ಹಿರಿಯ ಸ್ವಾತಂತ್ಯ್ರ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಬುಧವಾರ ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು. ಕೊರೊನಾ ಕಾರಣಕ್ಕೆ ಅವರ ಅಂತಿಮ ದರ್ಶನವನ್ನು ಪಡೆಯಲು ಸಾಧ್ಯವಾಗದ ಅವರ ಅಭಿಮಾನಿಗಳಿಗಾಗಿ ಆನ್‌ಲೈನ್ ಮೂಲಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಅಂತಿಮ ಸಂಸ್ಕಾರವು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲೂ ಸಿದ್ದತೆ ನಡೆಯುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು, “ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ವಾತಂತ್ಯ್ರ ಹೋರಾಟಗಾರ, ಶತಾಯುಷಿ ಹೆಚ್.ಎಸ್. ದೊರೆಸ್ವಾಮಿ ಇನ್ನಿಲ್ಲ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, “ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಷಿ ಎಚ್.ಎಸ್. ದೊರೆಸ್ವಾಮಿಯವರ ನಿಧನ ನನಗೆ ಆಘಾತ ಉಂಟುಮಾಡಿದೆ. ಮನೆ ಹಿರಿಯನನ್ನು ಕಳೆದುಕೊಂಡ ದುಃಖ ನನ್ನದಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ನಮ್ಮನ್ನು ಅಗಲಿ ಹೋದ ಅವರು ನಮ್ಮೆಲ್ಲರ ಆತ್ಮ ಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ, ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಜಗ್ಗದೆ, ಕುಗ್ಗದೆ ಅನ್ಯಾಯ-ಅಕ್ರಮ ಕಂಡಾಗ ಬೀದಿಗಿಳಿಯುತ್ತಿದ್ದ ಅವರು ಎಲ್ಲರ ಪಾಲಿನ ಸ್ಪೂರ್ತಿಯಾಗಿದ್ದರು” ಎಂದು ಹೇಳಿದ್ದಾರೆ.
ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು, “ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಗಾಂಧಿವಾದಿ, ಪ್ರಾತಃಸ್ಮರಣೀಯರು ಹಾಗೂ ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ದೊರೆಸ್ವಾಮಿ ಅವರ ನಿಧನದಿಂದ ಶತಮಾನದ ಮಹಾನ್ ಹೋರಾಟಗಾರರನ್ನು ಕಳೆದುಕೊಳ್ಳುವ ಮೂಲಕ ನಾಡು ಹಾಗೂ ದೇಶ ಬಡವಾಗಿದೆ” ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು, “ಕೆಲವು ಆತ್ಮಗಳು ನಾಶ ಹೊಂದುವುದಿಲ್ಲ. ನಿಮ್ಮ ಮಾರ್ಗದರ್ಶಕ ಬೆಳಕಿನೊಂದಿಗೆ ನಾವು ಮುಂದುವರಿಯುತ್ತೇವೆ, ಲಾಲ್‌ಸಲಾಮ್” ಎಂದು ಹೇಳಿದ್ದಾರೆ.
Some souls do not perish. It multiplies into many and pushes the rest. We shall continue with your guiding light.#Laalsalam.https://t.co/HpACpMSItw
— Sasikanth Senthil (@s_kanth) May 26, 2021
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ, ಬದುಕಿನ ಕೊನೆಯ ದಿನಗಳವರೆಗೂ ಮುಂಚೂಣಿಯಲ್ಲಿ ನಿಂತು ಜನಪರ ಧ್ವನಿಯಾಗುತ್ತಿದ್ದ ಶತಾಯುಷಿ, ಸ್ವತಂತ್ರ ಹೋರಾಟಗಾರ, ನಿಸ್ಟೂರವಾದಿ ದೊರೆಸ್ವಾಮಿಯವರ ನಿಧನವು ಈ ನಾಡಿಗೆ ತುಂಬಲಾರದ ನಷ್ಟ ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ನೋವಿನಲ್ಲಿ ನಾವೂ ಬಾಗಿಗಳಾಗಿದ್ದೇವೆ” ಎಂದು ಹೇಳಿದ್ದಾರೆ.
ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ, ಬದುಕಿನ ಕೊನೆಯ ದಿನಗಳವರೆಗೂ ಮುಂಚೂಣಿಯಲ್ಲಿ ನಿಂತು ಜನಪರ ಧ್ವನಿಯಾಗುತ್ತಿದ್ದ ಶತಾಯುಷಿ, ಸ್ವತಂತ್ರ ಹೋರಾಟಗಾರ, ನಿಸ್ಟೂರವಾದಿ ದೊರೆಸ್ವಾಮಿಯವರ ನಿಧನವು ಈ ನಾಡಿಗೆ ತುಂಬಲಾರದ ನಷ್ಟ
ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ನೋವಿನಲ್ಲಿ ನಾವೂ ಬಾಗಿಗಳಾಗಿದ್ದೇವೆ. pic.twitter.com/FEWnT8Fdb6
— DK Shivakumar (@DKShivakumar) May 26, 2021
ಇದನ್ನೂ ಓದಿ: ಗೌರವ ನಮನ | ದೊರೆಸ್ವಾಮಿ ಅವರ ಸಾರ್ಥಕ ಬದುಕಿನ ಮೈಲಿಗಲ್ಲುಗಳು
ಜಾನಪದ ಸಂಶೋಧಕ, ಜೆಎನ್‌ಯು ಮಾಜಿ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ ಅವರು, “ಡಾ. ಎಚ್.ಎಸ್. ದೊರೆಸ್ವಾಮಿ ಶತಮಾನದ ವ್ಯಕ್ತಿ. 20 ನೇ ಶತಮಾನವಿಡೀ ಬದುಕಿ, 21 ನೇ ಶತಮಾನದ ಮೊದಲೆರಡು ದಶಕಗಳನ್ನೂ ಕಂಡು ನಮಗೆಲ್ಲರಿಗೂ ಸ್ಫೂರ್ತಿಯ ಕೇಂದ್ರವಾಗಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸರಕಾರದ ಈಚಿನ ಭೂ ಕಬಳಿಕೆಯ ವಿರುದ್ಧದ ಹೋರಾಟದವರೆಗೂ ಅವರ ಚಟುವಟಿಕೆಗಳ ವ್ಯಾಪ್ತಿ ಹಬ್ಬಿತ್ತು. ಪತ್ರಕರ್ತರಾಗಿಯೂ ಅವರು ಪ್ರಸಿದ್ಧರು. ಗಾಂಧೀ ಹತ್ಯೆಯ ಕೆಲವು ದಿನಗಳ ಮೊದಲು ಗೋಡ್ಸೆ ಬೆಂಗಳೂರಿಗೆ ಬಂದದ್ದನ್ನು ಅವರು ದಾಖಲಿಸಿದ್ದರು’’ ಎಂದು ಹೇಳಿದ್ದಾರೆ.
“ಕರ್ನಾಟಕ ಏಕೀಕರಣಕ್ಕೂ ಅವರು ದುಡಿದಿದ್ದರು. ಇಂದಿರಾಗಾಂಧೀ ಕಾಲದಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದ್ದ ಅವರು, ಈಚೆಗೆ ವೇಗವಾಗಿ ಬೆಳೆಯುತ್ತಿರುವ ಫ್ಯಾಸಿಸಂನ ವಿರುದ್ಧವೂ ಧ್ವನಿ ಎತ್ತುತ್ತಿದ್ದರು. ʼಗಾಂಧೀ ಮತ್ತು ಅಂಬೇಡ್ಕರ್ ಅವರುಗಳಲ್ಲಿ ಭಿನ್ನಾಭಿಪ್ರಾಯ ಇತ್ತೇ ಹೊರತು ವೈರತ್ವ ಇರಲಿಲ್ಲʼ ಎಂಬ ಅವರ ಮಾತು ನನಗೆ ವೈಯಕ್ತಿಕವಾಗಿ ಬಹಳ ಖುಷಿ ನೀಡಿತ್ತು. ಒಳ್ಳೆಯವರನ್ನೆಲ್ಲಾ ಟ್ರೋಲ್ ಮಾಡುವುದನ್ನೇ ಕೆಲಸ ಮಾಡಿಕೊಂಡಿರುವವರ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿತ್ತು. ‘ನಿಮ್ಮ ಬಗ್ಗೆ ಹೀಗೆ ಬರೆದಿದ್ದಾರಲ್ಲಾ?ʼ ಎಂದರೆ ಅಜ್ಜ ನಕ್ಕುಬಿಡುತ್ತಿದ್ದರು! ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು!ನಮನಗಳು ಸಾರ್” ಎಂದು ಪುರುಷೋತ್ತಮ ಬಿಳಿಮಲೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ಸಂಘಟನೆ ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ಅವರು, “ಸರಳ,ಸ್ವಾಭಿಮಾನಿ ಮತ್ತು ಹೋರಾಟವನ್ನೇ ಉಸಿರಾಗಿಸಿಕೊಂಡ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿಯವರು” ಎಂದು ಹೇಳಿದ್ದಾರೆ.
ಲೇಖಕಿ ಚೇತನಾ ತೀರ್ಥಹಳ್ಳಿ ಅವರು, “ನಮ್ಮ ಪ್ರೀತಿಯ ‘ಆಂದೋಲನಜೀವಿ’, ಅದಮ್ಯ ಚೇತನ ದೊರೆಸ್ವಾಮಿಯವರು ತಮ್ಮ ಶತಮಾನದ ಬದುಕು ಮುಗಿಸಿದ್ದಾರೆ. ಸದಾ ಶಾಂತಿಯನ್ನೇ ಹಂಚಿದ ದೊರೆಸ್ವಾಮಿಯವರ ಆತ್ಮಕ್ಕೆ ಶಾಂತಿ ದೊರೆಯದೆ ಇರುವುದೆ? ಅದರಲ್ಲೂ ಇವತ್ತು ಬುದ್ಧ ಹುಣ್ಣಿಮೆ!” ಎಂದು ಹೇಳಿದ್ದಾರೆ.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು, “ಬೆಳಕು ಆರಿತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿ


