ನಮ್ಮ ಗ್ರಹಿಕೆ ತಪ್ಪುವಂತೆ ನಮ್ಮನ್ನು ಆತಂಕದಲ್ಲೇ ಇರಿಸಿರುವ ಸೋಂಕು, ಕೊರೊನಾ. ಅತಿ ವೇಗದಲ್ಲಿ ಇಡೀ ಜಗತ್ತನ್ನು ವ್ಯಾಪಿಸಿಕೊಂಡು, ಇನ್ನು ತೊಲಗದೆ ಉಳಿದಿದೆ. ಇಂಥದ್ದೇ ಸಾಂಕ್ರಾಮಿಕಗಳು ಜಗತ್ತನ್ನು ಕಾಡಿವೆ. ಮನುಷ್ಯ ಎದುರಿಸಿದ ಇಂಥ ಒಳ ಹೊರಗಿನ ಸಂಘರ್ಷವನ್ನು ಚಿತ್ರಿಸುವ ಕಾದಂಬರಿಯೊಂದಿಗೆ ಕನ್ನಡ ಸಾಹಿತ್ಯಲೋಕ 2021ನೇ ವರ್ಷವನ್ನು ಸ್ವಾಗತಿಸುತ್ತಿದೆ.

Pc : Pinterest

ಅಲ್ಬರ್ಟ್ ಕಮೂ ಬರೆದ ಪ್ರಸಿದ್ಧ ಕಾದಂಬರಿ “ದಿ ಪ್ಲೇಗ್” ಅನ್ನು ಖ್ಯಾತ ವಿಮರ್ಶಕರೂ, ಅನುವಾದಕರೂ, ಚಿಂತಕರೂ ಆದ ಎಚ್‌ಎಸ್ ರಾಘವೇಂದ್ರ ರಾವ್ ಕನ್ನಡಕ್ಕೆ ತಂದಿದ್ದಾರೆ. ಮೈಸೂರಿನ ಚಿಂತನ ಚಿತ್ತಾರ ಹೊರತರುತ್ತಿರುವ ಈ ಕೃತಿ ಈ ಕಾಲಕ್ಕೆ ಕನ್ನಡ ನಾಡಿಗೆ ಅಗತ್ಯವಾಗಿತ್ತು ಎಂದರೆ ಉತ್ಪ್ರೇಕ್ಷೆಯಾಗಲಾರದು. ಈ ಮಾತನ್ನು ಅನುವಾದಕರು ನಿರಾಕರಿಸುತ್ತಾರಾದರೂ, ಸಂಪೂರ್ಣ ಅಲ್ಲಗಳೆಯುವುದಿಲ್ಲ. ಎಚ್‌ಎಸ್ ರಾಘವೇಂದ್ರ ರಾವ್ ಅವರು ಕೃತಿಯಲ್ಲಿ ಹಂಚಿಕೊಂಡಿರುವ ಅನುವಾದಕರ ಮಾತು ಹೀಗಿದೆ: “ಈ ಕಾದಂಬರಿಗೆ ಯಾವುದೇ ಮಾತುಗಳನ್ನು ಜೋಡಿಸುವ ಅಗತ್ಯವಿಲ್ಲ. ಇದು ದೇಶ, ಕಾಲ, ಭಾಷೆಗಳನ್ನು ಮೀರಿದ ಬರವಣಿಗೆ, ಕೊರೊನಾ ಬಂದಿತೆಂದು ಇದರ ಮಹತ್ವ ಹೆಚ್ಚಾಗುವುದಿಲ್ಲ. ಹೋಯಿತೆಂದು ಕಡಿಮೆಯಾಗುವುದಿಲ್ಲ. ಇಲ್ಲಿರುವುದು ರೋಗವೊಂದರ ಕಾರಣ, ಪರಿಣಾಮಗಳ ಕಥನವಲ್ಲ. ಮೂವತ್ತ ನಾಲ್ಕು ವರ್ಷದ ತರುಣ ಕಮೂ, ಪರಿಸರದ ಒತ್ತಾಯಗಳನ್ನು ತಾತ್ವಿಕ ತುಡಿತಗಳನ್ನು, ’ಕಲೆಗಾಗಿ ಕಲೆ’ಯೆನ್ನುವ ನಂಬಿಕೆಯನ್ನು, ಮನುಷ್ಯನು ದುಷ್ಟನೆಂಬ ಸಿನಿಕತೆಯನ್ನು ಒಳಗೊಳ್ಳುತ್ತಾನೆ. ಆದರೆ ಅವೆಲ್ಲವನ್ನೂ ಮೀರಿ, ’ಮನುಷ್ಯ ಸನ್ನಿವೇಶ’ದ ಬಗ್ಗೆ ಆಳವಾಗಿ ಚಿಂತಿಸಿ ಪ್ರೀತಿ, ಕರ್ತವ್ಯ ಮತ್ತು ನಿರ್ಲಿಪ್ತತೆಗಳ ಶಕ್ತಿಯನ್ನು ಸಾರಿ ಹೇಳುತ್ತಾನೆ. ನನ್ನನ್ನು ಹಲವು ವರ್ಷಗಳಿಂದ ಆವರಿಸಿದ್ದ ’ಪ್ಲೇಗ್’ ಎಡೆಬಿಡದೆ ಕಾಡುತ್ತಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದೆ. ಅವು ಎಲ್ಲ ಮನುಷ್ಯರೂ ಎಲ್ಲ ಸಮಾಜಗಳೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಈ ಕಾದಂಬರಿಯು ಶ್ರೇಷ್ಠ ಸಾಹಿತ್ಯವು ಕೊಡಬಹುದಾದದೆಲ್ಲವನ್ನೂ ಕೊಟ್ಟು ಅದರಾಚೆಗೂ ಮುಖ್ಯವಾಗುತ್ತದೆ”.

ಈ ವರ್ಷ ಅನುವಾದ ಕೃತಿಗಳ ಸಂಖ್ಯೆ ಹೆಚ್ಚಿದ್ದು, ಬಹಳ ನಿರೀಕ್ಷೆ ಹುಟ್ಟಿಸುವಂಥವೇ ಆಗಿವೆ. ಸೃಷ್ಟಿ ಪ್ರಕಾಶನ, ಸೂರಜ್ ಯೆಂಗ್ಡೆ ಅವರ ’ಕ್ಯಾಸ್ಟ್ ಮ್ಯಾಟರ್ಸ್’ ಕೃತಿಯನ್ನು ಕನ್ನಡಕ್ಕೆ ತರುತ್ತಿದೆ. ಆರ್‌ಕೆ ಹುಡುಗಿಯವರು ಇದನ್ನು ಅನುವಾದಿಸಿದ್ದಾರೆ. ಹೊಸ ತಲೆಮಾರಿನ ದಲಿತ ಚಿಂತಕರಾದ ಯೆಂಗ್ಡೆ ಅವರು ದಲಿತನಾಗಿ ಹುಟ್ಟಿ ಎದುರಿಸಿದ ಅವಮಾನಗಳನ್ನು, ರಾಜಕೀಯ, ಅಧಿಕಾರಶಾಹಿ, ನ್ಯಾಯಾಂಗ ವ್ಯವಸ್ಥೆಗಳಲ್ಲಿ ವ್ಯಾಪಿಸಿಕೊಂಡಿರುವ ಜಾತಿ ಜಾಲದ ಕುರಿತು ಬರೆದ ಈ ಕೃತಿ ಕನ್ನಡಕ್ಕೆ ತರುತ್ತಿರುವುದು, ಹೊಸ ತಲೆಮಾರಿನ ಜಾತಿ ಚರ್ಚೆಯ ಹೊಸ ಆಯಾಮಗಳನ್ನು ಅನಾವರಣಗೊಳಿಸಲಿದೆ.

ದೇಸಿ ಪ್ರಕಾಶನವು ತಮಿಳಿನ ಕಾದಂಬರಿಯೊಂದನ್ನು ಕನ್ನಡಕ್ಕೆ ತರುತ್ತಿದೆ. ಬಿ ಕಣ್ಮಣಿ ಅವರ ’ಇಡಂಬಾ’ ತಮಿಳು ಕೃತಿಯನ್ನು ಕೆ ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ನಲ್ಲತಂಬಿಯವರ ಇನ್ನೊಂದು ಕೃತಿ ತಮಿಳಿನಿಂದ ಕನ್ನಡಕ್ಕೆ ಬರುತ್ತಿದೆ. 60-70ರ ದಶಕದಿಂದ ಕಾಸರವಳ್ಳಿ ನಿರ್ದೇಶನದ ದ್ವೀಪದ ಸಿನಿಮಾದವರೆಗೆ ಬಂದ ಕನ್ನಡದ ಪ್ರಯೋಗಶೀಲ ಸಿನಿಮಾಗಳನ್ನು ಕುರಿತು ಬಂದ ತಮಿಳು ಕೃತಿಯ ಕನ್ನಡ ಅನುವಾದ, ’ನವೀನ ಸಿನಿಮಾಗಳು’ ಕೂಡ ಪ್ರಕಟವಾಗುತ್ತಿದೆ. ಗೋಮಿನಿ ಪ್ರಕಾಶನ ಈ ಕೃತಿಯನ್ನು ಹೊರತರುತ್ತಿದೆ.

ಈ ಅನುವಾದ ಕೃತಿಗಳ ಸಾಲಿಗೆ ಮೂರು ಬಹುಚರ್ಚಿತ ಕೃತಿಗಳನ್ನು ಸೇರಿಸುತ್ತಿರುವುದು ಅಹರ್ನಿಶಿ ಪ್ರಕಾಶನ. ಟಿಎಂ ಕೃಷ್ಣ ಅವರ ’ಸೆಬಾಸ್ಟಿಯನ್ ಅಂಡ್ ಸನ್ಸ್’, ದೇವಕಿ ಜೈನ್ ಅವರ ’ದಿ ಬ್ರಾಸ್ ನೋಟ್‌ಬುಕ್ ಕೃತಿಗಳ ಅನುವಾದವನ್ನು ಅರ್ಹನಿಶಿ ಪ್ರಕಟಿಸುತ್ತಿದೆ. ಅನುಕ್ರಮವಾಗಿ ಸುಮಂಗಲಾ ಮತ್ತು ರಾಜಲಕ್ಷ್ಮಿ ಕೋಡಿಬೆಟ್ಟು ಅವರು ಈ ಕೃತಿಗಳನ್ನು ಅನುವಾದಿಸಿದ್ದಾರೆ.

ಆತ್ಮಕತೆ-ಜೀವನಚರಿತ್ರೆಗಳು

ಕನ್ನಡದ ಹಿರಿಯ ನಟಿ, ಗಿರಿಜಾ ಲೋಕೇಶ್ ಅವರ ಆತ್ಮಕತೆ ‘ಗಿರಿಜಾ ಪರಸಂಗ’ವನ್ನು ಅಂಕಿತ ಪುಸ್ತಕ ಪ್ರಕಟಿಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಇದು ಈ ವರ್ಷದ ಮೊದಲ ವ್ಯಕ್ತಿಕೇಂದ್ರಿತ ಕೃತಿ. ಬೆನ್ನಲ್ಲೇ ಹಲವು ಜೀವನಚರಿತ್ರೆಗಳು, ಆತ್ಮಕತೆಗಳು ಹೊರಬರುವುದಕ್ಕೆ ಸಿದ್ಧವಾಗುತ್ತಿವೆ. ಕೆಲವು ಕರಡು ತಿದ್ದುವ ಹಂತದಲ್ಲಿವೆ, ಕೆಲವು ಪ್ರಕಟಣಾ ಪೂರ್ವ ಹಂತದಲ್ಲಿವೆ.

ಕರ್ನಾಟಕದ ಹಿರಿಯ ರಾಜಕಾರಣಿ ಮೋಟಮ್ಮನವರ ಆತ್ಮಕತೆಯು ಈ ವರ್ಷ ಹೊರಬಲಿದೆ. ಈ ಕೃತಿಯನ್ನೂ ಅಂಕಿತ ಪುಸ್ತಕ ಹೊರತರಲಿದೆ ಎಂದು ತಿಳಿದು ಬಂದಿದೆ. ದಲಿತ ನಾಯಕಿ, ಹೋರಾಟದ ಹಿನ್ನೆಲೆಯಿಂದ ಬಂದ ಮೋಟಮ್ಮನವರ ರಾಜಕೀಯ ಜೀವನದ ಏಳುಬೀಳುಗಳನ್ನು ಈ ಕೃತಿ ಬಿಚ್ಚಡಲಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.

ವಿಶ್ರಾಂತ ಕುಲಪತಿಗಳು, ಹಿಂದಿ ವಿದ್ವಾಂಸರೂ ಆದ ತೇಜಸ್ವಿ ಕಟ್ಟೀಮನಿ ಅವರ ಆತ್ಮಕತೆಯೂ ಹೊರಬರುತ್ತಿದೆ. ಮನೋಹರ ಗ್ರಂಥಮಾಲೆ ಈ ಕೃತಿಯನ್ನು ಪ್ರಕಟಿಸುತ್ತಿದೆ.

ಖ್ಯಾತ ಹಿಂದಿ ನಟಿ, ಕವಿಯೂ ಆಗಿದ್ದ ಮೀನಾಕುಮಾರಿ ಅವರ ಅಪರೂಪದ ಜೀವನಚರಿತ್ರೆಯನ್ನು ಲೇಖಕ ಲಕ್ಷ್ಮಿಕಾಂತ ಇಟ್ನಾಳ್ ದಾಖಲಿಸುತ್ತಿದ್ದು ಮನೋಹರ ಗ್ರಂಥಮಾಲೆಯೇ ಈ ಕೃತಿಯನ್ನು ಪ್ರಕಟಿಸುತ್ತಿದೆ.

ಹೀಗಿದೆ ಕಥಾ ಕಣಜ

ಸಿನಿಮಾರಂಗದಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿರುವ ಇಬ್ಬರು ಕಥೆಗಾರರ ಸಂಕಲನಗಳು ಈ ಬಾರಿ ಹೊರಬರುತ್ತಿವೆ.

ಕವಿ, ಗೀತ ಸಾಹಿತಿ, ಕತೆಗಾರ ಜಯಂತ ಕಾಯ್ಕಿಣಿಯವರ ಇನ್ನೂ ಹೆಸರಿಡದ ಸಂಕಲನವೊಂದು ಹೊರಬರುತ್ತಿದೆ. ನಿರ್ದೇಶಕರಾಗಿ ಗಮನಸೆಳೆದ ಹೊಸ ತಲೆಮಾರಿನ ಕತೆಗಾರ ಟಿಕೆ ದಯಾನಂದರ ಕಥಾ ಸಂಕಲನವೂ ಈ ವರ್ಷ ಪ್ರಕಟವಾಗುತ್ತಿರುವ ಕೃತಿಗಳ ಸಾಲಿನಲ್ಲಿದೆ.

ತಮ್ಮ ವಿಶಿಷ್ಟ ಶೈಲಿ, ರೋಚಕತೆ, ತರ್ಕ, ವಿಜ್ಞಾನ-ಇತಿಹಾಸಗಳ ಮಿಶ್ರಣದೊಂದಿಗೆ ವಿಭಿನ್ನ ಓದು ಅನುಭವ ನೀಡಿದ ಕತೆಗಾರ, ಕೆಎನ್ ಗಣೇಶಯ್ಯನವರ ಕಥಾ ಸಂಕಲನವೂ ಬಿಡುಗಡೆಗೆ ಸಿದ್ಧವಾಗಿದೆ. ’ಗುಡಿಮಲ್ಲಂ’ ಹೆಸರಿನ ಈ ಕಥಾ ಸಂಕಲನ ನಾಲ್ಕು ಕಥೆಗಳನ್ನು ಒಳಗೊಂಡಿದೆ. ತಮ್ಮ ಎಂದಿನ ಇತಿಹಾಸದ ಕುತೂಹಲದ ಪುಳಕವನ್ನು ಉಣಬಡಿಸಲಿದೆ.

ತಮ್ಮ ನಗರ ಕೇಂದ್ರಿತ ಕಥಾ ಜಗತ್ತಿನ ಮೂಲಕ ಮೆಚ್ಚುಗೆಗೆ ಪಾತ್ರರಾಗಿರುವ ಎಂಎಸ್ ಶ್ರೀರಾಮ್ ಅವರ ಕಥಾ ಸಂಕಲನವು ನಿರೀಕ್ಷಿತ ಕೃತಿಗಳ ಪಟ್ಟಿಯಲ್ಲಿದೆ.

ತಮ್ಮ ತಮ್ಮ ವಿಶಿಷ್ಟ ಕಾವ್ಯಪ್ರಯೋಗದ ಮೂಲಕ ಹೆಸರಾದ ಜನಾ ತೇಜಶ್ರೀ ಅವರ ಮೊದಲ ಕಥಾ ಸಂಕಲನ ’ಬೆಳ್ಳಿ ಮೈ ಹುಳು’ ಬಿಡುಗಡೆಗೆ ಸಿದ್ಧವಾಗಿರುವ ಕಥಾ ಸಂಕಲನ. ವೈಷ್ಣವಿ ಪ್ರಕಾಶನ ಈ ಕೃತಿಯನ್ನು ತರುತ್ತಿದೆ.

ಕಾದಂಬರಿಗಳಿಗೇನು ಕಡಿಮೆ ಇಲ್ಲ

ಈ ವರ್ಷ ವಿಶಿಷ್ಟವಾದ ಕಾದಂಬರಿಗಳು ಹೊರಬರುತ್ತಿವೆ ಎಂದು ಪ್ರಕಟಿಸುತ್ತಿರುವ ಪ್ರಕಾಶನ ಸಂಸ್ಥೆಗಳು ಹೇಳುತ್ತಿವೆ.

ಲಡಾಯಿ ಪ್ರಕಾಶನದಿಂದ ಹೊರಬರುವುದಕ್ಕೆ ಸಿದ್ಧವಾಗುತ್ತಿರುವ ಕಾದಂಬರಿ, ವಚನಕಾರ್ತಿ ಅಕ್ಕಮಹಾದೇವಿಯ ಬದುಕನ್ನು ಆಧರಿಸಿದ್ದು. ಡಾ. ಎಚ್‌ಎಸ್ ಅನುಪಮಾ ಕಾದಂಬರಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಮನೋಹರ ಗ್ರಂಥಮಾಲೆ ನಾ ಮೊಗಸಾಲೆಯವರ ’ಧರ್ಮ ಯುದ್ಧ’ ಹೆಸರಿನ ಕಾದಂಬರಿಯನ್ನು ಪ್ರಕಟಿಸುವುದಕ್ಕೆ ಸಿದ್ಧವಾಗಿದ್ದು, ಇನ್ನೊಂದು ಐತಿಹಾಸಿಕ ಕಾದಂಬರಿಯನ್ನೂ ಹೊರತರುತ್ತಿರುವುದಾಗಿ ಹೇಳಿದೆ. ಇದು ಖ್ಯಾತ ಸಾಹಿತಿ ಗಿರಿ ಅವರದ್ದು.

ಕುಂ. ವೀರಭದ್ರಪ್ಪನವರ ಕಥನ ಶೈಲಿಯೇ ಭಿನ್ನ. ಸಿನಿಮೀಯವೂ, ರೋಚಕವೂ, ಅಷ್ಟೇ ಹೃದ್ಯವೂ, ಮಾನವೀಯವೂ ಆದ ಕಥೆಗಳನ್ನು ನಮಗೆ ಕೊಟ್ಟು ಓದಿಸುತ್ತಲೇ ಬಂದಿದ್ದಾರೆ. ಈಗ ಅವರು ’ಎನ್‌ಕೌಂಟರ್’ ಮೂಲಕ ಗಮನಸೆಳೆಯಲಿದ್ದಾರೆ.

ರೇಖಾ ಖಾಕಂಡಕಿ ಅವರ ’ನನ್ನ ಪುಟ’ ಕಾದಂಬರಿ ಕೂಡ ಈ ವರ್ಷ ಹೊರಬರುತ್ತಿರುವ ಕಾದಂಬರಿಗಳ ಸಾಲಿನಲ್ಲಿದೆ.

ಕಥನೇತರ ಸಾಹಿತ್ಯ

ಲಡಾಯಿ ಪ್ರಕಾಶನ ಅಂಬೇಡ್ಕರ್ ಕುರಿತ ಹತ್ತು ಪುಸ್ತಕಗಳ ಸರಣಿಯೊಂದನ್ನು ಪ್ರಕಟಿಸಲಿದೆ ಎಂದು ಪ್ರಕಾಶಕ ಬಸವರಾಜ್ ಸೂಳಿಬಾವಿ ತಿಳಿಸಿದ್ದಾರೆ. ಅಂಬೇಡ್ಕರ್ ಚಿಂತನೆಯನ್ನು ಈ ಸರಣಿಯಲ್ಲಿ ಭಿನ್ನವಾಗಿ ಕಟ್ಟಿಕೊಡುವ ಉದ್ದೇಶವಿದೆ ಎಂದಿದ್ದಾರೆ.

ಇದೇ ರೀತಿ ಅಭಿನವ ಪ್ರಕಾಶನ ಪ್ರಭು ಶಂಕರ ಅವರ ಸಮಗ್ರ ಸಾಹಿತ್ಯವನ್ನು 8 ಸಂಪುಟಗಳಲ್ಲಿ ಪ್ರಕಟಿಸುತ್ತಿದೆ. ಒಂಬತ್ತು ಸಂಪುಟಗಳಲ್ಲಿ ಷ ಶೆಟ್ಟರ್ ಶಾಸನ ಅಧ್ಯಯನಗಳ ಕೃತಿಗಳು ಅಭಿನವದಿಂದ ಹೊರಬರುತ್ತಿವೆ. ಚೇತನ ತೀರ್ಥಹಳ್ಳಿಯವರ ’ಕಾಕ್‌ಟೇಲ್, ಬಿ ವಿ ಭಾರತಿಯವರ ’ಎಲ್ಲಿಂದಲೋ ಬಂದವರು’, ವಿಕ್ರಮ್ ಹತ್ವಾರ್ ಅವರ ಕವನ ಸಂಕಲನಗಳು 2021ರಲ್ಲಿ ನಿರೀಕ್ಷೆ ಹುಟ್ಟಿಸಿರುವ ಕೃತಿಗಳು.

ಇಂಗ್ಲಿಷ್‌ನಲ್ಲಿ ದೇವೇಗೌಡರ ಜೀವನಚರಿತ್ರೆ

ಭಾರತದ 11ನೇ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ದೇವೇಗೌಡರ ರಾಜಕೀಯ ಜೀವನ ಅತ್ಯಂತ ಕುತೂಹಲಕಾರಿಯಾದದ್ದು. ಸಣ್ಣ ಅಧಿಕಾರಾವಧಿಯಲ್ಲಿ ಇವರು ಮಾಡಿದ ಕೆಲಸಗಳನ್ನು ಇಂದಿಗೂ ಈಶಾನ್ಯ ಭಾರತ, ಜಮ್ಮು ಕಾಶ್ಮೀರ, ಗುಜರಾತ್, ಪಂಜಾಬ್ ರಾಜ್ಯಗಳು ನೆನೆಪಿಸಿಕೊಳ್ಳುತ್ತವೆ. ಅಪರೂಪದ ಸಂದರ್ಶನ, ದಾಖಲೆಗಳ ಅಧ್ಯಯನಗಳನ್ನು ಆಧರಿಸಿದ ಜೀವನಚರಿತ್ರೆಯನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ದಾಖಲಿಸುತ್ತಿದ್ದಾರೆ. ಇಂಗ್ಲೆಂಡಿನ ಪೆಂಗ್ವಿನ್-ರ್‍ಯಾಂಡಮ್ ಹೌಸ್ ಪ್ರಕಾಶನದ ಆಹ್ವಾನದ ಮೇರೆಗೆ ಬರೆಯಲಾಗುತ್ತಿರುವ ಈ ಜೀವನಚರಿತ್ರೆ ದೇವೇಗೌಡರ ಐವತ್ತು ವರ್ಷಗಳ ರಾಜಕೀಯ ಜೀವನವನ್ನು ಅನಾವರಣ ಮಾಡಲಿದೆ. ಎರಡು ವರ್ಷಗಳ ಅವಧಿಯಲ್ಲಿ ಸಂಸದೀಯ ದಾಖಲೆಗಳು, ದೇವೇಗೌಡರೊಂದಿಗೆ ಕೆಲಸದ ಮಾಡಿದ ಪ್ರಮುಖರೊಂದಿಗೆ ನಡೆಸಿದ ಸಂದರ್ಶನಗಳನ್ನು ಆಧರಿಸಿದ ವಸ್ತುನಿಷ್ಠ ದಾಖಲೆ ಇದಾಗಿದ್ದು, ದೇವೇಗೌಡರ ರಾಜಕೀಯ ಬದುಕನ್ನು ಕಟ್ಟಿಕೊಡುವ ಬಹುನಿರೀಕ್ಷಿತ ಕೃತಿ. ಶಾಸಕ ಸ್ಥಾನದಿಂದ ಪ್ರಧಾನಿ ಹುದ್ದೆವರೆಗಿನ ಜೀವನಪಯಣದ ಹಲವು ಮಹತ್ವದ ಅಪರೂಪದ ಸಂಗತಿಗಳು ಇದರಲ್ಲಿವೆ.

ಗುಡಿಮಲ್ಲಂ ಕಥಾಸಂಕಲನ

ಇದು ನಾಲ್ಕು ಕಥೆಗಳ ಸಂಕಲನ. ಕಳೆದ ವರ್ಷ ನಾನು ಭಾರತದಿಂದ ನಾಲ್ಕು ದೇಶಗಳಿಗೆ ರಸ್ತೆ ಮೂಲಕ ಪ್ರವಾಸ ನಡೆಸಿದೆ. ಭಾರತ, ಬರ್ಮಾ, ಥೈಲ್ಯಾಂಡ್, ಕಾಂಬೋಡಿಯಾ. ಪ್ರವಾಸದ ಉದ್ದಕ್ಕೂ ಹಲವು ಕುತೂಹಲಕರ ಸಂಗತಿಗಳನ್ನು ಗಮನಿಸುತ್ತಾ ಹೋದೆ. ಭಾರತದ ಗಡಿ ದಾಟುವುದರೊಳಗೆ ನನಗೆ ನಾಲ್ಕು ವಿಶಿಷ್ಟ ಸಂಗತಿಗಳು ಪರಿಚಯವಾದವು. ಅವೇ ಇಲ್ಲಿನ ಕಥಾವಸ್ತುಗಳು. ಗುಡಿಮಲ್ಲಂ ಎಂಬುದು 2 ಅಥವಾ 3ನೇ ಶತಮಾನದಲ್ಲಿ ಕಟ್ಟಿದ ದೇಗುಲ. ಅದು ಲಿಂಗ. ಗಂಡು ಜನನಾಂಗದ ಕೆತ್ತನೆ, ಅದರ ಮೇಲೆ ಬೇಟೆಗಾರ, ಕೆಳಗೆ ಯಕ್ಷಿಗಾರನನ್ನು ಚಿತ್ರಿಸಲಾಗಿದೆ. ಈ ದೇವಸ್ಥಾನದ ಚರಿತ್ರೆಯನ್ನು ಆಧರಿಸಿದ ಕತೆ ಸಂಕಲನದಲ್ಲಿದೆ. ಹಾಗೇ ಪ್ರವಾಸದ ಮಧ್ಯೆ 18ನೇ ಶತಮಾನದಲ್ಲಿ ಕಟ್ಟಿದ ಅರಮನೆಯೊಂದರಲ್ಲಿ ತಂಗಿದ್ದೆ. ಅಲ್ಲಿದ್ದ ರಾಜಕುಮಾರಿ ಒಬ್ಬರೊಂದಿಗೆ ಮಾತನಾಡುವಾಗ ಪಶ್ಚಿಮ ಬಂಗಾಳದ ಯುವತಿಯೊಂದಿಗಿನ ಪ್ರೇಮಕತೆಯೊಂದು ತಿಳಿದುಬಂತು. ಅದು ಸುಚಾರುದೇವಿ ಎಂಬ ಪಾತ್ರದ್ದು. ಇದು ಪಶ್ಚಿಮ ಬಂಗಾಳದಲ್ಲಿ ಜನಪ್ರಿಯವಾದ ಕತೆ. ಇವುಗಳ ಜೊತೆಗೆ ಇನ್ನೆರಡು ಕತೆಗಳಿವೆ.

 

ವೇರ್‌ಅಬೌಟ್ಸ್ ಕಾದಂಬರಿ ಜುಂಪಾ ಲಾಹಿರಿ ಹ್ಯಾಮಿಷ್ ಹ್ಯಾಮಿಲ್ಟನ್

 

 

 

 

ಎಂಟರ್ ಸ್ಟೇಜ್ ರೈಟ್
ಆತ್ಮವೃತ್ತಾಂತ
ಫೈಸಲ್ ಅಲ್ಕಾಝಿ
ಸ್ಪೀಕಿಂಗ್ ಟೈಗರ

 

 

 

 

ಬೈ ಮೆನಿ ಎ ಹ್ಯಾಪಿ ಆಕ್ಸಿಡೆಂಟ್
ರಾಜಕೀಯ ನೆನಪುಗಳು
ಎಂ ಹಮೀದ್ ಅನ್ಸಾರಿ
ರೂಪಾ

 

 

 

 

 

 

ಎ ಟೈಮ್ ಔಟ್‌ಸೈಡ್ ದಿ ಟೈಮ್
ಕಾದಂಬರಿ
ಅಮಿತಾವ್ ಕುಮಾರ್
ಅಲೆಫ್ ಬುಕ್ ಕಂಪನಿ

 

 

 

 

ದಿ ಗುಡ್ ಗರ್ಲ್ಸ್
ಕಥನೇತರ
ಸೊನಿಯಾ ಫೆಲೆರಿಯೊ
ವೈಕಿಂಗ್

 

 

 

 

 

ಮೈ ಲೈಫ್ ಅಂಡ್ ಸ್ಟ್ರಗಲ್
ಆತ್ಮಕತೆ
ಬಾದ್‌ಶಾ ಖಾನ್
ರೋಲಿ ಬುಕ್ಸ್

 

 

 

 

 

 

ದಿ ನಟ್‌ಮೆಗ್ಸ್ ಕರ್ಸ್
ಕಥನೇತರ
ಅಮಿತಾವ್ ಘೋಷ್
ಪೆಂಗ್ವಿನ್ ರ್‍ಯಾಂಡಮ್ ಹೌಸ್

 

 

 

 

 

ಲಾಂಗ್ವೇಜಸ್ ಆಫ್ ಟ್ರೂತ್
ಕಥನೇತರ
ಸಲ್ಮಾನ್ ರುಶ್ದಿ
ಹ್ಯಾಮಿಶ್ ಹ್ಯಾಮಿಲ್ಟನ್

 

 

 

 

 

 

 

 


ಇದನ್ನೂ ಓದಿ: ‘ಹಿಂಡೆಕುಳ್ಳು’ ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ

LEAVE A REPLY

Please enter your comment!
Please enter your name here