Homeಮುಖಪುಟಪೂರ್ಣಚಂದ್ರ ತೇಜಸ್ವಿ ಜೀವನದ ಕುರಿತೊಂದು ಆಪ್ತ ಬರಹ..

ಪೂರ್ಣಚಂದ್ರ ತೇಜಸ್ವಿ ಜೀವನದ ಕುರಿತೊಂದು ಆಪ್ತ ಬರಹ..

ತೇಜಸ್ವಿಯವರ ಕಿವಿ ಬಗ್ಗೆ ನಿಮಗೆ ಗೊತ್ತೆ?

- Advertisement -
- Advertisement -

ಕನ್ನಡದ ಮಹತ್ವದ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ 83ನೇ ಜನ್ಮದಿನ ಇಂದು. ಅವರ ಬರಹಗಳು ಸಾಕಷ್ಟು ಜನರನ್ನು ಪ್ರಭಾವಿಸಿವೆ. ಅಂತಹ ಲೇಖಕನ ಬದುಕಿನ ಒಂದು ಮುಖ್ಯ ಭಾಗದ ಕುರಿತು ಶಿಕ್ಷಕರು ಮತ್ತು ಪ್ರತಿಭಾವಂತ ಛಾಯಾಗ್ರಾಹಕರಾದ ಕಲೀಂ ಉಲ್ಲಾ ರವರು 4 ವರ್ಷದ ಹಿಂದೆ ಬರೆದಿದ್ದ ಆಪ್ತಬರಹವೊಂದನ್ನು ಮರುಮುದ್ರಿಸುತ್ತಿದ್ದೇವೆ.

ತೇಜಸ್ವಿಯವರು ತೀರಿಕೊಂಡ ಮೇಲೆ ಮನಸ್ಸಿನ ಕಳವಳ ಹೆಚ್ಚಾಗಿತ್ತು. ಅದೇಕೋ ಶ್ರೀಮತಿ ರಾಜೇಶ್ವರಿ ಅವರನ್ನು ಕಂಡು ಮಾತಾಡಿಸುವ ಆಸೆ ಹೆಚ್ಚಾಗಿತ್ತು. ನಮ್ಮೊಳಗೂ ತೇಜಸ್ವಿ ಸಾವಿನ ನೋವು ಜೀರ್ಣವಾಗಿರಲಿಲ್ಲ. ತವರಿನ ಜನ ತಮ್ಮಕ್ಕನಿಗೆ ಭಾವನ ಅಗಲಿಕೆಯ ಸಾಂತ್ವನ ಹೇಳಲು ಹೊಸ ಸೀರೆ ಕೊಂಡು ಹೋಗುತ್ತಾರೆ. ನಾವೆಲ್ಲಾ ಅದೇ ಥರ ನಿರುತ್ತರಕ್ಕೆ ಹೋದೆವು. ಮಾತಿನಲ್ಲಿ ಅವರನ್ನು ಸಮಾಧಾನ ಪಡಿಸುವ ಶಕ್ತಿ ನಮಗಿರಲಿಲ್ಲ. ಮಾತುಗಳ ಕೇಂದ್ರ ಸೆಳೆತ ಸಹಜವಾಗಿ ತೇಜಸ್ವಿಯೇ ಆಗಿದ್ದರು. ಸಹಜವಾಗಿ ಇರಲು ಯತ್ನಿಸುತ್ತಿದ್ದ ರಾಜೇಶ್ವರಿಯವರ ಆಳದಲ್ಲಿ ಕಣ್ಣೀರ ಝರಿ ಸದ್ದಿಲ್ಲದೆ ಹರಿಯುತ್ತಿತ್ತು. ಯಾವ ಕ್ಷಣದಲ್ಲಾದರೂ ಅವರ ದುಃಖ ಸ್ಪೋಟಗೊಂಡೀತು ಎಂಬ ದುಗಡದಲ್ಲೇ ಇದ್ದೆವು. ತೇಜಸ್ವಿ ಅವರ ಬದುಕಿನ ವಿಶೇಷಗಳ ಹೇಳುತ್ತಾ ಸಹಜವಾಗಿದ್ದ ಮೇಡಂ ತಮ್ಮ ಮನೆ ನಾಯಿ ‘ಕಿವಿಯ’ ವಿಷಯ ಬಂದಾಗ ಮಾತ್ರ ತಡೆಯಲಾರದೆ ಹೋದರು.

ನಾಯಿ `ಕಿವಿಗೆ’ ವಯೋ ಸಹಜ ಕೊನೆಗಾಲ ಸಮೀಪಿಸಿತ್ತು. ಅದು ನಡೆಯಲಾಗದೆ ದೃಷ್ಟಿ ಮಂದವಾಗಿ ಕೂತಲ್ಲೇ ಚಡಪಡಿಸುತ್ತಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಕಾಡೆಲ್ಲ ಸುತ್ತುತ್ತಿದ್ದ ತೇಜಸ್ವಿ ಅವರ ಚಲನೆಯನ್ನೂ ಕಿವಿ ಕಟ್ಟಿ ಹಾಕಿತ್ತು. ಚಲನೆ ನಿಂತ ಕಿವಿ ಮಂಕಾಗಿತ್ತು. ಅದರ ಸಾವು ನಿಶ್ಚಯವಾದ ಕೊನೇ ದಿನ ತೇಜಸ್ವಿ ಅದನ್ನು ಮಗುವಿನಂತೆ ಎದೆಗವುಚಿಕೊಂಡು ಮನೆ, ತೋಟ ಎಲ್ಲಾ ಕಡೆ ಸುತ್ತಾಡಿಸಿದರಂತೆ.

“ನೋಡೋ ಕಿವಿ ಈ ಜಾಗದಲ್ಲಿ ನೀನು ಹಾವೊಂದನ್ನು ಹೆದರಿ ಓಡಿಸಿದ್ದೆ. ಅಗೋ ಆ ತಾವಿನಲ್ಲಿ ನಿನ್ನ ಗಂಟಲಲ್ಲಿ ಸಿಕ್ಕ ಮೂಳೆ ಚೂರು ನಾನು ಎಳೆದು ತೆಗೆದಿದ್ದೆ. ಪ್ಯಾರನ ಜತೆ ನೀನಿಲ್ಲಿ ತಕರಾರು ಮಾಡಿದ್ದೆ. ಇಗೋ ಅಲ್ಲಿ ಜೇನುನೊಣಗಳು ನಿನ್ನ ಕಚ್ಚಿ ಸತಾಯಿಸಿದ್ದವು. ಈ ಕಿರುದಾರಿಯಲ್ಲೇ ನಾನು ನೀನು ಕಾಡಿಗೆ ಹೋಗುತ್ತಿದ್ದೆವು. ಇದೆಲ್ಲ ನಿನಗೆ ನೆನಪಿದೆ ಅಲ್ವೇನೋ” ಎಂದು ಮಮತೆ ತುಂಬಿ ಕಿವಿಯನ್ನು ಒಪ್ಪಿಸುತ್ತಿದ್ದರು. ಏಕಪಾತ್ರಾಭಿನಯದಂತೆ ಕಾಣುತ್ತಿದ್ದ ಈ ಘಟನೆಯಲ್ಲಿ ತೇಜಸ್ವಿಯ ನಿರಂತರ ಮಾತು, ಕಿವಿಯ ಭಯಾನಕ ಮೌನ ಇಡೀ ಸಂದರ್ಭದ ಸಂಕಟ ಹೆಚ್ಚಿಸಿತ್ತು. ಹೀಗೆ ಸಾಕು ನಾಯಿಯ ಹೊತ್ತುಕೊಂಡು ಅಲೆದಾಡಿ ಚಡಪಡಿಸಿದ ಸಂದರ್ಭ ಕೇಳುತ್ತಾ ರಾಜೇಶ್ವರಿ ಮೇಡಂ ಗೊಳೋ ಎಂದು ರೋಧಿಸತೊಡಗಿದರು. ಆ ಕ್ಷಣ ನಾವೆಲ್ಲಾ ಮಾತು ಮರೆತು ಥಂಡ ಹೊಡೆದು ಕೂತೆವು. ತುಂಬಾ ಹೊತ್ತು ನೀರವ ಮೌನ ಆವರಿಸಿತು. ಮನಸ್ಸಿನಲ್ಲಿ ತೇಜಸ್ವಿ ಗೆಳೆತನಕ್ಕೆ ಅಷ್ಟು ಹತ್ತಿರವಾಗಿದ್ದ ಆ ಕಿವಿಯ ಅದೃಷ್ಟ ನೆನೆದು ಹೆಮ್ಮೆ ಎನಿಸಿತು.

ಸಾಕು ನಾಯಿಯೊಂದು ಗೆಳೆಯನಂತಾಗಿ ಮನೆ ಯಜಮಾನನ ಮನಸ್ಸಿಗೆ ಆಪ್ತವಾಗುವ ಈ ಪ್ರೀತಿಯ ಸೆಲೆಯೇ ವಿಶಿಷ್ಟ ಎನಿಸುತ್ತದೆ. ಮಲೆನಾಡಿನ ಜನ ನಾಯಿಯನ್ನು ತಮ್ಮ ಪ್ರಾಣದಷ್ಟೇ ಗೌರವಿಸುತ್ತಾರೆ. ಅನೇಕ ಆಪತ್ಕಾಲಗಳಲ್ಲಿ ಅವು ಹಿತೈಷಿಗಿಂತ ಹೆಚ್ಚಾಗಿ ನಡೆದುಕೊಂಡಿರುತ್ತವೆ. ಕುಪ್ಪಳ್ಳಿಗೆ ಹೋದವರು ಕುವೆಂಪು ಬಾಲ್ಯದ ಫೋಟೋವೊಂದನ್ನು ಅಲ್ಲಿ ನೋಡಿರಬಹುದು. ಅಲ್ಲಿ ಪುಟ್ಟಪ್ಪನವರು ತಂದೆ ವೆಂಕಟಪ್ಪನವರ ಜೊತೆ ಕೂತು ತೆಗೆಸಿಕೊಂಡ ಅಪರೂಪದ ಫೋಟೋ ಒಂದಿದೆ. ಅಲ್ಲಿ ಕುಟುಂಬದ ಸದಸ್ಯರಂತೆ ಫೋಸು ಕೊಟ್ಟಿರುವ ಅನೇಕ ಶ್ವಾನಗಳನ್ನು ನೋಡಬಹುದು. ಇದು ಮಲೆನಾಡಿನ ಜನರ ಬದುಕಿನೊಳಗೆ ಪ್ರಾಣಿಲೋಕ ಮಿಳಿತಗೊಂಡು ಒಂದಾಗಿರುವ ಬಗೆ. ಕುವೆಂಪು ಕಾದಂಬರಿಯ ‘ಹುಲಿಯಾ’ ತೇಜಸ್ವಿ ಕಥನಗಳ ‘ಕಿವಿ’ ಎರಡೂ ಪ್ರಾಣಿಗಳು ಅವರ ಸಾಹಿತ್ಯದಲ್ಲಿ ಗಳಿಸಿರುವ ಪ್ರಾಮುಖ್ಯತೆಯೇ ಇದಕ್ಕೆ ಸಾಕ್ಷಿ. ಶಿಕಾರಿಯಲ್ಲಿ ಜತೆಯಾಗಿ, ಮನೆಗೆ ಕಾವಲಾಗಿ, ಕಾಡುಪ್ರಾಣಿಗಳ ಆಕ್ರಮಣದಿಂದ ಜೀವ ಕಾಪಾಡುವ ನಾಯಿಗಳ ನಿಯತ್ತು ಮಲೆನಾಡಿಗರಿಗೆ ಇಷ್ಟವಾಗಿದೆ. ಬಯಲು ಸೀಮೆಯ ಕುರಿ ಕಾಯುವ ಜನರೂ ನಾಯಿಗಳನ್ನು ಒಡಹುಟ್ಟಿದವರಂತೆ ಕಾಣುತ್ತಾರೆ. ಅವರ ಇಡೀ ಕುರಿಮಂದೆಯನ್ನು ಜೋಪಾನ ಮಾಡುವ ಬಯಲಿನ ಆಕ್ರಮಣಗಳಿಂದ ಅವರನ್ನು ಕಾಪಾಡುವ ಪ್ರಾಣಿಲೋಕವನ್ನು ಬಲು ಶ್ರದ್ಧೆಯಿಂದ ಗೌರವಿಸುತ್ತಾರೆ.

ತೇಜಸ್ವಿ ತಮ್ಮ ನಾಯಿ ಕಿವಿ ಕುರಿತು “ಕಿವಿ ನನ್ನ ಬಳಿ ಇದ್ದ ಒಂದು ಸ್ಪಾನಿಯಲ್ ಜಾತಿಯ ಬಿಳಿಯ ನಾಯಿ. ಮನೆ ಕಾಯುವುದರಿಂದ ಹಿಡಿದು ಶಿಕಾರಿಯವರೆಗೆ ಎಲ್ಲದರಲ್ಲೂ ಅದ್ವಿತೀಯನಾಗಿದ್ದ. ಅದರ ಗುಣ ಬುದ್ದಿವಂತಿಕೆಗಳನ್ನು ನೋಡಿ ಅನೇಕ ಬಾರಿ ನಾನೂ ಆಶ್ಚರ್ಯಪಡುತ್ತಿದ್ದೆ. ಕೇವಲ ಜಾನಪದ ಗೀತೆಗಳಲ್ಲಿ, ದಂತಕತೆಗಳಲ್ಲಿ ಮಾತ್ರ ಆ ರೀತಿಯ ನಾಯಿ ಇರುತ್ತದೆಂದು ಕೇಳಿದ್ದೆ. ಕಿವಿಯನ್ನು ಸಾಕಿದ ಅನಂತರ ಅದನ್ನು ಸಾಕ್ಷಾತ್ತಾಗಿ ನೋಡಿದಂತಾಗಿತ್ತು” ಎನ್ನುತ್ತಾರೆ.

ಪ್ರಾಣಿಲೋಕದಿಂದಲೂ ಮನುಷ್ಯ ಕಲಿಯಬೇಕಾದ ಜ್ಞಾನದ ಅನೇಕ ಪಾಠಗಳಿವೆ ಎನ್ನುತ್ತಿದ್ದರು ತೇಜಸ್ವಿ. ಪ್ರಕೃತಿ ಹಾಗೂ ಮನುಷ್ಯನ ನಡುವೆ ಅರ್ಥವಾಗದ ಅನೇಕ ಸಂಗತಿಗಳಿರುತ್ತವೆ. ಕೆಲವು ಮನುಷ್ಯನ ಅರಿವಿಗೆ ಬಾರದ ಸೂಕ್ಷ್ಮ ವಿಷಯಗಳು. ಇಂಥವನ್ನು ಮೊದಲು ಕಾಣುವ ಶಕ್ತಿ ನಾಯಿಗಿದೆ. ಈ ನಿಸರ್ಗದ ಸಣ್ಣ ಶಬ್ದ, ಭಿನ್ನ ನಡೆ, ಸೂಕ್ಷ್ಮ ಬದಲಾವಣೆಗಳನ್ನು ನಾಯಿ ಬಲು ಬೇಗ ಗ್ರಹಿಸುತ್ತದೆ. ನಾಯಿಯ ಈ ಪ್ರತಿಭೆಯಿಂದ ನಿಸರ್ಗದ ಜ್ಞಾನದ ಎಳೆಗಳನ್ನು ಹುಡುಕಬಹುದು. ನಾಯಿಯೆಂಬ ಪ್ರಾಣಿಯನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡುವ ಅನೇಕರಿಗೆ ನಾಯಿಯ ಕುರಿತ ಇಷ್ಟೊಂದು ವ್ಯಾಖ್ಯಾನಗಳು ವಿಚಿತ್ರ ಎನಿಸಬಹುದು.

ನಾಯಿಯನ್ನು ಕುರಿತ ವ್ಯಾಮೋಹ, ಅದನ್ನು ಸಾಕುವ ಕಳಕಳಿ ತೇಜಸ್ವಿ ಅವರಿಗೆ ಮೊದಲಿನಿಂದಲೂ ಇದ್ದ ಹಾಗೆ ಕಾಣುತ್ತದೆ. ಅವರ ಪರಿಸರದ ಕಥೆ ಶುರುವಾಗುವುದೇ ನಾಯಿಯ ಮೂಲಕ. ಅನ್ವೇಷಣೆ ಮಾಡುವ ಆನುಷಂಗಿಕ ಗುಣ ನಿರೂಪಕನಲ್ಲಿ ಹೆಚ್ಚಾಗಲು ನಾಯಿ ಜೊತೆಗಿನ ಗೆಳೆತನವೇ ಕಾರಣವಾಗಿರಬೇಕು. ಇದು ಮಲೆನಾಡಿನ ಸಾಕಷ್ಟು ಜನರಿಗೆ ಸಿಕ್ಕಿರುವ ಒಂದು ಪ್ರಾಕೃತಿಕ ವರ. ಕುವೆಂಪು ಅವರಿಗೆ ತೇಜಸ್ವಿ ಬಾಲಕರಾಗಿದ್ದಾಗ “ನಮಗೆ ಎರಡು ನಾಯಿ ಮರಿ ಬೇಕೇಬೇಕು. ಮಾವನಿಗೆ ಕಾಗದ ಬರೆಯುತ್ತಾ ನಮಗೆ ಒಂದು ಹೆಣ್ಣು ನಾಯಿ ಮರಿ ಬೇಕು ಎಂದು ಬರೆಯಿರಿ” ಎಂದು ಒತ್ತಾಯಿಸಿ ಬರೆದಿರುವ ಮೊದಲ ಪತ್ರ ಸಾಕಷ್ಟು ಕುತೂಹಲ ಹುಟ್ಟಿಸುತ್ತದೆ.

ತೇಜಸ್ವಿ ತಮ್ಮ ಮಿಲನಿಯಮ್ ಸರಣಿಯಲ್ಲಿ ‘ಜರ್ಮನ್ ಷಪರ್ಢ್’ ನಾಯಿಯ ಬಗ್ಗೆ ಬರೆಯುತ್ತಾರೆ. ನಮ್ಮಲ್ಲಿನ ‘ಪರಮವೀರ ಚಕ್ರ’ ಪ್ರಶಸ್ತಿಗೆ ಸಮನಾದ ‘ಡಿಕೆನ್ಸ್ ಕ್ರಾಸ್’ ಪ್ರಶಸ್ತಿಯನ್ನು ಈ ಜರ್ಮನ್ ನಾಯಿ ಗಳಿಸುತ್ತದೆ. ಅದಕ್ಕಿಟ್ಟ ಹೆಸರು ‘ಅಂಟಿಸ್’ ಎಂದು. ಯುದ್ಧದಲ್ಲಿ ತೋರಿದ ಧೈರ್ಯ, ಸಾಹಸ, ಪರಾಕ್ರಮಗಳಿಗೆ ಪ್ರಶಸ್ತಿ ಪಡೆಯುವ ಅಂಟಿಸ್ ಅಸಾಧಾರಣ ಬುದ್ಧಿಶಕ್ತಿಯ ನಾಯಿ ಎನಿಸಿತ್ತು, ಜನರ ಕಿವಿಗೆ ಕೇಳಿಸದ ನಿಗೂಢ ಸದ್ದು ಅದಕ್ಕೆ ಮೊದಲೇ ಕೇಳಿಸುತ್ತಿತ್ತು. ತನ್ನ ಅಧ್ಭುತ ಶಕ್ತಿಯಿಂದ, ಜ್ಞಾನಪ್ರತಿಭೆಯಿಂದ ನೂರಾರು ಜನರ ಹಾಗೂ ಸೈನಿಕರ ಪ್ರಾಣವನ್ನು ಯುದ್ಧದಲ್ಲಿ ಉಳಿಸಿದ ಈ ನಾಯಿಯ ಬಗ್ಗೆ ತೇಜಸ್ವಿ ಹೆಮ್ಮೆಯಿಂದ ಬರೆಯುತ್ತಾರೆ. ನಾಯಿಯ ಇಂದ್ರಿಯಗಳ ಅಸಾಧಾರಣ ಸೂಕ್ಷ್ಮಜ್ಞತೆ, ಅವುಗಳಿಗಿರುವ ಅಸಾಧಾರಣ ಬುದ್ಧಿಶಕ್ತಿಯ ಬಗ್ಗೆ ಹೆಚ್ಚು ಒಲವಿದ್ದ ಕಾರಣಕ್ಕೆ ತೇಜಸ್ವಿ ಕಥನಗಳು ನಾಯಿಯ ಕುರಿತು ಹೆಚ್ಚು ಶ್ರದ್ಧೆ ತೋರುತ್ತವೆ.

‘ಪರಿಸರ ಕಥೆ’ಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಾಗೂ ‘ಕರ್ವಾಲೊ’ ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿ ಬರುವ ಕಿವಿ ಎಂಬ ನಾಯಿಯ ಪಾತ್ರವನ್ನು ತೇಜಸ್ವಿ ಬಲು ಜತನದಿಂದ ನಿರೂಪಿಸುತ್ತಾರೆ. ಕಾಡಿನ ಅರಿವನ್ನು ಕಲಿಸುವ ಒಬ್ಬ ಗುರುವಾಗಿ ನಾಯಿ ಇಲ್ಲಿ ಕಾಣುತ್ತದೆ. ಕಾಡಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಲೇಖಕರಿಗೆ ತಿಳಿಯುವಂತೆ ಮಾಡುವ ಕಿವಿ ಪ್ರಕೃತಿ ಹಾಗೂ ಮನುಷ್ಯನ ನಡುವೆ ಜ್ಞಾನದ ಕೊಂಡಿಯಾಗಿ ಕೆಲಸ ಮಾಡುತ್ತದೆ.

“ನಾನು ತೋಟ ಮಾಡಲು ಆರಂಭಿಸಿದ ಮೊದಲ ವರ್ಷಗಳಲ್ಲಿ ಕೋವಿ ಹೆಗಲ ಮೇಲೆ ಹಾಕಿಕೊಂಡು ದಿನವಿಡೀ ಕಿವಿಯೊಂದಿಗೆ ಅಲೆಯುವುದು ನನ್ನ ಕೆಲಸವಾಗಿತ್ತು. ಓದುವುದು, ಬರೆಯುವುದು, ಎಲ್ಲದಕ್ಕೂ ತಿಲಾಂಜಲಿಯಿತ್ತು. ಹೀಗೆ ನಿರ್ಜನ ಕಾಡುಗಳಲ್ಲಿ ಗೊತ್ತು, ಗುರಿಯಿಲ್ಲದೆ ಅಲೆಯುತ್ತಿರುವ ನನ್ನನ್ನು ನೋಡಿ ಅನೇಕರು ಇವನು ಸಂಪೂರ್ಣ ಹಾಳಾದನೆಂದು ವ್ಯಸನ ಸೂಚಿಸಿದವರಿದ್ದಾರೆ. ಅನೇಕರು `ಎಂಥವರಿಗೆ ಎಂಥಾ ಮಗ’ ಎಂದು ವಿಷಾದಪಟ್ಟವರೂ ಅನೇಕರಿದ್ದಾರೆ. ಕೆಲವರು ‘ಈ ನಾಯಿಯ ದೆಸೆಯಿಂದ ಹಾಳಾದ’ ಎಂದು ಕಿವಿಯನ್ನೂ ದೂಷಿಸಿದವರೂ ಇದ್ದಾರೆ” ಎನ್ನುತ್ತಾರೆ ತೇಜಸ್ವಿ

ಕುವೆಂಪು ಸಾಹಿತ್ಯ ಪ್ರಕೃತಿಯ ವಿವರಗಳಿಂದ ಸೌಂದರ್ಯ ಮತ್ತು ಧ್ವನಿ ಪಡೆದು ಭಾವನಾತ್ಮಕವಾದರೆ, ಅದೇ ತೇಜಸ್ವಿ ಕಥನ ನಿಸರ್ಗದಲ್ಲಿ ಕಾಣದ ಬದುಕಿನ ವಿವರಗಳೆಡೆಗೆ ಆಸಕ್ತಿ ವಹಿಸಿ ಸೃಜನಾತ್ಮಕವಾಗುತ್ತದೆ. ಕುವೆಂಪು ಅವರ ನಾಯಿಗುತ್ತಿ ಪ್ರಕೃತಿಯ ನಡುವೆ ಒಂದು ಲಯವಾಗಿ ಬದುಕುವವನು. ಆತನ ನಾಯಿ ಹುಲಿಯ ನಿಸರ್ಗವನ್ನು ನೋಡುವ ಅವನ ನೋಟವನ್ನು ಹೆಚ್ಚು ಸೂಕ್ಷ್ಮಗೊಳಿಸುತ್ತದೆ. ಅವನಿಗೂ ನಿಸರ್ಗದ ಅರಿವಿನ ಪಾಠ ಹೇಳುವ ಸೂಕ್ಷ್ಮ ಜೀವಿ ಅದು. ಇದರ ಹಾಗೆಯೇ ತೇಜಸ್ವಿ ಕಥನದ ನಾಯಿ ‘ಕಿವಿ’ ಕೂಡ ನಿಸರ್ಗದ ಕಾಣದ ಅನೇಕ ಮುಖಗಳನ್ನು ತೋರಿಸುತ್ತಾ ಹೋಗುತ್ತದೆ. ಪ್ರಾಣಿಯಿಂದ ಮನುಷ್ಯ ಕೂಡ ಕಲಿಯುತ್ತಾನೆ ಮತ್ತು ಕಲಿಯಬೇಕು ಎಂಬ ಸಂಗತಿಯೇ ಇಲ್ಲಿ ಮುಖ್ಯ.

ಅಲೆದಾಟದಲ್ಲಿ, ಸಾಕು ಪ್ರಾಣಿಯೊಟ್ಟಿಗಿನ ಆಪ್ತತೆಯಲ್ಲಿ ಜ್ಞಾನ ಗಳಿಸುತ್ತಿದ್ದ ತೇಜಸ್ವಿ ಹೊರ ಜಗತ್ತಿಗೆ ಹಾಳಾದವರಂತೆ ಕಂಡಿರುವುದು ಉತ್ಪ್ರೇಕ್ಷೆಯ ಸಂಗತಿಯಲ್ಲ. ಮನುಷ್ಯ ತನ್ನೆಲ್ಲಾ ಸಂಬಂಧಗಳಷ್ಟೇ ಮಿಗಿಲಾಗಿ ಪ್ರಾಣಿಲೋಕದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳುವುದು ಬಯಲ ಮತ್ತು ಕಾಡಿನ ಬದುಕಿನವರಿಗೆ ಎಷ್ಟು ಅನಿವಾರ್ಯ ಎನ್ನುವುದನ್ನು ತೇಜಸ್ವಿ ಕಥನಗಳು ಹೇಳುತ್ತವೆ.

ಮನುಷ್ಯನಿಗಿಂತ ಮಿಗಿಲಾದ ವಾಸನಾ ಜ್ಞಾನ, ಮತ್ತು ಎಚ್ಚರದ ಸ್ಥಿತಿ ಇರುವ ನಾಯಿ ತೇಜಸ್ವಿ ಅವರಿಗೆ ಹೊಸ ಸಂಗತಿಗಳನ್ನು ತಿಳಿಸುವ ಗುರುವಾಗಿದೆ. ತನ್ನ ಸೂಕ್ಷ್ಮ ಗ್ರಹಿಕೆಗಳಿಂದ ನಿರೂಪಕನ ಅರಿವನ್ನು ವಿಸ್ತಾರಿಸುವ ನಾಯಿ ಜಗದ ಕಣ್ಣಿಗೆ ಮಾತ್ರ ಸಾಮಾನ್ಯ ಪ್ರಾಣಿ. ಇಂಥ ಸಾಮಾನ್ಯ ಜೀವದಿಂದಲೂ ಕಲಿಯುವ ಸಾಕಷ್ಟು ಸಂಗತಿಗಳಿವೆ ಎಂಬ ಸರಳ ಸತ್ಯವನ್ನು ತೇಜಸ್ವಿ ಕಥನಗಳು ತೆರೆದಿಡುತ್ತವೆ. “ಮನುಷ್ಯನ ಮಿತ್ರ ಶೇಷ್ಠನಾದ ನಾಯಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ನಮಗೆ ಪರಿಚಯವಾದಾಗ ಮಾತ್ರ ನಾಯಿಯ ಹಿರಿಮೆ ನಮಗೆ ಅರ್ಥವಾಗುತ್ತದೆ. ನಮ್ಮ ಅಂತಃಕರಣವನ್ನು ಈ ಜೀವಗಳು ಎಷ್ಟು ಕಲಕುತ್ತವೆ ಎಂದರೆ ಇದನ್ನು ಇತರರಿಗೆ ವಿವರಿಸಿ, ವಿಶ್ಲೇಷಿಸಿ ಹೇಳುವುದು ಕಷ್ಟ ಎನಿಸುತ್ತದೆ” ಎನ್ನುತ್ತಾರೆ ತೇಜಸ್ವಿ. ನಮ್ಮ ಪರಿಸರದಲ್ಲೇ ಬದುಕುವ ಜೀವಿಗಳ ಜೊತೆಗೆ ಸಹಜವಾಗಿ ಬಾಳುವ ಜೊತೆಗೆ ಅವುಗಳ ಅಂತಃಸತ್ವವನ್ನೂ ಅರಿತು ಗೌರವಿಸುವ ವಿವೇಕವನ್ನು ತೇಜಸ್ವಿ ಬರೆಹಗಳು ಕಲಿಸುತ್ತವೆ.

“ನಾಯಿಗೆ ನಾವು ಮಾಡುವಂತೆ ಮಾನವೀಯ ವ್ಯಕ್ತಿತ್ವವನ್ನೂ ಆರೋಪಿಸಿ ನಮ್ಮಂತೆಯೇ ಅದು ಕೂಡ ಎಂದು ನೋಡುವುದರಿಂದ ನಾಯಿಗೆ ಸಂತೋಷವಾಗಲೀ, ಪ್ರಯೋಜನವಾಗಲೀ ಉಂಟೆ ಎಂದು ನನಗೆ ಅನುಮಾನ” ಎನ್ನುವ ತೇಜಸ್ವಿ ಮನುಷ್ಯ ಮತ್ತು ಪ್ರಾಣಿಲೋಕದ ನಡುವೆ ಇಕಾಲಜಿ ರೂಪಿಸಿರುವ ಮಿತಿಗಳನ್ನೂ ಗಮನಿಸಿ ಹೇಳಬಲ್ಲರು. ಪರಿಸರ ಲೋಕದ ಇಂಥ ಬೆಸುಕೊಂಡಿಗಳನ್ನು ನಮ್ಮ ನಮ್ಮ ಬುದ್ಧಿಶಕ್ತಿಯ ಮಿತಿಗೆ ತಕ್ಕಂತೆ ನಾವೆಲ್ಲಾ ವ್ಯಾಖ್ಯಾನಿಸಿಕೊಳ್ಳುತ್ತಿದ್ದೇವೆ. ಈ ಪ್ರಾಣಿಲೋಕವನ್ನು ಕರುಣೆ, ಸಹಾನುಭೂತಿಯಿಂದ ನೋಡಬೇಕೇ ಹೊರತು ನಮ್ಮಂತೆ ಅವೂ ಕೂಡ ಇರಬೇಕು ಎಂದು ಬಯಸುವುದು ಮನುಕುಲದ ಆಲೋಚನಾ ಪರಿಮಿತಿ.

ತನ್ನ ಜಾಣತನ, ನಿಷ್ಠ್ಠೆ ಮತ್ತು ಪ್ರತಿಭೆಗಳನ್ನು ತನ್ನ ಸಾಕುವ ಮಾಲೀಕನಿಗೆ ಪರಿಚಯಿಸಲು ಹೋಗಿ ಹತವಾದ ನಾಯಿಗಳ ಕಥೆ ಅನೇಕ ಇವೆ. ಹುಚ್ಚು ಸಾಹಸಗಳ ತೋರಿಸಲು ಹೋಗಿ ಶತ್ರುಗಳಿಂದ ಕೊಲ್ಲಲ್ಪಟ್ಟ ನಾಯಿಗಳಿವೆ. ಕಾಡಿನ ಪ್ರಾಣಿಗಳ ಜತೆ ಸೆಣೆಸಿ ಪ್ರಾಣ ಬಿಡುವ ಅನೇಕ ನಾಯಿ ಪಾತ್ರಗಳು ತೇಜಸ್ವಿ ಕಥೆಗಳಲ್ಲಿವೆ. ಭಿಕ್ಷುಕರು ಬಂದರೆ ಬೊಗಳುವುದು, ಸಿರಿವಂತರು ಬಂದರೆ ಗೌರವಿಸುವ ಗುಣ ತಮ್ಮ ನಾಯಿ ಕಿವಿ ಕಲಿತ ಬಗ್ಗೆ ತೇಜಸ್ವಿಯವರಿಗೆ ಆಶ್ಚರ್ಯವೆನಿಸುತ್ತದೆ. ತರತಮ ಭಾವ ಮನುಷ್ಯರಲ್ಲಿ ಸಹಜ. ಆದರೆ ನಾಯಿಯೂ ಇದನ್ನು ಪಾಲಿಸುವುದು ಹೇಗೆಂದು ಅವರಿಗೂ ಗೊತ್ತಾಗುವುದಿಲ್ಲ. “ಇದು ನಾಯಿಗೆ ಇರುವ ತಾರತಮ್ಯ ಭಾವವೋ, ಪ್ರಕೃತಿ ಅದಕ್ಕೆ ಕಲಿಸಿರುವ ಪಾಠವೋ ಗೊತ್ತಿಲ್ಲ. ಮನುಷ್ಯರಂತೆಯೇ ಬೇರೆ ಬೇರೆ ಸ್ವಭಾವ, ವರ್ತನೆ ಇರುವ ಪ್ರಾಣಿ ಲೋಕವೂ ಇರುತ್ತದೆ ಎನ್ನುವುದಕ್ಕೆ ನಾಯಿ ಕಿವಿಯೇ ಉದಾಹರಣೆ” ಎನ್ನುತ್ತಾರೆ.

ಪ್ರಾಣಿ ಪಕ್ಷಿಗಳಿಗೆ ಮನುಷ್ಯರಂತೆ, ಬದುಕಿನ ವಿವರಗಳು, ಜಿದ್ದು, ನೆನಪು, ಭಾವುಕತೆ, ಉಪಕಾರ ಸ್ಮರಣೆ, ಸ್ನೇಹ, ನಂಬಿಕೆಗಳು, ಸಂಬಂಧಗಳನ್ನು ಕಾಪಾಡುವ ಜವಾಬ್ದಾರಿ ಇತ್ಯಾದಿಗಳು ಇರುತ್ತವೆಯೋ ಇಲ್ಲವೋ ಎನ್ನುವ ಚರ್ಚೆ ಅನೇಕ ಕಡೆ ಬರುತ್ತದೆ. ಮನುಷ್ಯ ಪ್ರತಿಯೊಂದು ಜೀವದ ಜತೆ ದಿನನಿತ್ಯದ ಸಖ್ಯ, ಒಡನಾಟ ಬೆಳೆಸಿಕೊಂಡರೆ ತನ್ನತನದ ಸ್ವರೂಪಗಳನ್ನು, ಮನುಷ್ಯನ ವ್ಯಕ್ತಿತ್ವಕ್ಕೆ ಹತ್ತಿರದ ಗುಣ ಸ್ವಭಾವಗಳನ್ನು ಪ್ರಾಣಿ ಪಕ್ಷಿಗಳಲ್ಲಿ ಹುಡುಕಲು ಆರಂಭಿಸುತ್ತಾನೆ. ಇದೊಂದು ಸಹಜ ಪ್ರಕ್ರಿಯೆ.

ಲೇಖಕರ ಕೈಯ್ಯಲ್ಲಿ ಕೋವಿ ನೋಡಿದರೆ ನಾಯಿ ಕಿವಿ ಬೆಳಗಾಗುವವರೆಗೂ ಹಿಂದಿರುಗದೆ ರಾತ್ರಿ ಎಲ್ಲಾ ಕಾಡೊಳಗೇ ಶಿಕಾರಿ ಹುಡುಕಿಕೊಂಡು ತಿರುಗುವ ಸ್ವಭಾವ ಹೊಂದಿದೆ. ತಿರುಗಾಟದ, ಶಿಕಾರಿಯ ಹಿಂದೆ ಅಲೆಯುವ ಸ್ವಭಾವ ಪ್ರಧಾನ ಗುಣವಾದ ಕಾರಣ ಲೇಖಕನಿಗೆ ಕಿವಿ ಮುಖ್ಯ ಸಂಗಾತಿ ಎನಿಸುತ್ತದೆ. ಶಿಕಾರಿ ಸಮಯದಲ್ಲಿ ಟಾರ್ಚ್ ಬೆಳಕನ್ನೂ, ನಿರೂಪಕನ ಧ್ವನಿಯನ್ನೂ ಕೇಳುತ್ತಲೇ ಅದನ್ನೇ ತನ್ನ ಪ್ರೋತ್ಸಾಹವೆಂದು ತಿಳಿದು ಮತ್ತಷ್ಟು ಜೋರಾಗಿ ಬೊಗಳುತ್ತಾ, ಪೊದೆಯ ಮುಳ್ಳು, ಅಪಾಯ ಒಂದನ್ನೂ ಲೆಕ್ಕಿಸದೆ ಪ್ರಾಣಿಯ ಮೇಲೆ ಹಾರಿ ಆಕ್ರಮಣ ಮಾಡುವ ಕಿವಿ ತನ್ನ ಈ ವಿಶೇಷ ಪ್ರತಿಭೆಯ ಕಾರಣಕ್ಕೆ ಹೆಚ್ಚು ಮನ್ನಣೆ ಪಡೆಯುತ್ತದೆ. ಮನುಷ್ಯರ ಜೊತೆ ಬದುಕುತ್ತಾ ಅವರ ಬೇಕು ಬೇಡಗಳನ್ನು ಅರಿತು ಅವರಂತಾಗುವ ವಿಶೇಷ ಗುಣ ನಾಯಿಗಳಿಗಿದೆ.


ಇದನ್ನೂ ಓದಿ: ತೇಜಸ್ವಿಯವರ ಒಂದು ಸೀಟಿನ ಸ್ಕೂಟರ್‍ರೂ… ಡ್ರಾಪಾಯಣದ ಸಮೃದ್ಧ ಅನುಭವವೂ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...