ಉತ್ತರಪ್ರದೇಶದಲ್ಲಿ ಆಮ್ಲಜನಕ ಸಿಲಿಂಡರ್ ಪಡೆಯಲು ಜನರು ಹತಾಶರಾಗಿ ಯತ್ನಿಸುತ್ತಿರುವ, ಬೆಡ್‌ಗಳು ಸಿಗದೇ ರೋಗಿಗಳು ಪರದಾಡುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಿಕ್ಕಿಯಿರುತ್ತಿರುವ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವರದೇ ಪಕ್ಷದ ನಾಯಕರು ತೀವ್ರ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕಳೆದ ಒಂದು ವಾರದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಉತ್ತರಪ್ರದೇಶದ ಮೂವರು ಬಿಜೆಪಿ ಶಾಸಕರು ಕೋವಿಡ್‌ಗೆ ಬಲಿಯಾಗಿದ್ದು, ಮತ್ತು ನಿನ್ನೆ ಆಮ್ಲಜನಕ ಕೊರತೆಯಿಂದ 7 ಸಾರ್ವಜನಿಕರು ಅಸುನೀಗಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ.
‘ಆಮ್ಲಜನಕ ಅಥವಾ ರೆಮ್ಡೆಸಿವಿರ್ ಕೊರತೆಯಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವ ಸಂಪೂರ್ಣವಾಗಿ ವಿಭಿನ್ನ ಕಥೆಯನ್ನು ಹೇಳುತ್ತದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹುಟ್ಟೂರು ಲಖನೌದಿಂದ 300 ಕಿಲೋಮೀಟರ್ ದೂರದಲ್ಲಿರುವ ಗೋರಖ್‌ಪುರದಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ರೆಮ್‌ಡೆಸಿವಿರ್ ವಿತರಿಸಲಾಯಿತು. ಗೋರಖ್‌ಪುರದ ಡಿಎಂ ಕಚೇರಿಯ ಹೊರಗೆ ಔಷಧಿಗಾಗಿ ಜನರ ದೀರ್ಘ ಸರತಿ ಕಾಣಿಸಿಕೊಂಡಿತು. ಚುಚ್ಚುಮದ್ದಿನ ಎರಡು ಬಾಟಲುಗಳನ್ನು ಪಡೆಯಲು ಸುಮಾರು 24 ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಜನರು ಹೇಳಿದ್ದನ್ನೂ ಉಲ್ಲೇಖಿಸಿರುವ ಉತ್ತರಪ್ರದೇಶ ಬಿಜೆಪಿ ನಾಯಕರು ಯೋಗಿ ಸರ್ಕಾರದ ವೈಫಲ್ಯಕ್ಕೆ ಕಿಡಿ ಕಾರಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಆಗ್ರಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಾಯಿಗೆ ಆಮ್ಲಜನಕ ಸಿಲಿಂಡರ್ ಪಡೆಯಲು ಒಬ್ಬ ವ್ಯಕ್ತಿಯು ಪೊಲೀಸರ ಪಾದಕ್ಕೆ ಬೀಳುತ್ತಾರೆ. ಅದೇ ರೀತಿ, ಮತ್ತೊಂದು ವೀಡಿಯೊದಲ್ಲಿ, ನೋಯ್ಡಾದಲ್ಲಿ ಮಹಿಳೆಯೊಬ್ಬರು ರೆಮ್ಡೆಸಿವಿಯರ್ ಪಡೆಯಲು ಆರೋಗ್ಯ ಅಧಿಕಾರಿಯ ಪಾದಗಳಿಗೆ ನಮಸ್ಕರಿಸಿ ಬೇಡಿಕೊಳ್ಳುತ್ತಿದ್ದಾರೆ. ‘ಹೀಗೇ ಒತ್ತಾಯಿಸಿದರೆ ಜೈಲಿಗೆ ಕಳುಹಿಸುವುದಾಗಿ’ ಅಧಿಕಾರಿ ಬೆದರಿಕೆ ಹಾಕಿದ್ದಾರೆ.
ಲಕ್ನೋದಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಯುಪಿಯ ಬಾಗಪತ್ ಜಿಲ್ಲೆಯ ವೀಡಿಯೊವೊಂದರಲ್ಲಿ, ಸರ್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾದ ಇಬ್ಬರು ರೋಗಿಗಳು ಹಾಸಿಗೆಯಿಂದ ಕೆಳಕ್ಕೆ ಬಿದ್ದು ನೆಲದ ಮೇಲೆ ಬಿದ್ದಿರುವುದನ್ನು ತೋರಿಸಲಾಗಿದೆ. ಅವರನ್ನು ಮತ್ತೆ ಹಾಸಿಗೆಯ ಮೇಲೆ ಇರಿಸಲು ಮತ್ತು ಅವರ ಬಾಯಿಗೆ ಆಮ್ಲಜನಕದ ಮಾಸ್ಕ್ ಅನ್ನು ಹಾಕಲು ವಾರ್ಡ್‌ನಲ್ಲಿ ಯಾರೂ ಇರಲಿಲ್ಲ. ರಾಜಧಾನಿಯಿಂದ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ಯುಪಿಯ ಮೊರಾದಾಬಾದ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಂಬಲದಲ್ಲಿದ್ದ ಏಳು ರೋಗಿಗಳು, ಆಸ್ಪತ್ರೆಗೆ ಆಮ್ಲಜನಕ ಪೂರೈಕೆಯ ನಂತರವೂ ಆಮ್ಲಜನಕ ಸಿಗದೇ ಸಾವನ್ನಪ್ಪಿದ್ದಾರೆ ಎಂದು ರೋಗಿಗಳ ಪರಿಚಾರಕರು ಆರೋಪಿಸಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಮೂವರು ಬಿಜೆಪಿ ಶಾಸಕರಾದ ಸುರೇಶ್ ಶ್ರೀವಾಸ್ತವ, ರಮೇಶ್ ದಿವಾಕರ್ ಮತ್ತು ಕೇಸರ್ ಸಿಂಗ್ ಗಂಗ್ವಾರ್ ಅವರು ಕೋವಿಡ್‌ನಿಂದ ನಿಧನರಾದ ನಂತರ ಆದಿತ್ಯನಾಥ್ ತಮ್ಮದೇ ಪಕ್ಷದ ಮುಖಂಡರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಗಂಗ್ವಾರ್ ಅವರ ಕುಟುಂಬ ಸದಸ್ಯರ ಪ್ರಕಾರ, ದೆಹಲಿ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡುವಂತೆ ಶಾಸಕರು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಪತ್ರ ಬರೆದಿದ್ದರು. ಆದರೆ ಯಾವುದೇ ಸಹಾಯ ದೊರೆತಿಲ್ಲ.
ತಮ್ಮ ಪಕ್ಷದ ಶಾಸಕರಿಗೇ ಚಿಕಿತ್ಸೆ ಕೊಡಿಸುವಲ್ಲಿ ಮುಖ್ಯಮಂತ್ರಿ ಯೋಗಿ ವಿಫಲರಾಗಿದ್ದಾರೆ ಎಂದು ಗಂಗ್ವಾರ್ ಅವರ ಪುತ್ರ ವಿಶಾಲ್ ಆದಿತ್ಯನಾಥ್ ಯೋಗಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಯುಪಿ ಸರ್ಕಾರವು ಶಾಸಕರಿಗೆ ವೈದ್ಯಕೀಯ ಸೌಲಭ್ಯ ನೀಡಲು ಸಾಧ್ಯವಾಗಲಿಲ್ಲ. ನಾನು ಮುಖ್ಯಮಂತ್ರಿ ಕಚೇರಿಗೆ ಹಲವಾರು ಬಾರಿ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ಯಾರೂ ಕರೆಗಳನ್ನು ಸ್ವೀಕರಿಸಲಿಲ್ಲ” ಎಂದು ವಿಶಾಲ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ತಮ್ಮ ತಂದೆಯ ಸಾವಿಗೆ ‘ಯುಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸಬೇಕು’ ಎಂದು ವಿಶಾಲ್ ವ್ಯಂಗ್ಯವಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಉತ್ತರಪ್ರದೇಶದಲ್ಲಿ ಸಾಮಾನ್ಯ ಹಾಸಿಗೆ, ಆಕ್ಸಿಜನ್ ಕೊರತೆ, ಚಿಕಿತ್ಸೆಯ ಕೊರತೆಯಿಂದ ದಿನವೂ ನೂರಾರು ಕೋವಿಡ್ ಸಾವುಗಳು ಸಂಭವಿಸುತ್ತಿದ್ದರೂ, ಎಲ್ಲ ಸರಿಯಾಗಿದೆ ಎಂದು ಹೇಳುತ್ತ ಬಂದ ಯೋಗಿ ಆದಿತ್ಯನಾಥ ಮತ್ತು ಅವರ ಬೆಂಬಲಿಗರ ವಿರುದ್ಧ ಈಗ ಸ್ವಪಕ್ಷ ನಾಯಕರೇ ತಿರುಗಿ ಬಿದ್ದಿದ್ದಾರೆ.
ಇದನ್ನೂ ಓದಿ: ಲಸಿಕೆ ರಾಜಕೀಯ: ರಾಜ್ಯಗಳ ಪಾಲಿಗೆ ವಿಲನ್ ಆದ ಮೋದಿ ಸರ್ಕಾರ?


