Homeಮುಖಪುಟ"ಪಿಂಜ್ರಾ ತೋಡ್ (ಪಂಜರ ಮುರಿ)" ಎಂಬ ಪುಟ್ಟ ಆಂದೋಲನಕ್ಕೆ ಬೆದರಿತೆ ಕೇಂದ್ರ?

“ಪಿಂಜ್ರಾ ತೋಡ್ (ಪಂಜರ ಮುರಿ)” ಎಂಬ ಪುಟ್ಟ ಆಂದೋಲನಕ್ಕೆ ಬೆದರಿತೆ ಕೇಂದ್ರ?

ಪಿಂಜ್ರಾ ತೋಡ್ ದಿಲ್ಲಿಯ ಉದ್ದಗಲಕ್ಕೂ ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನೆಲೆ ಹೊಂದಿದ್ದು, ಇದು ವಿದ್ಯಾರ್ಥಿನಿಯರ ಒಂದು ಸ್ವತಂತ್ರ ಸಮೂಹ ಸಂಘಟನೆಯಾಗಿದೆ.

- Advertisement -
- Advertisement -

ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರಣಕ್ಕೆ ದೆಹಲಿ ಪೊಲೀಸರು  ಪಿಂಜ್ರಾ ತೋಡ್ ಕಾರ್ಯಕರ್ತೆಯರಾದ ದೇವಂಗನಾ ಕಾಳಿತಾ ಮತ್ತು ನತಾಶಾ ನರ್ವಾಲ್ ಎಂಬ ವಿದ್ಯಾರ್ಥಿನಿಯರನ್ನು ಬಂಧಿಸಿತ್ತು. ಮೂರು ತಿಂಗಳ ನಂತರ ನ್ಯಾಯಾಲಯ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪಿಂಜ್ರಾ ತೋಡ್ ಸಂಘಟನೆ ಎಂದರೇನು? ಆ ಪುಟ್ಟ ಆಂದೋಲನದ ವಿರುದ್ಧ ಕೇಂದ್ರ ಏಕೆ ಕೆಂಗಣ್ಣು ಬೀರುತ್ತಿದೆ ಎಂಬ ವಿವರ ಇಲ್ಲಿದೆ.

“ಪಿಂಜ್ರಾ ತೋಡ್” (ಪಂಜರ ಮುರಿ) ಎಂಬುದು ಜಾಮಿಯಾದಲ್ಲಿ ಹಾಸ್ಟೆಲು ನಿಯಮಗಳಲ್ಲಿ ಇನ್ನಷ್ಟು ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಹೊರಹೊಮ್ಮಿದ ಸಮೂಹ ಸಂಘಟನೆ ಮತ್ತು ಅಭಿಯಾನವಾಗಿದ್ದು, ದಿಲ್ಲಿಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಡಳಿತಕ್ಕೂ, ಸರಕಾರಕ್ಕೂ ದೂರು ನೀಡುವುದಕ್ಕೆ ಕಾರಣವಾಗಿದೆ. ಈ ಚಳವಳಿಯು ಬೆಳೆದಂತೆ ಪ್ರಾಥಮಿಕವಾಗಿ ಮೂರು ವಿಷಯಗಳ ಮೇಲೆ ಕೇಂದ್ರಿತವಾಗಿದೆ: ವಿಶ್ವವಿದ್ಯಾಲಯಗಳಲ್ಲಿ ಕರ್ಫ್ಯೂ ತೆಗೆದುಹಾಕುವುದು, ಎಲ್ಲಾ ವಿದ್ಯಾರ್ಥಿನಿಯರಿಗೆ ಕೈಗೆಟಕುವ, ಸುಲಭಸಾಧ್ಯ ವಸತಿ ಸೌಲಭ್ಯ ಮತ್ತು ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚುನಾಯಿತ ಆಂತರಿಕ ಸಲಹಾ ಕೇಂದ್ರ (ಐಸಿಸಿ)ಗಳ ಸ್ಥಾಪನೆ.

ಲೈಬ್ರರಿಗಳಿಗೆ ಮತ್ತಿತರ ಸಾರ್ವಜನಿಕ ಸ್ಥಳಗಳಿಗೆ ಸಮಾನ ಪ್ರವೇಶಾವಕಾಶ, ಇಂತಹ ಸಾರ್ವಜನಿಕ ಸ್ಥಳಗಳನ್ನು ಮಹಿಳೆಯರ ಉಪಸ್ಥಿತಿ ಮತ್ತು ಭಾಗವಹಿಸುವಿಕೆಯ ಮೂಲಕ ಹೆಚ್ಚು ಸುರಕ್ಷಿತಗೊಳಿಸುವುದು, ಸಾಮೂಹಿಕ ಕೆಲಸದ ಮೂಲಕ ಮಹಿಳೆಯರ ನೇತೃತ್ವವನ್ನು ಬಲಪಡಿಸುವುದು, ಕ್ಯಾಂಪಸ್‌ಗಳಲ್ಲಿ ಬೀದಿ ದೀಪಗಳನ್ನು ಅಳವಡಿಸುವುದು, ಹಾಸ್ಟೆಲ್ ಗಡುಗಳನ್ನು ವಿಸ್ತರಿಸುವುದು, ಕೈಗೆಟಕುವ ಸಾರ್ವಜನಿಕ ಸಾರಿಗೆ, ಲೈಂಗಿಕ ಕಿರುಕುಳದ ಕುರಿತು ಜಾಗೃತಿ ಹೆಚ್ಚಿಸುವುದು, ಶಾಲೆಗಳಲ್ಲಿ ಹುಡುಗಿಯರ ಮಾನಸಿಕ ಆರೋಗ್ಯ, ಕಾಲೇಜು ಮತ್ತು ಹಾಸ್ಟೆಲುಗಳಲ್ಲಿ ಮಹಿಳಾ ಉದ್ಯೋಗಿಗಳ ಜೊತೆಯಲ್ಲಿ ಒಗ್ಗಟ್ಟು- ಇವುಗಳು ವರ್ಷಗಳಿಂದ ಅವರ ಕೆಲಸದ ವಿವಿಧ ಆಯಾಮಗಳಾಗಿವೆ.

ಈ ಸಮೂಹ ಸಂಘಟನೆಯು ದಿಲ್ಲಿಯ ಉದ್ದಗಲಕ್ಕೂ ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನೆಲೆ ಹೊಂದಿದ್ದು, ಇದು ವಿದ್ಯಾರ್ಥಿನಿಯರ ಒಂದು ಸ್ವತಂತ್ರ ಸಮೂಹ ಸಂಘಟನೆಯಾಗಿದೆ.

ನಮ್ಮ ಕೆಲಸವು ವಿದ್ಯಾರ್ಥಿನಿಯರ ಬೇಡಿಕೆಗಳ ಮೇಲಿನ ಚಳವಳಿಗಳನ್ನು ಆಧರಿಸಿ ಮಹಿಳೆಯರ ಸಮಸ್ಯೆಗಳ ಕುರಿತು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಅಭಿಯಾನಗಳಲ್ಲಿ ಸ್ವ‌ಇಚ್ಛೆಯ ಭಾಗವಹಿಸುವಿಕೆಯ ಮೇಲೆ ಆಧರಿತವಾಗಿದೆ. ನಮ್ಮ ಪ್ರಯತ್ನಗಳು ದಿಲ್ಲಿ ವಿಶ್ವವಿದ್ಯಾಲಯದ ಹಲವಾರು ಕಾಲೇಜುಗಳಲ್ಲಿ ಚುನಾಯಿತ ಐಸಿಸಿಗಳ ಸ್ಥಾಪನೆಯಲ್ಲಿ ಅತ್ಯಂತ ಫಲಕಾರಿಯಾಗಿದ್ದು, ಅದು ಅಂತಿಮವಾಗಿ ಚುನಾವಣೆಗಳ ಘೋಷಣೆಯಾಗುವ ತನಕ ಮೂರು ವರ್ಷಗಳ ಕಾಲ ನಾವು ನಡೆಸಿದ ನಿರಂತರ ಆಂದೋಲನವಾಗಿತ್ತು.

ಆ ಬಳಿಕವೂ ನಾವು ಐಸಿಸಿಗಳನ್ನು ಸಕ್ರಿಯವಾಗಿಡಲು ಮತ್ತು ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ- ಕಾಲೇಜು ಮಟ್ಟದ ಅನುಸರಣಾ ಕ್ರಮಗಳು ಮತ್ತು ಚುನಾವಣೆಗಳಲ್ಲಿ ಭಾಗವಹಿಸುತ್ತಾಬಂದಿದ್ದೇವೆ. ಅದಕ್ಕೆ ಹೊರತಾಗಿ, ಚಳವಳಿಯ ಒತ್ತಡದ ಪರಿಣಾಮವಾಗಿ ಹಲವು ಕಾಲೇಜುಗಳಲ್ಲಿ ಹಾಸ್ಟೆಲ್ ಕರ್ಫ್ಯೂವನ್ನು ಕಡಿತಗೊಳಿಸಲಾಗಿದೆ. ನಾವು ಆರಂಭಿಸಿದಾಗ ದಿಲ್ಲಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ಸರಾಸರಿ ಕರ್ಫ್ಯೂ ಸಮಯ ರಾತ್ರಿ 8.30 ಆಗಿದ್ದು, ವಿದ್ಯಾರ್ಥಿಗಳ ಅವಮಾನ ಹಾಸ್ಟೆಲ್ ಜೀವನದ ಸಾಮಾನ್ಯ ಅಂಶವಾಗಿದ್ದಲ್ಲಿಂದ ಹಿಡಿದು, ಇಂದು ಉತ್ತರ ಕ್ಯಾಂಪಸಿನ ಒಂದೆರಡನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಹಾಸ್ಟೆಲುಗಳು ಸಮಯವನ್ನು ರಾತ್ರಿ 10ಕ್ಕೆ ವಿಸ್ತರಿಸುವ ವರೆಗೆ ಬಂದು ಮುಟ್ಟಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ಕೋಚಿಂಗ್, ಅರೆಕಾಲಿಕ ಉದ್ಯೋಗ ಇತ್ಯಾದಿಗಳಿಗೆ ಅನುಕೂಲವಾಗಿದೆ.

ಇತರ ನಿಯಮಗಳನ್ನು ಕೂಡಾ ಗಮನಾರ್ಹವಾಗಿ ಸಡಿಲಗೊಳಿಸಲಾಗಿದ್ದು, ವ್ಯಾಪಕವಾಗಿದ್ದ ವಾರ್ಡನುಗಳ ದುರ್ನಡತೆಗೆ ಗಮನಾರ್ಹವೆನಿಸುವಷ್ಟು ಕಡಿವಾಣ ಬಿದ್ದಿದೆ. ಪೇಯಿಂಗ್ ಗೆಸ್ಟ್ ವಸತಿಗಳಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದರ ವಿರುದ್ಧವೂ “ಪಿಂಜ್ರಾ ತೋಡ್” ಸಕ್ರಿಯವಾಗಿ ಅಭಿಯಾನ ನಡೆಸಿದ್ದು, ಮಾಲಕರ ಅನುಚಿತ ಬಾಡಿಗೆ ವಸೂಲಿ ಮತ್ತಿತರ ವಿಷಯಗಳಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು, ಅವರಿಗೆ ಗಮನಾರ್ಹವಾದ ಆರಾಮ ಒದಗಿಸಿದೆ.

ಇದಲ್ಲದೇ ಕೆಲವು ನಿರ್ದಿಷ್ಟ ಕ್ಯಾಂಪಸುಗಳಲ್ಲಿ  ಸಣ್ಣಪುಟ್ಟ ಬದಲಾವಣೆಗಳು ಆಗಿವೆ. ಉದಾಹರಣೆಗೆ: ಗಾರ್ಗಿ ಕಾಲೇಜಿನಲ್ಲಿ ಹೊಸ ಶೌಚಾಲಯಗಳ ನಿರ್ಮಾಣ, ಕೆಲವು ಕಾಲೇಜುಗಳಲ್ಲಿ ಇದ್ದ “ವಿ ಟ್ರೀ ಪೂಜಾ” (ಕನ್ಯೆ ಮರದ ಪೂಜೆ), ಅಂಗ ಓಥ್ (ಸ್ತ್ರೀದ್ವೇಷಿ ಪ್ರತಿಜ್ಞೆ) ಇತ್ಯಾದಿ ಲಿಂಗ ಸಂಬಂಧಿ ಮೂಢಾಚರಣೆಗಳನ್ನು ನಿರಂತರ ಅಭಿಯಾನ ಮತ್ತು ಹೋರಾಟಗಳ ನಂತರ ನಿಲ್ಲಿಸಿರುವುದು. ನಾವು “ಹಾದಿಯಾ ಬಿಡುಗಡೆ ಅಭಿಯಾನ”ದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇವೆ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಹಿಂಸಾಚಾರದ ವಿಷಯದಲ್ಲಿ ವ್ಯಾಪಕವಾದ ಅಭಿಯಾನ ನಡೆಸಿದ್ದೇವೆ.

ಇದಕ್ಕೆ ಹೊರತಾಗಿ, ಒಂದು ವಿದ್ಯಾರ್ಥಿ ಗುಂಪಾಗಿ “ಪಿಂಜ್ರಾ ತೋಡ್”- ನಾವು ಸಕ್ರಿಯವಾಗಿರುವ ಎಲ್ಲಾ ಕ್ಯಾಂಪಸುಗಳಲ್ಲಿ ನಡೆದ ಹೆಚ್ಚಿನ ವಿದ್ಯಾರ್ಥಿ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, ಈ ಚಳವಳಿಗಳು ಶುಲ್ಕ ಏರಿಕೆ, ಶಿಕ್ಷಣದ ಖಾಸಗೀಕರಣ, ಪ್ರಜಾಸತ್ತಾತ್ಮಕ ಅವಕಾಶಗಳನ್ನು ಕುಂಠಿತಗೊಳಿಸುವುದು, ಕ್ಯಾಂಪಸುಗಳಲ್ಲಿ ಗೂಂಡಾಗಿರಿ, ಪರೀಕ್ಷಾ ಮತ್ತು ಮೌಲ್ಯಮಾಪನಾ ಸಮಸ್ಯೆಗಳು ಮತ್ತು ಕ್ಯಾಂಪಸುಗಳಲ್ಲಿ ಕಾರ್ಮಿಕರ ಹಕ್ಕುಗಳ ರಕ್ಷಣೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿವೆ.

ಅಜ್ಮೀರ್, ಭೋಪಾಲ, ಲಕ್ನೋ, ರಾಯ್‌ಪುರ, ಮುಂಬಯಿ, ಬನಾರಸ್, ಕೊಲ್ಕತ್ತಾ, ರೋಹ್ಟಕ್, ಲುಧಿಯಾನ, ಜಮ್ಮು, ಚಂಡೀಗಢ್, ಭುವನೇಶ್ವರ, ಕೋಟ್ಟಯಂ, ಹೈದರಾಬಾದ್ ಸೇರಿದಂತೆ ದೇಶಾದ್ಯಂಥ ವಿದ್ಯಾರ್ಥಿನಿಯರ ಹೋರಾಟದಲ್ಲಿ ಸಂಪನ್ಮೂಲ ನೆಲೆಯಾಗಿಯೂ ನಾವು ಕೆಲಸ ಮಾಡಿದ್ದು- ಇತರ ಕ್ಯಾಂಪಸುಗಳ ಜೊತೆ ಏಕತೆಯ ಅಭಿಯಾನಗಳಲ್ಲಿ ಪಡೆದ ವಿಚಾರಗಳು, ಸಾಮಗ್ರಿಗಳು, ಅನುಭವಗಳ ಹಂಚಿಕೆಯಲ್ಲೂ ತೊಡಗಿದ್ದೇವೆ. ಮಹಿಳೆಯರ ಆರೋಗ್ಯ, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಇತ್ಯಾದಿ ಸಮೀಕ್ಷೆಗಳು, ಮೊಹಲ್ಲಾಗಳಲ್ಲಿ ಚಲನಚಿತ್ರ ಪ್ರದರ್ಶನ, ಚರ್ಚೆಗಳು, ಸರಕಾರಿ ಶಾಲಾ ಮಕ್ಕಳಿಗಾಗಿ ಮಹಿಳೆಯರ ಸಮಸ್ಯೆಗಳ ಕುರಿತು ಕಾರ್ಯಾಗಾರ ಇತ್ಯಾದಿಯಾಗಿ ಸಮುದಾಯದ ಚಟುವಟಿಕೆಗಳಲ್ಲೂ ಭಾಗವಹಿಸಿದ್ದೇವೆ.

ವಿಶ್ವವಿದ್ಯಾಲಯದ ಎಲ್ಲೆ ಮೀರಿ- ಗುಜರಾತಿನ ಉನಾದಲ್ಲಿ ದಲಿತರ ಮೇಲೆ ನಜಾತಿ ದೌರ್ಜನ್ಯ, ಉತ್ತಮ ಕೆಲಸದ ವಾತಾವರಣ ಮತ್ತು ಹೆಚ್ಚು ಸಂಬಳಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ- ಮುಂತಾದ ವಿವಿಧ ಸಾಮಾಜಿಕ ಚಳವಳಿಗಳಲ್ಲಿ ಭಾಗವಹಿಸುವುದರ ಮೂಲಕ ಅವುಗಳ ಜೊತೆ ವಿದ್ಯಾರ್ಥಿನಿಯರನ್ನು ಸಂಪರ್ಕಿಸಲು ವರ್ಷಗಳಿಂದ ಬಯಸುತ್ತಿದ್ದೇವೆ.

“ಪಿಂಜ್ರಾ ತೋಡ್” ಯಾವಾಗಲೂ ವಿವಿಧ ಚಳವಳಿಗಳಲ್ಲಿ ಮಹಿಳೆಯ ಧ್ವನಿಯನ್ನು ಬೆಂಬಲಿಸಲು ಮತ್ತು ಎತ್ತರಿಸಲು ಯತ್ನಿಸಿದೆ. ಪ್ರಸ್ತಾಪಿತ ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಜೊತೆಗೆ ಸಿಎಎ ವಿರುದ್ಧ ನಡೆದ ಹೋರಾಟವು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಕಂಡಿದೆ ಮತ್ತು ಸಮಾನತೆಯ ಸಾಂವಿಧಾನಿಕ ಹಕ್ಕಿನ ಮೂಲಭೂತ ರಕ್ಷಣೆಯನ್ನು ಎತ್ತಿಹಿಡಿದಿದೆ. ನಿರೀಕ್ಷೆ ಮೀರಿದ ಮಹಿಳೆಯರ ಭಾಗವಹಿಸುವಿಕೆಯು ನಮಗೆ ಮಹಾ ಸ್ಫೂರ್ತಿಯ ಮೂಲವಾಗಿದೆ. ಕ್ಯಾಂಪಸುಗಳಾದ್ಯಂತ ವಿದ್ಯಾರ್ಥಿಗಳ ವ್ಯಾಪಕ ಭಾಗವಹಿಸುವಿಕೆಯು ವಿದ್ಯಾರ್ಥಿ ಚಳವಳಿ, ಮಹಿಳೆಯರ ಚಳವಳಿ ಮತ್ತು ಸಿಎಎ-ಎನ್‌ಆರ್‌ಸಿ- ಎನ್‌ಪಿಆರ್ ವಿರೋಧಿ ಚಳವಳಿಗಳ ನಡುವಿನ ಸಂಬಂಧದ ಸಹಜ ನಿರಂತರತೆಗೆ ಕಾರಣವಾಯಿತು.

ಬಹುತೇಕ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಮತ್ತು ದೊಡ್ಡ ಸಂಖ್ಯೆಯ ಸಾಮಾನ್ಯ ವಿದ್ಯಾರ್ಥಿಗಳು ತಮ್ಮ ತರಗತಿಗಳು ಮುಗಿದ ಬಳಿಕ ತಮ್ಮ ಕ್ಯಾಂಪಸುಗಳಿಗೆ ಹತ್ತಿರದಲ್ಲಿ ನಡೆಯುತ್ತಿದ್ದ ಧರಣಿಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ತಮ್ಮ ಹಾಸ್ಟೆಲುಗಳ ಸಮಯದ ಗಡು ಮೀರದಿರಲು ಮರಳಿ ಧಾವಿಸುತ್ತಿದ್ದರು. ಒಂದು ದೊಡ್ಡ ಸಮುದಾಯಕ್ಕೆ ಇಂತಹಾ ಒಂದು ತೀವ್ರ ಬಿಕ್ಕಟ್ಟಿನ ಸಮಯದಲ್ಲಿ- ಅವರು ಏಕಾಂಗಿಗಳಲ್ಲ ಮತ್ತು ಇದು ಕೇವಲ ಒಂದು ಸಮುದಾಯದ ಮೇಲೆ ನಡೆದ ದಾಳಿಯಲ್ಲ; ಬದಲಾಗಿ ಎಲ್ಲಾ ಕಡೆಗಣಿಸಿ ಮೂಲೆಗೆ ತಳ್ಳಲ್ಪಟ್ಟ ಸಮುದಾಯಗಳ ಮೇಲೆ ನಡೆದ ದಾಳಿ ಮತ್ತು ಆದನ್ನು ದೇಶದ ನ್ಯಾಯಪರ ಜನರೆಲ್ಲರೂ ಧಿಕ್ಕರಿಸುತ್ತಿದ್ದಾರೆ ಎಂದು ಅವರು ತಿಳಿದುಕೊಳ್ಳಲಿ ಎಂದು ನಾವು ಬಯಸಿದ್ದೆವು.

ಹೋರಾಟದ ತಾಣಗಳಲ್ಲಿ ನೂರಾರು ಕೆಲಸಗಳಿದ್ದವು: ಮಹಿಳೆಯರು ಮತ್ತು ಮಕ್ಕಳಿಗಾಗಿ ಪುಸ್ತಕಗಳು, ಸಾಕ್ಷರತಾ ತರಗತಿಗಳು, ಸಾಮಾನ್ಯ ವಿಷಯಗಳ ಬಗ್ಗೆ ಚರ್ಚೆ, ಚಿತ್ರಗಳು, ಗೋಡೆ ಬರಹಗಳು, ಹಾಡಲು ಹಾಡು, ಕೇಳಲು ಕತೆಗಳು… ಭಾರತದಲ್ಲಿ ಮಹಿಳಾ ಶಿಕ್ಷಣದ ಅಡಿಪಾಯ ಹಾಕಿದ ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ನಮ್ಮ ಚಳವಳಿಯುದ್ದಕ್ಕೂ ಸ್ಫೂರ್ತಿಯಾಗಿದ್ದರು.

ವಿವಿಧ ಸಾಮಾಜಿಕ ಹಿನ್ನೆಲೆಗಳಿಂದ ಬಂದ ಮಹಿಳೆಯರ ನಡುವೆ ಈ ರೀತಿಯ ಒಗ್ಗಟ್ಟು ನಮ್ಮ ಕೆಲಸದ ಬಹುಮುಖ್ಯ ಭಾಗಗಳಲ್ಲಿ ಒಂದು. ಯಾವುದೇ ಒಂದು ಪ್ರಜಾಸತ್ತಾತ್ಮಕ ಹೋರಾಟವು ಸಮಾಜದ ಬೇರೆಬೇರೆ ಜನ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಯಿಂದಲೇ ಬಲಗೊಳ್ಳುತ್ತದೆ ಎಂಬ ಈ ಕಲ್ಪನೆಯೇ ನಾವು ಪ್ರತಿಭಟನಾ ನಿರತ ಮಹಿಳೆಯರತ್ತ ಕೈಚಾಚುವುದಕ್ಕೆ ನೇರ ಕಾರಣವಾಯಿತು.

ಗಲಭೆಗಳ ನಂತರದಲ್ಲಿ ಹಲವಾರು ಮಹಿಳಾ ಹೋರಾಟಗಾರರು- ಗಲಭೆ ಎಬ್ಬಿಸುವುದು ಮುಂತಾದ ಆರೋಪಗಳಲ್ಲಿ- ಯುಎಪಿಎಯಂತಹ ಕರಾಳ ಕಾಯಿದೆಗಳ ಅಡಿಯಲ್ಲಿ ಬಂಧಿತರಾಗಿದ್ದಾರೆ. ಈ ದಾಳಿಯು ಸ್ಪಷ್ಟವಾಗಿಯೇ ಸರಕಾರವು ತರಲುದ್ದೇಶಿಸಿರುವ ತಾರತಮ್ಯದ ಪೌರತ್ವದ ನೆಲೆಗಳನ್ನು ಪ್ರಶ್ನಿಸುವ ಶಾಂತಿಯುತ ಪ್ರತಿಭಟನಕಾರರ ಮೇಲೆ ನಡೆದಿದೆ. ಆದರೆ, ಆಷ್ಟೊಂದು ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಹೋರಾಟಗಾರರನ್ನು ಗುರಿಪಡಿಸಲಾಗಿರುವುದು, ಸತ್ಯಶೋಧಕ ವರದಿಗಳು, ಸರಕಾರವು ಸೋಲುತ್ತಿದೆ ಎಂದು ಸೂಚಿಸುವ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ನೆಪ ಮಾಡಿಕೊಂಡು ಎಲ್ಲಾ ರೀತಿಯ ಭಿನ್ನಮತದ ಧ್ವನಿಗಳನ್ನು ಅಡಗಿಸಲಾಗುತ್ತಿರುವಂತೆ ಕಾಣುತ್ತದೆ.

ಹಿಂಸೆಯ ಹೊಣೆಯನ್ನು ಜನರ ಮೇಲೆ- ಅದರಲ್ಲೂ ಮಹಿಳೆಯರ ಮೇಲೆ ಹೊರಿಸಲಾಗುತ್ತಿರುವುದು- ಆದೂ, ನೇರ ಬೆದರಿಕೆ, ಹಿಂಸಾಕೃತ್ಯಗಳ ಹೊರತಾಗಿಯೂ ತಿಂಗಳುಗಳ ಕಾಲ ಶಾಂತಿಯುತ ಹೋರಾಟವನ್ನು ಮುಂದುವರಿಸಿದವರ ಮೇಲೆ ಹೊರಿಸಲಾಗುತ್ತಿರುವುದು- ಅದೂ ಗಲಭೆಯ ವೇಳೆ ಪೊಲೀಸರ ನಿಷ್ಕ್ರಿಯತೆ ಮತ್ತು ಪ್ರತಿಭಟನಕಾರರ ಮೇಲೆಯೇ ಯಾವುದೇ ಎಗ್ಗಿಲ್ಲದ ನಡೆದ ಪೋಲಿಸ್ ಕ್ರೌರ್ಯದ ಬಗ್ಗೆ ವ್ಯಾಪಕವಾದ ವರದಿಗಳ ಹೊರತಾಗಿಯೂ ಪ್ರತಿಭಟನಕಾರರ, ಮಹಿಳೆಯರ ಹೆಗಲಿಗೆ ಹೊರಿಸಲಾಗುತ್ತಿರುವುದು ಅತ್ಯಂತ ದುರದೃಷ್ಟಕರ.

ಇದು ಕೇವಲ ಚಳವಳಿಯ ಹೆಸರಿಗೆ ಕಳಂಕ ಹಚ್ಚುವ ಒಂಟಿ ಪ್ರಕರಣವಲ್ಲ; ಇದು ನ್ಯಾಯದ ಕಲ್ಪನೆಯನ್ನೇ ಬುಡಮೇಲು ಮಾಡುವ ಪ್ರಯತ್ನವಾಗಿದ್ದು, ದೇಶದಲ್ಲಿ ಪ್ರಜಾಸತ್ತಾತ್ಮಕ ಅವಕಾಶಗಳೇ ಕುಂಠಿತವಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಹಲವಾರು ವಿದ್ಯಾರ್ಥಿಗಳು ಬಂಧಿತರಾಗುತ್ತಿದ್ದಾರೆ ಮತ್ತು ಸರಕಾರದಿಂದ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ. ಆದರೂ, ವಿದ್ಯಾರ್ಥಿ ಚಳವಳಿಯು ಇನ್ನಷ್ಟು ವ್ಯಾಪಕವಾಗಿ ಬೆಳೆದಿದೆ ಅಷ್ಟೇ. ಇಂದು ದೇಶದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಉಳಿಯಬೇಕಾದರೂ ಇಷ್ಟೆಲ್ಲವನ್ನು ಪಣಕ್ಕಿಡಬೇಕಾಗಿ ಬಂದಿದೆ.

  • ಪಿಂಜ್ರಾ ತೋಡ್ ಬಳಗ.

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಕಡೆಗಾಲದಲ್ಲಿ ಹೀಗೇಕೆ ಮಾಡಿದ್ದರು ಪ್ರಣಬ್ ಬಾಬು? – ಡಿ.ಉಮಾಪತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೆಡ್ಗೆವಾರ್‌ ಸಂಘಪರಿವಾರದವರಿಗೆ ಮಾತ್ರ ಆದರ್ಶ, ರಾಜ್ಯದ ಜನತೆ ಅಲ್ಲ: ಎಸ್‌ಎಫ್‌ಐ ಕಿಡಿ | Naanu Gauri

ಹೆಡ್ಗೆವಾರ್‌ ಸಂಘಪರಿವಾರದವರಿಗೆ ಮಾತ್ರ ಆದರ್ಶ, ರಾಜ್ಯದ ಜನತೆ ಅಲ್ಲ: ಭಗತ್‌ ಸಿಂಗ್‌ ಪಾಠ ಕೈ...

0
ರಾಜ್ಯದ ಪಠ್ಯ ಪುಸ್ತಕದಲ್ಲಿ ಸ್ವಾತಂತ್ಯ ಹೋರಾಟಗಾರ ಭಗತ್‌ ಸಿಂಗ್ ಪಾಠ ಸೇರಿ ಅನೇಕ ಪ್ರಗತಿಪರ ಚಿಂತನೆಯ ಪೂರಕ ಪಾಠಗಳನ್ನು ಕೈ ಬಿಟ್ಟು ಸಂಘಪರಿವಾರದ ಸಂಸ್ಥಾಪಕ ಹೆಡಗೇವಾರ್ ಭಾಷಣ ಸೇರ್ಪಡೆ ಹಾಗೂ ಶಿಕ್ಷಣದ ಕೇಸರೀಕರಣ...