ಹೆಚ್ಚು ಮಾತನಾಡಿದರೇ ನನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಬಹುದು: ಬಿಜೆಪಿ ಶಾಸಕ

ಶಾಸಕರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವಿಲ್ಲ. ನಾವು ಮಾಧ್ಯಮಗಳಿಗೆ ಹೆಚ್ಚಿನ ಹೇಳಿಕೆ ನೀಡಿದರೇ, ಮಾತನಾಡಿದರೇ ನಮ್ಮ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಬಹುದು ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ತಮ್ಮದೇ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಲಖನೌದಿಂದ 80 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಿಜೆಪಿ ಶಾಸಕ ರಾಕೇಶ್ ರಾಥೋಡ್ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ನಮ್ಮಂತಹ ಶಾಸಕರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವಿಲ್ಲ, ನಾವು ಮಾಧ್ಯಮಗಳಿಗೆ ನೀಡುವ ಹೆಚ್ಚಿನ ಹೇಳಿಕೆಗಳು, ನಮ್ಮ ಮಾತುಗಳೂ ‘ದೇಶದ್ರೋಹ ಆರೋಪಕ್ಕೆ ಕಾರಣವಾಗಬಹುದು’ ಎಂದಿದ್ದಾರೆ.

ಸೀತಾಪುರದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರವನ್ನು ಮತ್ತೆ ಕಾರ್ಯಗತಗೊಳಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಾಸಕ ರಾಕೇಶ್ ರಾಥೋಡ್, “ನಾನು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇನೆ, ಆದರೆ ಶಾಸಕರಿಗೆ ಯಾವ ಸ್ಥಾನಮಾನವಿದೆ?. ನಾನು ಹೆಚ್ಚು ಮಾತನಾಡಿದರೆ, ನನ್ನ ವಿರುದ್ಧ ದೇಶದ್ರೋಹ ಆರೋಪ ಹೊರಿಸಬಹುದು” ಎಂದು ತಮ್ಮದೇ ಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? – ಕಾಂಗ್ರೆಸ್ ಅಭಿಯಾನ

ತಮ್ಮದೆ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿರುವಾಗ ಶಾಸಕರಾಗಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಇಲ್ಲಿ ಶಾಸಕರು ತಮ್ಮ ಮನಸ್ಸನ್ನು ಬಿಚ್ಚಿ ಮಾತನಾಡಬಲ್ಲರು ಎಂದು ನಿಮಗೆ ಅನ್ನಿಸುತ್ತಿದೆಯೇ? ನಾನು ಈ ಕುರಿತು ಹಿಂದೆಯೂ ಪ್ರಶ್ನೆ ಮಾಡಿದ್ದೇನೆಂದು ನಿಮಗೆ ತಿಳಿದಿಲ್ಲವೇ” ಎಂದಿದ್ದಾರೆ.

ಮೊದಲ ಬಾರಿಗೆ ಶಾಸಕರಾಗಿರುವ ರಾಕೇಶ್ ರಾಥೋಡ್ 2017 ರ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿಗೆ ಸೇರಿದ್ದರು. ಮಾಯಾವತಿಯವರ ಬಹುಜನ ಸಮಾಜ ಪಕ್ಷದೊಂದಿಗೆ ನಂಟು ಹೊಂದಿದ್ದ ಇವರು,  ಈ ಹಿಂದೆ ಸ್ವತಂತ್ರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಕಳೆದ ವರ್ಷ, ಕೊರೊನಾ ವೈರಸ್ ಸಾಂಕ್ರಾಮಿಕದ ಆರಂಭದಲ್ಲಿ ಪ್ರಧಾನಿ ಮೋದಿ ಜನರಿಗೆ ಚಪ್ಪಾಳೆ ತಟ್ಟಲು ಮತ್ತು ಗಂಟೆ ಬಾರಿಸಲು ಕರೆ ನೀಡಿದ್ದನ್ನು ಟೀಕಿಸಿದ್ದರು. ಮೋದಿಯವರನ್ನು ಟೀಕಿಸಿದ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಬಿಜೆಪಿ ಈ ಕುರಿತು ಸ್ಪಷ್ಟನೆ ನೀಡುವಂತೆ ರಾಕೇಶ್ ರಾಥೋಡ್ ಅವರನ್ನು ಕೇಳಿತ್ತು.

ಉತ್ತರ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು, ಸಾವುಗಳು ಅಧಿಕವಾಗುತ್ತಿದ್ದರೂ ಕೂಡ ಸರಿಯಾದ ಮಾಹಿತಿಯನ್ನು ರಾಜ್ಯ ಸರ್ಕಾರ ಮುಚ್ಚಿಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಜೊತೆಗೆ ಆಕ್ಸಿಜನ್ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಟ್ಟವರಿಗೆ ಬೆದರಿಕೆ ಒಡ್ಡಲಾಗಿತ್ತು.


ಇದನ್ನೂ ಓದಿ: ರಾಜ್ಯದಲ್ಲೂ ಕಾಣಿಸಲು ಶುರುವಾದ ’ಲಸಿಕೆ ಸಂಗ್ರಹವಿಲ್ಲ’ ಬೋರ್ಡ್‌ಗಳು!

LEAVE A REPLY

Please enter your comment!
Please enter your name here