ಇಡೀ ದೇಶ ಕೋವಿಡ್ ಎರಡನೇ ಅಲೆಗೆ ತತ್ತರಿಸಿಹೋಗಿರುವ ಸಂದರ್ಭದಲ್ಲಿ ನಾನು ಪ್ರತಿದಿನ ಗೋಮೂತ್ರ ಕುಡಿಯುತ್ತೇನೆ, ಹಾಗಾಗಿ ನನಗೆ ಕೋವಿಡ್ ಬಂದಿಲ್ಲ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ. ಅಲ್ಲದೇ ಗೋಮೂತ್ರವು ಕೋವಿಡ್‌ನಿಂದ ಉಂಟಾಗುವ ಶ್ವಾಸಕೋಶದ ಸೋಂಕನ್ನು ಗುಣಪಡಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತ ಅವರ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಅವರು, “ಹಸುವಿನ ಮೂತ್ರವು ಜೀವ ರಕ್ಷಕ. ನಾವು ಪ್ರತಿದಿನ ದೇಸಿ ಹಸುವಿನಿಂದ ಮೂತ್ರ ತೆಗೆದುಕೊಂಡರೆ ಅದು ಕೋವಿಡ್‌ನಿಂದ ಶ್ವಾಸಕೋಶದ ಸೋಂಕನ್ನು ಗುಣಪಡಿಸುತ್ತದೆ. ನಾನು ತೀವ್ರ ನೋವಿನಲ್ಲಿದ್ದೇನೆ ಆದರೆ ನಾನು ಪ್ರತಿದಿನ ಹಸುವಿನ ಮೂತ್ರವನ್ನು ತೆಗೆದುಕೊಳ್ಳುತ್ತೇನೆ. ಹಾಗಾಗಿ ಈಗ ನಾನು ಕರೋನಾ ವಿರುದ್ಧ ಯಾವುದೇ ಔಷಧಿ ತೆಗೆದುಕೊಳ್ಳಬೇಕಾಗಿಲ್ಲ ಮತ್ತು ನನಗೆ ಕರೋನಾ ಇಲ್ಲ” ಎಂದು ಪ್ರಗ್ಯಾ ಠಾಕೂರ್ ಅವರು ಪಕ್ಷದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
Watch | "I don't have #Covid because I drink cow urine every day": BJP MP Pragya Singh Thakur pic.twitter.com/kynaJPzgoi
— NDTV (@ndtv) May 17, 2021
ಇಂದಿನಿಂದ ಅಗಸ್ಟ್ 5 ರವರೆಗೂ ಎಲ್ಲರೂ ಪ್ರತಿ ದಿನ ಐದು ಬಾರಿ ಹನುಮಾನ್ ಚಾಲೀಸಾ ಪಠಿಸಿ, ಇದರಿಂದ ಕೋವಿಡ್ ಬಿಕ್ಕಟ್ಟು ಜಗತ್ತಿನಿಂದ ದೂರವಾಗುತ್ತದೆ’ ಎಂದು ಬಿಜೆಪಿಯ ಸಂಸದೆ ಪ್ರಗ್ಯಾ ಠಾಕೂರ್ 2020ರ ಜುಲೈನಲ್ಲಿ ಹೇಳಿದ್ದರು.
ಕಳೆದ ವರ್ಷ 2020ರ ಡಿಸೆಂಬರ್‌ನಲ್ಲಿ ಇದೇ ಪ್ರಗ್ಯಾ ಠಾಕೂರ್ ಕೋವಿಡ್ ಲಕ್ಷಣಗಳ ಕಾಣಿಸಿಕೊಂಡ ಕಾರಣದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಅಲ್ಲದೆ ಪ್ರಗ್ಯಾ ಠಾಕೂರ್ ಎರಡು ವರ್ಷದ ಹಿಂದೆ ಗೋ ಮೂತ್ರ ಮತ್ತು ಇತರ ಗೋ ಉತ್ಪನ್ನಗಳ ಮಿಶ್ರಣಗಳು ತನ್ನನ್ನು ಕ್ಯಾನ್ಸರ್‌ನಿಂದ ಗುಣಪಡಿಸಿದವು ಎಂಬ ಹೇಳಿಕೆ ನೀಡಿದ್ದರು.
ಕೋವಿಡ್‌ನ ಚಿಕಿತ್ಸೆ ಅಥವಾ ತಡೆಗಟ್ಟುವಿಕೆಗೆ ಗೋವಿನ ಸಗಣಿ ಅಥವಾ ಮೂತ್ರವು ಸಹಾಯ ಮಾಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ. “ಗೋವಿನ ಸಗಣಿ ಅಥವಾ ಮೂತ್ರವು COVID-19 ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ” ಎಂದು ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಡಾ.ಜೆ.ಎ.ಜಯಲಾಲ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಇನ್ನು ಮಣಿಪುರದ ಬಿಜೆಪಿ ಅಧ್ಯಕ್ಷ ಸೈಖೋಮ್ ತಿಕೇಂದ್ರ ಸಿಂಗ್ ಕೋವಿಡ್‌ನಿಂದ ಮೃತಪಟ್ಟಾಗ ಇಬ್ಬರು ಸಾಮಾಜಿಕ ಕಾರ್ಯಕರ್ತರು ಗೋ ಮೂತ್ರ ನಿಮ್ಮನ್ನು ಉಳಿಸಲಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಬರೆದುದ್ದಕ್ಕೆ ಅವರನ್ನ ಬಂಧಿಸಲಾಗಿತ್ತು. “ಹಸುವಿನ ಸೆಗಣಿ, ಹಸುವಿನ ಗಂಜಲ ಕೆಲಸ ಮಾಡುವುದಿಲ್ಲ. ಆಧಾರವಿಲ್ಲದ ವಾದಗಳು. ನಾನು ನಾಳೆ ಮೀನು ತಿನ್ನುತ್ತೇನೆ” ಎಂದು ಫೇಸ್‌ಬುಕ್‌ನಲ್ಲಿ ವಾಂಗ್‌ಖೆಮ್ ಬರೆದಿದ್ದರು ಎನ್ನಲಾಗಿದೆ. ಅದೇ ರೀತಿ ಎರೆಂಡ್ರೊ ಲೈಚೋಂಬಮ್ ಕೂಡ “ಹಸುವಿನ ಸೆಗಣಿ, ಹಸುವಿನ ಗಂಜಲದಿಂದ ಕೊರೊನಾ ವಾಸಿಯಾಗುವುದಿಲ್ಲ. ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದಿಂದ ವಾಸಿಯಾಗುತ್ತದೆ ಪ್ರೊಫೆಸರ್‌ಜಿ, RIP” ಎಂದು ಬರೆದಿದ್ದರು. ಈ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಫೇಸ್‌ಬುಕ್ ಪೋಸ್ಟ್ ವಿರುದ್ಧ ಬಿಜೆಪಿ ದೂರು: ಮಣಿಪುರದಲ್ಲಿ ಇಬ್ಬರ ಬಂಧನ


