ಹಿಂದು ರಾಷ್ಟ್ರ ಎಂಬ ಪದಪುಂಜವನ್ನು ಸಂಘಪರಿವಾರ ಮತ್ತು ಅದರ ಅನುಯಾಯಿಗಳು ಬಳಸಿದಾಗ ಅದರ ಉದ್ದೇಶವೇ ಬೇರೆಯಿತ್ತು. ಅದು ಖಂಡಿತವಾಗಿಯೂ ನೇಪಾಳ ಮಾದರಿಯ ಅಥವಾ ಅದನ್ನೇ ಹೋಲುವ ಹಿಂದು ರಾಷ್ಟ್ರ ಕಟ್ಟುವ ಉದ್ದೇಶವಾಗಿರಲಿಲ್ಲ ಎಂದು ವಿಶ್ಲೇಷಣೆ ಮಾಡುವ ಆಕಾರ್ ಪಟೇಲ್, ಭಾರತ ಕಳೆದ ಮೂವತ್ತು ವರ್ಷಗಳಲ್ಲಿ ವಿಚಿತ್ರ ತಿರುವು ಪಡೆದುಕೊಂಡು ಜಾತ್ಯತೀತ ನೆಲೆಗಟ್ಟಿನ ಗಣರಾಜ್ಯವೊಂದು ಧರ್ಮಾಧಾರಿತ ಆಡಳಿತ ವ್ಯವಸ್ಥೆಯಾಗಿ ಬದಲಾಗುತ್ತಿರುವ ಬೆಚ್ಚಿ ಬೀಳಿಸುವ ಲಕ್ಷಣಗಳನ್ನು ವಿವರಿಸುತ್ತಾ ಹೋಗುತ್ತಾರೆ.

ಇತ್ತೀಚೆಗೆ ಬಿಡುಗಡೆಯಾದ ಪಟೇಲ್ ಅವರ, ’ಅವರ್ ಹಿಂದು ರಾಷ್ಟ್ರ’ ಭಾರತದಲ್ಲಿ ಹೆಚ್ಚುತ್ತಿರುವ ಸಂಪ್ರದಾಯವಾದಿ ಮನಸ್ಥಿತಿ, ಸಂವಿಧಾನ ವಿರೋಧಿ ನಡೆ, ಪರ್ಯಾಯ ಸಂವಿಧಾನದ ಹೆಸರಿನಲ್ಲಿ ಮನುಸ್ಮೃತಿಯ ವಿಚಾರಗಳ ಪ್ರಚಾರ, ಉಗ್ರ ಧಾರ್ಮಿಕವಾದ, ಹಿಂದು-ಹಿಂದುತ್ವದ ಹೆಸರಿನಲ್ಲಿ ಉಗ್ರ ವಿಚಾರಗಳ ಪ್ರತಿಪಾದನೆ – ಇವೆಲ್ಲಾ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಭಾರತದ ಮೂಲ ಆಶಯಗಳನ್ನು ಅಲುಗಾಡಿಸುತ್ತಿವೆ. ಇದು ಏಕಾಏಕಿ ಆಗಿದೆ ಅಥವಾ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಗಿದ್ದು ಎಂದು ಭಾವಿಸುವುದು ಮೂರ್ಖತನ ಎನ್ನುತ್ತಾರೆ.

ಸ್ವಾತಂತ್ರ್ಯೋತ್ತರ ಭಾರತ, ವಿಭಜನೆಯ ಆಳವಾದ ವಿಷಾದ ಮತ್ತು ನೋವಿನಿಂದ ಸುಧಾರಿಸಿಕೊಳ್ಳುತ್ತಲೇ ಒಂದು ಪ್ರಜಾರಾಜ್ಯವಾಗುವ ಕನಸಿನೊಂದಿಗೆ ಅಂಬೆಗಾಲಿಡುತ್ತಿರುವಾಗಲೇ, ಗಾಂಧಿಯನ್ನು ಕೊಂದ ಗೋಡ್ಸೆವಾದ ಹೇಗೆ ಗುಪ್ತಗಾಮಿನಿಯಂತೆ ಭಾರತೀಯ ಸಮಾಜದೊಳಗೆ ಹರಿಯುತ್ತಲೇ ಬಂತು ಎಂಬುದು ದಾಖಲೆಗಳ ಮೂಲಕ ವಿವರಿಸುತ್ತಾರೆ.

ಭಾರತದಲ್ಲೇ ಅದಾಗಲೇ ಬೇರು ಬಿಟ್ಟಿದ್ದ ಬಹುಸಂಖ್ಯಾತವಾದ ಕಳೆದ ಮೂವತ್ತು ವರ್ಷಗಳಲ್ಲಿ ತೀವ್ರವಾಗುತ್ತಾ ಬಂದದ್ದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತದೆ ಈ ಕೃತಿ. ಪರಿಚಯದ ಅಧ್ಯಾಯದಲ್ಲಿ ದಕ್ಷಿಣ ಏಷ್ಯ ದೇಶಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ, ಮಾಲ್ಡೀವ್ಸ್, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳ ಹೇಗೆ ಧರ್ಮ ಕೇಂದ್ರಿತವಾದ ಆಡಳಿತವನ್ನು ನಡೆಸುತ್ತಿವೆ ಮತ್ತು ಭಾರತ ತನ್ನ ಬಹುತ್ವದ ಸಂವಿಧಾನದ ಕಾರಣದಿಂದಾಗಿ ಹೇಗೆ ಭಿನ್ನವಾಗಿ ನಿಲ್ಲುತ್ತದೆ ಎಂಬುದನ್ನು ವಿವರಿಸುತ್ತಾರೆ.

ಜಗತ್ತಿನಲ್ಲೇ ಏಕೈಕ ಹಿಂದು ರಾಷ್ಟ್ರವೆಂದು ಇದ್ದಿದ್ದು ನೇಪಾಳದಲ್ಲಿ ಮಾತ್ರ. ಅದರ ಸ್ವರೂಪ ಹೇಗಿತ್ತು ಎಂಬುದನ್ನು ವಿವರಿಸುವ ಆಕಾರ್ ಪಟೇಲ್, ಮನುಸ್ಮೃತಿ ಪ್ರತಿಪಾದಿಸಿದಂತೆ ಇಲ್ಲಿ ಕ್ಷತ್ರಿಯನೇ ರಾಜ. ಅವನು ಆರ್ಯನೂ, ಹಿಂದುವೂ ಆಗಿರಬೇಕು. ರಾಜಸಭೆ ಅಥವಾ ಆಡಳಿತ ಮಂಡಳಿಯನ್ನು ಬ್ರಾಹ್ಮಣನೇ ಮುನ್ನಡೆಸಬೇಕು. ಇಲ್ಲಿ ಧರ್ಮಾಂತರ ನಿಷಿದ್ಧ. ಹೀಗಿರುವ ನೇಪಾಳ ಹಿಂದು ಸಂವಿಧಾನಕ್ಕೂ, ಬಹುತ್ವವನ್ನು ಎತ್ತಿಹಿಡಿಯುವ, ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ, ಜಾತ್ಯತೀತವಾದ ಸಂವಿಧಾನವಿರುವ ಭಾರತದಲ್ಲಿ ಹಿಂದು ರಾಷ್ಟ್ರ ಅಸ್ತಿತ್ವಕ್ಕೆ ಬರಲು ಸಾಧ್ಯವೆ ಎಂಬ ಪ್ರಶ್ನೆಯನ್ನೂ ಆಕಾರ ಪಟೇಲ್ ಕೇಳುತ್ತಾರೆ.

ಸಂವಿಧಾನವನ್ನೇ ಬದಲಿಸಬೇಕು ಎಂಬ ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಿರುವುದು ನೇಪಾಳ ಮಾದರಿಯಲ್ಲಿ ಮನುಸ್ಮೃತಿ ಪ್ರೇರಿತ, ವರ್ಣವ್ಯವಸ್ಥೆಯ ಕಾನೂನು ಅಸ್ತಿತ್ವಕ್ಕೆ ತರುವ ಕಾರಣಕ್ಕೆ ಎಂದು ಮತ್ತೆ ಹೇಳಬೇಕಿಲ್ಲ. ಆಕಾರ ಪಟೇಲ್ ಕೃತಿಯ ಉದ್ದಕ್ಕೂ ಈ ವಿದ್ಯಮಾನಗಳನ್ನು ಅತ್ಯಂತ ಸೂಕ್ಷ್ಮವಾಗಿ ದಾಖಲಿಸುತ್ತಾ, ವಿಶ್ಲೇಷಿಸುತ್ತಾ ಹೋಗುತ್ತಾರೆ.

1990ರಲ್ಲಿ ನಡೆದ ರಥಯಾತ್ರೆಯ ಮೂಲಕ ಎಲ್‌ಕೆ ಅಡ್ವಾಣಿ ದೇಶದ ಕೋಮು ಸಾಮರಸ್ಯ ಕದಡಿದ್ದು, ಸ್ವಾತಂತ್ರೋತ್ತರ ಭಾರತದ ಅತಿ ದೊಡ್ಡ ಗಾಯ. ಸುಮಾರು 3200 ಜನರನ್ನು ಬಲಿತೆಗೆದುಕೊಂಡ ಈ ಯಾತ್ರೆ, ಬಾಬ್ರಿ ಮಸೀದಿಯ ಧ್ವಂಸದ ನಂತರದ ಬೆಳವಣಿಗೆಗಳು ಹೇಗೆ ಮುಸ್ಲಿಮರ ವಿರುದ್ಧದ ದ್ವೇಷವನ್ನು ಬಲಗೊಳಿಸುತ್ತಾ ಬಂದವು ಎಂಬುದನ್ನು ಆಕಾರ್ ಪಟೇಲ್ ವಿವರಿಸುತ್ತಾರೆ.

ಜಾತ್ಯತೀತವಾದವನ್ನು ಮುಸ್ಲಿಮ್ ಓಲೈಕೆ ಎಂದು ಐವತ್ತರ ದಶಕದಿಂದ ಬಲವಾಗಿ ನಂಬಿಸುತ್ತಾ ಬಂದ ಜನಸಂಘ, ನಂತರದ ಭಾರತೀಯ ಜನತಾ ಪಕ್ಷ, ಆರ್‌ಎಸ್‌ಎಸ್ ಮತ್ತು ಅದರ ಎಲ್ಲ ಅಂಗಸಂಸ್ಥೆಗಳು, ಆ ನಂಬಿಕೆಯನ್ನು ದ್ವೇಷವಾಗಿ ಪರಿವರ್ತಿಸುವಲ್ಲಿ ನಿಧಾನವಾಗಿ ಯಶ ಕಾಣುತ್ತಾ ಬಂದ ಬಗೆ ವಿವರಿಸುವಾಗ ಬೆಚ್ಚಿಬೀಳುವಂತಾಗುತ್ತದೆ. ಇಂದು ನಾವು ನೋಡುತ್ತಿರುವ ಉಗ್ರ ಹಿಂದು ರಾಷ್ಟ್ರ, ಹಿಂದುತ್ವದ ಕೂಗು ಗಟ್ಟಿಯಾಗುವುದಕ್ಕೆ ಅಷ್ಟು ದೀರ್ಘಕಾಲದಿಂದ ಮಾಡಿದ ಪ್ರಯತ್ನದ ಫಲ ಎಂಬುದು ನಮಗೆ ಅರ್ಥವಾಗುವುದು ಆಘಾತವೇ ಹೊರತು, ಅಚ್ಚರಿಯಲ್ಲ.

ತ್ರಿವಳಿ ತಲಾಕ್ ವಿಷಯವಾಗಲಿ, ನಾಗರಿಕ ತಿದ್ದುಪಡಿ ಕಾಯ್ದೆಯಾಗಲಿ, ಲವ್ ಜಿಹಾದ್ ಆಗಲಿ, 370ನೇ ವಿಧಿಯಾಗಲಿ, ಗೋಹತ್ಯೆ ನಿಷೇಧವಾಗಲಿ ಎಲ್ಲವನ್ನೂ ಮುಸ್ಲಿಮ್ ಸಮುದಾಯವನ್ನು ನಿಯಂತ್ರಿಸುವ ಸೂತ್ರವಾಗಿಯೇ ಬಳಕೆಯಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಇರಲಾಗುವುದಿಲ್ಲ. ಕಳೆದ ಎರಡು ಲೋಕಸಭಾ ಚುನಾವಣೆಗಳನ್ನೇ ಗಮನಿಸಿ ನೋಡಿ. ಎಷ್ಟು ಮುಸ್ಲಿಮ್ ರಾಜಕೀಯ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ? ನಾಲ್ಕು ಕೋಟಿ ಮತದಾರರಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷದಿಂದ ಒಬ್ಬನೇ ಒಬ್ಬ ಮುಸ್ಲಿಮ್ ಪ್ರತಿನಿಧಿ ಕಣಕ್ಕೆ ಇಳಿಯಲಿಲ್ಲ ಎಂದರೆ ಜನತಂತ್ರಕ್ಕೆ ಬಿಜೆಪಿ ಕೊಟ್ಟ ಬೆಲೆ ಎಂಥದ್ದು?

PC : Twitter, (ಆಕಾರ್ ಪಟೇಲ್)

ಈ ಸಂಪ್ರದಾಯವಾದಿ ಮಹಾಸಂಚಿನಲ್ಲಿ ನ್ಯಾಯ ವ್ಯವಸ್ಥೆ ಪಾತ್ರವೇನು ಎಂಬ ಪ್ರಶ್ನೆಯನ್ನು ಆಕಾರ್ ಪಟೇಲ್ ಎತ್ತಿದ್ದಾರೆ. ಸುಪ್ರೀಮ್ ಕೋರ್ಟ್ ಹೇಗೆ ಸನಾತನವಾದಿ ವಿಚಾರಗಳನ್ನು ಒಪ್ಪಿತವಾಗಿಸುವಲ್ಲಿ ನೆರವಾಯಿತು ಎಂಬುದು ಅಧ್ಯಾಯವೊಂದರಲ್ಲಿ ಪ್ರಕರಣಗಳನ್ನು ಉಲ್ಲೇಖಿಸಿ ವಿವರಿಸಿದ್ದಾರೆ.

1964ರ ಜಗದೇವ್ ಸಿಂಗ್ ಸಿದ್ಧಾಂತಿ ಮತ್ತು ಪ್ರತಾಪ್ ಸಿಂಗ್ ದೌಲತ್ ನಡುವೆ ’ಓಂ’ ಧಾರ್ಮಿಕ ಚಿಹ್ನೆಯನ್ನು ಚುನಾವಣೆಯಲ್ಲಿ ಬಳಸಿದ ವಿಷಯಕ್ಕೆ ನಡೆದ ವ್ಯಾಜ್ಯ; ಹಿಂದುತ್ವದ ಬಗ್ಗೆ ಬಾಳಾಸಾಹೇಬ್ ಠಾಕ್ರೆ ನೀಡಿದ ಹೇಳಿಕೆ ವಿಷಯದಲ್ಲಿ ಡಾ ರಮೇಶ್ ಯಶವಂತ್ ಪ್ರಭು ಮತ್ತು ಪ್ರಭಾಕರ್ ಕಾಶಿನಾಥ್ ಕುಂಟೆ ನಡುವೆ 1995ರಲ್ಲಿ ನಡೆದ ನಡೆದ ವ್ಯಾಜ್ಯ; ಮನೋಹರ ಜೋಶಿ ಮತ್ತು ನಿತಿನ್ ಭಾವ್‌ರಾವ್ ಪಾಟೀಲ್ ಅವರ ನಡುವೆ ಹಿಂದುತ್ವ ಕುರಿತ ಹೇಳಿಕೆಯ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಸುಪ್ರೀಮ್ ಕೋರ್ಟ್ ವ್ಯಾಖ್ಯಾನಿಸಿದ ರೀತಿ ಆಕಾರ್ ಪಟೇಲ್ ಬಿಚ್ಚಿಡುತ್ತಾರೆ. ಹಿಂದುತ್ವವನ್ನು ದೈವಶಾಸ್ತ್ರ, ಧರ್ಮಶಾಸ್ತ್ರ ಎಂದು ವ್ಯಾಖ್ಯಾನಿಸದೇ ಅದನ್ನು ಜೀವನಮಾರ್ಗವೆಂದು ಬಣ್ಣಿಸುತ್ತವೆ ಎನ್ನುತ್ತಾರೆ. ಇಷ್ಟು ಹೊತ್ತಿಗಾಗಲೇ ದೇಶದಲ್ಲಿ ವ್ಯಾಪಿಸಿದ ಮುಸ್ಲಿಮ್ ವಿರೋಧಿಯಾದ ಪೂರ್ವಗ್ರಹಗಳನ್ನು ಈ ತೀರ್ಪುಗಳು ಬಲಗೊಳಿಸಿದವು ಎಂದು ಬೇರೆ ಹೇಳಬೇಕಾಗಿಲ್ಲ.

ಹಿಂದುತ್ವದ ಪರಿಕಲ್ಪನೆಯನ್ನು, ಹಿಂದುರಾಷ್ಟ್ರದ ಆಲೋಚನೆಯನ್ನು ಬಲವಾಗಿ ನಂಬಿಸುವುದಕ್ಕೆ ತಮ್ಮೆಲ್ಲ ಅಸ್ತ್ರಗಳನ್ನು ಬಿಜೆಪಿ, ಆರ್‌ಎಸ್‌ಎಸ್ ಬಳಸುತ್ತಾ ಬಂದ ಬಗೆಯನ್ನು, ಎಲ್ಲೆಲ್ಲೆ ತಮ್ಮ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು ಎಂಬುದನ್ನು ವಿವರಿಸುತ್ತಾ ಹೋಗುವ ಪುಸ್ತಕ, ನಿಜವಾದ ಹಿಂದು ವಿಚಾರಧಾರೆ ಏನು ಹೇಳುತ್ತದೆ, ಅಧಿಕಾರದ ಹಪಾಹಪಿಯ ಬಲಪಂಥೀಯ ಶಕ್ತಿ ಯಾವುದನ್ನೂ ಹಿಂದುತ್ವ ಎಂದು ನಂಬಿಸುತ್ತಿದೆ ಎಂಬುದನ್ನು ತೆರೆದಿಡುವ ಪ್ರಯತ್ನವನ್ನು ಮಾಡುತ್ತದೆ.

ಜನತಂತ್ರವನ್ನು ದುರ್ಬಲಗೊಳಿಸಿ, ಧರ್ಮವನ್ನು ಆಧರಿಸಿದ ರಾಜಕಾರಣ ಪ್ರಬಲವಾಗುತ್ತಾ ಬಂದಿದೆಯಾದರೂ ಅದು ಅಂತಿಮವಾಗಿ ವಿಫಲವಾಗುತ್ತದೆ ಎಂಬ ಭರವಸೆ ಮಾತುಗಳನ್ನೂ ಆಡುತ್ತಾರೆ. ಭಾರತ ಹಿಂದೂ ರಾಷ್ಟ್ರವಾಗಲೂ ಸಾಧ್ಯವಿಲ್ಲ ಎಂದು ಖಚಿತವಾಗಿ ಹೇಳುತ್ತಾರೆ ಆಕಾರ್ ಪಟೇಲ್. ಆಧುನಿಕ ಸೈನ್ಯ ಎಂಬುದು ನುರಿತ ಯೋಧರ ಪಡೆ. ಅದು ಕೇವಲ ಒಂದು ಜಾತಿಗೆ ಸೀಮಿತವಾದ ಪಡೆಯಾಗಲು ಸಾಧ್ಯವಿಲ್ಲ. ಇಪ್ಪತ್ತೊಂದನೆಯ ಶತಮಾನದ ಆರ್ಥಿಕತೆಯಲ್ಲಿ ಉತ್ಪಾದಕರು, ವ್ಯಾಪಾರಿಗಳು, ಹಣಕಾಸು ಹೂಡಿಕೆದಾರರು ಇರಬೇಕೆ ಹೊರತು, ಅಲ್ಲಿ ಕೇವಲ ವೈಶ್ಯರು ಇರಲು ಸಾಧ್ಯವಿಲ್ಲ. ಹಾಗೇ ಹಿಂದು ಪುರಾಣಗಳು ಹೇಳಿದ ಮ್ಲೇಚ್ಛರು ಎಂದು ಕರೆಸಿಕೊಳ್ಳುವ ವಿದೇಶಿಯರೊಂದಿಗೆ ವ್ಯಾವಹಾರಿಕ ವಿನಿಮಯವೂ ಆಗಬೇಕು ಎಂಬುದನ್ನು ನೆನಪಿಸುತ್ತಾರೆ.

ಶಿಕ್ಷಣ, ವಿಜ್ಞಾನ, ಸಾಹಿತ್ಯ ಮತ್ತು ಎಲ್ಲ ರೀತಿಯ ಜ್ಞಾನಶಾಖೆಗಳು ಇಂದು ಕೇವಲ ಬ್ರಾಹ್ಮಣ ಸಮುದಾಯ ಹಿಡಿತದಲ್ಲಿಲ್ಲ. ನೇಪಾಳದಲ್ಲಿರುವಂತೆ ಇಲ್ಲಿ ಕ್ಷತ್ರಿಯರ ಆಳ್ವಿಕೆಯಿಲ್ಲ. ಒಂದುವೇಳೆ ಹಿಂದು ರಾಷ್ಟ್ರವಾಗಬೇಕಾದರೆ, ಇಲ್ಲಿನ ರಾಜಕೀಯ, ನ್ಯಾಯ ವ್ಯವಸ್ಥೆಯನ್ನು ಒಡೆದು ರಾಜನೊಬ್ಬನಿಗೆ ಹಸ್ತಾಂತರಿಸಬೇಕಾಗುತ್ತದೆ. ಆದರೆ ಭಾರತದಲ್ಲಿ ರಾಜನೆಲ್ಲಿದ್ದಾನೆ? ಒಂದು ವೇಳೆ ಇದೆಲ್ಲವೂ ಸಾಧ್ಯವೆಂದಾದರೂ ಪ್ರತಿಯೊಬ್ಬ ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬೇಕು. ಅದು ಸಾಧ್ಯವೇ!

ಆದರೆ ಆರ್‌ಎಸ್‌ಎಸ್ ಪ್ರತಿಪಾದಿಸಹೊರಟಿರುವ ಹಿಂದು ರಾಷ್ಟ್ರ ವಾಸ್ತವದಲ್ಲಿ ಹಿಂದು ರಾಷ್ಟ್ರವಲ್ಲ. ಮುಸ್ಲಿಮ್ ವಿರೋಧಿ ರಾಷ್ಟ್ರ ಅದು. ಅಲ್ಪಸಂಖ್ಯಾತರನ್ನು, ಮುಖ್ಯವಾಗಿ ಮುಸ್ಲಿಮರನ್ನು ಹೊರಹಾಕುವುದೇ ಇದರ ಉದ್ದೇಶ. ಇಲ್ಲೇ ಉಳಿದರೂ ಅವರನ್ನು ಇಲ್ಲಿ ನರಳಾಡಿಕೊಂಡಿರುವ ಗುಲಾಮರನ್ನಾಗಿಸಬೇಕು ಎಂಬ ಧೋರಣೆ ಆರ್‌ಎಸ್‌ಎಸ್‌ನದ್ದು ಎಂದು ಆಕಾರ್ ಪಟೇಲರ ಈ ಕೃತಿ ವಿಶ್ಲೇಷಿಸುತ್ತದೆ.

ಮನುಸ್ಮೃತಿ,Manusmriti

ಭಾರತದ ಬಹುತ್ವವನ್ನು ಒಡೆಯುವ ಇಂಥ ವ್ಯವಸ್ಥಿತವಾದ ಪ್ರಯತ್ನವನ್ನು ಎದುರಿಸುವುದು ಹೇಗೆ? ಇದರ ವಿರುದ್ಧ ಹೋರಾಡುವುದು ಹೇಗೆ? ಈ ಪ್ರಶ್ನೆಗೆ ಉತ್ತರವಾಗಿ ಕಡೆಯ ಅಧ್ಯಾಯದಲ್ಲಿ ಕಳೆದ ಒಂದು ವರ್ಷದ ವಿದ್ಯಮಾನಗಳನ್ನು ಪಟೇಲ್ ಚರ್ಚಿಸಿದ್ದಾರೆ. ಜನ ಹೋರಾಟವೊಂದೇ ಉತ್ತರ ಎನ್ನುತ್ತಾರೆ. ಪೌರತ್ವ ಕಾಯ್ದೆ ತಿದ್ದುಪಡಿ, ನಾಗರಿಕ ನೊಂದಣಿ ವಿರುದ್ಧ ನಡೆದ ದೇಶ ವ್ಯಾಪಿ ಹೋರಾಟ ಬಹುಶಃ ಬಲಪಂಥೀಯ, ಫ್ಯಾಸಿಸ್ಟ್ ಆಡಳಿತಕ್ಕೆ ದೊಡ್ಡ ಪ್ರತಿರೋಧ ಎಂಬುದು ಅವರ ವಿಶ್ವಾಸ.

’ನೈತಿಕ ಜಗತ್ತಿನ ಕಮಾನು ಉದ್ದವಿರುತ್ತದೆ. ಆದರೆ ಅದು ನ್ಯಾಯದೆಡೆಗೆ ಬಾಗುತ್ತದೆ’ ಎಂಬ ಮಾರ್ಟಿನ್ ಲೂಥರ್ ಕಿಂಗ್ ಅವರ ಪ್ರಸಿದ್ಧ ಹೇಳಿಕೆಯನ್ನು ನೆನಪಿಸುತ್ತಾ ನ್ಯಾಯದ ಮೇಲಿನ ನಂಬಿಕೆಯನ್ನು ದೃಢವಾಗಿ ಪ್ರತಿಪಾದಿಸುವ ಪಟೇಲ್, ಹಕ್ಕುಗಳನ್ನು ಆಧರಿಸಿದ ಪ್ರಗತಿ ಅನಿವಾರ್ಯ. ಇತಿಹಾಸ ಎಂದಿಗೂ ಪ್ರಗತಿಪರರ ಆಲೋಚನೆಗಳೊಂದಿಗೇ ಇದೆ. ಭವಿಷ್ಯವೂ ನಮ್ಮೊಂದಿಗೆ ಇದೆ. ಸಂಪ್ರದಾಯವಾದಿಗಳು, ಭೂತವನ್ನು ಕಾಪಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅದನ್ನು ಹಾಗೆ ಹಿಡಿದಿಡಲು ಸಾಧ್ಯವೇ ಇಲ್ಲ. ಬದಲಾವಣೆ ಅನಿವಾರ್ಯ ಎಂಬ ಮಾತುಗಳ ಮೂಲಕ ಆಶಾವಾದದ ಮಾತುಗಳನ್ನು ಆಡಿದ್ದಾರೆ.

ಒಂದು ಭಾಷೆ, ಒಂದು ಆಹಾರ, ಒಂದು ಕೇಂದ್ರ ಹೀಗೆ ಏಕಸೂತ್ರವನ್ನು ಒಪ್ಪಿಸುವ ಹುನ್ನಾರದ ರಾಜಕೀಯ ವ್ಯವಸ್ಥೆ, ಬಂಡವಾಳಿಗರ ಬೆಂಬಲದೊಂದಿಗೆ ಪ್ರಬಲವಾಗಿರುವಾಗ ಈ ಶಕ್ತಿಗಳ ಮಿಲನವನ್ನು ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ಅವುಗಳ ಕಾರ್ಯತಂತ್ರವನ್ನು ತಿಳಿಯುವುದಕ್ಕೆ, ದಿನೇದಿನೇ ಆತಂಕವೂ, ನಿರಾಶಾದಾಯಕವೂ ಆಗುತ್ತಿರುವ ಸಾಮಾಜಿಕ ಪರಿಸರದಲ್ಲಿ ನಮ್ಮ ಹೆಜ್ಜೆಯನ್ನು ದೃಢವಾಗಿರಿಸಿಕೊಳ್ಳುವುದಕ್ಕೆ ಈ ಕೃತಿ ಓದಲೇಬೇಕೆನಿಸುತ್ತದೆ.

ಒಬ್ಬ ಪತ್ರಕರ್ತನ ನಿಷ್ಠುರತೆ, ವಸ್ತುನಿಷ್ಠತೆ ಮತ್ತು ಜೀವಪರತೆ ಇಲ್ಲಿನ ಬರಹಗಳಲ್ಲಿ ಸ್ಪಷ್ಟವಾಗಿದೆ. ಪಟೇಲ್ ಪ್ರತಿ ಘಟನೆ, ವಿದ್ಯಮಾನಗಳಿಗೆ ಹಿನ್ನೆಲೆ-ಮುನ್ನಲೆಯಾಗಿ ಒದಗಿಸಿರುವ ಮಾಹಿತಿ ಸ್ವಾತಂತ್ರೋತ್ತರ ಭಾರತದಲ್ಲಿ ಗುಪ್ತಗಾಮಿನಿಯಾಗಿದ್ದು, ಈಗ ತಲೆ ಎತ್ತಿರುವ ಜನವಿರೋಧಿ ಶಕ್ತಿ ಬೆಳೆದ ಬಗೆಯನ್ನು ಕಟ್ಟಿಕೊಡುತ್ತದೆ.


ಇದನ್ನೂ ಓದಿ: ಓದಲಿಕ್ಕಿದೆ ಕಾರಣ ಇಪ್ಪತ್ತೊಂದು! 2021ರಲ್ಲಿನ ನಿರೀಕ್ಷಿತ ಪುಸ್ತಕಗಳು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಕುಮಾರ್ ಎಸ್
+ posts

1 COMMENT

  1. ಆರ್ ಎಸ್ ಎಸ್ ಅಂತರಂಗವನ್ನು ಆಳ ಆಧ್ಯಯನದ ಮೂಲಕ ತೋರಿದ ಆಕಾರ್ ಪಟೇಲರ ವಿಚಾರಗಳನ್ನು ವಿವರಿಸಿದ ತಮ್ಮ ಕಳಕಳಿ ಪ್ರಶಂಸಾರ್ಹ. ಈ ಪುಸ್ತಕ ಶೀಘ್ರವೇ ಕನ್ನಡಕ್ಕೆ ಬರಲಿ ಎಂಬುದು ನಮ್ಮ ಆಶಯ.

LEAVE A REPLY

Please enter your comment!
Please enter your name here