ಕಳೆದ ವರ್ಷ ಸಾಂಕ್ರಾಮಿಕದ ಕಾರಣಕ್ಕಾಗಿ ಹೇರಲಾದ ಲಾಕ್‌ಡೌನ್ ಸಮಯದಲ್ಲಿ ಜೂನ್ 5ರಂದು ಸುಗ್ರೀವಾಜ್ಞೆಗಳ ಮೂಲಕ ಹೊಸ ಕೃಷಿ ಕಾನೂನುಗಳನ್ನು ಮೋದಿ ನೇತೃತ್ವದ ಸರ್ಕಾರ ಜಾರಿ ಮಾಡಿತ್ತು. ಅದಕ್ಕೆ ಒಂದು ವರ್ಷ ತುಂಬುತ್ತಿದ್ದು ಇದೇ ಜೂನ್ 5 ರಂದು ಕೃಷಿ ಕಾನೂನುಗಳನ್ನು ವಿರೋಧಿಸಿ ಬಿಜೆಪಿ ಸಂಸದರು ಮತ್ತು ಶಾಸಕರ ಕಚೇರಿಗಳ ಮುಂದೆ ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟು `ಸಂಪೂರ್ಣ ಕ್ರಾಂತಿ ದಿನ’ವನ್ನಾಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ.
ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿದ್ದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಸೆಪ್ಟೆಂಬರ್ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿತು. ಅವುಗಳಿಗೆ ರಾಷ್ಟ್ರಪತಿಯವರು ಸಹಿ ಹಾಕಿ ಅನಮೋದನೆ ನೀಡಿದ್ದರು. ಆದರೆ ಇವುಗಳ ವಿರುದ್ಧ ರೈತರು ಕಳೆದ ಸೆಪ್ಟಂಬರ್ನಿಂದಲೇ ಹೋರಾಟ ಆರಂಭಿಸಿದರು. ರೈತ ವಿರೋಧಿಯಾದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಗೆ ಒತ್ತಾಯಿಸಿ ಕಳೆದ ನವೆಂಬರ್ನಿಂದ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
1974 ರಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿ’ ಎಂದು ಘೋಷಿಸಿ ಅಂದಿನ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಆಂದೋಲನವನ್ನು ಪ್ರಾರಂಭಿಸಿದ್ದರು. ಅದೇ ನೆನಪಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹೊಸ ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದೆ. 1974ರ ಜೂನ್ 5ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಬಿಹಾರದ ಜನರಿಗೆಸಂಪೂರ್ಣ ಕ್ರಾಂತಿ ದಿವಸ್’ ಎಂದು ಆಚರಿಸಿಲು ಕರೆ ನೀಡಿದ್ದರು. ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸಲು ಪ್ರತಿ ಹಳ್ಳಿಯಲ್ಲೂ `ಜನತಾ ಸರ್ಕಾರ್’ ರಚಿಸಿದ್ದರು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ, ‘ಜೂನ್ 5ರಂದು ದೇಶಾದ್ಯಂತ ಸಂಪೂರ್ಣ ಕ್ರಾಂತಿ ದಿವಸ್ ಆಚರಿಸಲಾಗುವುದು ಎಂದು ತಿಳಿಸಿದೆ. ಅಂದು ಬಿಜೆಪಿ ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳ ಕಚೇರಿಗಳ ಮುಂದೆ ಮೂರು ಕೃಷಿ ಕಾನೂನುಗಳ ಪ್ರತಿಗಳನ್ನು ಸುಡುವಂತೆ ನಾವು ನಾಗರೀಕರಿಗೆ ಮನವಿ ಮಾಡುತ್ತೇವೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ಸಂದರ್ಭದಲ್ಲಿ ಹೋರಾಟನಿರತ ರೈತರು ಮತ್ತು ಗ್ರಾಮಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಪುಣ್ಯಸ್ಮರಣೆ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದರು.
ಚೌಧರಿ ಚರಣ್ ಸಿಂಗ್ ಅವರು ದೇಶವನ್ನುಆತ್ಮನಿರ್ಭರ್’ (ಸ್ವಾವಲಂಬಿ)ಯನ್ನಾಗಿ ಮಾಡಲು ಬಯಸಿದ್ದರು. ಇದರಲ್ಲಿ ರೈತರು, ಕಾರ್ಮಿಕರು ಮತ್ತು ಹಳ್ಳಿಗಳ ಜನರು ಸಂತೋಷದಿಂದ ಬದುಕಬಲ್ಲರು’. ಇಂದಿನ ಸರ್ಕಾರದ ಬಗ್ಗೆ ರೈತರಿಗಿರುವ ಅಪನಂಬಿಕೆ ಚೌಧರಿ ಚರಣ್ ಸಿಂಗ್ ಅವರನ್ನು ನೆನಪಿಸುತ್ತದೆ. ಅವರು ರೈತರ ಪ್ರತಿಯೊಂದು ಸಮಸ್ಯೆ ಮತ್ತು ನೋವನ್ನು ಸಮಾಜ ಮತ್ತು ಸರ್ಕಾರದ ಮುಂದೆ ಇರಿಸಿ ಪರಿಹರಿಸುತ್ತಿದ್ದರು’ ಎಂದು ರೈತರು ನೆನಪಿಸಿಕೊಂಡರು.
ರೈತ ಹೋರಾಟವನ್ನು ಬಲಪಡಿಸಲು ಪಂಜಾಬಿನ ದೋಬಾ ಪ್ರದೇಶದ ಅತಿ ಹೆಚ್ಚು ಸಂಖ್ಯೆಯಲ್ಲಿ ರೈತರು ಶನಿವಾರ ಪ್ರತಿಭಟನಾ ಗಡಿಗಳಿಗೆ ಬಂದಿದ್ದಾರೆ. ಆಂದೋಲನವನ್ನು ಮುನ್ನಡೆಸುವ ನಿಟ್ಟಿನಲ್ಲಿ ಇನ್ನೂ ಅನೇಕ ರೈತರು ಬಂದು ಸೇರುವ ನಿರೀಕ್ಷೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ವ್ಯಕ್ತಪಡಿಸಿದೆ.
ಕೃಪೆ: ಅನ್ನದ ಋಣ
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಅಮೆರಿಕಾದ ಕೃಷಿಕರು, ತಜ್ಞರು ಮತ್ತು ರಾಜಕಾರಣಿಗಳು


