ಪೂರ್ಣಾವಧಿ ಸೋಶಿಯಲ್ ಮೀಡಿಯಾ ಸ್ಟಾರ್, ಅಲ್ಪಾವಧಿ ಲೋಕಸಭಾ ಸದಸ್ಯರಾಗಿರುವ ತೇಜಸ್ವಿ ಸೂರ್ಯ ನಾರಾಯಣರಾವು ಅವರು ಮೊನ್ನೆ ಬೆಂಗಳೂರು ಎಂಬೋ ಮಾಯಾನಗರಿಯೊಳಗ ಒಂದು ಕಾಲ್ ಸೆಂಟರ್‌ದೊಳಗಿನ 17 ಮಂದಿ ಮುಸ್ಲಿಂ ಕೆಲಸಗಾರರ ಹೆಸರು ಓದಿ, ಮರುದಿವಸ ಒಂಬತ್ತು ಮಂದಿ ಗೈರು ಮುಸ್ಲಿಂರ ದಸ್ತಗಿರಿ ಮಾಡಿಸಿದ್ದು ನಮಗ ಗೊತ್ತು.
ಇಲ್ಲೇ ಪ್ರಶ್ನೆ ಏನು ಅಂದ್ರ ಒಬ್ಬ ಎಂಪಿ ಕೆಲಸ ಏನು? ಪತ್ತೇದಾರಿ ವರದಿಗಾರರಂತೆ ಹಗರಣ ಹೊರಗೆ ತೆಗೆಯೋದೋ ಅಥವಾ ಸರ್ಕಾರದ ಕೆಲ್ಸಗಳು ಸರಿಯಾಗಿ ನಡಿಯೋ ಹಂಗ ಮಾಡೋದೋ?
ತೇಜಸ್ವಿ ಅವ್ರು ಮಾಡಿದ್ದೇ ಸರಿ. ಅವ್ರು ಈ ಹುಳುಕು ಹೊರಗೆ ತೆಗೆಯದೇ ಇದ್ದರೆ ಯಾರು ತೆಗೆಯಬೇಕಿತ್ತು? ಅಂತ ಅವರನ್ನು ಹೊಗಳುವ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಕ್ಕೆಬಿಟ್ಟರು ಅಂತ ಖುಷಿಯಿಂದ ಕುಣಿಯುತ್ತಿರುವ ಜನರಿಗೆ ಏನೂ ಕಮ್ಮಿ ಇಲ್ಲಾ.
ಈ ಜನರ ಭಾವನೆ ಸರಿ. ಅದನ್ನು ನಾನು ಮೈಸೂರು ತೇರು ಮೈದಾನದಿಂದ ಬೇಕಾದರೂ ಹೇಳಬಲ್ಲೆ ಅಂತ ಇನ್ನೊಬ್ಬ ಯುವ ಸಂಸದ ಪ್ರತಾಪ್ ಸಿಂಹ ಅವ್ರು ಹೇಳಿಬಿಟ್ಟಾರ. ಅವ್ರು ಇಂಥ ಕೆಲ್ಸಾ ಮಾಡಿಯೇ ಮುಂದೆ ಬಂದಾರ. ಎರಡು ವರ್ಷದ ಹಿಂದೆ ಕೊಡಗು ಜಿಲ್ಲೆಯೊಳಗ ಪ್ರವಾಹ ಬಂದಾಗ ಅವ್ರು ಒಂದು ಕೆಂಪು ಅಂಗಿ ಬಿಳೆ ಬೂಟು ಹಾಕಿಕೊಂಡು ಕರೆಂಟ್ ಕಂಬಾ ಭೂಮಿಯೊಳಗ ನೆಡುವ ಪ್ರಯತ್ನ ಮಾಡಿದ್ದ ಫೋಟೋ ಸೋಶಿಯಲ್ ಮೀಡಿಯಾದಾಗ ಓಡಾಡಲಿಕ್ಕೆ ಹತ್ತಿತ್ತು. ಆವಾಗ ಅವರ ಸಹೋದ್ಯೋಗಿಯಾಗಿದ್ದ ಹಿರಿಯ ಪತ್ರಕರ್ತರು ಒಬ್ಬರು “ನಾವು ಈ ಯುವ ಸಂಸದರನ್ನು ದೆಹಲಿಗೆ ಕಳಿಸಿದ್ದು ಯಾಕೆ ಅಂದ್ರೆ ಅವರು ಪ್ರಧಾನಿ ಹಾಗೂ ಇತರ ಮಂತ್ರಿಗಳ ಜೊತೆ ಸೇರಿ ಕರ್ನಾಟಕಕ್ಕೆ ಹೆಚ್ಚಿನ ನೆರವು ಕೊಡಿಸಲಿ ಅಂತ. ಹಸಿ ಮಣ್ಣಿನ ನೆಲದಲ್ಲಿ ಕರೆಂಟ್ ಕಂಬ ನೆಡಲಿ ಅಂತ ಅಲ್ಲಾ” ಅಂತ ಕಾಮೆಂಟ್ ಮಾಡಿದ್ರು. ಇದು ದೊಡ್ಡ ಸುದ್ದಿಯಾಗಿತ್ತು.
ಇದೆ ಮಾದರಿಯಲ್ಲಿ ಹಿರಿಯ ಭಾರತೀಯ ಪೊಲೀಸು ಸೇವೆ ಅಧಿಕಾರಿ ರೂಪ ದಿವಾಕರ್ ಅವ್ರು ತಾವು ಜೈಲಿನಲ್ಲಿ ಡಿಐಜಿ ಇದ್ದಾಗ ಅಲ್ಲಿನ ಆಡಳಿತದಲ್ಲಿನ ತಪ್ಪುಗಳನ್ನು ಸರಿ ಮಾಡುವುದನ್ನು ಬಿಟ್ಟು ಥೇಟು ಎನ್‌ಜಿಓ ಶೈಲಿಯಲ್ಲಿ ಒಂದು ದೊಡ್ಡ ರಿಪೋರ್ಟ್ ಬರೆದರು.
ಅವರು ನಾನು ನಿಗರಾಣಿ ಅಧಿಕಾರಿಯಾಗಿರುವ ಈ ಜೈಲಿನಲ್ಲಿ, ನನ್ನ ಕೆಳಗೆ ಹಾಗು ಮೇಲೆ ಇರುವ ಅಧಿಕಾರಿಗಳು ಇಂತಹ ತಪ್ಪುಗಳನ್ನು ಮಾಡಿದ್ದಾರೆ, ಮಾಡುತ್ತಾ ಇದ್ದಾರೆ, ಮುಂದೆಯೂ ಮಾಡುವ ಸಾಧ್ಯತೆ ಇದೆ ಅಂತ ಹೇಳಿ ಒಂದು ವರದಿ ಕೊಟ್ಟರು. ಅದನ್ನು ಮಾಧ್ಯಮದವರು ದೇವವಾಣಿಯಂತೆ ಕಂಡು ಪೂಜೆ ಮಾಡಿದ್ರು. ಅದನ್ನು ಬರೆದ ಅಧಿಕಾರಿಯನ್ನು ಪ್ರಮಥರಂತೆ ನೋಡಿದರು. ನಿಮ್ಮನ್ನು ಭಾ.ಪೋ.ಸೇ.ಗೆ ಸೇರಿಸಿ, ತೆರಿಗೆದಾರರ ಹಣದಿಂದ ನಿಮಗೆ ತಿಂಗಳು ತಿಂಗಳು ಸಂಬಳ ಕೊಟ್ಟಿದ್ದು ಯಾಕೆ? ಅಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಲಿಕ್ಕೋ ಅಥವಾ ಇದು ನನ್ನ ಕಣ್ಣಿಗೆ ಬಿದ್ದಿದೆ ಆದರೆ ನಾನು ಅದರ ಬಗ್ಗೆ ಏನೂ ಮಾಡಲಾರೆ ಅಂತ ಅಸಹಾಯಕತೆ ವ್ಯಕ್ತಪಡಿಸಲಿಕ್ಕೋ ಅಂತ ಯಾವ ಟಿವಿ ಚಾನೆಲ್‌ನ ಹಿಡಿಗೂಟಗಳೂ ಕೇಳಲಿಲ್ಲ.
ಇವತ್ತಿಗೂ ನಮ್ಮ ಜನರಿಗೆ ಯಾರ ಹತ್ತಿರ ಗೋಳು ಹೇಳಿಕೊಳ್ಳಬೇಕು ಅನ್ನುವುದು ಗೊತ್ತಿಲ್ಲ. ಸುಂಕ ವಸೂಲಾತಿಗೆ ಬಂದ ಕಂದಾಯ ಅಧಿಕಾರಿಯ ಮುಂದೆ ಯಪ್ಪಾ ನಮ್ಮ ಹತ್ತಿರ ಉಣ್ಣಾಕ್ ರೊಕ್ಕಾ ಇಲ್ಲ ಅಂದ್ರೆ ಬಿಡುತ್ತಾನೆಯೇ? ವಿಧಾನಸಭೆ – ಸಂಸತ್ತು ಸಭೆಗಳಲ್ಲಿ ಹೋಗಿ ನಮ್ಮ ಪರವಾಗಿ, ನಮ್ಮ ಸುಂಕ ಕಮ್ಮಿ ಮಾಡಬೇಕು ಅಂತ ಮಾತು ಆಡಬೇಕಾದವರು ಆಡೋದಿಲ್ಲ. ಅವ್ರ ಕುತ್ತಿಗೆ ಪಟ್ಟಿ ಹಿಡದು ನಾವು ಕೇಳೋದಿಲ್ಲಾ. ನಮ್ಮ ಮನಿಗೆ ನೀರು ಬರಲಿಲ್ಲ ಅಂದರ ಜಿಲ್ಲಾಧಿಕಾರಿಯ ಕಚೇರಿಗೆ ಹೋಗ್ತೆವಿ, ಹೊರತು, ನಮ್ಮ ನಗರಸಭೆ ಸದಸ್ಯರ ಮನಿಯ ಮುಂದ ಹೋಗಿ ಕೂಡೋದಿಲ್ಲಾ.
ಈ ಸಾರೆ ಅಂತೂ ನಾವು ಕಾಶ್ಮೀರದ ಹುಡುಗಿ ಮಾಡಿಕೊಂಡು, ಅಲ್ಲೇ ಹತ್ತು ಎಕರೆ ಸೇಬುಹಣ್ಣಿನ ತೋಟ ವರದಕ್ಷಿಣೆ ಪಡಿಯಬೇಕು ಅಂತ ಈಗಿನ ಆಳುವ ಪಕ್ಷಕ್ಕ ವೋಟು ಹಾಕಿದ್ದೇವಿ. ಹೀಗಾಗಿ, ಸರಕಾರೀ ಆಸ್ಪತ್ರೆ ಒಳಗ ಹಾಸಿಗೆ ಸಿಗಲಿಲ್ಲಾ, ರೋಗಿಗಳಿಗೆ ಆಮ್ಲಜನಕ ಸಿಗಲಿಲ್ಲ, ರೆಮೆಡಿಸಿವಿರ್ ಇಂಜಕ್ಷನ್ ಕೊಡಲಿಲ್ಲ ಅಂತ ಹೇಳಿ ನಾವು ದೂರು ಕೊಡಲಿಕ್ಕೆ ಬರೋದಿಲ್ಲಾ.
ಕಾಶ್ಮೀರದಾಗಿನ ಸೇಬುಹಣ್ಣಿನ ಬಣ್ಣದ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕ ಜೀವನದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್ ಎಲ್ಲೇ. ಏನರ ಹೋಲಿಕೆ ಅದ ಏನು ಹೇಳ್ರಿ?


