ರಾಜ್ಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳೊಂದಿಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರ ಆನ್‌ಲೈನ್ ಸಭೆಯನ್ನು ತಮಿಳುನಾಡು ಸರ್ಕಾರ ಸೋಮವಾರ ಬಹಿಷ್ಕರಿಸಿದೆ. ಕೇಂದ್ರ ಸಚಿವರು ರಾಜ್ಯದ ಸಚಿವರ ಬದಲು ಅಧಿಕಾರಿಗಳೊಂದಿಗೆ ನೇರವಾಗಿ ಸಂವಹನ ನಡೆಸುತ್ತಿರುವುದನ್ನು ಪ್ರತಿಭಟಿಸಿ ತಮಿಳುನಾಡು ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ಹೊಸ ಶಿಕ್ಷಣ ನೀತಿ-2020 ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶಿಕ್ಷಣ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರದಿಂದ ತಮ್ಮ ಇಲಾಖೆಗೆ ತಿಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪಯ್ಯಮೊಳಿ ಮಾಧ್ಯಮಗಳಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಅವರು ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಅಧಿಕಾರಿಗಳ ಮಟ್ಟದಲ್ಲಿ ಸಭೆ ಮಾಡುವ ಬದಲು ರಾಜ್ಯ ಸಚಿವರೊಂದಿಗೆ ಚರ್ಚೆ ನಡೆಸಿದರೆ ಉತ್ತಮ ಎಂಬ ಅಂಶವನ್ನು ಕೇಂದ್ರಕ್ಕೆ ಒತ್ತಿಹೇಳಿದ್ದಾರೆ. ಆದರೆ ಅವರ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: ‘ನಾರದ ಪ್ರಕರಣ’: ಬಂಗಾಳ ಸಚಿವ ಫಿರ್ಹಾದ್ ಹಕೀಮ್ ಸಿಬಿಐ ವಶಕ್ಕೆ
“ಸಚಿವರ ಮಟ್ಟದಲ್ಲಿ ಚರ್ಚೆಗಳನ್ನು ನಡೆಸಬೇಕೆಂಬ ನಮ್ಮ ವಿನಂತಿಯ ಹೊರತಾಗಿಯೂ, ಕೇಂದ್ರವು ಅಧಿಕಾರಿಗಳೊಂದಿಗೆ ಮಾತ್ರ ಚರ್ಚೆ ನಡೆಸುವ ಯೋಜನೆಯನ್ನು ಹಾಕಿಕೊಂಡಿದೆ. ಇದನ್ನು ವಿರೋಧಿಸಿ, ನಾವು ಈ ಸಭೆಯನ್ನು ಬಹಿಷ್ಕರಿಸಿದ್ದೇವೆ. ಇದು ನಮ್ಮ ತತ್ವಗಳಿಗೆ ವಿರುದ್ದವಾಗಿರುವುದರಿಂದ ನಾವು ಇದನ್ನು ವಿರೋಧಿಸುತ್ತಿದ್ದೇವೆಯೆ ಹೊರತು, ಕೇಂದ್ರ ಸರ್ಕಾರಕ್ಕೆ ವಿರುದ್ದವಾಗಿ ನಿಲ್ಲಬೇಕು ಎಂಬುವುದು ನಮ್ಮ ಉದ್ದೇಶವಲ್ಲ”ಎಂದು ಸಚಿವರು ಹೇಳಿದ್ದಾರೆ.
ಮೂರು ಭಾಷಾ ನೀತಿ, 3, 5, ಮತ್ತು 8 ನೆ ತರಗತಿಗೆ ಪಬ್ಲಿಕ್ ಪರೀಕ್ಷೆ ಸೇರಿದಂತೆ, ಹೊಸ ಶಿಕ್ಷಣ ನೀತಿ-2020 ಯಲ್ಲಿ ಹಲವು ಸಮಸ್ಯೆಗಳಿವೆ ಎಂದು ಸಚಿವರು ಹೇಳಿದ್ದಾರೆ. ಡಿಎಂಕೆ ಈಗಾಗಲೇ ಹೊಸ ಶಿಕ್ಷಣ ನೀತಿ-2020 ರ ಹಲವು ಅಂಶಗಳನ್ನು ವಿರೋಧಿಸಿದೆ. ಪಕ್ಷ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಕೇಂದ್ರ ಪರಿಗಣಿಸಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? – ಕಾಂಗ್ರೆಸ್ ಅಭಿಯಾನ
ಕೊರೊನಾ ಅವಧಿಯಲ್ಲಿ ಆನ್‌ಲೈನ್ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಅನುಷ್ಠಾನ ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳು ಪ್ರಸ್ತುತ ಸನ್ನಿವೇಶದಲ್ಲಿ ಕಾರ್ಯಸಾಧ್ಯವಾಗಿದೆಯೇ ಎಂಬುದು ಕೇಂದ್ರ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗುತ್ತಿರುವ ಪ್ರಮುಖ ವಿಷಯಗಳು.
ಕೇಂದ್ರ ಸಚಿವರು ಮಂಗಳವಾರ ಕೇಂದ್ರ ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ಸಂವಹನ ನಡೆಸಲು ನಿರ್ಧರಿಸಿದ್ದು, ಈ ವಾರದ ಕೊನೆಯಲ್ಲಿ ಐಐಟಿ ಮತ್ತು ಐಐಎಂಗಳ ನಿರ್ದೇಶಕರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಸ್ಮಶಾನ ಕಾರ್ಮಿಕರ ಸಮಸ್ಯೆ ಬಗೆಹರಿಸಿ ಎಂದು ಮುಖ್ಯಮಂತ್ರಿಗೆ ಪತ್ರ ಬರೆದ ನಟ ಚೇತನ್



ತಮಿಳುನಾಡಿನ ಈ ಕ್ರಮ ಸ್ವಾಗತಾರ್ಹ. ರಾಜ್ಯ ಸರ್ಕಾರಗಳನ್ನು ಕಡೆಗಣಿಸಿ, ರಾಜ್ಯ ಸರ್ಕಾರಗಳ ಅಧಿಕಾರಿಗಳೊಡನೆ ನೇರ ಸಂಪರ್ಕ ಸಾಧಿಸಿ, ತನ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹೊರಟಿರುವ ಒಕ್ಕೂಟ ಸರ್ಕಾರದ ಈ ಕ್ರಮ, ಹಾಲಿ ಅಸ್ತಿತ್ವದಲ್ಲಿ ಇರುವ ನಮ್ಮ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿಯೇತರ ಎಲ್ಲ ರಾಜ್ಯ ಸರ್ಕಾರಗಳೂ, ತಮಿಳುನಾಡಿನ ಈ ಕ್ರಮವನ್ನು ಅನುಸರಿಸಬೇಕು.