ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತೆ ನತಾಶಾ ನರ್ವಾಲ್‌ರವರ ತಂದೆ ಕೋವಿಡ್ ಕಾರಣದಿಂದ ನಿಧನರಾದ ನಂತರ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನತಾಶಾಗೆ ಇಂದು ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯರಾಗಿದ್ದ ನತಾಶಾರವರ ತಂದೆ ಮಹಾವೀರ್ ನರ್ವಾಲ್‌ರವರು ಕೋವಿಡ್ ಕಾರಣದಿಂದ ನಿನ್ನೆ ನಿಧನರಾಗಿದ್ದರು. ನತಾಶಾರವರ ಸಹೋದರ ಸಹ ಕೋವಿಡ್ ಪಾಸಿಟಿವ್ ಆಗಿ ಐಸೋಲೇಷನ್‌ನಲ್ಲಿರುವ ಕಾರಣ ಅಂತ್ಯಕ್ರಿಯೆ ನಡೆಸಲು ಬೇರೆ ಯಾರೂ ಇಲ್ಲ ಎಂದು ಕೋರ್ಟ್ ನತಾಶಾಗೆ ಜಾಮೀನು ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
2020 ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ನತಾಶಾ ನರ್ವಾಲ್ ಪಾತ್ರವಿದೆ ಎಂದು ಅವರನ್ನು ಬಂಧಿಸಲಾಗಿದೆ. ಅವರ ವಿರುದ್ದ ಯುಎಪಿಎ ಹೇರಲಾಗಿದೆ.
“ನ್ಯಾಯದ ಹಿತದೃಷ್ಟಿಯಿಂದ, ದುಃಖ ಮತ್ತು ವೈಯಕ್ತಿಕ ನಷ್ಟದ ಈ ಸಮಯದಲ್ಲಿ ಅರ್ಜಿದಾರರ ಬಿಡುಗಡೆ ಕಡ್ಡಾಯವಾಗಿದೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ” ಎಂದು ನ್ಯಾಯಾಲಯ ಹೇಳಿದೆ. ಆಕೆಗೆ ಮೂರು ತಿಂಗಳ ಕಾಲ ಜಾಮೀನು ನೀಡಲಾಗಿದೆ ಮತ್ತು ದೆಹಲಿ ಪೊಲೀಸರು ಆಕೆಯ ಮನವಿಯನ್ನು ವಿರೋಧಿಸಲಿಲ್ಲ.
ಇದನ್ನೂ ಓದಿ: “ಪಿಂಜ್ರಾ ತೋಡ್ (ಪಂಜರ ಮುರಿ)” ಎಂಬ ಪುಟ್ಟ ಆಂದೋಲನಕ್ಕೆ ಬೆದರಿತೆ ಕೇಂದ್ರ?


