ಪ್ರಧಾನಿ ನರೇಂದ್ರ ಮೋದಿಯವರ ಲಸಿಕೆ ರಾಜತಾಂತ್ರಿಕ ನೀತಿಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟೀಕಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಧಾನಿಯವರ ಈ ರಾಜತಾಂತ್ರಿಕತೆಯ ಅಡಿ ಭಾರತದಲ್ಲಿ ತಯಾರಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ಗಳ ಕೋಟ್ಯಂತರ ಡೋಸ್‌ಗಳನ್ನು ಹಲವಾರು ದೇಶಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ದೇಶಾದ್ಯಂತ ಕೊರೋನಾ ಪ್ರಕರಣಗಳ ತೀವ್ರತೆಯ ಮಧ್ಯೆ ಹಲವಾರು ರಾಜ್ಯಗಳಲ್ಲಿ ಲಸಿಕೆಗಳ ಕೊರತೆಯನ್ನು ಎತ್ತಿ ತೋರಿಸಿದ ಅಮರಿಂದರ್‌ಸಿಂಗ್, “ಸದ್ಭಾವನೆ ಗೆಸ್ಚರ್” ಗಿಂತ ಭಾರತೀಯರಿಗೆ ಲಸಿಕೆಗಳನ್ನು ಒದಗಿಸಲು ಕೇಂದ್ರವು ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದರು.
“ಇತರ ದೇಶಗಳಿಗೆ 5 ಕೋಟಿ ಡೋಸ್ ಉಡುಗೊರೆಯಾಗಿ ಕೊಡುವುದರ ಅರ್ಥವೇನು? ನಮ್ಮ ಬಗ್ಗೆ ಏನು? ಭಾರತೀಯರ ಬಗ್ಗೆ ಏನು? ನಾವು ಅದನ್ನು ಮೊದಲು ಪಡೆಯುವುದಿಲ್ಲವೇ? ನಿಮ್ಮ ಬಳಿ ಇದ್ದರೆ ಅದನ್ನು (ಲಸಿಕೆಗಳನ್ನು) ನೀಡಬೇಡಿ ಎಂದು ನಾನು ಹೇಳುತ್ತಿಲ್ಲ, ಆದರೆ ನಿಮ್ಮ ಬಳಿ ಇಲ್ಲದಿದ್ದರೆ, ಆದ್ಯತೆಯು ಭಾರತೀಯರಿಗೆ ಲಸಿಕೆ ಒದಗಿಸುವುದು ಆಗಿರಬೇಕು, ಲಸಿಕೆಗಳನ್ನು ಇತರರಿಗೆ ಸ್ನೇಹಪೂರ್ವಕವಾಗಿ ನೀಡಬಾರದು. ಮೊದಲು ಲಸಿಕೆಯನ್ನು ನನಗೆ ನೀಡಿ ಎಂದು ಪ್ರಧಾನ ಮಂತ್ರಿಯವರಿಗೆ ಸಭೆಯೊಂದರಲ್ಲಿ ಕೇಳಿದ್ದೆ’ ಎಂದು ಪಂಜಾಬ್ ಸಿಎಂ ಹೇಳಿದ್ದಾರೆ.
ಭಾರತದ ಲಸಿಕೆ ಉಪಕ್ರಮವು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಾಗತಿಕ ಸಮುದಾಯದ ಪ್ರಶಂಸೆಯನ್ನು ಪಡೆಯಿತು. ದೇಶದ ಮಾನವೀಯ ಭಾವಸೂಚಕವು ಕಳೆದ ತಿಂಗಳು ಹಲವು ರಾಜ್ಯಗಳಿಗೆ ಮಾರಕವಾಗಿ ಪರಿಣಮಿಸಿತು, ಈಗಲೂ ಅದು ಸಮಸ್ಯೆಯಾಗಿಯೇ ಇದೆ. ಏಕೆಂದರೆ ಕೆಟ್ಟದಾಗಿ ಹಾನಿಗೊಳಗಾದ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಲಸಿಕಾ ಅಭಿಯಾನವನ್ನು ಹೆಚ್ಚಿಸಲು ಯೋಜಿಸಿದ್ದರಿಂದ ತೀವ್ರ ಲಸಿಕೆ ಕೊರತೆ ಎದುರಾಗಿದೆ.
“ಈಗ ಅವರು ದಿನಕ್ಕೆ ಎರಡು ಲಕ್ಷದವರೆಗೆ ಲಸಿಕೆ ಹಾಕಲು ಹೇಳುತ್ತಾರೆ … ನಾನು ಅದನ್ನು ಮಾಡಿದರೆ, ನನಗೆ ಒಂದೂವರೆ ದಿನಗಳ ಪೂರೈಕೆಗೆ ಆಗುವಷ್ಟು ಲಸಿಕೆ ಮಾತ್ರ ಇದೆ” ಎಂದು ಸಿಂಗ್ ಹೇಳಿದರು.
ಲಸಿಕಾ ಅಭಿಯಾನದಲ್ಲಿ ಆದ್ಯತೆ ನೀಡಬೇಕಾದ ನಿರ್ದಿಷ್ಟ ಗುಂಪುಗಳನ್ನು ನಿರ್ಧರಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಬೇಕು ಎಂದು ಅಮರಿಂದರ್ ಸಿಂಗ್ ಒತ್ತಾಯಿಸಿದರು.
“ಅದನ್ನು ನಿರ್ಧರಿಸಲು ರಾಜ್ಯಗಳಿಗೆ ಬಿಡಿ. ದೆಹಲಿಗಿಂತ ನಮಗೆ ಬೇರೆ ಸಮಸ್ಯೆ ಇರಬಹುದು. ದೆಹಲಿ ಸಮಸ್ಯೆ ಮಹಾರಾಷ್ಟ್ರಕ್ಕಿಂತ ಭಿನ್ನವಾಗಿರಬಹುದು. ಕೇರಳದ ಸಮಸ್ಯೆಯೇ ಬೇರೆ ಇರಬಹುದು. ಲಸಿಕೆ ಬಳಕೆಯ ನಿರ್ಧಾರವನ್ನು ರಾಜ್ಯಗಳೇ ಮಾಡಿಕೊಳ್ಳೋಣ” ಎಂದು ಅವರು ಹೇಳಿದರು.
ಪ್ರಸ್ತುತ, ಕೇಂದ್ರವು 45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಮಾಡಲು ಅನುಮತಿಸುತ್ತದೆ. ಮಹಾರಾಷ್ಟ್ರ ಮತ್ತು ದೆಹಲಿ ಸೇರಿದಂತೆ ಹಲವಾರು ರಾಜ್ಯಗಳು ಲಸಿಕಾ ಅಭಿಯಾನವನ್ನು ಇತರ ವಯೋಮಾನದವರಿಗೂ ತೆರೆಯುವಂತೆ ಕೇಂದ್ರವನ್ನು ಒತ್ತಾಯಿಸಿವೆ.
ಎರಡನೇ ಕೋವಿಡ್ ಅಲೆಯಿಂದ ತತ್ತರಿಸಿದ ಭಾರತವು ಸತತ ಮೂರು ದಿನಗಳಿಂದ ದೈನಿಕ 2 ಲಕ್ಷಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ಮತ್ತು ದೈನಿಕ 1000 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಶೇಕಡಾ 86 ರಷ್ಟು ಸಾವುಗಳು ಸಂಭವಿಸಿದ 10 ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದು.
ಇದನ್ನೂ ಓದಿ: ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆ: ಸರ್ಕಾರ ಮಾಡುತ್ತಿರುವುದೇನು? ಮಾಡಬೇಕಾದುದ್ದೇನು?


