ರೈತ ವಿರೋಧಿ ಕೃಷಿ ಕಾಯ್ದೆಗಳು ರದ್ದಾಗಬೇಕು, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು… ಈ ಹಕ್ಕೊತ್ತಾಯಗಳ ಈಡೇರಿಕೆಗಾಗಿ ದೆಹಲಿ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹೋರಾಟವನ್ನು ತೀವ್ರಗೊಳಿಸಲು ಇದೇ ಮೇ 10 ರಂದು ದೆಹಲಿಯ ಸಿಂಘು ಗಡಿಯಲ್ಲಿ `ರೈತರ ರಾಷ್ಟ್ರೀಯ ಸಮಾವೇಶ’ವನ್ನು ಹಮ್ಮಿಕೊಂಡಿದೆ.
ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆರಂಭವಾದದ್ದು ಮೇ 10, 1857 ರಂದು. ರೈತರ ನಾಯಕತ್ವದಲ್ಲಿ ನಡೆದ ಈ ಸ್ವಾತಂತ್ಯ್ರ ಸಂಗ್ರಾಮದಲ್ಲಿ ರೈತರ ಭಾಗವಹಿಸುವಿಕೆ ಗಮನಾರ್ಹವಾಗಿತ್ತು. ಈ ನಿಟ್ಟಿನಲ್ಲಿ ಅದೇ ದಿನದಂದೂ ರಾಷ್ಟ್ರೀಯ ರೈತ ಸಮಾವೇಶವನ್ನು ಎಸ್‌ಕೆಎಂ ಆಯೋಜಿಸಿದೆ. ಈ ಸಮಾವೇಶದಲ್ಲಿ ದೇಶದ ನಾನಾ ಭಾಗಗಳ ರೈತರು, ರೈತ ಸಂಘಟನೆಗಳು, ಕೃಷಿ ಕೂಲಿ ಕಾರ್ಮಿಕರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲು ಕೋರಿದೆ.
ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಒಕ್ಕೂಟ ಸರ್ಕಾರಕ್ಕೆ ರೈತರ ಶಕ್ತಿಯನ್ನು ಪ್ರದರ್ಶಿಸಲು ಮತ್ತು ರೈತರನ್ನು ನಿರ್ಲಕ್ಷಿಸುತ್ತಿರುವ ಸರ್ಕಾರಕ್ಕೆ ಎಚ್ಚರಿಕೆ ನೀಡಲು ನಾವೆಲ್ಲರೂ ಕೈಜೋಡಿಸೋಣ ಎಂದು ಎಸ್‌ಕೆಎಂ ಮನವಿ ಮಾಡಿದೆ.
ಈ ರಾಷ್ಟ್ರೀಯ ಸಮಾವೇಶ ಮೇ 10ರಂದು ಬೆಳಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ಜರುಗಲಿದ್ದು, ವಿವಿಧ ರಾಜ್ಯಗಳ ಪ್ರತಿನಿಧಿಗಳು ಸಮಾವೇಶಕ್ಕೆ ಬರಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದ್ದು, ಪ್ರತಿನಿಧಿಗಳಿಗೆ ಸಿಂಘು ಗಡಿಯಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನವೆಂಬರ್ 26ರಿಂದ ಆರಂಭವಾದ ಐತಿಹಾಸಿಕ ರೈತ ಹೋರಾಟಕ್ಕೆ 144 ದಿನಗಳು ತುಂಬಿವೆ. ಹೋರಾಟದಲ್ಲಿ ಈವರೆಗೂ ಸುಮಾರು 385 ಮಂದಿ ರೈತರು ಹುತಾತ್ಮರಾಗಿದ್ದಾರೆ. ಕೊರೆವ ಚಳಿ, ಸುಡು ಬಿಸಿಲು ಎನ್ನದೇ ಇಡೀ ದೇಶದ ಹಿತದೃಷ್ಠಿಯಿಂದ ಕಾರ್ಪೊರೇಟ್ ಪರವಾದ ಕಾಯ್ದೆಗಳು ರದ್ದಾಗಬೇಕು ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ.
ಕೃಪೆ: ಅನ್ನದಋಣ
ಇದನ್ನೂ ಓದಿ: ರೈತ ಹೋರಾಟ: ರೈತರೊಂದಿಗೆ ಮಾತುಕತೆ ನಡೆಸಿ ಎಂದು ಪ್ರಧಾನಿಗೆ ಪತ್ರ ಬರೆದ ಹರಿಯಾಣ ಡಿಸಿಎಂ 


