Homeಕರೋನಾ ತಲ್ಲಣಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಮೂರು ಪುಸ್ತಕಗಳು ನುಡಿಯುವ ಎಚ್ಚರಿಕೆ ಮತ್ತು ಸತ್ಯ!

ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಮೂರು ಪುಸ್ತಕಗಳು ನುಡಿಯುವ ಎಚ್ಚರಿಕೆ ಮತ್ತು ಸತ್ಯ!

ಈ ಮೂರೂ ಪುಸ್ತಕಗಳಲ್ಲಿನ ಸಮಾನ ಅಂಶವೆಂದರೆ ಆಡಳಿತ ವ್ಯವಸ್ಥೆ ಮತ್ತು ಜನರು ಸಾಂಕ್ರಾಮಿಕ ಪಿಡುಗು ಬಂದು ತಟ್ಟುವವರೆಗೂ ಮತ್ತು ತಟ್ಟಿದ ಮೇಲೂ ಬಹಳವಾಗಿ ಅಜಾಗರೂಕರಾಗೇ ಇರುತ್ತಾರೆ. ಬರಬಹುದಾದ ದುರಂತವನ್ನ ನಂಬಲು, ಅರ್ಥಮಾಡಿಕೊಳ್ಳಲು ಹಿಂಜರಿಯುತ್ತಾರೆ.

- Advertisement -
- Advertisement -

ಮೊದಲನೇ ಮಹಾಯುದ್ಧದ ನಂತರ ಜರ್ಮನಿಯ ರಾಜ ಕೈಸರ್ ವಿಲ್ ಹೆಲ್ಮ್ (Kaiser Wllhelm) ನವಂಬರ್ 9, 1918ರಂದು ತನ್ನ ಅಧಿಕಾರವನ್ನ ತ್ಯಜಿಸಿದ. ಪ್ಯಾರಿಸ್ ನಗರದ ಬೀದಿ ಬೀದಿಗಳಲ್ಲಿ ಅಂದು ಹರ್ಷಭರಿತ ಸಂಭ್ರಮಾಚರಣೆ ನಡೆಯಿತು. ವಿಲ್ ಹೆಲ್ಮ್‌ಗೆ ಸಾವು, ವಿಲ್ ಹೆಲ್ಮ್‌ಗೆ ಧಿಕ್ಕಾರ ಎಂಬುವ ಕೂಗಿನ ಮೊರೆ ಎಲ್ಲ ಕಡೆಯಿಂದಲೂ ಕೇಳಿಬರುತ್ತಿತ್ತು. ಇದೇ ಸಮಯದಲ್ಲಿ ಗಿಲೌಮ್ ಅಪೊಲೊನೈರ್ (Guillaume Appolonaire) ಅನ್ನುವ ಕವಿ ತನ್ನ ಮರಣ ಶಯ್ಯೆಯ ಮೇಲೆ ಮಲಗಿದ್ದ. ಫ್ರಾನ್ಸಿನ ಅವಾಂತ್ ಗಾರ್ದ್ ಆಂದೋಲನದ ಪ್ರಮುಖ ಬೆಳಕು ಇವನಾಗಿದ್ದ. (ಇದೊಂದು ಫ್ರಾನ್ಸಿನ ಸಂಸ್ಕೃತಿ ಮತ್ತು ಕಲೆಯ ಅಸಾಂಪ್ರದಾಯಿಕ ಮತ್ತು ಆಧುನಿಕತಾವಾದದ ಆಂದೋಲನ). ಇದೇ ಮನುಷ್ಯ ಸರ್ರಿಯಲಿಸ್ಮ್ (Surreal) ಅನ್ನುವ ಪದದ ಜನಕ. ಮತ್ತು ಈ ಪದ ಪ್ಯಾಬ್ಲೊ ಪಿಕಾಸೊ ಮತ್ತು ಮಾರ್ಸಲ್ ಡಚಾಂಪ್ ಮುಂತಾದವರಿಗೆ ಸ್ಫೂರ್ತಿದಾಯಕವಾಯಿತು. ಅಪೊಲೊನೈರ್ 1914ರ ಮೊದಲನೇ ಮಹಾಯುದ್ಧದಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿ ಭಾಗಿಯಾಗಿದ್ದ. ಹರಿತವಾದ ಕಬ್ಬಿಣದ ತುಂಡೊಂದು ಆ ಸಮಯದಲ್ಲಿ ಅವನ ತಲೆಬುರುಡೆಯಲ್ಲಿ ತೂತುಮಾಡಿ ಗಾಯಗೊಳಿಸಿದ್ದರೂ ಬದುಕಿ ಉಳಿದಿದ್ದ. ಆದರೆ ತನ್ನ ಮೂವ್ವತ್ತೆಂಟನೇ ವಯಸ್ಸಿನಲ್ಲಿ ಸ್ಪಾನಿಶ್ ಫ್ಲೂ ವೈರಾಣುವಿಗೆ ತುತ್ತಾಗಿ ಅಸುನೀಗಿದ.

ನಾಲ್ಕು ದಿನಗಳ ನಂತರ ಅವನ ಅಂತಿಮ ಸಂಸ್ಕಾರವನ್ನ ನೆರವೇರಿಸಲಾಯಿತು. ಅದು ಜರ್ಮನಿಯ ಜತೆಯ ಯುದ್ಧ ವಿರಾಮದ ಒಪ್ಪಂದವಾದ ಎರಡು ದಿನಗಳ ನಂತರ.

ಶವಯಾತ್ರೆ ಸೆಂಟ್ ಥಾಮಸ್ ಅಕ್ವಿನಸ್ ಚರ್ಚನ್ನು ಬಿಟ್ಟು ಹೊರಟನಂತರ, ಶೋಕತಪ್ತ ಜನರು ಪೂರ್ವದ ಕಡೆ ಇರುವ ಪಿಯರ್ ಲಚೈಸ್ ಸ್ಮಶಾನದ ಕಡೆಗೆ ನಡೆದು ಹೋಗುತ್ತಿದ್ದರು. ಶವಯಾತ್ರೆ ಸೆಂಟ್ ಜರ್ಮೈನ್‌ನ ಮೂಲೆಯನ್ನು ತಲುಪಿದಾಗ, ಅವನ ಸ್ನೇಹಿತ ಮತ್ತು ಇನ್ನೊಬ್ಬ ಕವಿ ಬ್ಲೈಸ್ ಸೆಂಡ್ರಾರ್ಸ್‌ನ ಪ್ರಕಾರ, ಶವವನ್ನ ಹೊತ್ತ ವಾಹನಕ್ಕೆ ಯುದ್ಧವಿರಾಮವನ್ನ ಸಂಭ್ರಮಿಸುತ್ತಿದ್ದ ಜನರು ಮುತ್ತಿಗೆ ಹಾಕಿಬಿಟ್ಟರು. ಆ ಗುಂಪಿನಲ್ಲಿ ಹೆಂಗಸರು ಮತ್ತು ಗಂಡಸರು ತಮ್ಮ ಆಯುಧಗಳನ್ನ ಪ್ರದರ್ಶಿಸುತ್ತಾ, ಹಾಡುತ್ತಾ, ಕುಣಿಯುತ್ತಾ ಮತ್ತು ಒಬ್ಬರಿಗೊಬ್ಬರು ಚುಂಬಿಸುತ್ತಾ, ಯುದ್ಧದ ಅಂತ್ಯವನ್ನ ಕೂಗಿ ಹೇಳುತ್ತಾ, ಮತ್ತು ಸತ್ತ ಕವಿ ಗಿಲೌಮ್ ನೀನು ಹೋಗಬೇಕಾಗಿಲ್ಲ, ನೀನು ಹೋಗಬೇಕಾಗಿಲ್ಲ ಅಂತ ವ್ಯಂಗ್ಯವಾಗಿ ಕೈಸರ್‌ನ ಸೋಲಿನ ಬಗ್ಗೆ ಹೇಳುವ ರೀತಿಯಲ್ಲಿ ಕೂಗುತ್ತಾ ಇದ್ದರು. ಆದರೆ ಅಪೊಲೊನೈರ್‌ನ ಸ್ನೇಹಿತರಿಗೆ ಅದೊಂದು ರೀತಿಯಲ್ಲಿ ಮನಸ್ಸನ್ನು ಕಲಕುವ ರೀತಿಯ ವಿಷದಂತೆ ಕೇಳಿಸುತ್ತಿತ್ತು.

ಈ ಕವಿಯ ಸಾವನ್ನು ಒಂದು ರೂಪಕೋಕ್ತಿಯ ರೀತಿಯಲ್ಲಿ ನೋಡುವುದಾದರೆ, ನಾವೆಲ್ಲರೂ ಒಟ್ಟಾರೆ ಇಪ್ಪತ್ತನೇ ಶತಮಾನದ ಅತಿ ದೊಡ್ಡ ನರಮೇಧವನ್ನ ಮರೆತಿದ್ದುದನ್ನು ಬಿಂಬಿಸಲು ಉಪಯೋಗಿಸಲಾಗಿದೆ. ಒಟ್ಟು ಪ್ರಪಂಚದಾದ್ಯಂತ ಐನೂರು ದಶಲಕ್ಷ ಜನರಿಗೆ ಈ ಸ್ಪ್ಯಾನಿಶ್ ಫ್ಲೂ ಸೋಂಕು ತಗುಲಿತ್ತು, ಅಂದರೆ ಮೂರು ಜನರಲ್ಲಿ ಒಬ್ಬರಿಗೆ. ಸೋಂಕಿನ ಮೊದಲನೆಯ ಪ್ರಕರಣ 4 ಮಾರ್ಚ್ 1918ರಲ್ಲಿ ದಾಖಲಾಗಿತ್ತು ಮತ್ತು ಮಾರ್ಚ್ 1920ರ ಹೊತ್ತಿಗೆ ಕೊನೆಗೊಂಡಿತು. ಇದು ಸುಮಾರು ಐವತ್ತರಿಂದ ನೂರು ದಶಲಕ್ಷ ಜನರನ್ನು ಬಲಿ ತೆಗೆದುಕೊಂಡಿತು ಅಂತ ಅಂದಾಜು ಮಾಡಲಾಗಿದೆ. ಅಂದರೆ 2.5% ರಿಂದ 5% ರಷ್ಟು.

ಇದು ಲಾರ ಸ್ಪೈನಿ ಅನ್ನುವವರು ಬರೆದ ’ಪೇಲ್ ರೈಡರ್’ ಅನ್ನುವ ಪುಸ್ತಕದ ಆರಂಭದ ಸಾಲುಗಳು.
ಆಲ್ಬೆ ಕಮುವಿನ ಪ್ಲೇಗ್ ಕಾದಂಬರಿಗೂ ಕೂಡ ಇದೇ ರೀತಿಯ ಸಾಂಕ್ರಾಮಿಕವೊಂದರ ಕಥಾವಸ್ತುವನ್ನು ಒಳಗೊಂಡಿದೆ.

ಕಟ್ಟಡವೊಂದರ ಕಾವಲುಗಾರನ ಕಾಲಿಗೆ ಸತ್ತ ಇಲಿಯೊಂದು ಸಿಕ್ಕ ನಂತರ ಪ್ಲೇಗ್ ಅನ್ನುವ ಪದವನ್ನ ಮೊದಲ ಬಾರಿಗೆ ಉಚ್ಚರಿಸಲಾಯಿತು. ಈ ಕಥಾನಕವನ್ನ ನಿರೂಪಿಸುತ್ತಿರುವ ಈ ಹಂತದಲ್ಲಿ, ಡಾ ಬರ್ನಾರ್ಡ್ ರಿಯುಕ್ಸ್ ಕಿಟಿಕಿಯ ಪಕ್ಕದಲ್ಲಿ ನಿಂತುಕೊಂಡಿರುತ್ತಾನೆ. ನಿರೂಪಕ ಬಹುಶಃ ಡಾಕ್ಟರ್‌ರಲ್ಲಿನ ಅನಿಶ್ಚಿತತೆ, ಸಂದಿಗ್ಧತೆ ಮತ್ತು ಆಶ್ಚರ್ಯದ ಮನಃಸ್ಥಿತಿಯನ್ನ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದಾನೆ. ಸ್ವಲ್ಪವೇ ಸ್ವಲ್ಪ ವ್ಯತ್ಯಾಸವನ್ನು ಬಿಟ್ಟರೆ ಡಾಕ್ಟರ್‌ರ ಪ್ರತಿಕ್ರಿಯೆ ಅವರಿರುವ ಓರನ್ ನಗರದ ಎಲ್ಲ ಪ್ರಜೆಗಳ ಪ್ರತಿಕ್ರಿಯೆಯಂತೆಯೇ ಇತ್ತು.

ಪ್ರತಿಯೊಬ್ಬರಿಗೂ ತಿಳಿದಿದ್ದ ವಿಷಯವೆಂದರೆ ಸಾಂಕ್ರಾಮಿಕ ರೋಗ ಪ್ರಪಂಚದಲ್ಲಿ ಮತ್ತೆ ಮತ್ತೆ ಸಂಭವಿಸುವ ಸಾಧ್ಯತೆಗಳು ಇದ್ದೇ ಇದೆ ಎಂದು; ಆದರೂ ಅದು ಎಲ್ಲಿಂದಲೋ ನಿಗೂಢದಿಂದ ನಮ್ಮ ಮೇಲೆ ಬಂದೆರಗುವುದನ್ನು ನಂಬುವುದು ಎಲ್ಲರಿಗೂ ಕಷ್ಟದ ಸಂಗತಿಯಾಗಿತ್ತು. ಎಷ್ಟೆಲ್ಲಾ ಯುದ್ಧಗಳು ಬಂದೆರಗಿವೆ! ಅದೇ ರೀತಿ ಪ್ಲೇಗ್ ರೋಗ ಕೂಡ ಹಲವು ಬಾರಿ ಮನುಕುಲದ ಮೇಲೆ ಬಂದೆರಗಿರುವುದನ್ನ ಚರಿತ್ರೆ ಹೇಳುತ್ತದೆ. ಆದರೂ ಈ ಯುದ್ಧ ಮತ್ತು ಪ್ಲೇಗ್ ಬಂದೆರಗಿದಾಗ ಮನುಷ್ಯ ಮತ್ತೆ ಮತ್ತೆ ಆಶ್ಚರ್ಯಚಕಿತನಾಗುತ್ತಾನೆ.

ಅಂದಿನ ಪರಿಸ್ಥಿತಿ ಇಂದು ನಮ್ಮ ಸಹ ಪ್ರಜೆಗಳ ರೀತಿಯೇ ಇತ್ತು. ಡಾ. ರಿಯುಕ್ಸ್‌ಗೂ ಕೂಡ ಈ ಪ್ಲೇಗ್ ಪಿಡುಗಿನ ಆಗಮನ ಅನಿರೀಕ್ಷಿತವಾಗಿತ್ತು. ಈ ಸತ್ಯಾಂಶದ ಕಾರಣದಿಂದ ಅವರು ಯಾವ ರೀತಿಯಲ್ಲಿ ತದ್ವಿರುದ್ಧವಾದ ಭಾವನೆಗಳಾದ ಭಯ ಮತ್ತು ಆತ್ಮವಿಶ್ವಾಸಗಳ ನಡುವಿನ ಹೋರಾಟದಲ್ಲಿ ತೊಳಲಾಡುತ್ತಿದ್ದರು ಅನ್ನುವುದನ್ನ ನಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಯುದ್ಧವೊಂದು ಇದ್ದಕ್ಕಿದ್ದಂತೆ ಸಂಭವಿಸಿದಾಗ ಜನ ಹೇಳುವುದು “ಅದೊಂದು ಮೂರ್ಖತನದಿಂದ ಕೂಡಿದ್ದು; ಹೆಚ್ಚುಕಾಲ ಮುಂದುವರಿಯುವುದಿಲ್ಲ” ಎಂದು. ಆದರೆ ಯುದ್ಧ ಮೂರ್ಖತನದಿಂದ ಕೂಡಿದ್ದರೂ ಕೂಡ, ಅದು ಹೆಚ್ಚುಕಾಲ ಮುಂದುವರಿಯುವುದನ್ನು ತಡೆಯುವ ಶಕ್ತಿ ಯಾವುದಕ್ಕೂ ಇಲ್ಲ. ಮೂರ್ಖತನಕ್ಕೆ ತನ್ನ ದಾರಿಯನ್ನು ಕಂಡುಕೊಳ್ಳುವ ಕೌಶಲ್ಯತೆಯೊಂದಿದೆ; ಮುಂದೆ ಉಂಟಾಗಬಹುದಾದ ದುರಂತವನ್ನು ಆಲಕ್ಷಿಸಿ ತಮ್ಮ ಕೆಲಸದಲ್ಲಿ ತಮ್ಮನ್ನು ಎಂದಿನಂತೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ರೀತಿಯಲ್ಲಿಯೇ, ಅದರ ಕೌಶಲ್ಯ ಬೆಳಗುತ್ತದೆ.

ಈ ಸಾಂಕ್ರಾಮಿಕದ ವಿಷಯದಲ್ಲಿ, ಅದು ಬಂದೆರಗುವ ಮುಂಚೆ ನಮ್ಮ ನೆರೆ ಹೊರೆಯ ಜನರು ಇರುವಂತೆಯೇ ಬೇರೆ ಊರಿನ ಜನರೂ ಇದ್ದವರು. ತಮ್ಮದೇ ಕೆಲಸ ಮತ್ತು ಚಿಂತೆಗಳಲ್ಲಿ ಮುಳುಗಿದ್ದವರು. ಅವರೂ ಕೂಡ ಮಾನವತಾವಾದಿಗಳೆ! ಆದರೆ ಅವರೂ ಸಾಂಕ್ರಾಮಿಕವನ್ನು ನಂಬುತ್ತಿರಲಿಲ್ಲ. ಸಾಂಕ್ರಾಮಿಕದ ರಚನೆಯೇ ಮನುಷ್ಯನ ಅಳತೆಗೆ ಮೀರಿದ್ದು. ಅದೇ ಕಾರಣಕ್ಕೆ ನಮಗೆ ನಾವು ಹೇಳಿಕೊಳ್ಳುವುದು: “ಈ ಸಾಂಕ್ರಾಮಿಕ ಮನುಷ್ಯನ ಮನಸ್ಸಿಗೆ ಅಂಟಿಕೊಂಡಿರುವ ಒಂದು ಭ್ರಮೆಯೆಂದು, ಮತ್ತು ಹೊರಟುಹೋಗುವ ಒಂದು ಕೆಟ್ಟ ಕನಸೆಂದು”. ಆದರೆ ಈ ಸಾಂಕ್ರಾಮಿಕವೆಂದೂ ಒಂದು ಕೆಟ್ಟ ಕನಸಿನಿಂದ ಇನ್ನೊಂದು ಕೆಟ್ಟ ಕನಸಿನ ಕಡೆಗೆ ಹೊರಟು ಹೋಗುವುದಿಲ್ಲ! ಇಲ್ಲಿ ಹೊರಟುಹೋಗುವುದು ಮನುಷ್ಯರ ಜೀವಗಳು!

ಮಾರ್ಕ್ ಹೊನಿಂಗ್ಸ್ ಬೌಮ್ (Mark Honigsbaum) ಅನ್ನುವ ಲೇಖಕ “ದಿ ಪ್ಯಾಂಡಮಿಕ್ ಸೆಂಚ್ಯುರಿ” ಅನ್ನುವ ಪುಸ್ತಕವನ್ನ ಬರೆದಿದ್ದಾನೆ. ಅದರಲ್ಲಿ ಸ್ಪ್ಯಾನಿಶ್ ಫ್ಲೂನಿಂದ ಹಿಡಿದು ಕೊವಿಡ್-19ರವರೆಗೂ ಮನುಷ್ಯ ಕೋಟಿಯನ್ನ ಕಾಡಿದ ಸಾಂಕ್ರಾಮಿಕದ ಬಗ್ಗೆ ಆಳವಾದ ವಿಶ್ಲೇಷಣೆ ಅಡಗಿದೆ.

ಪುಸ್ತಕದ ಪ್ರಾರಂಭದಲ್ಲಿಯೇ ಒಂದು ವೃತ್ತಾಂತವನ್ನ ರೂಪಕವಾಗಿ ಚಿತ್ರಿಸಿದ್ದಾನೆ. 1916ರಲ್ಲಿ ಫಿಲಡಲ್ಫಿಯಾದ ಪ್ರಾಕೃತಿಕ ವಿಜ್ಞಾನ ಸಂಸ್ಥೆಯ ಸಂರಕ್ಷಕನಾದ ಡಾ ಹೆನ್ರಿ ಸ್ಕಿನ್ನರ್ ಅನ್ನುವವನು ಪ್ರತಿಪಾದಿಸಿದ್ದು “ಶಾರ್ಕ್ ಮೀನಿಗೆ ಮನುಷ್ಯನ ಕಾಲನ್ನ ಒಂದೇ ಏಟಿಗೆ ಕತ್ತರಿಸುವಷ್ಟು ಶಕ್ತಿ ಇಲ್ಲ” ಎಂದು. ನ್ಯೂಯಾರ್ಕ್ ಮತ್ತು ಫಿಲಡೆಲ್ಫಿಯದ ಜನರು ಬೇಸಿಗೆಯ ಬಿಸಿಯಿಂದ ತಪ್ಪಿಸಿಕೊಳ್ಳಲು ನ್ಯೂಜರ್ಸಿಯ ಸಮುದ್ರ ತೀರಕ್ಕೆ ಹೋಗಿ ಈಜುವುದು ವಾಡಿಕೆ. ಆದರೆ ಅಂದು ಡಾ. ವಾಸಂತ್ ಅನ್ನುವ ವ್ಯಕ್ತಿ ಅದೇ ಸಮುದ್ರದಲ್ಲಿ ಈಜುತ್ತಿರುವಾಗ ಶಾರ್ಕ್ ಅವನ ಒಂದು ಕಾಲನ್ನ ಕತ್ತರಿಸಿಹಾಕಿತು ಮತ್ತು ನಂತರ ಅವನು ಮೃತಪಟ್ಟ.

ಮೊದಲ ನೋಟಕ್ಕೆ ಈ ನ್ಯೂಜರ್ಸಿಯ ಶಾರ್ಕ್‌ನ ಆಕ್ರಮಣಕ್ಕೂ 2014ರಲ್ಲಿ ಪಶ್ಚಿಮ ಆಫ್ರಿಕಾವನ್ನ ಆವರಿಸಿಕೊಂಡ ಎಬೊಲ ಸಾಂಕ್ರಾಮಿಕಕ್ಕೂ ಅಥವ ಬ್ರೆಜಿಲ್‌ಅನ್ನು ಆಕ್ರಮಿಸಿಕೊಂಡ ಜೀಕ ವೈರಾಣುವಿನ ಸಾಂಕ್ರಾಮಿಕಕ್ಕೂ ಯಾವುದೇ ನಂಟಿಲ್ಲ ಅನ್ನಿಸಿದರೂ, ಎರಡೂ ಘಟನೆಗಳಿಗೆ ನಂಟಿರುವುದು ನಿಶ್ಚಿತ. ಕಾರಣ 1916ರ ಬೇಸಿಗೆಯಲ್ಲಿ ನಾರ್ತ್ ಅಟ್ಲಾಂಟಿಕ್ ಸಮುದ್ರದ ತಣ್ಣನೆಯ ನೀರಿನಲ್ಲಿ ಶಾರ್ಕ್ ಒಂದು ಆಕ್ರಮಣ ಮಾಡಿ ಕಾಲನ್ನ ಕತ್ತರಿಸುತ್ತದೆ ಅನ್ನುವ ಅಂಶವನ್ನ ಯಾರಿಂದಲೂ ಊಹಿಸಲಸಾಧ್ಯವಾಗಿತ್ತು. ಹಾಗೆಯೇ 2014ರ ಬೇಸಿಗೆಯಲ್ಲಿ, ಬಹುತೇಕ ಸಾಂಕ್ರಾಮಿಕ ರೋಗಗಳ ಪರಿಣಿತರುಗಳಿಗೂ, ಎಬೊಲ ಎಂಬ, ಸಾಮಾನ್ಯವಾಗಿ ಮಧ್ಯ ಆಫ್ರಿಕಾದ ಕಾಡುಗಳಿಗೆ ಮಾತ್ರ ಸೀಮಿತವಾಗಿದ್ದ ವೈರಾಣು ಲೈಬೀರಿಯಾದ ಸಿಯರ ಲಿಯೊನ್ ನಗರದಲ್ಲಿ ಸಾಂಕ್ರಾಮಿಕಕ್ಕೆ ಕಾರಣವಾಗುತ್ತದೆ ಅನ್ನುವ ಸತ್ಯಸಂಗತಿಯನ್ನ ಊಹಿಸಲಸಾಧ್ಯವಾಗಿತ್ತು. ಮತ್ತು ಅದು ಅಟ್ಲಾಂಟಿಕ್ ಸಾಗರವನ್ನ ದಾಟಿ ಯೂರೋಪ್ ಮತ್ತು ಅಮೆರಿಕ ದೇಶಗಳಲ್ಲೂ ಭಯಭೀತಿಯನ್ನು ಉಂಟುಮಾಡಿತ್ತು. ಈ ಎಬೊಲ ಎದ್ದುಬಂದಿದ್ದು ಕಂಡರಿಯದ ಪ್ರಾಣಿಗಳ ನೀರಿನ ಹೊಂಡದೊಳಗಿನಿಂದ. ಮೊದಲ ಬಾರಿಗೆ ಗಿನಿಯಾದ ಆಗ್ನೇಯದಲ್ಲಿನ ಮಿಲಿಯಾಂಡೌ ಎಂಬ ಹಳ್ಳಿಯ ಎರಡು ವರ್ಷದ ಮಗುವಿನ ಮೇಲೆ ಇದು ಆಕ್ರಮಣ ಮಾಡಿತು. ಅದರ ನಂತರ ಈ ವೈರಾಣು ರಸ್ತೆಯ ಮೂಲಕ ಕೊನಾಕ್ರಿ, ಫ್ರೀಟೌನ್, ಮತ್ತು ಮೊನೊರೊವಿಯ ನಗರಗಳಿಗೆ ತನ್ನ ಪ್ರಯಾಣವನ್ನ ಬೆಳೆಸಿತು ಮತ್ತು ನಂತರ ವಿಮಾನದ ಮೂಲಕ ಬ್ರಸಲ್ಸ್, ಲಂಡನ್, ಮ್ಯಾಡ್ರಿಡ್, ನ್ಯೂಯಾರ್ಕ್ ಮತ್ತು ದಲ್ಲಾಸ್ ನಗರಗಳಿಗೆ ಸಂಚರಿಸಿತು.

ಇದೇ ಮಾದರಿಯ ಇನ್ನೊಂದು ಘಟನೆ 1997ರಲ್ಲಿ ಸಂಭವಿಸಿತು. ಸಾಮಾನ್ಯವಾಗಿ ಬಾತುಕೋಳಿಗಳಲ್ಲಿ ಮತ್ತು ಇತರ ನೀರಿನ ಹಕ್ಕಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮತ್ತು ಇಲ್ಲಿಯವರೆವಿಗೂ ಮರೆಯಾಗಿದ್ದ ಏವಿಯನ್ ಇನ್‌ಫ್ಲುಯೆಂಜ (ಅದಕ್ಕೆ H5N1 ಎಂದು ಹೆಸರಿಡಲಾಗಿತ್ತು) ಇದ್ದಕ್ಕಿದ್ದಂತೆ ಹಾಂಗ್‌ಕಾಂಗ್‌ನ ಕೋಳಿ ಸಾಗಾಣಿಕೆಯ ಕೇಂದ್ರಗಳಲ್ಲಿ ಕಾಣಿಸಿಕೊಂಡು ಲಕ್ಷಾಂತರ ಕೋಳಿಗಳನ್ನ ಬಲಿತೆಗೆದುಕೊಂಡಿದ್ದು ಪ್ರಪಂಚದಾದ್ಯಂತ ಆತಂಕವನ್ನು ಹುಟ್ಟಿಸಿತು. ಇದರ ನಂತರ ಬಂದಿದ್ದೇ 2003ರ SARS. ಮತ್ತು ನಂತರ ಅವತರಿಸಿದ್ದು 2009ರ ಹಂದಿ ಜ್ವರ (Swine flu), ಮತ್ತು ಇದರ ಸ್ಫೋಟ ಮೆಕ್ಸಿಕೋನಲ್ಲಿ ಮೊದಲು ಸಂಭವಿಸಿತು, ಮತ್ತು ಇದು ಪ್ರಪಂಚದಾದ್ಯಂತ ಇನ್‌ಫ್ಲುಯಂಜ ಸಾಂಕ್ರಾಮಿಕದ ಭೀತಿಯನ್ನ ಹುಟ್ಟಿಸಿತು. ಆದುದರಿಂದ, ಈ ವೈರಾಣು ವಿರುದ್ದ ಅನೇಕ ಔಷಧಿಗಳ ತಯಾರಿಕೆ ಪ್ರಾರಂಭಗೊಂಡಿತು ಮತ್ತು ಕೋಟ್ಯಂತರ ಡಾಲರ್‌ಗಳ ಬೆಲೆಯ ಲಸಿಕೆಗಳು ತಯಾರಾದವು. ಆದರೆ, ಈ ಹಂದಿ ಜ್ವರ ಹೆಚ್ಚು ಸಾವುನೋವುಗಳನ್ನ ತರಲಿಲ್ಲ. ಆದರೆ ಅದರ ಮಾದರಿ 1918ರ ಸ್ಪ್ಯಾನಿಶ್ ಫ್ಲೂನ ಮಾದರಿಯನ್ನ ಹೋಲುತ್ತಿತ್ತು.

30 ಡಿಸೆಂಬರ್, 2019ರಂದು, ಡಾ. ಮರ್ಜೊರಿ ಪೊಲ್ಲಾಕ್ (Dr Marjorie pollack) ಬ್ರೂಕ್ಲಿನ್‌ನ ಕಬ್ಬನ್ ಹಿಲ್ ಮನೆಯಲ್ಲಿ ವಿಶ್ರಮಿಸುತ್ತಿದ್ದರು. ಅಂದು ಅವರು ವೂಹಾನ್‌ನ ವಿಚಿತ್ರವಾದ ನ್ಯುಮೊನಿಯಾಗಳ ಗೊಂಚಲಿನ ಬಗ್ಗೆ ಈಮೇಲ್ ಒಂದನ್ನು ಸ್ವೀಕರಿಸಿದರು. ಮಧ್ಯ ವೂಹನ್ ಚೈನಾದ ಹ್ಯುಬೈ ಪ್ರಾಂತದ ರಾಜಧಾನಿ. ಸಿ.ಡಿ.ಸಿ. ಸಾಂಕ್ರಾಮಿಕ ಸೇವೆಯಲ್ಲಿ ಪದವೀಧರಳಾಗಿದ್ದ ಇವರು ಸಾಂಕ್ರಾಮಿಕ ರೋಗ ತಜ್ಞೆಯೂ ಕೂಡ. ಈ ಸೇವೆಯಲ್ಲಿ ಅವರಿಗೆ ಮುವತ್ತು ವರ್ಷದಷ್ಟು ಅನುಭವವಿತ್ತು. ProMEDನ ಉಪಸಂಪಾದಕಿಯಾಗಿದ್ದರು. ಅವರ ಸಹೋದ್ಯೋಗಿಯೊಬ್ಬರು ಚೈನದ ವೈಬೊ ಎಂಬ ಚಾಟ್ ರೂಮಿನಲ್ಲಿ ಆತಂಕಕಾರಿ ಮಾಹಿತಿಯನ್ನ ಗುರುತಿಸಿದ್ದನ್ನು ಮೌಲ್ಯಮಾಪನ ಮಾಡಲು ಇವರೇ ತಕ್ಕ ವ್ಯಕ್ತಿಯಾಗಿದ್ದರು.

ಈಮೇಲ್‌ನ್ನು ತೆರೆದು ನೋಡಿದಾಗ ಪೊಲ್ಲಾಕ್ ತಕ್ಷಣ ಸೆಟೆದು ಕುಳಿತರು. “ಈ ಈಮೇಲ್ ಎಚ್ಚರಿಕೆಯಲ್ಲಿ ವೂಹಾನ್‌ನಲ್ಲಿ ನಡೆಯುತ್ತಿರುವುದರ ಬಗ್ಗೆ ಟ್ವೀಟ್‌ಗಳನ್ನ ನಮೂದಿಸಲಾಗಿತ್ತು.

ಅಂದರೆ ಅಲ್ಲಿನ ಮೊದಲ ನಾಲ್ಕು ಪ್ರಕರಣಗಳ ಬಗ್ಗೆ ಮತ್ತು ನಂತರದ 27 ಪ್ರಕರಣಗಳ ಬಗ್ಗೆ-ಮತ್ತು ವೂಹಾನ್‌ನ ಆರೋಗ್ಯ ಕೇಂದ್ರ ಸಮಿತಿಯ ಕೆಲವು ಚಿತ್ರಗಳ ಜತೆಗೆ, ಅವರ ಪ್ರಕಾರ ನ್ಯುಮೊನಿಯಕ್ಕೂ ಮತ್ತು ವನ್ಯಜೀವಿಗಳ ಮಾರುಕಟ್ಟೆಗೂ ಇರುವ ಸಂಬಂಧದ ಬಗ್ಗೆ ಅದರಲ್ಲಿ ಮಾಹಿತಿಯಿತ್ತು. SARS ಸಂಬಂಧಿತವಾಗಿ ಕೆಲಸ ಮಾಡಿದ್ದರಿಂದ ಅವರಿಗೆ ಇದ್ಯಾವುದೋ ಅಪಾಯದ ಪರಿಸ್ಥಿತಿ” ಎಂಬುದು ಕೂಡಲೇ ಅರಿವಾಯಿತು ಎಂದು ದಾಖಲಿಸುತ್ತಾರೆ.

ನಂತರ ಪೊಲ್ಲಾಕ್ ಅವರಿಗೆ ProMEಆ ಮೂಲಕ ಅಪಾಯದ ಮನದಟ್ಟಾಗಿ ಇದೊಂದು ವಿಶ್ವವ್ಯಾಪಿ ಸಾಂಕ್ರಾಮಿಕವಾಗಿ ಪರಿವರ್ತಿತವಾಗುತ್ತದೆ ಎಂದು ಕೂಡಲೇ ತಿಳಿಯುತ್ತದೆ. ಆದರೆ 1918-19ರ ಸ್ಪ್ಯಾನಿಶ್ ಫ್ಲೂನ ಪ್ರತಿಧ್ವನಿಯಾಗುತ್ತದೆ ಎನ್ನುವ ಅಂಶ ಮನದಟ್ಟಾಗಿರಲಿಲ್ಲ. ಇವೆರಡರಲ್ಲಿನ ವ್ಯತ್ಯಾಸವೆಂದರೆ ಸ್ಪ್ಯಾನಿಶ್ ಫ್ಲೂ ಪಿಡುಗು ಆವರಿಸಿದ ಸಮಯ ಮೊದಲನೇ ಮಹಾಯುದ್ಧದ ಅಂತಿಮ ಘಟ್ಟವಾಗಿತ್ತು, ಮತ್ತು ಆ ಸಮಯದಲ್ಲಿ ಸ್ಪ್ಯಾನಿಶ್ ಫ್ಲೂನಿಂದ ಸಾವುನೋವುಗಳಾದರೂ ಸ್ಕೂಲ್ ಮತ್ತು ಕಾರ್ಖಾನೆಗಳನ್ನು ಮುಚ್ಚಲಿಲ್ಲ ಮತ್ತು ಅಂತರ್ದೇಶೀಯ ವಹಿವಾಟುಗಳು ಮತ್ತು ಜನಗಳ ಓಡಾಟ ಬಹಳಷ್ಟು ಕಡಿಮೆಯಿತ್ತು. ಇದಕ್ಕೆ ಭಿನ್ನವಾಗಿ ಕೋವಿಡ್-19 ಪಿಡುಗು ಅತ್ಯಧಿಕವಾದ ಅಂತರರಾಷ್ಟ್ರೀಯ ಚಲನವಲನ ಮತ್ತು ವಹಿವಾಟುಗಳಿದ್ದ ಪ್ರಪಂಚವನ್ನ ಆವರಿಸಿಕೊಂಡಿತು.

ಇಲ್ಲಿಂದ ಮುಂದಕ್ಕೆ ನಡೆದ ಘಟನಾವಳಿಗಳೆಲ್ಲ ಎಲ್ಲರ ಕಣ್ಣಿಗೂ ಕಟ್ಟಿದಂತಿದೆ.

ಈ ಮೂರೂ ಸಾಹಿತ್ಯಿಕ ರಚನೆಗಳಲ್ಲಿ ಅಂದರೆ ’ಪೇಲ್ ರೈಡರ್’ (ಲಾರ ಸ್ಪೈನಿ), ’ಪ್ಲೇಗ್’ (ಕಮು) ಮತ್ತು ’ದಿ ಪ್ಯಾಂಡಮಿಕ್ ಸೆಂಚ್ಯುರಿ’ (ಮಾರ್ಕ್ ಹೊನಿಂಗ್ಸ್ ಬೌಮ್), ಒಂದು ಸಾಮಾನ್ಯ ಅಂಶವೊಂದನ್ನ ನಮ್ಮ ಮುಂದೆ ಬಿಚ್ಚಿಡುತ್ತವೆ. ಅದೆಂದರೆ ಆಡಳಿತ ವ್ಯವಸ್ಥೆ ಮತ್ತು ಜನರು ಸಾಂಕ್ರಾಮಿಕ ಪಿಡುಗು ಬಂದು ತಟ್ಟುವವರೆಗೂ ಮತ್ತು ತಟ್ಟಿದ ಮೇಲೂ ಬಹಳವಾಗಿ ಅಜಾಗರೂಕರಾಗೇ ಇರುತ್ತಾರೆ ಮತ್ತು ಬರಬಹುದಾದ ದುರಂತವನ್ನ ನಂಬಲು, ಅರ್ಥಮಾಡಿಕೊಳ್ಳಲು ಹಿಂಜರಿಯುತ್ತಾರೆ. ಸಾಂಕ್ರಾಮಿಕಗಳಿಗೆ ಮೊದಲನೆಯ ವ್ಯಾಕ್ಸಿನ್ ಎಂದರೆ ಆಡಳಿತ ವ್ಯವವಸ್ಥೆ ಮತ್ತು ಜನಗಳ ಎಚ್ಚರಿಕೆ ಹಾಗೂ ತಿಳಿವಳಿಕೆ.

  • ಕೆ ಶ್ರೀನಾಥ್
ಕೆ ಶ್ರೀನಾಥ್

ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.


ಇದನ್ನೂ ಓದಿ: ಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್‌ ತಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...