ಹೋರಾಟಗಾರ ಅಖಿಲ್ ಗೊಗೋಯಿ 2021 ರ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಮೇಲೆ ಆಡಳಿತಾರೂಢ ಬಿಜೆಪಿಗೆ ದು:ಸ್ವಪ್ನವಾಗಿ ಪರಿಣಮಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮೂಲಕ ಆಯ್ಕೆಯಾದ ಜನಪ್ರತಿನಿಧಿಗಳನ್ನು ಅವರ ಶಾಸನಬದ್ಧ ಹಕ್ಕನ್ನು ಅಸ್ಸಾಂ ಸರ್ಕಾರ ಮೊಟಕುಗೊಳಿಸಿದೆ. ಬಿಜೆಪಿ ಮತ್ತು ಅದರ ಪರಿವಾರವನ್ನು ತೀವ್ರವಾಗಿ ವಿರೋಧಿಸುವ ಅಖಿಲ್ ಗೊಗೋಯ್ ಅವರನ್ನು ಮಾನಸಿಕ ಆರೋಗ್ಯ ಸಂಬಂಧಿ ಚಿಕಿತ್ಸೆಯ ಅಗತ್ಯವಿರುವ ವ್ಯಕ್ತಿ ಎಂದು ಹೇಳಿ ಅಧಿವೇಶನಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದೆ.
ಈ ಮೊದಲು ಜಮ್ಮು ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ, ಫಾರೂಖ್ ಅಬ್ದುಲ್ಲಾ ಮೊದಲಾದ ತನ್ನ ರಾಜಕೀಯ ವಿರೋಧಿಗಳನ್ನು ವರ್ಷಗಳ ಕಾಲ ಗೃಹಬಂಧನದಲ್ಲಿ ಇಟ್ಟಿದ್ದ ಬಿಜೆಪಿ ತನ್ನ ಅದೇ ಸರ್ವಾಧಿಕಾರಿ ಧೋರಣೆಯನ್ನು ಅಸ್ಸಾಮಿನಲ್ಲೂ ಮುಂದುವರೆಸಿದೆ.
ಮಾನಸಿಕ ಆರೋಗ್ಯದ ಚಿಕಿತ್ಸೆ ಪಡೆಯುತ್ತಿರುವವರನ್ನು ಎಲ್ಲಾದರೂ ವಿಧಾನಸಭೆಗೆ ಪ್ರವೇಶಿಸಲು ಬಿಡುವುದು ಸಾಧ್ಯವಿಲ್ಲ ಎಂದು ಅಖಿಲ್ ಗೊಗೋಯ್ ಕುರಿತು ಹೇಳಿಕೆ ನೀಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆ ಮತ್ತು ವಿರೋಧಗಳು ವ್ಯಕ್ತವಾಗಿವೆ. ಅಸ್ಸಾಂ ಮುಖ್ಯಮಂತ್ರಿಯ ಈ ಅವಹೇಳನಕಾರಿ ಹೇಳಿಕೆ ಮತ್ತು ಸರ್ವಾಧಿಕಾರಿ ನಿಲುವನ್ನು ವಿರೋಧಿಸಿದ ಅಖಿಲ್ ಗೊಗೋಯ್ ಅವರ ನಾಲ್ವರು ಬೆಂಬಲಿಗರನ್ನು ಸರ್ಕಾರ ಬಂಧಿಸಿದೆ.
ಇದನ್ನೂ ಓದಿ: ‘ಮುಗ್ಧ ಜನರ ರಕ್ತವನ್ನು ಮೊಸಳೆ ಕಣ್ಣೀರಿನಿಂದ ಅಳಿಸಲಾಗುವುದಿಲ್ಲ’ – #CrocodileTears ಟ್ರೆಂಡ್!
ಮೇ 24 ರಂದು ಗುವಾಹಟಿಯ ಅಸ್ಸಾಂ ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳು ಅಖಿಲ್ ಗೊಗೋಯಿ ವಿಧಾನಸಭೆ ಪ್ರವೇಶವನ್ನು ನಿರ್ಬಂಧಿಸಿರುವ ಕುರಿತು ಸರ್ಕಾರವನ್ನು ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಇದಕ್ಕೆ ಉತ್ತರಿಸಿದ ಹಿಮಂತ್ ಬಿಸ್ವಾಸ್ ಶರ್ಮಾ, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ವಿಧಾನಸಭೆಗೆ ಸೇರಿಸಿಕೊಳ್ಳಲು ಹೇಗೆ ಸಾಧ್ಯ? ಅಖಿಲ್ ಗೊಗೋಯ್ ಈಗ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂದು ಉತ್ತರಿಸಿದ್ದಾರೆ.

ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಹೇಳಿಕೆಯನ್ನು ಅನೇಕ ಮನಶಾಸ್ತ್ರಜ್ಙರು ಖಂಡಿಸಿದ್ದಾರೆ. ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಬಹಳ ಮುಖ್ಯ. ಬಹುತೇಕರು ಮಾನಸಿಕವಾದ ಸಮಸ್ಯೆಗಳಿಂದ ಬಳಲುತ್ತಾರೆ. ಸಮಾಜದ ಮುಂದೆ ತಮ್ಮ ಸಮಸ್ಯೆಗಳನ್ನು ಒಪ್ಪಿಕೊಂಡು ಚಿಕಿತ್ಸೆ ಪಡೆಯುವವರನ್ನು ಕೀಳಾಗಿ ಕಾಣುವುದು ವೈದ್ಯ ವಿಜ್ಞಾನಕ್ಕೆ ಮತ್ತು ವ್ಯಕ್ತಿ ಘನತೆಗೆ ಮಾಡಿದ ಅವಮಾನ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೋರಾಟಗಾರ ಅಖಿಲ್ ಗೊಗೋಯ್ ಅನೇಕ ದಿನಗಳಿಂದ ಗುವಾಹಟಿಯ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಸ್ಸಾಮ್ ಮುಖ್ಯಮಂತ್ರಿಯ ಹೇಳಿಕೆಗೆ ವ್ಯಾಪಕ ಖಂಡನೆ
ಮೇ 26, ಸೋಮವಾರ ಸಂಜೆ ಗೊಗೋಯಿ ಅವರ ಕೃಷಿ ಮುಕ್ತಿ ಸಂಗ್ರಾಮ ಸಮಿತಿ (ಕೆಎಮ್‌ಎಸ್‌ಎಸ್) ಗೆ ಸೇರಿದ ನಾಲ್ವರರನ್ನು ಅಸ್ಸಾಂ ಪೊಲೀಸರು ಉತ್ತರ ಅಸ್ಸಾಂ ಭಾಗದ ಶಿವಸಾಗರ ಜಿಲ್ಲೆಯಲ್ಲಿ ಬಂಧಿಸಿ ರಾತ್ರಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣದ ಆರ್ಥಿಕತೆಯ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರ!
ಕೃಷಿಕ ಮುಕ್ತಿ ಸಂಘರ್ಷ ಸಮಿತಿ ಮತ್ತು ಅದರ ಬೆಂಬಲಿತ ಸಂಘಟನೆಗಳು ಮುಖ್ಯಮಂತ್ರಿ ಶರ್ಮಾ ಹೇಳಿಕೆಯಿಂದ ಉಂಟಾಗುವ ಪರಿಣಾಮಗಳಿಗೆ ಹೆದರಿ ಅಸ್ಸಾಂ ಸರ್ಕಾರ ತನ್ನ ರಾಜಕೀಯ ವಿರೋಧಿಗಳನ್ನು ಬಂಧಿಸಿದೆ ಎಂದು ವೈರ್‌ಗೆ ಪ್ರತಿಕ್ರಿಯೆ ನೀಡಿವೆ.
ಮನಸ್ ಕೋನ್ವಾರ್, ಸಿತು ಬುರಾಹ, ಪದ್ಮಕಾಂತ್ ದಾಸ್ ಜಿಂತು ಮೇಖ್ ಅವರನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಬಂಧಿತ ನಾಲ್ವರು ಕೆಎಮ್‌ಎಸ್‌ಎಸ್ ನ ವಿದ್ಯಾರ್ಥಿ ಘಟಕ ಸಾತ್ರ ಮುಕ್ತಿ ಸಂಘರ್ಷ ಸಮಿತಿ(ಎಸ್‌ಎಮ್‌ಎಸ್‌ಎಸ್) ಗೆ ಸೇರಿದ್ದಾರೆ. ಬಂಧಿತ ಮನಸ್ ಕೊನ್ವಾರ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟದಲ್ಲಿ ಭಾಗವಹಿಸಿದ ಆರೋಪದಲ್ಲಿ ಕಳೆದ ವರ್ಷ ಏಳು ತಿಂಗಳು ಸೆರೆವಾಸವನ್ನು ಅನುಭವಿಸಿದ್ದರು. ಕಳೆದ ವರ್ಷ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಯುಎಪಿಎ ಕಾಯ್ದೆಯಡಿ ಕೊನ್ವಾರ್ ಅವರನ್ನು ಬಂಧಿಸಿತ್ತು. 2020 ರ ಜುಲೈನಲ್ಲಿ ಎನ್‌ಐಎ ನ್ಯಾಯಾಲಯವು ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

ಕೃಷಿಕ ಮುಕ್ತಿ ಸಂಘರ್ಷ ಸಮಿತಿಯು ಹೇಳುವ ಪ್ರಕಾರ ಬಂಧಿತರ ಕುಟುಂಬಸ್ತರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ವಿಚಾರಣೆ ನಡೆಸುವ ಮತ್ತು ಬಂಧಿಸುವ ಮೊದಲು ಪೊಲೀಸರು ಯಾವುದೇ ವಾರೆಂಟ್ ನೀಡಿಲ್ಲ ಎಂದು ಕೆಎಮ್‌ಎಸ್ ಸಂಘಟನೆ ಆರೋಪಿಸಿದೆ.
ವೈರ್ ಸುದ್ದಿ ಸಂಸ್ಥೆಯು ಬಂಧಿತ ಹೋರಾಟಗಾರ ಮತ್ತು ಸಾತ್ರ ಸಮಿತಿಯ ಮುಖ್ಯಸ್ಥ ಮಾನಸ್ ಕೋನ್ವಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ವೈರ್‌ಗೆ ಪ್ರತಿಕ್ರಿಯಿಸಿದ ಮಾನಸ್ ಕೊನ್ವಾರ್ 24 ಮೇ, ಭಾನುವಾರ ಮದ್ಯರಾತ್ರಿ ಪೊಲೀಸರು ನಮ್ಮ ಮನೆಗೆ ನುಗ್ಗಿ ವಿಚಾರಣೆ ನಡೆಸಿದ್ದಾರೆ. ಆದರೆ ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ವಾರೆಂಟ್ ಮತ್ತು ಕಾರಣಗಳನ್ನು ನಮಗೆ ತಿಳಿಸಲಿಲ್ಲ.
ಕೆಎಮ್‌ಎಸ್‌ಎಸ್ ಗೆ ಸೇರಿದ ನಾಲ್ಕು ಜನ ನಮ್ಮನ್ನು ಬಂಧಿಸಿ ರಾತ್ರಿಯಿಡಿ ಸಿಮಲಗುರಿ ಪೊಲೀಸ್ ಠಾಣೆಯಲ್ಲಿ ಇರಿಸಿದರು. ನಾವು ಯಾವ ಕಾರಣಕ್ಕೆ ನಮ್ಮನ್ನು ಬಂಧಿಸಿದ್ದೀರಿ ಎಂದು ಕೇಳಿದಾಗ ಪ್ರತಿಭಟನೆಯನ್ನು ತಡೆಯಲು ಬಂಧಿಸಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಪ್ರತಿಭಟಿಸುವುದು ನಮ್ಮ ಸಂವಿಧಾನಾತ್ಮಕ ಹಕ್ಕು ಅದನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಹಿಮಂತ್ ಬಿಸ್ವಾಸ್ ಶರ್ಮಾ ಸರ್ಕಾರ ನಮ್ಮ ಹೋರಾಟಕ್ಕೆ ಹೆದರಿ ಅಕ್ರಮವಾಗಿ ತಮ್ಮನ್ನು ಬಂಧಿಸಲು ಮುಂದಾಗಿದೆ ಎಂದು ಮಾನಸ್ ಕನ್ವರ್ ಹೇಳುತ್ತಾರೆ.
ಇದನ್ನೂ ಓದಿ: ‘ಕಾಂಗ್ರೆಸ್ ಟೂಲ್‌ಕಿಟ್ ಎಕ್ಸ್‌ಪೋಸ್ಡ್’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!
ಕೃಷಿ ಮುಕ್ತಿ ಸಂಘಟನೆಯ ಸದಸ್ಯರೆಲ್ಲರ ಮನೆಗೆ ನುಗ್ಗಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಮಾನಸ್ ಕೊನ್ವರ್ ಹೇಳಿದ್ದಾರೆ. ನಮ್ಮ ಸಂಘಟನೆಯವರ ಮನೆ ಮುಂದೆ ಪೊಲೀಸರು ದಿನದ 24 ಗಂಟೆ ಗಸ್ತಿನಲ್ಲಿ ಓಡಾಡುತ್ತಿದ್ದಾರೆ. ಸಂಪೂರ್ಣ ಶಿವಸಾಗರ ಪಟ್ಟಣವನ್ನು ಪೊಲೀಸರು ಸುತ್ತುವರೆದಿದ್ದಾರೆ ಎನ್ನುತ್ತಾರೆ.
ತಮ್ಮ ಹೇಳಿಕೆ ಮತ್ತು ನಿಲುವನ್ನು ಸಮರ್ಥಿಸಿಕೊಂಡ ಹಿಮಂತ್ ಬಿಸ್ವಾಸ್ ಶರ್ಮಾ
ಮನೋ ವೈದ್ಯರು, ಮಾನಸಿಕ ಆರೋಗ್ಯ ತಜ್ಞರು, ವಿಚಾರವಾದಿಗಳು ಮತ್ತು ನಾಗರಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಮಂತ್ ಬಿಸ್ವಾಸ್ ಶರ್ಮಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಅಖಿಲ್ ಗೊಗೋಯ್ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡಿದ್ದಾರೆ. ಕಳೆದು ನಾಲ್ಕು ತಿಂಗಳುಗಳಿಂದ ಗುವಾಹಟಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಾನಸಿಕ ತೊಂದರೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೊಗೋಯ್ ತಮ್ಮ ಭಾವನೆಗಳನ್ನು ಸಮತೋಲನದಲ್ಲಿಟ್ಟುಕೊಳ್ಳಲಾಗದೆ ಪರದಾಡುತ್ತಿದ್ದಾರೆ.
ಇಂತಹ ವ್ಯಕ್ತಿಯನ್ನು ಅಸ್ಸಾಂ ವಿಧಾನಸಭೆ ಕಲಾಪಗಳಿಗೆ ಪ್ರವೇಶಿಸಲು ಬಿಡಲು ಸಾಧ್ಯವಿಲ್ಲ. ಗೊಗೋಯ್ ವಿಧಾನಸಭಾ ಸ್ಪೀಕರ್ ತಮಗೆ ಈ ಸಂಬಂಧ ಪತ್ರ ಬರೆಯಬೇಕೆಂದು ಹೇಳುತ್ತಾರೆ. ಅದು ಸಾಧ್ಯವಿಲ್ಲ. ಒಬ್ಬ ಮಾನಸಿಕ ರೋಗಿಗೆ ಸ್ಪೀಕರ್ ಯಾಕೆ ಪತ್ರಬರೆಯಬೇಕು? ಗೊಗೋಯ್ ಮಾನಸಿಕ ರೋಗಿಯೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತಮ್ಮ ರೋಗದಿಂದಲೇ ಅವರು ಆಸ್ಪತ್ರೆಯಲ್ಲಿ ಇದ್ದಾರೆ” ಎಂದು ಹಿಮಂತ್ ಬಿಸ್ವಾಸ್ ತಮ್ಮ ಹೇಳಿಕೆಗಳ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಮೇ 25, ಮಂಗಳವಾರ ಅಸ್ಸಾಮಿ ಭಾಷೆಯ ಸುದ್ದಿ ವಾಹಿನಿ ಅಖಿಲ್ ಗೊಗೋಯ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಬ್ಬರ ಸಂದರ್ಶನ ನಡೆಸಿದೆ. ಆ ಸಂದರ್ಶನದಲ್ಲಿ ಅಖಿಲ್ ಗೊಗೋಯ್ ಹಲವಾರು ಆರೋಗ್ಯ ತೊಂದರೆಗಳಿಗೆ ನಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ಕೋವಿಡ್ ಸೋಂಕು ತಗುಲಿದಾಗಿನಿಂದ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ ಎಂದು ಗುವಾಹಟಿ ಮೆಡಿಕಾಲೇಜಿನ ವೈದ್ಯ ಪುರುಜಿತ್ ಚೌಧರಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ
ಗುವಾಹಟಿ ಮೆಡಿಕಲ್ ಕಾಲೇಜಿನ ಅನೇಕ ವಿಭಾಗಗಳು ಗೊಗೋಯ್‌ಗೆ ಚಿಕಿತ್ಸೆ ನೀಡುತ್ತಿವೆ. ಗ್ಯಾಸ್ಟೊಲಜಿ, ನ್ಯುರೊಲಜಿ, ಸೈಕಿಯಾಟ್ರಿ, ಕಾರ್ಡಿಯಾಲಜಿ, ಇಎಂಟಿ ಸೇರಿದಂತೆ ವಿವಿಧ ವಿಭಾಗಳಲ್ಲಿ ಅಖಿಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿದ್ರಾ ಹೀನತೆ, ಮಾನಸಿಕ ಖಿನ್ನತೆ ಸೇರಿದಂತೆ ಕೆಲವು ಮಾನಸಿಕ ತೊಂದರೆಗಳು ಇತ್ತೀಚೆಗೆ ಅವರಲ್ಲಿ ಕಾಣಿಸಿಕೊಂಡಿದೆ. ಬೆನ್ನು ನೋವು , ಪೈಲ್ಸ್ ಮತ್ತು ಮೂತ್ರ ಪಿಂಡದಲ್ಲಿ ಕಲ್ಲಿನ ಸಮಸ್ಯೆಗಳು ಅಖಿಲ್ ಗೊಗೊಯ್ ಅವರನ್ನು ಬಾಧಿಸುತ್ತಿದೆ. ನಾವು ಯಾವುದೇ ಕಾರಣಕ್ಕೂ ಚಿಕಿತ್ಸೆ ಗುಣಮುಖವಾಗುವವರೆಗೆ ರೋಗಿಯನ್ನು ಹೊರಗೆ ಕಳುಹಿಸಲು ಸಾಧಯವಿಲ್ಲ. ಒಂದುವೇಳೆ ಪೊಲೀಸರಿಂದ ಬಂಧನಕ್ಕೆ ಒಳಗಾದರೂ ಈ ಹಂತದಲ್ಲಿ ಅಖಿಲ್ ಗೊಗೋಯಿ ಅವರನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸುವುದು ಸಾಧ್ಯವಿಲ್ಲ ಎಂದು ಡಾ ಪುರುಜಿತ್ ಚೌಧರಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.
ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ-2017
ಪ್ರಸಿದ್ಧ ಮನಶಾಸ್ತ್ರ ತಜ್ಞರೊಬ್ಬರು ಅಸ್ಸಾಂ ಬಿಸ್ವಾಸ್ ಶರ್ಮಾ ಹೇಳಿಕೆ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ, 2017 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಮುಖ್ಯಮಂತ್ರಿ ಶರ್ಮಾ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಇಂತಹ ಹೇಳಿಕೆಯನ್ನು ನೀಡುರುವುದು ಅಕ್ಷಮ್ಯ ಅಪರಾಧ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಮಂತ್ ಬಿಸ್ವಾಸ್ ಶರ್ಮಾ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಅಖಿಲ್ ರಂಜನ್ ದತ್ತ ಈ ರೀತಿಯಲ್ಲಿ ಹೇಳುತ್ತಾರೆ. “ಮಾನಸಿಕ ಆರೋಗ್ಯದ ಸಮಸ್ಯೆಯ ಕಾರಣದಿಂದಾಗಿ ಮಾತ್ರ ಯಾವ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥ ಎಂದು ಹೇಳುವುದು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಮಾತ್ರ ವ್ಯಕ್ತಿಯೊಬ್ಬನನ್ನು ಮಾನಿಸಿಕ ಅಸ್ಥಸ್ಥ ಅಥವಾ ಮಾನಸಿಕ ಸ್ಥಿಮಿತಕ್ಕೆ ಒಳಗಾದ ವ್ಯಕ್ತಿಯೆಂದು ಘೋಷಿಸಲು ಸಾಧ್ಯ. ಯಾವುದೇ ವ್ಯಕ್ತಿಯಲ್ಲಿ ಮಾನಸಿಕ ಅಸ್ವಸ್ಥತೆ ಕಂಡುಬಂದರೂ ಅವರನ್ನು ನ್ಯಾಯಲಯದ ಹೊರತಾದ ಯಾವ ವ್ಯಕ್ತಿಯೂ ಮಾನಸಿಕ ಅಸ್ವಸ್ಥ ಎಂದು ಘೋಷಿಸಲು ಸಾಧ್ಯವಿಲ್ಲ” ಎಂದು ಪ್ರೊಫೆಸರ್ ಅಖಿಲ್ ರಂಜನ್ ದತ್ತ ಅಭಿಪ್ರಾಯ ಪಟ್ಟಿದ್ದಾರೆ.

ಸೆಕ್ಷನ್ 17, ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ ಪ್ರಕಾರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕಿದೆ. ಮತ್ತು ಈ ಕಾಯ್ದೆ ಮಾನಸಿಕ ರೋಗಿಗಳನ್ನು ಸಮಾಜದಿಂದ ಹೊರಹಾಕುವಂತಿಲ್ಲ ಎಂದು ಹೇಳುತ್ತದೆ.
ಇದನ್ನೂ ಓದಿ: ಸೆಪ್ಟಂಬರ್ ತಿಂಗಳವರೆಗೆ ಕೇಂದ್ರ ಸರ್ಕಾರ ಮಾಡಿದ ಒಟ್ಟು ಸಾಲ 107.04 ಲಕ್ಷ ಕೋಟಿ!
ಹೆಸರು ಹೇಳಲು ಇಚ್ಚಿಸದ ಮನಶಾಸ್ತ್ರಜ್ಞರೊಬ್ಬರು ವೈರ್‌ಗೆ ಪ್ರತಿಕ್ರಿಯಿಸುತ್ತಾ ಹಿಮಂತ್ ಬಿಸ್ವಾಸ್ ಶರ್ಮಾ ವಿಶ್ವ ಸ್ಕ್ರಿಝೊಫೆನಿಯಾ ದಿನ ಇಂತಹ ಅವಹೇಳನಕಾರಿ ಹೇಳಿಕೆ ನೀಡಿದ್ದು ದೊಡ್ಡ ದುರಂತ. ಇದೊಂದು ಕೆಟ್ಟ ಬೆಳವಣಿಗೆ. ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾವಿರಾರು ಜನರು ಮಾನಸಿಕ ಖಿನ್ನತೆ ಮುಂತಾದ ಸಮಸ್ಯೆಯೆಗೆ ಒಳಗಾಗುತ್ತಿದ್ದಾರೆ. ಮುಖ್ಯಮಂತ್ರಿಯೇ ಮಾನಸಿಕ ರೋಗದ ಕುರಿತು ಅವಹೇಳನಕ್ಕೆ ಮುಂದಾದರೆ ಜನಸಾಮಾನ್ಯರೂ ಅವರನ್ನೇ ಹಿಂಬಾಲಿಸುತ್ತಾರೆ. ಇದೊಂದು ಕೆಟ್ಟ ಘಟನೆ. ಪ್ರತಿಯೊಬ್ಬ ಮಾನಸಿಕ ರೋಗಿಯು ತನ್ನ ಸಮಸ್ಯೆ ಮತ್ತು ಚಿಕಿತ್ಸೆಯನ್ನು ಗೌಪ್ಯವಾಗಿಟ್ಟುಕೊಳ್ಳುವ ಹಕ್ಕನ್ನು ಹೊಂದಿದ್ದಾನೆ. ಹಿಮಂತ್ ಬಿಸ್ವಾಸ್ ಶರ್ಮ ತಮ್ಮ ಹೇಳಿಕೆಯ ಮೂಲಕ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ 2017 ನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ವೈರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೊರೋನಾ ಸಂಕ್ರಾಮಿಕ ಮತ್ತು ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಸಾಕಷ್ಟು ಜನರು ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಇವರೆಲ್ಲರನ್ನು ಅಪಹಾಸ್ಯ ಮಾಡುವಂತೆ ಹಿಮಂತ್ ಬಿಸ್ವಾಸ್ ಶರ್ಮ ವರ್ತಿಸಿದ್ದಾರೆ. ಮಾನಸಿಕ ಆರೋಗ್ಯದ ನೆಪವೊಡ್ಡಿ ಜನಪ್ರತಿಯೊಬ್ಬರ ಶಾಸನ ಬದ್ಧ ಹಕ್ಕನ್ನೂ ಮೊಟಕುಗೊಳಿಸಲು ಮುಂದಾಗಿದ್ದಾರೆ. ಇದು ಬಿಜೆಪಿ ಹೋರಾಟಗಾರರನ್ನು ತನ್ನ ವಿರೋಧಿಗಳನ್ನು ಹತ್ತಿಕ್ಕಲು ನಡೆಸುತ್ತಿರುವ ಸಂಚಿನ ಒಂದು ಭಾಗವಷ್ಟೆ.
ಮೂಲ : ವೈರ್
ಅನುವಾದ : ರಾಜೇಶ್ ಹೆಬ್ಬಾರ್
ಇದನ್ನೂ ಓದಿ: ಇಸ್ರೇಲ್: ಫಿರಂಗಿಗಳು ಘರ್ಜಿಸುತ್ತಿರುವಾಗಲೂ ನಡೆಯುತ್ತಿವೆ ಮುಸ್ಲೀಮರು ಮತ್ತು ಯಹೂದಿಗಳ ಸೌಹಾರ್ದ ಕಾರ್ಯಕ್ರಮಗಳು!


