‘ನಾರದ ಪ್ರಕರಣ’: ಬಂಗಾಳ ಸಚಿವ ಫಿರ್ಹಾದ್ ಹಕೀಮ್‌ ಸಿಬಿಐ ವಶಕ್ಕೆ | Naanu gauri

ನಾರದಾ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ವು ತೃಣಮೂಲ ಕಾಂಗ್ರೆಸ್‌ ಶಾಸಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರ ಮತ್ತು ಮಾಜಿ ಸಚಿವ, ಕೋಲ್ಕತಾ ಮೇಯರ್ ಶೋವನ್ ಚಟರ್ಜಿಯನ್ನು ಕೋಲ್ಕತಾ ಕಚೇರಿಯಲ್ಲಿ ವಶಕ್ಕೆ ಸೋಮವಾರ ತೆಗೆದುಕೊಂಡಿದೆ.

ಸಚಿವ ಫಿರ್ಹಾದ್ ಹಕೀಮ್ ಅವರನ್ನು ಚೆಟ್ಲಾದಲ್ಲಿರುವ ಅವರ ಮನೆಯಿಂದ ಕರೆದೊಯ್ಯುವಾಗ, ಸಿಬಿಐ ತನ್ನನ್ನು ಸರಿಯಾದ ದೃಡೀಕರಣಗಳಿಲ್ಲದೆ ಬಂಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

‘ನಾರದಾ’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ ಶಾಸಕರಾದ ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್ ಮತ್ತು ಮದನ್ ಮಿತ್ರಾ ಮತ್ತು ಮಾಜಿ ಟಿಎಂಸಿ, ಬಿಜೆಪಿ ನಾಯಕ ಸೋವನ್ ಚಟರ್ಜಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಕೋರಿಕೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅನುಮೋದಿಸಿದ ಕೆಲವೇ ದಿನಗಳಲ್ಲಿ ಈ ಬಂಧನ ನಡೆದಿದೆ.

ಇದನ್ನೂ ಓದಿ: ಫೇಸ್‌ಬುಕ್ ಪೋಸ್ಟ್ ವಿರುದ್ಧ ಬಿಜೆಪಿ ದೂರು: ಮಣಿಪುರದಲ್ಲಿ ಇಬ್ಬರ ಬಂಧನ

ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಗಳಲ್ಲಿ ಜಯಗಳಿಸಿದ್ದರು. ಸೋವನ್‌ ಚಟರ್ಜಿ ಅವರು 2019 ರಲ್ಲಿ ಟಿಎಂಸಿಯಿಂದ ಬಿಜೆಪಿ ಸೇರಿಕೊಂಡಿದ್ದರು. ಆದರೆ ಈಗ ಎರಡು ಪಕ್ಷಗಳೊಂದಿಗೂ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಉನ್ನತ ನಾಯಕರನ್ನು ಗುರಿಯಾಗಿಸಿಕೊಂಡು ತೆಹಲ್ಕಾದ ಪತ್ರಕರ್ತ ಮ್ಯಾಥ್ಯೂ ಸ್ಯಾಮ್ಯುಯೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಾಗಿದೆ ‘ನಾರದಾ ಕುಟುಕು ಕಾರ್ಯಾಚರಣೆ’. ಈ ಕಾರ್ಯಾಚರಣೆಯ ಮೂಲಕ ಹಲವಾರು ರಾಜಕಾರಣಿಗಳು ಮತ್ತು ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರು ಕಂಪನಿಗೆ ಅನಧಿಕೃತವಾಗಿ ಬೆಂಬಲಿಸುತ್ತೇವೆ ಎಂದು ನಗದು ಲಂಚ ಪಡೆಯುದನ್ನು ಬಯಲಿಗೆಳೆದಿತ್ತು.

ಈ ನಾಲ್ವರು ಕ್ಯಾಮರಾ ಮುಂದೆ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾರೆ ಎಂದು ಸಿಬಿಐ ಹೇಳಿಕೊಂಡಿದೆ. 2016 ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಡುಗಡೆ ಮಾಡಲಾದ ಈ ಕುಟುಕು ಕಾರ್ಯಾಚರಣೆಯ ದಾಖಲೆಗಳನ್ನು 2014 ರಲ್ಲಿ ಚಿತ್ರೀಕರಿಸಲಾಗಿತ್ತು. ಆಗ ಈ ನಾಲ್ವರು ರಾಜ್ಯದ ಮಂತ್ರಿಗಳಾಗಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಬ್ಲಾಕ್ ಫಂಗಸ್‌ಗೆ ಇಬ್ಬರು ಬಲಿ- ಪ್ರಕರಣಗಳ ನಿಖರ ಮಾಹಿತಿಯಿಲ್ಲ ಎಂದ ಆರೋಗ್ಯ ಸಚಿವರು!

LEAVE A REPLY

Please enter your comment!
Please enter your name here