Homeಕರೋನಾ ತಲ್ಲಣಮಾನ್ಯ ಪ್ರಧಾನಿಗಳೇ ಕೊರೋನಾ ಲಸಿಕೆಗಳೆಲ್ಲಿ? ಎಲ್ಲಿ ನೀವು ಹೇಳಿದ ಕೊರೋನಾ ವಿರುದ್ಧದ ಜಯ?

ಮಾನ್ಯ ಪ್ರಧಾನಿಗಳೇ ಕೊರೋನಾ ಲಸಿಕೆಗಳೆಲ್ಲಿ? ಎಲ್ಲಿ ನೀವು ಹೇಳಿದ ಕೊರೋನಾ ವಿರುದ್ಧದ ಜಯ?

ಸರಳವಾದ ಲೆಕ್ಕಾಚಾರವನ್ನೂ ಹಾಕದೇ, ಬೇಡಿಕೆ ಪೂರೈಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ, ಫಿಝರ್‌ ಲಸಿಕೆಗೆ ಅನುಮತಿಯನ್ನು ನಿರಾಕರಿಸಿದ್ದ ಕೇಂದ್ರ ಸರ್ಕಾರ..

- Advertisement -
- Advertisement -

ಕೃಪೆ : ದಿ ಕ್ವಿಂಟ್‌
ಅನುವಾದ : ರಾಜೇಶ್‌ ಹೆಬ್ಬಾರ್‌

ಪ್ರಧಾನಿ ನರೆಂದ್ರ ಮೋದಿಯವರು ಜನವರಿ 16, 2021 ರ ದಿನ ಭಾರತದಲ್ಲಿ ಬೃಹತ್‌ ಕೊರೋನಾ ಲಸಿಕೆ ಅಭಿಯಾನವನ್ನು ಉದ್ಧೇಶಸಿ ಮಾತನಾಡುತ್ತ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೋವಿಡ್‌ ಲಸಿಕೆ ರೂಪದಲ್ಲಿ ಭಾರತಕ್ಕೆ ಪ್ರಬಲ ಅಸ್ತ್ರವೊಂದು ಲಭಿಸಿದೆ. ಕೋವಿಡ್‌ ಲಸಿಕೆಯ ಸಂಶೋಧನೆ ಮತ್ತು ಕೇಂದ್ರ ಸರ್ಕಾರದ ಲಸಿಕೆ ಅಭಿಯಾನ ಕೋವಿಡ್‌ ವಿರುದ್ಧದ ಭಾರತದ ವಿಜಯ ಎಂದು ಬಣ್ಣಿಸಿದ್ದರು.

ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿ ಭಾರತದಲ್ಲಿ ನಾಲ್ಕು ತಿಂಗಳುಗಳು ಕಳೆದಿವೆ. ಈ ಅವಧಿಯಲ್ಲಿ ಭಾರತದಲ್ಲಿ ಕೊರೋನಾ ಸೋಂಕಿನ ಕಾರಣದಿಂದ ಮೂರು ಲಕ್ಷ ಜನರು ಮೃತಪಟ್ಟಿದ್ದಾರೆ. ಕಳೆದ 26 ದಿನಗಳಲ್ಲೇ ಒಂದು ಲಕ್ಷದಷ್ಟು ಜನರು ಮೃತಪಟ್ಟಿದ್ದಾರೆ. ಹಾಗಾದರೆ ಪ್ರಧಾನಿಗಳು ಹೇಳಿದ ಕೊರೋನಾ ವಿರುದ್ಧದ ಗೆಲುವಿನ ಪ್ರಶ್ನೆ ಏನಾಯಿತು ಎಂಬುದು 4 ತಿಂಗಳ ನಂತರವೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿ ನಾಲ್ಕು ತಿಂಗಳ ಅವಧಿಯಲ್ಲೂ ಭಾರತದ ಲಸಿಕೆ ಉತ್ಪಾದನೆ ಮತ್ತು ವ್ಯಾಕ್ಸಿನೇಷನ್‌ ಪ್ರಕ್ರಿಯೆ ಬೆಳೆಯುವ ಬದಲು ಇನ್ನಷ್ಟು ಕುಂಠಿತಗೊಂಡಿದೆ ಮತ್ತು ನಿಧಾನಗೊಂಡಿದೆ. 43 ಲಕ್ಷ ಡೋಸ್‌ ವ್ಯಾಕ್ಸಿನ್‌ಗಳನ್ನು ಜನರಿಗೆ ನೀಡಿದ ಏಪ್ರಿಲ್‌ 5 ರಿಂದ ಹಿಡಿದು ಅತ್ಯಂತ ಕಡಿಮೆ ವ್ಯಾಕ್ಸಿನೇಷನ್‌ ನಡೆದ ಮೇ 9 ರ ತನಕವೂ ಕೊರೋನಾ ಲಸಿಕಾ ಅಭಿಯಾನ ಪರಿಣಾಮಕಾರಿಯಾಗಿ ನಡೆಯುತ್ತಿರುವ ಮತ್ತು ವೇಗಗೊಂಡಿರುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.

ಪ್ರಧಾನಿಗಳೇ ಎಲ್ಲಿ ಹೋಯಿತು ಕೊರೋನಾ ವಿರುದ್ಧದ ಭಾರತದ ಗೆಲುವು?

ಜನವರಿ 16, 2021 ರಂದು ಪ್ರಧಾನಿ ಹೇಳಿದ ಕೊರೋನಾ ವಿರುದ್ಧದ ಭಾರತದ ಗೆಲುವು ಎಲ್ಲಿ ಹೋಯಿತು? ಪ್ರತಿದಿನ ನಾಲ್ಕು ಸಾವಿರ ಜನರು ಕೊರೋನಾ ಕಾರಣದಿಂದ ಮೃತಪಟ್ಟಿರುವುದೇ ಕೋವಿಡ್‌ ವಿರುದ್ಧದ ಭಾರತದ ಗೆಲುವೇ? ಅಥವಾ ಭಾರತ ಕೊರೋನಾ ಹೋರಾಟದಲ್ಲಿ ದಯನೀಯವಾಗಿ ಸೋತಿದ್ದರ ಲಕ್ಷಣವೇ ಇದು? ಒಂದು ವೇಳೆ ನಾವು ಪ್ರಧಾನಿ ಹೇಳಿದಂತೆ ಕೊರೋನಾ ವಿರುದ್ಧ ಗೆಲುವು ಸಾಧಿಸಿದ್ದರೆ ಭಾರತ ಯಾಕೆ ಜಗತ್ತಿನ ಅತಿ ಕೆಟ್ಟ ಕೊರೋನಾ ನಿರ್ವಹಣೆಯ ರಾಷ್ಟ್ರಗಳ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುತ್ತಿತ್ತು? ಹಾಗಾದರೆ ಜನರ ಜೀವವನ್ನು ಉಳಿಸುವ ವ್ಯಾಕ್ಸೀನ್‌ಗಳೆಲ್ಲಿ?

ಭರವಸೆಗಳು ಮತ್ತು ವಾಸ್ತವಗಳ ನಡುವಿನ ಬೃಹತ್‌ ಅಂತರ

ಇದು ಭಾರತ. ಇಲ್ಲಿ ಹೇಳುಲಾಗುವ ಮತ್ತು ನಡೆಯುವ ಕೆಲಸಗಳ ನಡುವೆ ದೊಡ್ಡ ಅಂತರವಿದೆ. ಇದು ಭಾರತದ ಪ್ರಧಾನಿ ನರೇಂದ್ರ ಮೋದಿಯವರದೇ ಮಾತುಗಳು. ಹೌದು ಭಾರತದಲ್ಲಿ ಇಂದು ಸರ್ಕಾರ ಹೇಳುತ್ತಿರುವ ಮತ್ತು ಮಾಡುತ್ತಿರುವ ಕೆಲಸಗಳ ನಡುವೆ ಅಜಗಜಾಂತರ ವ್ಯತ್ಯಾಸ ಉಂಟಾಗಿದೆ. ಆ ವ್ಯತ್ಯಾಸವೇ ಇಂದು ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾಗಿದೆ. ನಮ್ಮೆಲ್ಲಿ ಬಹುತೇಕರು ಸ್ನೇಹಿತರನ್ನೋ ಕುಟುಂಬಸ್ತರನ್ನು ಇಷ್ಟರೊಳಗೆ ಕಳೆದುಕೊಂಡಿದ್ದೇವೆ. ಇಷ್ಟಾದರೂ ಸರ್ಕಾರದ ತನ್ನ ಕೆಲಸಗಳ ವೈಭವೋಪೇತ ವರ್ಣನೆ ನಿಂತಿಲ್ಲ. ಸರ್ಕಾರದ ಬರಿಯ ಭರವಸೆಗಳ ಮಹಾಪೂರ ಸದ್ಯಕ್ಕೆ ನಿಲ್ಲುವ ಸೂಚನೆಗಳೂ ಇಲ್ಲ. ವ್ಯಾಕ್ಸಿನೇಷನ್‌ ನಂತಹ ಸೂಕ್ಷ್ಮ ವಿಷಯಗಳಲ್ಲೂ ಸರ್ಕಾರ ತಾನು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬ ಕಾರ್ಯ ವೈಖರಿಯನ್ನು ಮುಂದುವರೆಸಿಕೊಂಡು ಹೊರಟಿದೆ. ಸರ್ಕಾರ ಕೋವಿಡ್ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಇಂತಹ ಹಲವಾರು ಎಡವಟ್ಟು ಮತ್ತು ಪ್ರಮಾದಗಳನ್ನು ಮಾಡಿದೆ.

ಭಾರತದ ವ್ಯಾಕ್ಸಿನೇಷನ್‌ ಪ್ರಕ್ರಿಯೆಯಲ್ಲಿನ ಅವ್ಯವಸ್ಥೆ ಮತ್ತು ತಪ್ಪು ನಿರ್ಧಾರಗಳನ್ನು ಇಲ್ಲಿ ಒಂದೊಂದಾಗಿ ನೋಡಬಹುದು.

• 2021 ಜೂನ್‌ 16 ರಂದು ಪ್ರಧಾನಿ ಮೋದಿ ದೇಶವನ್ನುದ್ಧೇಶಿಸಿ ಮಾತನಾಡುತ್ತಾ ಭಾರತದ ಎರಡು ಸ್ವದೇಶಿ ನಿರ್ಮಿತ ಲಸಿಕೆಗಳು ಕೊರೋನಾ ವಿರುದ್ಧದ ದೇಶದ ಹೋರಾಟದ ಗೆ ಲುವಿನ ಸಂಕೇತವೆಂದು ಬಣ್ಣಿಸಿದರು.
• 2021ರ ಜನವರಿ 28 ರಂದು ದೇಶದ ಪ್ರಧಾನಿ, ಜಾಗತಿಕ ಎಕನಾಮಿಕ್‌ ಫೋರಮ್‌ ನ ಆನಲೈನ್‌ ಸಮ್ಮೇಳನದಲ್ಲಿ ಭಾರತ ಕೊರೋನಾ ವಿರುದ್ಧ ಗೆಲುವು ಸಾಧಿಸಿದೆ ಎಂದು ಘೋಷಿಸಿಕೊಂಡರು. ಜೊತೆಗೆ ತಜ್ಙರ ಸಲಹೆಯಂತೆ ಭಾರತ ಲಸಿಕೆ ಉತ್ಪಾದನೆಯನ್ನು ಹತದ್ತುಪಟ್ಟು ಹೆಚ್ಚಿಸಿದೆಯೆಂದು ಘೋಷಿಸಿದರು.
• ಫೆಭ್ರವರಿ 16, 2021 ರಂದು ಪ್ರಧಾನಿ ಮೋದಿ ಭಾರತದ ಕೊರೋನಾ ವಿರುದ್ಧದ ಹೋರಾಟ ಜಗತ್ತಿಗೆ ಮಾದರಿಯಾಗಿದ್ದು ವಿಶ್ವದ ಅನೇಕ ರಾಷ್ಟ್ರಗಳು ಭಾರತ ಮಾದರಿಯನ್ನು ಅನುಸರಿಸಲು ಆರಂಭಿಸಿದ್ದಾರೆ ಎಂದು ಘೋಷಿಸಿದರು.
ಒಂದಾದ ಮೇಲೊಂದರಂತೆ ಪ್ರಧಾನಿಗಳ ಕೊರೋನಾ ವಿಜಯದ ಘೋಷಣೆಗಳು ನಮ್ಮನ್ನು ನಂಬುವಂತೆ ಮಾಡಿತು.
• ಫೆಭ್ರವರಿ 3 ರಂದು ಅಮೆರಿಕದ ಇನ್ನೊಂದು ಕೊರೋನಾ ಲಸಿಕೆ ಫಿಝರ್ ಬಳಕೆಗೆ ಭಾರತದಲ್ಲಿ ಸರ್ಕಾರ ಅನುಮತಿಯನ್ನು ನಿರಾಕರಿಸಿತು.
• ಕೆಲವು ದಿನಗಳ ನಂತರ ಫಿಝರ್‌ ಸಂಸ್ಥೆ ಭಾರತದಲ್ಲಿ ತನ್ನ ಕೊರೋನಾ ಲಸಿಕೆಯನ್ನು ನೀಡುವ ಮನವಿಯನ್ನೇ ಹಿಂಪಡೆಯಿತು.

ಸರಳವಾದ ಲೆಕ್ಕಾಚಾರವನ್ನೂ ಹಾಕದೇ, ಬೇಡಿಕೆ ಪೂರೈಕೆಗಳನ್ನು ಗಣನೆಗೆ ತೆಗೆದುಕೊಳ್ಳದೇ, ಫಿಝರ್‌ ಲಸಿಕೆಗೆ ಅನುಮತಿಯನ್ನು ನಿರಾಕರಿಸಿದ ಕೇಂದ್ರ ಸರ್ಕಾರ

ಎರಡು ಸ್ವದೇಶಿ ನಿರ್ಮಿತ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸೀನ್‌ ಗಳನ್ನೇ ನಂಬಿಕೊಂಡು ಫಿಝರ್‌ ಲಸಿಕೆಗೆ ಅನುಮತಿಯನ್ನು ಕೇಂದ್ರ ಸರ್ಕಾರ ಫೆಭ್ರವರಿ 2021 ರಲ್ಲಿ ನಿರಾಕಾರಿಸಿತು. ಕೋವಿಶೀಲ್ಡ್‌ ಲಸಿಕೆ ತಯಾರಿಸುವ ಪುಣೆಯ ಸೆರಮ್‌ ಇನ್ಸ್ಟಿಟ್ಯೂಟ್‌ ಈ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು. ಜನವರಿ ಅಂತ್ಯದ ವೇಳೆಗೆ ಸೆರಮ್‌ ಸಂಸ್ಥೆ ಭಾರತದ ಎಲ್ಲಾ ನಾಗರಿಕರಿಗೆ ಲಸಿಕೆ ತಯಾರಿಸುವುದಕ್ಕೆ ವರ್ಷಗಳೇ ಹಿಡಿಯುತ್ತವೆ. ಇದರ ನಡುವೆ ಅಂತರಾಷ್ಟ್ರೀಯ ಒಪ್ಪಂದಗಳ ಪ್ರಕಾರ ಕೋವಿಡ್‌ ಲಸಿಕೆಯನ್ನು ಬೇರೆ ಬೇರೆ ದೇಶಗಳಿಗೆ ಪೂರೈಸುವ ಹೊಣೆಗಾರಿಕೆಯೂ ಕಂಪನಿಯ ಮೇಲಿದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ಆದರೆ ಕೇಂದ್ರ ಸರ್ಕಾರ ಮಾತ್ರ ಫೆಭ್ರವರಿಯ ವೇಳೆಗೆ ಯಾವುದೇ ಜಾಗತಿಕ ಲಸಿಕೆಗಳಿಗೆ ಭಾರತದಲ್ಲಿ ಬಳಕೆಗೆ ಅನುಮತಿಯನ್ನು ನೀಡಲಿಲ್ಲ.

ಏಪ್ರಿಲ್‌ ವೇಳೆಗೆ ಭಾರತದ ಕೋವಿಡ್‌ ವಿರುದ್ಧದ ಗೆಲುವಿನ ಕಥೆಗಳು ಸುಳ್ಳಾಗತೊಡಗಿದವು. ಪ್ರತಿದಿನ ಸೋಂಕಿತರ ಸಂಖ್ಯೆಯಲ್ಲಿ ವಿಶ್ವ ದಾಖಲೆಯನ್ನು ಬರೆಯತೊಡಗಿತು. ತನ್ನ ದಾಖಲೆಗಳನ್ನು ತಾನೇ ಮುರಿದುಕೊಳ್ಳತೊಡಗಿತು. ಪ್ರತಿದಿನ 1 ಲಕ್ಷ ದಿಂದ 2 ಲಕ್ಷ 3 ಲಕ್ಷ 4 ಲಕ್ಷ ಹೀಗೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ದುರದೃಷ್ಟವಶಾತ್‌ ಸಾವಿನ ಸಂಖ್ಯೆಯು 1 ಸಾವಿರದಿಂದ 2 ಸಾವಿರ 4 ಸಾವಿರ ಹೀಗೆ ದಿನ ನಿತ್ಯ ಹೆಚ್ಚುತ್ತಲೇ ಹೋಯಿತು.

ಕೇವಲ ಕೊರೋನಾ ವೈರಸ್‌ ಮಾತ್ರ ಎರಡನೇ ಅಲೆಯಲ್ಲಿ ಜನರ ಸಾವಿಗೆ ಕಾರಣವಾಗಿಲ್ಲ. ಬದಲಿಗೆ ಆಸ್ಪತ್ರೆಯ ಬೆಡ್‌ಗಳ ಕೊರತೆ, ಐಸಿಯು ಕೊರತೆ, ವೆಂಟಿಲೇಟರ್‌ ಮತ್ತು ಆಕ್ಸಿಜನ್‌ಗಳ ಕೊರತೆಯ ಕಾರಣದಿಂದ ಜನರು ಪ್ರಾಣ ಬಿಡುವಂತಾಯಿತು.

ಭಾರತದ ವ್ಯಾಕ್ಸಿನ್‌ ಕೊರತೆಯ ನಗ್ನ ಸತ್ಯ : ಪ್ರತಿನಿತ್ಯದ ವಿಳಂಬ ಮತ್ತು ನಾಟಕ

ಏಪ್ರಿಲ್‌ ವೇಳೆಗೆ ಭಾರತದ ಅನೇಕ ರಾಜ್ಯಗಳಲ್ಲಿ ಒಂದಾದ ಮೇಲೊಂದರಂತೆ ಕೊರೋನಾ ಲಸಿಕೆಯ ಕೊರತೆ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ವ್ಯಾಕ್ಸಿನೇಷನ್‌ ಸೆಂಟರ್‌ಗಳು ನೋ ಸ್ಟಾಕ್‌ ಬೋರ್ಡ್‌ ಅಂಟಿಸಿ ಲಸಿಕೆಯ ವಿತರಣೆಯನ್ನು ನಿಲ್ಲಿಸಿಬಿಟ್ಟವು. ಜೊತೆಗೆ 18 ರಿಂದ 44 ವಯಸ್ಸಿನೊಳಗಿನವರಿಗೆ ಲಸಿಕೆ ನೀಡುವ ಯೋಜನೆಯನ್ನು ನಿಲ್ಲಿಸಲಾಯಿತು. ಮೇ ಅಂತ್ಯದ ವೇಳೆಗೆ ವ್ಯಾಕ್ಸಿನೇ಼ಷನ್‌ ಪ್ರಕ್ರಿಯೆ ಏಪ್ರಿಲ್‌ ನ ಅರ್ಧದಷ್ಟು ಪ್ರಮಾಣಕ್ಕೆ ಬಂದು ನಿಂತಿದೆ.

ಇಂದು ಲಸಿಕೆ ಅಭಿಯಾನ ತೀವ್ರಗೊಳ್ಳಬೇಕಾದ ಸಂದರ್ಭದಲ್ಲಿ ವ್ಯಾಕ್ಸಿನೇಷನ್‌ ಪ್ರಕ್ರಿಯೆ ಅತ್ಯಂತ ನಿಧಾನದ ಹಂತಕ್ಕೆ ಬಂದು ತಲುಪಿದೆ. ಯಾರಿಗೆ ಕೋವಿಡ್‌ ಲಸಿಕೆ ಅಗತ್ಯವಿತ್ತು, ಯಾರು ಲಸಿಕೆ ಕಾರಣದಿಂದ ಕೊರೋನಾ ವಿರುದ್ಧ ಹೋರಾಡಲು ಸಾಧ್ಯವಿತ್ತು ಅವರಿಗಿಂದು ಲಸಿಕೆ ಸಿಗುತ್ತಿಲ್ಲ. ಇದು ಸಾವಿರಾರು ಜನರ ಸಾವು ನೋವುಗಳಿಗೆ ಇನ್ನೊಂದು ಕಾರಣವಾಗಿ ಮಾರ್ಪಟ್ಟಿದೆ.

ಮೊದಲು ಫಿಝರ್‌ ಲಸಿಕೆಗೆ ಅನುಮತಿ ನಿರಾಕರಣೆ ಮತ್ತು ನಂತರದಲ್ಲಿ ಫಿಝರ್‌ ಲಸಿಕೆಯನ್ನು ಭಾರತಕ್ಕೆ ಆಹ್ವಾನಿಸಿದ ಸರ್ಕಾರ

ಮೊದಲು ಫಿಝರ್‌ ಲಸಿಕೆಗೆ ಭಾರತದಲ್ಲಿ ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರ ಏಪ್ರಿಲ್‌ 13 ರಂದು ಜಾಗತಿಕವಾಗಿ ಅಮೆರಿಕಾ, ಬ್ರಿಟನ್‌ ಮತ್ತು ಯುರೋಪ್‌ ನ ದೇಶಗಳಲ್ಲಿ ಬಳಕೆಯಲ್ಲಿರುವ ಫೀಝರ್‌ ಮತ್ತು ಮೊಡರ್ನಾ ಲಸಿಕೆಗಳನ್ನು ಭಾರತಕ್ಕೆ ಆಹ್ವಾನಿಸಿತು. ದೇಶದಲ್ಲಿ ಪ್ರಕರಣ ಹೆಚ್ಚುತ್ತಿರುವ ಮತ್ತು ಕೊರೋನಾ ವ್ಯಾಕ್ಸಿನ್‌ ಗಳ ತೀವ್ರ ಕೊರತೆಯ ನಂತರವಷ್ಟೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ತನ್ನ ಹಿಂದಿನ ನಿರ್ಧಾರಗಳಿಗೆ ಯು ಟರ್ನ್‌ ತೆಗೆದುಕೊಂಡಿಂತು. ಆದರೆ ಆ ವೇಳೆಗೆ ಕಾಲ ಮೀರಿತ್ತು. ಅಂತರಾಷ್ಟ್ರೀಯ ಮಟ್ಟದ ಲಸಿಕೆಗಳ ಪೂರೈಕೆ ಗೆ 3-4 ತಿಂಗಳುಗಳ ಅವಕಾಶ ಬೇಕೆಂದು ಲಸಿಕೆ ತಯಾರಿಸುವ ಜಾಗತಿಕ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಹೇಳಿದವು.

ಕೇಂದ್ರ ಸರ್ಕಾರ ಜಾಗತಿಕ ಲಸಿಕೆಗಳನ್ನು ಭಾರತದ ಮಾರುಕಟ್ಟೆಗೆ ಆಹ್ವಾನಿಸಿದ 7 ವಾರಗಳ ನಂತರವು ಫಿಝರ್‌ ಮತ್ತು ಮೊಡರ್ನಾ ಸಂಸ್ಥೆಗಳು ಇದುವರೆಗೆ ಭಾರತದೊಂದಿಗೆ ವ್ಯಾಕ್ಸಿನ್‌ ಪೂರೈಕೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿಲ್ಲ.

ಏಪ್ರಿಲ್‌ 13 ರ ನಂತರ 7 ವಾರಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ವ್ಯಾಕ್ಸಿನ್‌ ಪೂರೈಕೆ ಸಂಬಂಧ ಹಲವು ಗೊಂದಲಗಳು ಮತ್ತು ನಾಟಕಗಳು ನಡೆದವು. ಕೇಂದ್ರ ಸರ್ಕಾರ ರಾಜ್ಯಗಳಿಗೆ ನೇರವಾಗಿ ವ್ಯಾಕ್ಸಿನ್‌ ಖರೀದಿಸುವಂತೆ ಹೇಳಿತು. ಆದರೆ ರಾಜ್ಯಗಳಿಗೆ ದೇಶಿ ಸಂಸ್ಥೆಗಳ ವ್ಯಾಕ್ಸಿನ್‌ ಪೂರೈಕೆಯ ಹೆಚ್ಚಳವೂ ಈ ಅವಧಿಯಲ್ಲಿ ಕಂಡುಬರಲಿಲ್ಲ.

• ಏಪ್ರಿಲ್‌ ಕೊನೆ ವಾರದ ವೇಳೆಗೆ ಕೇಂದ್ರವು ಜಾಗತಿಕ ವ್ಯಾಕ್ಸಿನ್‌ ಉತ್ಪಾದಕ ಸಂಸ್ಥೆಗಳಿಂದ ರಾಜ್ಯಗಳೇ ನೇರವಾಗಿ ವ್ಯಾಕ್ಸಿನ್‌ ಖರೀದಿ ಮಾಡಬೇಕೆಂದು ಹೇಳಿತು. ಜಾಗತಿಕ ಟೆಂಡರ್‌ ಮೂಲಕ ರಾಜ್ಯಗಳಲ್ಲಿ ತಲೆದೋರಿರುವ ವ್ಯಾಕ್ಸಿನ್‌ ಕೊರತೆಯನ್ನು ಬಗೆಹರಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿತು.
• ಮಹಾರಾಷ್ಟ್ರ, ಪಂಜಾಬ್‌, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಕರ್ನಾಟಕಗಳು ವ್ಯಾಕ್ಸಿನ್‌ ಪೂರೈಕೆಯ ಜಾಗತಿಕ ಟೆಂಡರ್‌ಗಳಿಗೆ ಮುಂದಾದವು. ವಿಪರ್ಯಾಸವೆಂದರೆ ಈ ಜಾಗತಿಕ ಟೆಂಡರ್‌ಗಳ ಪ್ರಯತ್ನದ ನಂತರ ರಾಜ್ಯಗಳು ಕಂಡುಕೊಂಡಿದ್ದೇನೆಂದರೆ ವ್ಯಾಕ್ಸಿನ್‌ ತಯಾರಿಸುವ ಜಾಗತಿಕ ಕಂಪನಿಗಳು ಕೇವಲ ದೇಶದ ಕೇಂದ್ರ ಸರ್ಕಾರ ಮತ್ತು ಖಾಸಗಿ ಕಂಪನಿಗಳೊಂದಿಗೆ ಮಾತ್ರ ವ್ಯಾಕ್ಸಿನ್‌ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕುತ್ತವೆ ಎಂದು.
• ಈ ಜಾಗತಿಕ ಟೆಂಡರ್‌ ನಾಟಕವೂ ಏಪ್ರಿಲ್‌ ಅಂತ್ಯದ ವೇಳೆಗಾಗಲೇ ಕೊನೆಗೊಂಡಿತು.

ಫಿಝರ್‌, ಮೊಡರ್ನಾ ಕಂಪನಿಗಳ ಬಳಿ ಭಾರತಕ್ಕೆ ನೀಡಲು ವ್ಯಾಕ್ಸಿನ್‌ಗಳೇ ಇಲ್ಲ

ಏಪ್ರಿಲ್‌ 13 ರಂದೇ ಕೇಂದ್ರ ಸರ್ಕಾರವು ಅಂತರಾಷ್ಟ್ರೀಯ ವ್ಯಾಕ್ಸಿನ್‌ಗಳ ಬಳಕೆಗೆ ಭಾರತದಲ್ಲಿ ಅನುಮತಿಯನ್ನು ನೀಡಿತ್ತು. ಇದಾದ ಏಳು ವಾರಗಳ ನಂತರವೂ ಜಾಗತಿಕ ವ್ಯಾಕ್ಸಿನ್‌ಗಳಾದ ಫಿಝರ್‌ ಮತ್ತು ಮೊಡೆರ್ನಾ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿಲ್ಲ. ಇದಕ್ಕೆ ಕಾರಣ ಜಾಗತಿಕ ಕಂಪನಿಗಳ ಬಳಿ ಈಗ ವ್ಯಾಕ್ಸಿನ್‌ ಗಳ ಸ್ಟಾಕ್‌ ಇಲ್ಲದಿರುವುದು. 2020ರ ಅವಧಿಯ ವೇಳೆಗಾಗಲೇ ಅಮೇರಿಕಾ, ಬ್ರಿಟನ್‌, ಯುರೋಪ್‌ ನ ದೇಶಗಳು, ಜಪಾನ್‌, ಕೊರಿಯಾ ದೇಶಗಳು ವ್ಯಾಕ್ಸಿನ್‌ ಪೂರೈಕೆ ಸಂಬಂಧ ಈ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿವೆ. ಭಾರತ ಆ ವೇಳೆಗೆ ಒಂದೇ ಒಂದು ಡೋಸ್‌ ವ್ಯಾಕ್ಸಿನ್‌ ಕೂಡ ಖರೀದಿ ಮಾಡಿಲ್ಲ.

ಕೇಂದ್ರ ಸರ್ಕಾರವು ಜಾಗತಿಕ ಟೆಂಡರ್‌ ಗೆ ಯಾವ ಕಂಪನಿಗಳು ಮುಂದೆ ಬರುವುದಿಲ್ಲ ಎಂಬ ಅಂಶವನ್ನು ತಿಳಿದೇ ಈ ಜವಾಬ್ಧಾರಿಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಿತು. ಇದನ್ನು ಅರಿಯದ ರಾಜ್ಯ ಸರ್ಕಾರಗಳು ಜಾಗತಿಕ ಟೆಂಡರ್‌ ಪ್ರಯತ್ನದಲ್ಲಿ ಮತ್ತಷ್ಟು ಅವಮಾನ, ಹಿನ್ನಡೆಯನ್ನು ಅನುಭವಿಸಿದವು.

ಮೊಡೆರ್ನಾ ಸಂಸ್ಥೆಯು ತನ್ನ ಬಳಿ 2021 ರಲ್ಲಿ ತನ್ನ ಬಳಿ ಮಾರಾಟಕ್ಕೆ ಯಾವ ಲಸಿಕೆಯೂ ಲಭ್ಯವಿಲ್ಲ ಎಂದು ಹೇಳಿದ್ದರೆ ಫಿಝರ್‌ ಸಂಸ್ಥೆಯು ಜುಲೈ ನಿಂದ ಅಕ್ಟೋಬರ್‌ ವೇಳೆಗೆ ಭಾರತಕ್ಕೆ 5 ಕೋಟಿ ವ್ಯಾಕ್ಸಿನ್‌ ಮಾತ್ರ ಪೂರೈಸಲು ಸಾಧ್ಯ ಎಂದು ಹೇಳಿದೆ.

ಮೇ ಅಂತ್ಯದ ವೇಳೆಗೆ ಭಾರತದಲ್ಲಿ 20 ಕೋಟಿ ಡೋಸ್ ವ್ಯಾಕ್ಸಿನ್‌ ಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 20 ಕೋಟಿ ಡೋಸ್‌ ಎಂದೆ ಕೇವಲ ಹತ್ತು ಕೋಟಿ ಜನರಿಗೆ ಇದು ವರೆಗೆ ವ್ಯಾಕ್ಸಿನ್‌ ಗಳನ್ನು ನೀಡಲಾಗಿದೆ ಎಂದು ಅಂದಾಜಿಸಿದರೂ ಇದರಲ್ಲಿ 2 ಡೋಸ್‌ ವ್ಯಾಕ್ಸಿನ್‌ ಪೊಡೆದವರು ಮತ್ತು ಮೊದಲ ಡೋಸ್‌ ವ್ಯಾಕ್ಸಿನ್‌ ಪಡೆದವರೂ ಸೇರಿದ್ದಾರೆ. ಅದರ ಅರ್ಥ ಇದುವರೆಗೆ ೧೦ ಕೋಟಿಗಳಷ್ಟು ಜನರಿಗೆ ವ್ಯಾಕ್ಸಿನ್‌ ನೀಡಿರುವುದು ಸಾಧ್ಯವಿಲ್ಲ. ಲಸಿಕೆ ಅಭಿಯಾನ ಆರಂಭವಾಗಿ 4 ತಿಂಗಳ ನಂತರವೂ ಭಾರತದಲ್ಲಿ ಇನ್ನು ದೇಶದ 10% ಜನರಿಗೂ ವ್ಯಾಕ್ಸಿನ್‌ ದೊರೆತಿಲ್ಲ. ಭಾರತದಲ್ಲಿರುವ ಎಲ್ಲಾ ಪ್ರಜೆಗಳಿಗೂ ವ್ಯಾಕ್ಸಿನ್‌ ಬೇಕೆಂದರೆ ಸರಿ ಸುಮಾರು 250 ಕೋಟಿ ಡೋಸ್‌ ಗಳಷ್ಟು ವ್ಯಾಕ್ಸಿನ್‌ ಅವಶ್ಯಕತೆ ಇದೆ. ಸರ್ಕಾರ ಮಾತ್ರ 2021 ರ ಅಂತ್ಯದ ವೇಳೆಗೆ ಭಾರತದ ಎಲ್ಲ ನಾಗರಿಕರಿಗೂ ವ್ಯಾಕ್ಸಿನ್‌ ಕೊಡುವುದಾಗಿ ಹೇಳುತ್ತಿದೆ. ಈಗಿರುವ ವ್ಯಾಕ್ಸಿನ್‌ ಉತ್ಪಾದನೆಯ ಪ್ರಮಾಣ ಜೂನ್‌ ಜುಲೈ ಹೊತ್ತಿಗೆ ದುಪ್ಪಟ್ಟುಗೊಂಡರೂ ಸರ್ಕಾರ ಹೇಳಿದ ಅವಧಿಯಲ್ಲಿ ದೇಶದ ನಾಗರಿಕರೆಲ್ಲರಿಗೂ ವ್ಯಾಕ್ಸೀನ್‌ ನೀಡಲು ಸಾಧ್ಯವಿಲ್ಲ. ಹಾಗಿದ್ದರೆ ಪ್ರಧಾನಿ ಮೋದಿಯವರು ಹೇಳಿದ ಕೊರೋನಾ ಸಾಂಕ್ರಾಮಿದ ವಿರುದ್ಧದ ಭಾರತದ ಗೆಲುವು, ವ್ಯಾಕ್ಸಿನ್‌ ವಿಜಯ ಎಲ್ಲಿ ಹೋಯಿತು?

ಭಾರತ ದೊಡ್ಡ ರಾಷ್ಟ್ರ ನಿಜ. ಇಲ್ಲಿ ಎಲ್ಲರಿಗೂ ವ್ಯಾಕ್ಸಿನ್‌ ಒದಗಿಸುವ ಬೃಹತ್‌ ಕೆಲಸ ಅಷ್ಟು ಸುಲಭವಿಲ್ಲವೆನ್ನುವುದೂ ನಿಜ. ಆದರೆ ಕೇಂದ್ರ ಸರ್ಕಾರ ದೇಶದ ಬೇಡಿಕೆ ಮತ್ತು ಪೂರೈಕೆಯ ಸರಳ ಲೆಕ್ಕಾಚಾರವನ್ನೂ ಮಾಡದಿರುವುದು ದುರಂತದ ಸಂಗತಿ. ದೇಶದ ಬೇಡಿಕೆಗೆ ಅಗತ್ಯವಾದ 5% ವ್ಯಾಕ್ಸಿನ್‌ ಗಳನ್ನು ಸಿದ್ಧವಿಟ್ಟುಕೊಳ್ಳದೇ ಕೊರೋನಾ ವಿರುದ್ಧ ಗೆದ್ದೆವೆಂದು ಘೋಷಿಸುವುದು ಹಾಸ್ಯಾಸ್ಪದ. ಒಂದು ರಾಜ್ಯದ ವಿರುದ್ಧ ಇನ್ನೊಂದು ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ರಾಜ್ಯ ಸರ್ಕಾರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ಒಂದಷ್ಟು ದಿನ ಲಸಿಕೆ ವಿಚಾರವನ್ನು ಜನರ ಮನಸ್ಸಿನಿಂದ ಮರೆಸಬಹುದು. ಆದರೆ ಇದು ನಮ್ಮ ವ್ಯಾಕ್ಸಿನೇಷನ್‌ ಸಮಯವನ್ನು ಇನ್ನಷ್ಟು ವಿಳಂಬ ಮಾಡುವುದೊಂದೇ ಅಲ್ಲದೇ ಸಾವಿರಾರು ಜನರ ಸಾವಿಗೂ ದಾರಿ ಮಾಡಿಕೊಡುತ್ತದೆ.


ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳು ಹೊಟೇಲ್‌ಗಳ ಜೊತೆ ಸೇರಿ ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ: ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಇದೊಂದು ಅರೆಬೆಂದ ಬರಹ, ಫೀಜರ್ ಕಂಪನಿಯ ಜೊತೆ ಯಾಕೆ ಒಪ್ಪಂದ ಮಾಡಿಕೊಂಡಿಲ್ಲ ಎಂಬುವುದನ್ನು ಮರೆ ಮಾಚಲಾಗಿದೆ. ಕೇವಲ ಮೋದಿಜಿಯನ್ನು ಹಳಿಯುವುದೊಂದೆ ಈ ಬರಹದ ಉದ್ದೇಶವಾಗಿದೆ.

  2. ಫೀಜರ್ ಕಂಪನಿಯು, ತನ್ನ ಔಷದಿಯ ಪ್ರಯೋಗದಿಂದ ಯಾರಿಗಾದರೂ ಹಾನಿಯಾದಲ್ಲಿ ಅವರಿಗೆ ಪರಿಹಾರವನ್ನು ಆಯಾ ಸರ್ಕಾರವೇ ಕೊಡಬೇಕು ಎಂದು ಪಟ್ಟು ಹಿಡಿದಿತ್ತು ಆ ಕಾರಣಕ್ಕೆ ಒಪ್ಪಂದ ವಾಗಿರಲಿಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...