ಕೋವಿಡ್ ನಿರ್ವಹಣೆಯ ಕುರಿತು ಮೋದಿ ಸರ್ಕಾರಕ್ಕೆ ಕಾಲ ಕಾಲಕ್ಕೆ ಮುನ್ನೆಚ್ಚರಿಕೆ ನೀಡುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸರ್ಕಾರದ ವೈಫಲ್ಯಗಳನ್ನು ಸಹ ಅಷ್ಟೇ ಕಟುವಾಗಿ ಟೀಕಿಸುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆಯಾಗಿ ಪಿಎಂ ಕೇರ್ಸ್‌ನಿಂದ ಖರೀದಿಸಲ್ಪಟ್ಟ ವೆಂಟಿಲೇಟರ್‌ಗಳು ಮತ್ತು ಪ್ರಧಾನ ಮಂತ್ರಿ ಇಬ್ಬರೂ ತಮ್ಮ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಮೊದಲ ಅಲೆ ಕಾಣಿಸಿಕೊಂಡಾಗ ಸಾವಿರಾರು ಕೋಟಿ ರೂ ಪಿಎಂ ಕೇರ್ಸ್‌ಗೆ ದೇಣಿಗೆಯಾಗಿ ಬಂದಿತ್ತು. ಅದರಲ್ಲಿ ನೂರಾರು ವೆಂಟಿಲೇಟರ್‌ಗಳನ್ನು ಖರೀದಿಸಿ ರಾಜ್ಯಗಳ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿತ್ತು. ಅವುಗಳಲ್ಲಿ ಬಹುತೇಕ ತಾಂತ್ರಿಕ ಕಾರಣದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿತ್ತು. ಈ ಕುರಿತು ಆಡಿಟ್ ಮತ್ತು ತನಿಖೆ ನಡೆಸುವಂತೆ ಮೋದಿ ನಿರ್ದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ಪ್ರಧಾನಿಗೂ ಪಿಎಂ ಕೇರ್ಸ್‌ನಿಂದ ಖರೀದಿಸಲ್ಪಟ್ಟ ವೆಂಟಿಲೇಟರ್‌ಗಳಿಗೂ ಹಲವಾರು ಸಾಮ್ಯತೆಗಳಿವೆ. ಎರಡಕ್ಕೂ ಅತಿಯಾದ ಸುಳ್ಳು ಪ್ರಚಾರ ನೀಡಲಾಯಿತು, ಈ ಎರಡೂ ತಮ್ಮ ಕೆಲಸ ಮಾಡುವಲ್ಲಿ ವಿಫಲವಾಗಿವೆ ಮತ್ತು ಅಗತ್ಯವಿದ್ದಾಗ ಈ ಎರಡನ್ನು ಹುಡುಕುವುದು ಕಷ್ಟ” ಎಂದು ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದ್ದಾರೆ.
PMCares के वेंटिलेटर और स्वयं PM में कई समानताएँ हैं-
– दोनों का हद से ज़्यादा झूठा प्रचार
– दोनों ही अपना काम करने में फ़ेल
– ज़रूरत के समय, दोनों को ढूँढना मुश्किल।— Rahul Gandhi (@RahulGandhi) May 17, 2021
ಕೋವಿಡ್ ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಬಹಳಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಜ್ಞರ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿದ್ದು, ಲಸಿಕೆ ನೀಡುವಲ್ಲಿ ವಿಫಲರಾಗಿದ್ದು, ಕುಂಭಮೇಳ ಮತ್ತು ಚುಣಾವಣೆಗಳಲ್ಲಿ ನಿರತರಾಗಿದ್ದು ಸೇರಿದಂತೆ ರಾಜ್ಯಗಳಿಗೆ ಅಗತ್ಯವಾಗಿದ್ದ ಆಕ್ಸಿಜನ್, ಔಷಧಿಗಳನ್ನು ನೀಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಕುರಿತು ದೆಹಲಿಯಲ್ಲಿ “ಮೋದಿಯವರೆ ನಮ್ಮ ಮಕ್ಕಳ ಲಸಿಕೆಯನ್ನು ಏಕೆ ರಫ್ತು ಮಾಡಿದ್ದೀರಿ” ಎಂದು ನೂರಾರು ಪೋಸ್ಟರ್‌ಗಳು ಬ್ಯಾನರ್‌ಗಳು ಕಾಣಿಸಿಕೊಂಡಿದ್ದವು. ಇದರಿಂದ ಕೆಂಡಾಮಂಡಲವಾದ ಕೇಂದ್ರ ಸರ್ಕಾರ 25 ಎಫ್‌ಐಆರ್‌ಗಳನ್ನು ಹಾಕಿ ಹಲವಾರು ಜನರನ್ನು ಬಂಧಿಸಿದೆ. ಅದರಲ್ಲಿ ದಿನಗೂಲಿ ನೌಕರರು, ಆಟೋ ಚಾಲಕರು ಸೇರಿದ್ದಾರೆ. ಅವರಿಗೆ ಬ್ಯಾನರ್‌ನಲ್ಲಿ ಏನಿದೆ ಎಂಬುದು ಸಹ ಗೊತ್ತಿಲ್ಲ ಎಂದು ವರದಿಯಾಗಿದೆ.
ಈ ಕುರಿತು ಸಹ ನಿನ್ನೆ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಬ್ಯಾನರ್ ಹಾಕಿದ್ದು ತಪ್ಪೆಂದು ಬಂಧಿಸುವುದಾದರೆ ನನ್ನನ್ನೂ ಬಂಧಿಸಿ ಎಂದು ರಾಹುಲ್ ಟ್ವೀಟ್ ಮಾಡಿದ್ದರು. ಅನೇಕ ವಿಪಕ್ಷಗಳು “ಮೋದಿಯವರೆ ನಮ್ಮ ಮಕ್ಕಳ ಲಸಿಕೆಯನ್ನು ಏಕೆ ರಫ್ತು ಮಾಡಿದ್ದೀರಿ? ನಮ್ಮನ್ನೂ ಬಂಧಿಸಿ” ಎಂಬ ಪ್ರಚಾರಾಂದೋಲನ ನಡೆಸಿದ್ದರು.
ಇದನ್ನೂ ಓದಿ: ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಪರಿಸ್ಥಿತಿ ನಿರ್ವಹಣೆ ಕಷ್ಟವಾಗುತ್ತಿತ್ತು- ನಳೀನ್ ಕುಮಾರ್ ಕಟೀಲ್


