ಕೊರೊನಾ ನಿಯಂತ್ರಣಕ್ಕೆ ಹರಿಯಾಣದಲ್ಲಿ ಹೇರಲಾಗಿರುವ ಲಾಕ್‌ಡೌನ್ ಅನ್ನು ಮೇ 17 ರವರೆಗೆ ವಿಸ್ತರಿಸಲಾಗಿದೆ. ಜೊತೆಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 5 ಸಾವಿರ ರೂಪಾಯಿ ನೀಡಲು ಹರಿಯಾಣ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.

“ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಹೆಚ್ಚು ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಮೇ 10 ರಿಂದ 17 ರವರೆಗೆ ಸುರಕ್ಷಿತ್ ಹರಿಯಾಣ ಅಭಿಯಾನ ಘೋಷಿಸಿದ್ದು, ಹರಿಯಾಣದಲ್ಲಿ ಕೊರೊನಾ ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಹರಿಯಾಣ ಗೃಹ ಮತ್ತು ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

“ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅವರ ಜೀವನೋಪಾಯ ಸ್ಥಗಿತಗೊಂಡಿರುವುದರಿಂದ 5000 ರೂಪಾಯಿಗಳನ್ನು ನೀಡಲು ನಿರ್ಧರಿಸಲಾಗಿದೆ. ಕೊರೊನಾ ಕಾರಣದಿಂದಾಗಿ ಅವರೆಲ್ಲಾ ಮನೆಯಲ್ಲಿಯೇ ಇರಬೇಕಾಗುತ್ತದೆ. ಹೀಗಾಗಿ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ” ಎಂದು ಸಚಿವ ಅನಿಲ್ ವಿಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ಎರಡನೇ ಅಲೆ ಗ್ರಾಮೀಣ ಭಾರತಕ್ಕೆ: ಪ್ರಕರಣಗಳು ಮತ್ತು ಸಾವುಗಳು ನಾಲ್ಕು ಪಟ್ಟು ಹೆಚ್ಚಳ!


ಸಾಂಕ್ರಾಮಿಕ ಎಚ್ಚರಿಕೆ ‘ಸುರಕ್ಷಿತ್ ಹರಿಯಾಣ’ ರಾಜ್ಯದಲ್ಲಿ ಮೇ 10-17 ರಿಂದ ಒಂದು ವಾರದವರೆಗೆ ಘೋಷಿಸಲಾಗಿದೆ. 1 ನೇ ಲಾಕ್‌ಡೌನ್‌ನ ನಿಯಮಗಳಿಗೆ ಮತ್ತಷ್ಟು ನಿಯಮಗಳನ್ನು ಸೇರಿಸಲಾಗಿದೆ. ಮದುವೆ ಮತ್ತು ಅಂತ್ಯಕ್ರಿಯೆಗಳಲ್ಲಿ ಸಹ 11 ಕ್ಕೂ ಹೆಚ್ಚು ಜನರು ಒಟ್ಟುಗೂಡುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ ಎಂದು ಆರೋಗ್ಯ ಸಚಿವ ತಿಳಿಸಿದ್ದಾರೆ.

ವಿವಾಹಗಳನ್ನು ಗರಿಷ್ಠ 11 ಜನರ ಮಿತಿಯೊಂದಿಗೆ ನಡೆಸಲು ಅನುಮತಿ ನೀಡಲಾಗಿದೆ. ಆದರೆ ಬರಾತ್ (ವಿವಾಹ ವಿಧಿ) ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಲಾಕ್ ಡೌನ್ ಸಮಯದಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳು, ಬ್ಯಾಂಕುಗಳು ಮತ್ತು ಅಗತ್ಯ ಸೇವೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎಂದು ತಿಳಿಸಲಾಗಿದೆ.

ಹರಿಯಾಣದಲ್ಲಿ 24 ಗಂಟೆಗಳಲ್ಲಿ 13,548 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 1,16,867 ಕ್ಕೆ ಏರಿಕೆಯಾಗಿದೆ. ಈ ಹಿಂದೆ ಸೋಂಕು ನಿಯಂತ್ರಿಸಲು ಮೇ 3 ರಿಂದ ಮೇ 9 ರವರೆಗೆ ಒಂದು ವಾರದ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗಿತ್ತು.

ರಾಜ್ಯದಲ್ಲಿಯೂ ಲಾಕ್‌ಡೌನ್ ಪದ ಬಳಸದೇ ಲಾಕ್‌ಡೌನ್ ಹೇರಿರುವುದನ್ನು ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದ್ದು, ಆರ್ಥಿಕ ಪ್ಯಾಕೇಜ್ ಘೋಷಣೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಕೊರೊನಾ ಎದುರಿಸಲು ನೆಹರು-ಇಂದಿರಾ-ಮನಮೋಹನ್‌ ಸಿಂಗ್‌ ಕಟ್ಟಿದ ವ್ಯವಸ್ಥೆಯೆ ದೇಶಕ್ಕೆ ಸಹಾಯ ಮಾಡಿದೆ: ಶಿವಸೇನೆ

LEAVE A REPLY

Please enter your comment!
Please enter your name here