕೆ ಅಂದರೆ ಕಾಲಕಾಲಕ್ಕೆ ಪ್ರತ್ಯಕ್ಷವಾಗುವ ಸಂಕಷ್ಟಗಳು ಆಳುವವರ ನೀತಿಯ ಫಲ ಎಂಬ ಅರಿವಿಲ್ಲದೇ ಮೂಡುವ ಅನಿಸಿಕೆಗಳಷ್ಟೇ….

80ರ ದಶಕದ ರೈತ ಚಳವಳಿಯ ಹಿಂದೆ ಇಂದಿರಾ ಗಾಂಧಿ ಕಾಲದ ವಿಷಮ ಪರಿಸ್ಥಿತಿ ಇತ್ತು. ಯಾವ ಪ್ರತಿಕ್ರಿಯೆ/ ಪ್ರತಿರೋಧಕ್ಕೂ ಅವಕಾಶವಿಲ್ಲದ ಸ್ಥಿತಿಯಲ್ಲಿ ಒಂದು ಅಧಿಕಾರ ಕೇಂದ್ರದ ಬಗ್ಗೆ ಹುಟ್ಟುವ ಸಮಷ್ಠಿ ಪ್ರತಿರೋಧ ಹರಳುಗಟ್ಟಲು ಸಮಯ ಬೇಕು. ಕರ್ನಾಟಕದ ಮಟ್ಟಿಗೆ ದೇವರಾಜ ಅರಸು ಅವರಂಥಾ ಧೀಮಂತ ಇರುವಷ್ಟು ಕಾಲ ಇದು ಚಾಲನೆ ಪಡೆಯಲಿಲ್ಲ. ಸಮಾಜವಾದೀ ಆಶಯದ ಸೈದ್ಧಾಂತಿಕ ಭೂಮಿಕೆಯ ರಾಜಕಾರಣ ಕರ್ನಾಟಕದಲ್ಲಿದ್ದು ಸ್ವತಃ ಅರಸು ಅದನ್ನು ಅಷ್ಟಿಷ್ಟು ಪ್ರತಿಫಲಿಸಿದ್ದರು. ಗುಂಡೂರಾವ್ ಆಗಮನವಾಗಿದ್ದೇ ಆಡಳಿತ ಯಂತ್ರಕ್ಕೆ, ಆಡಳಿತದ ಚುಕ್ಕಾಣಿ ಹಿಡಿದವರಿಗೆ ಸೈದ್ಧಾಂತಿಕ ಭೂಮಿಕೆ ಮಾಯವಾಯಿತು. (ಇಂದು ಕಾಂಗ್ರೆಸ್ ಪಡುತ್ತಿರುವ ಸಂಕಷ್ಟದ ಬೀಜವನ್ನು ಅಲ್ಲೂ ನೋಡಬಹುದು.) ಗ್ರಾಮ ಭಾರತದ ಕೇಂದ್ರಭೂಮಿಕೆಯಲ್ಲಿದ್ದ ರೈತ ಮತ್ತು ಕೃಷಿಯ ಅವಗಣನೆ ಬಗ್ಗೆ ಅರಿವು ಮೂಡಿದ್ದೂ ಇದರ ಫಲಿತವೇ.

ಬಹುತೇಕ ಹೋರಾಟಗಳು ಸೈದ್ಧಾಂತಿಕ/ಸಾಂಸ್ಥಿಕ ನಾಯಕತ್ವ ವಹಿಸಿದವರ ನಿರ್ಧಾರದ ಕಾರಣಕ್ಕೇ ಉದ್ಘಾಟನೆ ಅಗಿಲ್ಲ. ಒಂದು ಸ್ಫೋಟದ ಕ್ಷಣ ಬಂದಾಗ ಪಾದರಸದ ಕಣಗಳು ಒಂದಾದಹಾಗೆ ವ್ಯಾಪಕ ಸಾಂಘಿಕ

ಕಸುವು ಹುಟ್ಟಿಕೊಳ್ಳುತ್ತೆ. ಈ ಕ್ಷಣವನ್ನು ನಿರೀಕ್ಷಿಸಿ ಕ್ರಿಯಾಶೀಲವಾಗಿ ಮುಂದೊಯ್ಯುವುದು ನಾಯಕತ್ವದ ಸಂಘಟನಾತ್ಮಕ ಕೌಶಲ. ಕರ್ನಾಟಕದಲ್ಲೂ ಆಗಿದ್ದು ಇದೇ. ೧೯೮೦ರ ಜುಲೈಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಗೋಲಿಬಾರ್ ಮಾಡಿ ಇಬ್ಬರು ಹುತಾತ್ಮರಾದದ್ದೇ, ಅದು ರಾಜ್ಯಾದ್ಯಂತ ವಿಸ್ತಾರ ಮತ್ತು ವೇಗ ಪಡೆದುಕೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ಸುಂದರೇಶ್, ಬಳಿಕ ಪ್ರೊಫೆಸರ್ ನಂಜುಂಡಸ್ವಾಮಿ ಅವರು ಈ ಹೋರಾಟವನ್ನು ರಾಜ್ಯವ್ಯಾಪಿಗೊಳಿಸಿದ್ದು ಈಗ ಇತಿಹಾಸ. ಕರ್ನಾಟಕದ ಬಹುತೇಕ ಪ್ರಗತಿಪರರು ಈ ಚಳವಳಿಯ ಭಾಗವಾಗಿದ್ದರು, ಇಲ್ಲವೇ ಕೈಜೋಡಿಸಿದ್ದರು. ಇದೇ ವೇಳೆಗೆ ದಲಿತ ಚಳವಳಿಯೂ ಸ್ಫೋಟಗೊಂಡಿದ್ದು, ಈ ಎರಡೂ ಹೋರಾಟಗಳು ದೊಡ್ಡ ಸಾಮಾಜಿಕ ಸ್ಥಿತ್ಯಂತರದ ಕನಸು ಹೊತ್ತು ಕೆಲಸ ಮಾಡಬಹುದು ಎಂಬ ನಿರೀಕ್ಷೆಯನ್ನು ಹುಟ್ಟಿಸಿದ್ದು ಕೂಡಾ ಚಾರಿತ್ರಿಕವಾಗಿ ಬಲು ದೊಡ್ಡ ಸಾಧನೆ. 50ರ ದಶಕದ ಕಾಗೋಡು ಸತ್ಯಾಗ್ರಹ, ತದನಂತರದ ಎಡ ಪಕ್ಷಗಳ ದೊಡ್ಡಮಟ್ಟದ ಭೂಮಿ ಸಂಬಂಧ ಸ್ಥಳೀಯ ಹೋರಾಟಗಳು ಕಾಲದ ಓಟದಲ್ಲಿ ಅಷ್ಟೇ ದೊಡ್ಡದಾಗಿ ಹರಳುಗಟ್ಟಲಿಲ್ಲ. ಹೆಚ್ಚೆಂದರೆ ರಾಜಕೀಯವಾಗಿ ಒಂದೆರಡು ಅಸೆಂಬ್ಲಿ ಸೀಟು ಗೆಲ್ಲುವಷ್ಟರಮಟ್ಟಿಗೆ ಸಫಲವಾಗಿದ್ದವು. ಎಡಪಂಥೀಯ ಪಕ್ಷಗಳು ಗ್ರಾಮೀಣ ಕರ್ನಾಟಕದಲ್ಲಿ ಪ್ರಭಾವಿಯಾಗಿ ಶಾಸನಸಭಾ ಸ್ಥಾನಗಳನ್ನು ಗೆದ್ದಿದ್ದು ನೆನಪಿಸಿಕೊಳ್ಳಬೇಕು.

ರೈತಸಂಘವೂ ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟು ತನ್ನ ಸಾಧನೆಯನ್ನು, ನಿರ್ವಾಣವನ್ನೂ ಕಂಡಿತು ಎಂಬುದೇ ಇತಿಹಾಸದ ವ್ಯಂಗ್ಯ. ಚಳವಳಿಯೊಂದು ಔಪಚಾರಿಕ ಚುನಾವಣಾ ರಾಜಕೀಯಕ್ಕಿಳಿದಾಗ ಸೋಲು ಕಾಣುತ್ತೆ ಎಂಬುದು ಸಿದ್ಧ ಉತ್ತರ. ಹಾಗಿದ್ದರೆ ಸಮೂಹ ಅಸಹನೆ, ಆಕ್ರೋಶ, ಹಕ್ಕೊತ್ತಾಯದ ಅಭಿವ್ಯಕ್ತಿಗೆ ಸಂಘಟನಾತ್ಮಕ ರೂಪ ಕೊಟ್ಟು ಅದನ್ನು ಸಮುದಾಯ ಒಪ್ಪಿಕೊಂಡಾಗಲೂ ಅದು ಯಾಕೆ ಶಾಸನಾತ್ಮಕ ಅಧಿಕಾರ ಪಡೆಯುವ ಶಕ್ತಿಯಾಗಿ ರೂಪಾಂತರಗೊಳ್ಳುವುದಿಲ್ಲ? ಈ ಚಳವಳಿ ಕೇವಲ ಹಕ್ಕೊತ್ತಾಯದ ಸೀಮಿತ ಅಗತ್ಯಗಳ ಪೂರೈಕೆಗಿರುವ ಸಾಧನವೆಂದು ಜನ ಭಾವಿಸಿದ್ದಾರೆಯೇ? ಅಥವಾ ಜನ ಈ ರೀತಿ ಭಾವಿಸುವಂತೆ ಚಳವಳಿಯನ್ನು ಕಟ್ಟಲಾಗಿತ್ತೇ?

ಸ್ವಾತಂತ್ರ್ಯ ಹೋರಾಟದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಬಹುಕಾಲ ಹಕ್ಕೊತ್ತಾಯದ ವಾಹಕವಾಗಿ, ವೇದಿಕೆಯಾಗಿಯೇ ಕೆಲಸ ಮಾಡಿದ್ದು. 1935ರಲ್ಲಿ ಅದು ಚುನಾವಣಾ ಆಖಾಡಾಕ್ಕೆ ಇಳಿಯಿತು. ಜನ ಅಲ್ಲಿ ಅದರ ರೂಪಾಂತರವನ್ನು ಗುರುತಿಸಿದರು ಅಲ್ಲವೇ?

ರೈತ ಚಳವಳಿ ಈ ರೀತಿಯ ಆದ್ಯಂತ ಪರ್ಯಾಯವಾಗಿ ಜನಕ್ಕೆ ಕಾಣಿಸಲಿಲ್ಲವೇ? ಆತ್ಮಗೌರವದ ಬಿಂಬವಾಗಿ ಧಾಡಸೀತನವನ್ನು ಮುಂದಿಟ್ಟ ಪ್ರೊಫೆಸರ್ ಅಂಥವರೂ ’ರೈತರನ್ನೂ ಒಳಗೊಂಡಂತೆ ಇಡೀ ಜನಸಮುದಾಯಗಳ ಬದುಕಿನ ಸಮಗ್ರ ಅಗತ್ಯಗಳೇನು ಎಂಬುದನ್ನು ಗ್ರಹಿಸಲಾಗಲಿಲ್ಲವೇ?

ಇದೆಲ್ಲಾ ಉತ್ತರ ಗೊತ್ತಿಲ್ಲದ ಸಂಗತಿಗಳಲ್ಲ. ರೈತ ಚಳವಳಿ ಕೊನೆಗೂ ದಲಿತ ಚಳವಳಿಯನ್ನು ತಬ್ಬಿ ಸಾಗಲಾಗಲಿಲ್ಲ. ಭೂರಹಿತ ಕಾರ್ಮಿಕರ ಅತಂತ್ರ ಬದುಕಿನ ಆತಂಕಗಳನ್ನು ಗುರುತಿಸಲಿಲ್ಲ. ರೈತ ಲೋಕದ ಸಂಕಷ್ಟಗಳು ಮೊದಲ ಆದ್ಯತೆಯಾಗಿರಲಿ; ಆದರೆ ಅವು ಗ್ರಾಮೀಣ ಲೋಕದ ಉಳಿದವರನ್ನು ಒಳಗೊಳ್ಳದೇ ಚಿಂತಿಸುವ ಸಂಗತಿಗಳಾದವೇ? ಉದಾ: ಉದ್ಯೋಗ ಖಾತರಿಯಂಥಾ ಯೋಜನೆ ಬಗ್ಗೆ ರೈತರಲ್ಲಿ ಕೇಳಿದರೆ ಅದರಿಂದ ಕೂಲಿಕಾರರು ಸಿಗದಂತಾಯ್ತು ಎನ್ನುವ ಉತ್ತರ ಸಿಗುತ್ತದೆ. ಈ ಭ್ರಾಮಕ ವಿವರವನ್ನು ಅವರ ತಲೆಗೆ ಯಾರು ತುಂಬಿದರು? ಉದ್ಯೋಗ ಖಾತರಿಯ 200 ಚಿಲ್ಲರೆ ಸಂಬಳಕ್ಕಿಂತ ಜಾಸ್ತಿ ಸಂಬಳಕ್ಕೆ ನಗರಗಳಿಗೆ ಹೋಗಿ ಉದ್ಯೋಗ ಖಾತರಿಯೇ ನಕಲಿ ಕಾರ್ಡುಗಳ ಆಡುಂಬೊಲವಾಗಿದ್ದು ಕಣ್ಣೆದುರಿಗೇ ಇದೆ. ಹಾಗೆಯೇ, ಪರಿಸರ ರಕ್ಷಣೆ ಮತ್ತು ಸುಸ್ಥಿರ ಕೃಷಿಯಂಥಾ ಪರಿಕಲ್ಪನೆ ರೈತ ಲೋಕದ ಶಾಶ್ವತ ಉಳಿವಿಗೆ ಮುಖ್ಯ ಅನ್ನಿಸಿದಾಗಲೂ ರಾಸಾಯನಿಕಗಳ ಕುರಿತಾದ ಹಕ್ಕೊತ್ತಾಯ, ನೀರಿನ ಮಿತವ್ಯಯ ಅನಿವಾರ್ಯ ಆದಾಗಲೂ ನೀರಾವರಿ ಬೆಳೆಯ ಕುರಿತಾದ ಅಸಹಜ ಪ್ರಮಾಣದ ಪ್ರಾಧಾನ್ಯ, ಅಂತರ್ಜಲ ಸೂರೆಗೆಂದೇ ಅವೈಜ್ಞಾನಿಕ ಬೆಳೆಗೆ ವಿದ್ಯುತ್ ಬೇಡಿಕೆ- ಹೀಗೆ ಪಟ್ಟಿ ಸಾಗುತ್ತದೆ.

ಮೂಲತಃ ಈ ಬೇಡಿಕೆಗಳೆಲ್ಲಾ ರೈತನ ನಿತ್ಯದ ದುಮ್ಮಾನಗಳು ನಿಜ. ಆದರೆ ಈ ಬೇಡಿಕೆಗಳ ವಿಪರ್ಯಾಸವೆಂದರೆ ಇದನ್ನು ಈಡೇರಿಸುವ ರಾಜಕೀಯ ಶಕ್ತಿ ಕೇಂದ್ರದ ಸನ್ನದು ಪಡೆದಿರುವ ಪಕ್ಷ ಇದರ ಕ್ರೆಡಿಟ್ ಪಡೆಯುತ್ತದೆ. ಜೆ.ಎಚ್.ಪಟೇಲರು ಈ ರೀತಿಯ ಹಕ್ಕೊತ್ತಾಯ ಮತ್ತು ಅದನ್ನು ಈಡೇರಿಸುವ ಸರಕಾರದ ಕ್ರಮಗಳ ಬಗ್ಗೆ, ’ಉಕ್ಕುವ ಹಾಲಿಗೆ ನೀರು ಚಿಮುಕಿಸಿದ ಹಾಗೆ’ ಎನ್ನುವ ರೂಪಕ ನೀಡಿದ್ದರು.

ಇದು ಚಳವಳಿಗಳ ನಾಯಕತ್ವದ ತಾತ್ವಿಕ ಧಾರಣ ಶಕ್ತಿಯ ಬಗ್ಗೆ. ಈ ವ್ಯಾಖ್ಯಾನವೂ ಗತ ಸನ್ನಿವೇಶಗಳ ಬಗ್ಗೆ.

ವರ್ತಮಾನದ ಸವಾಲು, ಅವಕಾಶಗಳೂ ಎರಡು ದಶಕಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ರೈತಲೋಕವೊಂದು ಭೌತಿಕವಾಗಿ ಹಾಗೇ ಇರುವಂತೆ ಭಾಸವಾದರೂ ಅದರ ಆಂತರ್ಯದಲ್ಲಿ ಆಳ ಬದಲಾವಣೆಗಳಾಗಿವೆ. ಸಮಸ್ಯೆ, ಬಿಕ್ಕಟ್ಟುಗಳ ಸ್ವರೂಪವೂ ಹೆಚ್ಚು ಬಾಹ್ಯ ನೀತಿ ಪ್ರೇರಿತ ಕಾರಣಕ್ಕಾಗಿ ಇನ್ನಷ್ಟು ಸಂಕೀರ್ಣವಾಗಿವೆ. ಪ್ರಭುತ್ವ ತನ್ನ ದಮನದ ಅನುಷ್ಠಾನದ ರೀತಿಯಲ್ಲಿ ಹೆಚ್ಚು ಅಮೂರ್ತವಾಗಿದೆ. ಅದರ ಹಿಡಿತವೂ ಹೆಚ್ಚು ಹೆಚ್ಚು ವ್ಯಕ್ತಿ ನಿರಸನದ ರೂಪ ಪಡೆದಿದೆ. ಆಧಾರ್ ಲಿಂಕ್ ಮಾಡುವುದರಿಂದ ಹಿಡಿದು, ನೇರ ನಗದು ವರ್ಗಾವಣೆಯಂಥಾದ್ದು ಇಂಥಾ ಒಂದು ಪ್ರಭುತ್ವದ ಶಕ್ತಿಯನ್ನು ಅನಾವರಣಗೊಳಿಸಿದೆ. ಇನ್ನೊಂದೆಡೆ ಈ ಹಿಂದೆ ಕರಪತ್ರ, ಗೋಡೆ ಬರಹಗಳ ಮೂಲಕ ಮಾಹಿತಿ ತಲುಪಿಸುವ ವಿಧಾನ ಫ್ಯಾಂಟಮ್ ಕತೆಯಲ್ಲಿ ಬರುವ ಡ್ರಮ್ ಬೀಟಿಂಗ್ ಮೂಲಕ ಸಂದೇಶ ಕಳಿಸುವಷ್ಟೇ ಪುರಾತನವಾಗಿ ಕಾಣಿಸುತ್ತಿದೆ. ಹೊಸ ಸಾಮಾಜಿಕ ಮಾಧ್ಯಮಗಳು ಜನರನ್ನು ಖಾಸಗಿಯಾಗಿ ತಲುಪುವ ವೇಗ ಹೇಗಿದೆಯೆಂದರೆ ಅದಕ್ಕೊಂದು ಸಮಷ್ಠಿಯ ಲಕ್ಷಣವೇ ಹೊರಟುಹೋಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಒಂದೊಂದು ನಿರ್ಬಂಧಿತ ಕಂಪಾರ್ಟ್‌ಮೆಂಟಾಗಿ ರೂಪಾಂತರಗೊಳಿಸಿದೆ. ಇಮೇಜುಗಳ ಮೂಲಕ, ಚಿಕ್ಕ ಸಂದೇಶಗಳ ಮೂಲಕ ಒಬ್ಬೊಬ್ಬ ವ್ಯಕ್ತಿಯನ್ನೂ ರೇಡಿಯೋ ಸ್ವೀಕರಣಾ ಟ್ರಾನ್ಸಿಸ್ಟರ್ ಮಟ್ಟಿಗೆ ಬದಲಾಯಿಸಿದೆ. ತನ್ನ ಬಯಕೆ, ಬೇಡಿಕೆ ಮತ್ತು ಅಗತ್ಯಗಳ ಮಧ್ಯೆ ಇದ್ದ ವ್ಯತ್ಯಾಸದ ತೆಳುಗೆರೆ ಅಳಿಸಿ ನಿತ್ಯದ ಮಾಹಿತಿ ವರ್ಷಾಘಾತಕ್ಕೆ ಬಲಿಯಾಗಿದ್ದಾನೆ. ಮಾಹಿತಿ ತಲುಪಿಸುವ ಈ ವಿಧಾನ ಅದ್ಭುತ ಅಸ್ತ್ರ. ಇದರ ಬಳಕೆಯ ವಿಜೃಂಭಣೆಯ ಆರಂಭಿಕ ಸಡಗರದ ಹಂತದಲ್ಲಿ ನಾವಿದ್ದೇವೆ. ಭಾಜಪ ಇದನ್ನು ಸಶಕ್ತವಾಗಿ ಬಳಸಿ ಮುಂಚೂಣಿಯಲ್ಲಿದೆ.

ನಮ್ಮ ರೈತ ಸಂಘಟನೆಗಳು ಇಂದಿಗೂ ಒಂದು ಸಭೆಯ ಲೈವ್ ನೀಡಲು ಏದುಸಿರು ಬಿಡುತ್ತಿವೆ. ಈ ಕಾಲಕ್ಕೆ ತಕ್ಕಂತೆ ಬದಲಾಗಿ ಸ್ಪಂದಿಸುವ ಗುಣ ಕಳಕೊಂಡರೆ ಸಂಘಟನೆಗಳೂ ಡಿನೋಸಾರಸ್ ತರಹ ಕಾಣತೊಡಗುತ್ತವೆ.

ಈ ಹಿಂದಿನ ಸೈದ್ಧಾಂತಿಕ ಅಸ್ಪಷ್ಟತೆ, ತಾತ್ವಿಕ ಬಿಕ್ಕಟ್ಟು, ಪರ್ಯಾಯಗಳ ಕುರಿತಾದ ಟೋಕನಿಸಮ್ ಇವೆಲ್ಲಾ ಹಾಗೇ ಇದೆ; ಜೊತೆಗೆ ಆಧುನಿಕ ಸಂವಹನದ ಪರಿಭಾಷೆಯ ಅನಕ್ಷರತೆಯೂ ಸೇರಿದೆ. ಇವು ಡೆಡ್ಲೀ ಕಾಕ್ ಟೈಲ್! ಕೃಷಿಲೋಕವು ಸಂಪೂರ್ಣ ಕಾರ್ಪೋರೇಟ್, ನವ ಉದಾರವಾದೀ ಹಿಡಿತದಲ್ಲಿರುವ ಆಳುವವರ ನೀತಿ ವಿಕೃತಿಗೆ ಬಲಿಯಾಗಿದೆ. ಇದು ಅರಿವಿಗೆ ಬಾರದಂತೆ ಕೋಮು ಧ್ರುವೀಕರಣ, ಭಾವನಾತ್ಮಕ ರಾಷ್ಟ್ರೀಯತೆಗಳ ಮೂಲಕ ಲಕ್ಷ್ಯ ಬೇರೆಡೆ ಹರಿಸುವ ರಾಜಕಾರಣ ಪರಿಪೂರ್ಣ ಕೌಶಲ್ಯ ಗಳಿಸಿದೆ.

ಪ್ರಸ್ತುತ ಅಭಿವೃದ್ಧಿಯ ಪರಿಕಲ್ಪನೆಯ ಚೌಕಟ್ಟನ್ನು ಪ್ರಶ್ನಿಸಿ ಪರ್ಯಾಯವನ್ನು ಅನುಷ್ಠಾನ ಯೋಗ್ಯ ಅನ್ನಿಸುವಂತೆ ಪ್ರಸ್ತುತಪಡಿಸದಿದ್ದರೆ ಮತ್ತೆ ಮತ್ತೆ ಹಕ್ಕೊತ್ತಾಯದ ಸೀಮಿತ ಖೆಡ್ಡಾಕ್ಕೆ ಬೀಳುವುದು ಮುಂದುವರಿಯುತ್ತದೆ.

ಗಾಂಧಿ ಬ್ರಿಟಿಶರ ವಿರುದ್ಧ ಹೋರಾಟವನ್ನು ಮುಂದೊತ್ತುವಾಗ, ಚರಕದಂಥಾ ಸ್ವಾವಲಂಬಿ ಪರ್ಯಾಯದ ರೂಪಕವೊಂದನ್ನು ಮನೆಮನೆಗೆ ತಲುಪಿಸಿದರು. ಯಾವುದು ಬೇಡ, ಯಾವುದು ಬೇಕು ಎಂಬುದು ಸಾಮಾನ್ಯ ಮನೆಗಳಲ್ಲೂ ಒಪ್ಪಿತವಾಗಿತ್ತು. ಬಹುತೇಕ ಅನಾಮಿಕ ಮಹಿಳೆಯರೇ ಈ ನೂಲು ತೆಗೆಯುವ ಕೆಲಸ ಮಾಡಿದರು. ಇವರೆಲ್ಲೂ ಚಳವಳಿಯಲ್ಲಿ ಕಾಣಿಸಲಿಲ್ಲ, ಆದರೆ ಬೇರುಗಟ್ಟಿಗೊಳಿಸುವ ಕೆಲಸ ಇವರೇ ಮಾಡಿದ್ದು.

ಯು.ಆರ್.ಅನಂತ ಮೂರ್ತಿಯವರು ಅಮೆರಿಕೆಯಿಂದ ಬರುವಾಗ, ’ಅಮ್ಮನಿಗೆ ತರುವಂಥಾದ್ದೇನೂ ಅಲ್ಲಿ ಇರಲಿಲ್ಲ/ಸಿಗಲಿಲ್ಲ ಎನ್ನುತ್ತಾರೆ. ಇದು ನಾಗರಿಕತೆಯೊಂದನ್ನು ನಿರಾಕರಿಸುವ ಬಗೆ.

ರೈತ ಚಳವಳಿಯೂ ಇಂಥಾ ನಿರಾಕರಣೆ ಮತ್ತು ಸ್ವಾವಲಂಬೀ ಪರ್ಯಾಯವೊಂದನ್ನು ತಾತ್ವಿಕವಾಗಿ ಗ್ರಹಿಸಿ, ಕಟ್ಟಿ, ಹರಡದಿದ್ದರೆ ಕಟ್ಟಿಹಾಕಿದ ನಾಯಿಯ ಆಹಾರಕ್ಕಾಗಿ ಬೊಗಳುವ ಕೆಲಸ ಮುಂದುವರೆಯುತ್ತೆ. ಚೈನು ಬಿಚ್ಚಿದರೂ ಮತ್ತೆ ಅಲ್ಲಿಗೇ ಬರುವ ಮಂಕು ನಾಯಿಗೆ ಕವಿದಿರುತ್ತೆ! ಸೀಮಿತ ಹಕ್ಕೊತ್ತಾಯದ ಮಿತಿ ಇದು. ವ್ಯವಸ್ಥೆಯ ಅರ್ಥಪೂರ್ಣ ಬದಲಾವಣೆಯ ಕಾಣ್ಕೆ ಅಲ್ಲಿ ಇರುವುದಿಲ್ಲ.

ಕೆ.ಪಿ.ಸುರೇಶ
ಇಂಗ್ಲಿಷ್ ಅಧ್ಯಾಪಕರಾಗಲು ಎಂ.ಎ ಓದಿದ್ದ ಕೆ.ಪಿ.ಸುರೇಶ ಅವರು ಕೃಷಿಯಲ್ಲಿ ತೊಡಗಲು ಸುಳ್ಯ ತಾಲೂಕಿನ ತಮ್ಮ ಊರಿಗೆ ಮರಳಿದ್ದರು. ತಮ್ಮ ಸ್ವಂತ ಅನುಭವ, ಅಧ್ಯಯನ ಹಾಗೂ ಒಳನೋಟಗಳ ಕಾರಣಕ್ಕೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ವಿಚಾರದಲ್ಲಿ ತಜ್ಞರಿಗೂ, ರೈತರಿಗೂ ಪಾಠ ಮಾಡಬಲ್ಲರು. ಅಪಾರ ಕೀಟಲೆಯ ಸ್ವಭಾವದ ಅವರು ಹಲವು ವಿಚಾರಗಳ ಕುರಿತು ಬರೆಯುತ್ತಿರುವ ಆಲ್‌ರೌಂಡರ್ ಕೂಡ.


ಇದನ್ನೂ ಓದಿ: ಬಗರ್ ಹುಕುಂ ಸಾಗುವಳಿದಾರರಿಗೆ ಕಿರುಕುಳ: ಸುಳ್ಳು ಕೇಸುಗಳಲ್ಲಿ ಬಂಧಿಯಾಗುತ್ತಿದ್ದಾರೆ ಅನ್ನದಾತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...