ಪಂಚರಾಜ್ಯ ಚುನಾವಣೆಗಳ ಪೈಕಿ ಪುದುಚೇರಿ ಚುನಾವಣೆ ಸಹ ತನ್ನದೇ ಆದ ಕಾರಣಕ್ಕಾಗಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಪಂಚರಾಜ್ಯಗಳ ಪೈಕಿ ಕೋಲ್ಕತ್ತಾ, ಕೇರಳ, ಅಸ್ಸಾಂ ಹಾಗೂ ತಮಿಳುನಾಡಿಗೆ ೫ ವರ್ಷದ ನಂತರ ಎಂದಿನಂತೆ ವಿಧಾನಸಭೆ ಚುನಾವಣೆ ಎದುರಾಗಿದ್ದರೆ, ಪುದುಚೇರಿಗೆ ಮಾತ್ರ ಆಪರೇಷನ್ ಕಮಲದ ಕಾರಣಕ್ಕೆ ಚುನಾವಣೆ ಎದುರಾಗಿತ್ತು. ಹೀಗಾಗಿ ಪುದುಚೇರಿಯಲ್ಲಿ ಚುನಾವಣೆ ನಂತರ ಮತ್ತೆ ಯಾವ ಸರ್ಕಾರ ಅದಿಕಾರಕ್ಕೆ ಬರಲಿದೆ ಎಂಬ ಬಗ್ಗೆ ರಾಜಕೀಯ ವಠಾರಗಳಲ್ಲಿ ಸಾಮಾನ್ಯ ಕುತೂಹಲವೊಂದು ಮನೆ ಮಾಡಿತ್ತು.
ಅನೇಕ ರಾಜ್ಯಗಳಲ್ಲಿ ಅನೇಕ ಬಾರಿ ಬಿಜೆಪಿ ಚುನಾವಣೆ ಎದುರಿಸಿ ಅಧಿಕಾರ ಹಿಡಿದದ್ದಕ್ಕಿಂತ ಆಪರೇಷನ್ ಕಮಲದ ಸಹಾಯದಿಂದ ಹಿಂಬಾಗಿಲ ಮೂಲಕ ಅಧಿಕಾರವನ್ನು ಹಿಡಿದದ್ದೆ ಹೆಚ್ಚು. ಬಿಜೆಪಿ ಪಕ್ಷದ ಈ ಸಾಂಪ್ರದಾಯಿಕ ಸೂತ್ರಕ್ಕೆ ಈಗ ಪುದುಚೇರಿಯೂ ಬಲಿಯಾಗಿದೆ. ಏಕೆಂದರೆ ಬಿಜೆಪಿ ಪಾಲಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕದ ಹೊರತು ಬೇರೆ ಎಲ್ಲೂ ಭದ್ರ ನೆಲೆ ಇಲ್ಲ. ಹೀಗಾಗಿ ಮತ್ತೊಂದು ಆವಾಸ ಸ್ಥಾನಕ್ಕೆ ಕಾಯ್ದಿದ್ದ ಬಿಜೆಪಿ ಕಣ್ಣಿಗೆ ಬಿದ್ದದ್ದು ತಮಿಳುನಾಡು ಮತ್ತು ಪುದುಚೇರಿ.
224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮತ್ತು ಪೆರಿಯಾರ್ ಚಿಂತನೆಗಳಿಗೆ ಗಟ್ಟಿಯಾಗಿಯೇ ಅಂಟಿಕೊಂಡಿರುವ ದ್ರಾವಿಡ ನಾಡಿನಲ್ಲಿ ಬಿಜೆಪಿಯ ಕೇಸರಿ ರಾಜಕಾರಣದ ಆಟ ನಡೆಯದು ಎಂಬ ವಿಚಾರ ಕಮಲ ಪಾಳಯಕ್ಕೆ ತಿಳಿಯದ ವಿಚಾರ ಏನಲ್ಲ. ಇದೇ ಕಾರಣಕ್ಕೆ ೩೦ ಕ್ಷೇತ್ರಗಳಿರುವ ಪಕ್ಕದ ಪುದುಚೇರಿಯನ್ನು ಹಿಡಿದರೆ, ಹಂತ ಹಂತವಾಗಿ ಹಿಂದುತ್ವದ ಹೆಸರಿನಲ್ಲಿ ತಮಿಳುನಾಡಿನಲ್ಲೂ ಅಧಿಕಾರ ಸಾಧ್ಯ ಎಂಬುದು ಬಿಜೆಪಿಯ ಲೆಕ್ಕಾಚಾರ. ಇದೇ ಕಾರಣಕ್ಕೆ ಕಳೆದ ಜನವರಿಯಲ್ಲಿ ಬಿಜೆಪಿ ನಾಯಕರು ವಿ. ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಬೀಳಿಸಿ ಇದೀಗ ತಮ್ಮ ಜಂಡಾ ಹಾರಿಸಲು ಮುಂದಾಗಿದೆ ಬಿಜೆಪಿ.

ಹಿಂಬಾಗಿಲಲ್ಲಿ ಪುದುಚೇರಿ ಹಿಡಿದ ಬಿಜೆಪಿ
ಪುದುಚೇರಿ ಕೇಂದ್ರಾಡಳಿತ ಪ್ರದೇಶವಾದರೂ ಸಹ ತಮಿಳುನಾಡಿನಿಂದ ಕೂಗಳತೆ ದೂರದಲ್ಲಿರುವ ಈ ಪ್ರದೇಶಕ್ಕೆ ಸಾಂಸ್ಕೃತಿಕ ರೀತಿನೀತಿಗಳಲ್ಲಿ ಹೆಚ್ಚೇನು ವ್ಯತ್ಯಾಸ ಇಲ್ಲ. ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಈ ಎರಡೂ ನಾಡುಗಳಿಗೆ ಸಾಕಷ್ಟು ಹೋಲಿಕೆಗಳಿವೆ. ಈ ಎರಡೂ ಭೂ ಪ್ರದೇಶವನ್ನು ತಮಿಳು ಭಾಷೆ ಬೆಸೆಯುವುದಲ್ಲದೆ, ಪೆರಿಯಾರ್ ಸಿದ್ದಾಂತಗಳ ಪ್ರಭಾವವೂ ಈ ಭಾಗದಲ್ಲಿ ಸಾಕಷ್ಟಿದೆ. ಹೀಗಾಗಿ ತಮಿಳುನಾಡಿನಂತೆಯೇ ಇಲ್ಲಿಯೂ ಬಿಜೆಪಿ ನೆಲೆಯೂರುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ. ಇದಕ್ಕೆ ಈ ಹಿಂದಿನ ಚುನಾವಣೆಗಳು ಸಾಕಷ್ಟು ಸಾಕ್ಷಿ ಒದಗಿಸುತ್ತವೆ.
ವಿ. ನಾರಾಯಣ ಸ್ವಾಮಿ ಅವರ ಕಾಂಗ್ರೆಸ್ ಸರ್ಕಾರಕ್ಕೆ ಇಕ್ಕಟ್ಟಾದ ಪರಿಸ್ಥಿತಿ ನಿರ್ಮಾಣ ಮಾಡುವ ಸಲುವಾಗಿಯೇ ತಮಿಳುನಾಡಿನ ಬಿಜೆಪಿ ನಾಯಕಿ ತಮಿಳಿಸೈ ಸೌಂದರ್ ರಾಜನ್ ಅವರನ್ನು ಪುದುಚೇರಿಯ ಹೊಸ ಗೌರ್ನರ್ ಆಗಿ ನೇಮಕ ಮಾಡಲಾಗಿತ್ತು. ತಮಿಳಿಸೈ ಸೌಂದರ್ ರಾಜನ್ ಒಂದೆಡೆ ತಮ್ಮ ಅಧಿಕಾರವನ್ನು ಬಳಸಿಕೊಂಡು ವಿ. ನಾರಾಯಣ ಸ್ವಾಮಿ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿದರೆ, ಮತ್ತೊಂದೆಡೆ ಬಿಜೆಪಿ ಸದ್ದಿಲ್ಲದೆ ತಮ್ಮ ಎಂದಿನ ಸಾಂಪ್ರದಾಯಿಕ ಆಪರೇಷನ್ ಕಮಲವನ್ನು ಜಾರಿಗೆ ತಂದಿತ್ತು. (ಇದಕ್ಕೂ ಮೊದಲು ರಾಜ್ಯಪಾಲರಾಗಿದ್ದ ಕಿರಣ ಬೇಡಿ ಮತ್ತು ನಾರಾಯಣಸ್ವಾಮಿಯವರ ಸರ್ಕಾರಕ್ಕೂ ಹಲವು ಜಟಾಪಟಿಗಳಾಗಿದ್ದವು). 6ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಕೊಂಡುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಪರಿಣಾಮ ಸರ್ಕಾರ ಬಹುಮತ ಕಳೆದುಕೊಂಡಿತ್ತು. ಇದೀಗ ಬಿಜೆಪಿ ಮೊದಲ ಬಾರಿಗೆ ಪುದುಚೇರಿಯಲ್ಲಿ ಅಧಿಕಾರದ ರುಚಿ ಅನುಭವಿಸಲು ಮುಂದಾಗಿದೆ. ಆದರೆ, ಇದಕ್ಕೂ ಸಹ ಕಾಂಗ್ರೆಸ್ ಪಕ್ಷದ ಎಡವಟ್ಟಿನ ನಿರ್ಣಯಗಳೇ ಕಾರಣ ಎಂದರೆ ತಪ್ಪಾಗಲಾರದು.
ಬಿಜೆಪಿ ವರದಾನವಾದ ಕಾಂಗ್ರೆಸ್ ಎಡವಟ್ಟು
30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪುದುಚೇರಿಯಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್ 16. ಈ ಪೈಕಿ ಬಿಜೆಪಿ 6 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿ ಮೈತ್ರಿ ಪಕ್ಷವಾದ ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ 10ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಬಿಜೆಪಿ ಮೈತ್ರಿ ಮೊದಲ ಬಾರಿಗೆ ಪುದುಚೇರಿಯಲ್ಲಿ ಅಧಿಕಾರದ ಗದ್ದುಗೆ ಏರಿದೆ. ಆದರೆ, ಸ್ಥಳೀಯ ಪಕ್ಷವಾದ ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಅಧಿಕಾರಕ್ಕೆ ಏರುತ್ತಿರುವುದು ಇದೇ ಮೊದಲೇನಲ್ಲ. ಎನ್. ರಂಗಸ್ವಾಮಿ ಕಾಂಗ್ರೆಸ್‌ನಿಂದ ಹೊರಬಂದು 2011ರಲ್ಲೇ ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಪಕ್ಷ ಕಟ್ಟಿ, ಮೊದಲ ಚುನಾವಣೆಯಲ್ಲೇ ಬಹುಮತಗಳಿಸಿ ಅಧಿಕಾರಕ್ಕೆ ಬಂದಿದ್ದರು. ಇದೀಗ ಐದನೇ ಬಾರಿ ಸಿಎಂ ಪಟ್ಟಕ್ಕೆ ಏರಿದ್ದಾರೆ. ಅವರು ಎನ್‌ಡಿಎ ಮೈತ್ರಿಯ ಭಾಗವಾಗಿರುವ ಕಾರಣವಷ್ಟೆ ಇಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿದಂತಾಗಿದೆ. ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಹೆಸರಿನಲ್ಲಿ ಬಿಜೆಪಿಗೆ ಮತ ಲಭಿಸಿದೆ ಎಂದರೂ ತಪ್ಪಾಗಲಾರದು.
ಅಸಲಿಗೆ ಎನ್. ರಂಗಸ್ವಾಮಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ. ಹಲವು ದಶಕಗಳಿಂದ ಅಧಿಕಾರ ಡಿಎಂಕೆ ಮತ್ತು ಎಡಿಎಂಕೆ ಕೈಲಿದ್ದ ಪುದುಚೇರಿಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎನ್. ರಂಗಸ್ವಾಮಿ ಪ್ರಮುಖ ಕಾರಣಕರ್ತರಾಗಿದ್ದರು. 2001ರಿಂದ 2008ರವರೆಗೆ ಎರಡು ಅವಧಿಗೆ ಸಿಎಂ ಆಗಿದ್ದ ಅವರು ಹಲವು ಜನಪ್ರಿಯ ಯೋಜನೆಗಳ ಮೂಲಕ ಮನೆಮಾತಾಗಿದ್ದರು. ಒಂದು ಹಂತದಲ್ಲಿ ಪುದುಚೇರಿಯ ಕಾಮರಾಜ್, ಜನರ ಸಿಎಂ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಪುದುಚೇರಿ ಮಟ್ಟಿಗೆ ಅವರನ್ನು ಅಜಾತಶತ್ರು ಎಂದೇ ಕರೆಯಲಾಗಿತ್ತು.
ಆದರೆ, 2008ರಲ್ಲಿ ಪಕ್ಷದ ಆಂತರಿಕ ರಾಜಕಾರಣದ ನೆಪ ಹೇಳಿ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ಇದರಿಂದ ಕುಪಿತಗೊಂಡ ರಂಗಸ್ವಾಮಿಯವರು ಆಲ್ ಇಂಡಿಯಾ ಎನ್. ಆರ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿ ಅಧಿಕಾರ ಹಿಡಿದಿದ್ದು ಇಂದು ಇತಿಹಾಸ. ಈ ಘಟನೆಯ ನಂತರ ಕಾಂಗ್ರೆಸ್‌ನಿಂದ ಶಾಶ್ವತವಾಗಿ ದೂರವಾದ ಎನ್. ರಂಗಸ್ವಾಮಿ ಎನ್‌ಡಿಎ ಜೊತೆ ಮೈತ್ರಿ ಸಾಧಿಸಿದ್ದರು. ಇಂದು ಅವರ ಮೂಲಕವೇ ಕೋಮುವಾದಿ ಬಿಜೆಪಿ ದ್ರಾವಿಡ ನಾಡಿನ ಪಕ್ಕದಲ್ಲೇ ಜಂಡಾ ಹಾರಿಸುವಂತಾದದ್ದು ಮಾತ್ರ ವಿಪರ್ಯಾಸ.


