Homeಕರೋನಾ ತಲ್ಲಣಖಾಸಗಿ ಆಸ್ಪತ್ರೆಗಳು ಹೊಟೇಲ್‌ಗಳ ಜೊತೆ ಸೇರಿ ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ: ಕೇಂದ್ರ ಸರ್ಕಾರ

ಖಾಸಗಿ ಆಸ್ಪತ್ರೆಗಳು ಹೊಟೇಲ್‌ಗಳ ಜೊತೆ ಸೇರಿ ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ: ಕೇಂದ್ರ ಸರ್ಕಾರ

- Advertisement -
- Advertisement -

ದೇಶದಲ್ಲಿ ಕೊರೋನಾ ಲಸಿಕೆಯ ಹಾಹಾಕಾರ ಮುಂದುವರೆದಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಲಸಿಕಾ ಕೇಂದ್ರಗಳ ಮುಂದೆ ಪ್ರತಿನಿತ್ಯ ಜನ ಸಂದಣಿ ಕಂಡು ಬರುತ್ತಿದೆ. ರಾಜ್ಯ ಸರ್ಕಾರಗಳು ಕೇಂದ್ರದಿಂದ ತಮಗೆ ನೀಡುತ್ತಿರುವ ಲಸಿಕೆ ಯಾವ ಮೂಲೆಗೂ ಸಾಲುವುದಿಲ್ಲ ಎಂದು ಹೇಳುತ್ತಿವೆ. ಕೆಲವು ಕಡೆಯಲ್ಲಿ ಕೋವಿಶೀಲ್ಡ್‌ ಲಸಿಕೆಯ ಎರಡನೇ ಡೋಸ್‌ ಬಹುತೇಕರಿಗೆ (45 ವರ್ಷ ಮೇಲ್ಪಟ್ಟವರಿಗೆ) ನೀಡಲು ಇದುವರೆಗೆ ರಾಜ್ಯ ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಎಲ್ಲೆಲ್ಲೂ ಲಸಿಕಾ ಕೇಂದ್ರಗಳು ಬೆಳಗಿನ ಅವಧಿಯಲ್ಲಿಯೇ ನೋ ಸ್ಟಾಕ್‌ ಬೋರ್ಡ್‌ ಹಾಕಿಕೊಂಡು ಜನರನ್ನು ವಾಪಸ್‌ ಕಳುಹಿಸುತ್ತಿರುವ ಘಟನೆ ಕೂಡ ನಡೆದಿದೆ. ಆದರೆ ದೇಶದಲ್ಲಿನ ಕೋವಿಡ್‌ ಲಸಿಕೆ ಹಾಹಾಕಾರದ ನಡುವೆ ಖಾಸಗಿ ಆಸ್ಪತ್ರೆಗಳು ಎಗ್ಗಿಲ್ಲದಂತೆ ಲಸಿಕೆ ವ್ಯಾಪಾರವನ್ನು ಮುಂದುವರೆಸಿವೆ. 900 ರೂ. ಗಳಿಂದ 2000 ರೂಗಳ ಮೊತ್ತದಲ್ಲಿ ರಾಜಾರೋಷವಾಗಿ ಲಸಿಕೆಗಳ ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ.

ಜೊತೆಗೆ ಪ್ರತಿಷ್ಠಿತ ಐಷಾರಾಮಿ ಹೊಟೇಲ್‌ ಗಳ ಜೊತೆ ಸೇರಿ ಲಸಿಕೆ ಪ್ಯಾಕೇಜ್‌ಗಳನ್ನು ಘೋಷಿಸುತ್ತಿವೆ. ಐಷಾರಾಮಿ ಹೊಟೇಲ್‌ ಗಳ ತಮ್ಮಲ್ಲಿನ ಬ್ರೇಕ್‌ ಫಾಸ್ಟ್‌, ಏಸಿ, ಮನರಂಜನೆ ಮುಂತಾದ ಸೌಲಭ್ಯಗಳ ಜೊತೆಗೆ ಕೊರೋನಾ ಲಸಿಕೆಗಳನ್ನು ನೀಡುವುದಾಗಿ ಹೇಳಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದವು. ಈ ಹೊಟೇಲ್‌ ಗಳ ಜೊತೆ ಖಾಸಗಿ ಆಸ್ಪತ್ರೆಗಳೂ ಶಾಮೀಲಾಗಿ ದೊಡ್ಡ ದೊಡ್ಡ ಹೊಟೇಲ್‌ ಗಳಲ್ಲಿ ತಂಗುವ ಗ್ರಾಹಕರಿಗೆ ತಮ್ಮ ವೈದ್ಯರು ಮತ್ತು ಸಿಬ್ಬಂದಿಯ ಮೂಲಕ ವಾಕ್ಸಿನೇಶನ್‌ ನಡೆಸುತ್ತಿದ್ದರು. ಈ ಕುರಿತು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಐಷಾರಾಮಿ ಹೊಟೇಲ್‌ ಗಳಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಲಸಿಕೆಗಳನ್ನು ನೀಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಆರೋಗ್ಯ ಇಲಾಖೆ, “ವಿಶ್ವದ ಅತಿದೊಡ್ಡ ವ್ಯಾಕ್ಸಿನ್‌ ಡ್ರೈವ್‌ ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯ ಸರ್ಕಾರಗಳು ವ್ಯಾಕ್ಸಿನೇಷನ್‌ ಕುರಿತು ತೀವ್ರ ಎಚ್ಚರಿಕೆ ವಹಿಸಬೇಕು. ಕೆಲವು ಕಡೆ ವ್ಯಾಕ್ಸೀನೇಷನ್‌ ಪ್ರಕ್ರಿಯೆಯ ನಿಯಮಗಳು ಉಲ್ಲಂಘನೆಯಾಗುತ್ತಿರುವುದು ಕಂಡು ಬಂದಿದೆ. ವ್ಯಾಕ್ಸಿನೇಷನ್‌ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳು ಉಲ್ಳಂಘನೆಯಾಗದಂತೆ ನೋಡಿಕೊಂಡು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ಜನರಿಗೆ ಲಸಿಕೆಗಳನ್ನು ನೀಡಬೇಕೆಂದು” ಎಚ್ಚರಿಕೆ ನೀಡಿದೆ.

ಕೇಂದ್ರ ಆರೋಗ್ಯ ಮಾರ್ಗಸೂಚಿಯ ಅನ್ವಯ ಇನ್ನು ಮುಂದೆ ಖಾಸಗಿ ಹೊಟೇಲ್‌ಗಳಲ್ಲಿ ಲಸಿಕೆಗಳನ್ನು ನೀಡಲು ಸಾಧ್ಯವಿಲ್ಲ. ಕೇಂದ್ರ ಆರೋಗ್ಯ ಇಲಾಖೆಯು ಸರ್ಕಾರಿ ಮತ್ತು ಪರವಾನಗಿಯನ್ನು ಹೊಂದಿದ ಖಾಸಗಿ ವ್ಯಾಕ್ಸಿನೇಷನ್‌ ಸೆಂಟರ್‌ಗಳು, ಇತರ ಕಚೇರಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಕೆಲಸ ನಿರ್ವಹಿಸುವ ಸ್ಥಳಗಳು, ವೃದ್ಧರು ಮತ್ತು ಅಂಗವಿಕಲರಿಗಾಗಿ ವಸತಿ ಸಮುಚ್ಛಯಗಳ ಸಮೀಪ ಅಥವಾ ಹೌಸಿಂಗ್‌ ಸೊಸೈಟಿಗಳಲ್ಲಿ, ಸಮುದಾಯ ಭವನಗಳು, ಪಂಚಾಯತ ಭವನಗಳು, ಶಾಲೆ-ಕಾಲೇಜುಗಳು ಮತ್ತು ವೃದ್ಧಾಶ್ರಮಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ವ್ಯಾಕ್ಸಿನೇಷನ್‌ ಸೌಲಭ್ಯಗಳನ್ನು ಕಲ್ಪಿಸಬಹುದಾಗಿದೆ ಎಂದು ಆದೇಶ ನೀಡಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಸೂಚಿಸಿದೆ.

ದೆಹಲಿ ಉಪಮುಖ್ಯ ಮಂತ್ರಿ ಮನಿಶ್‌ ಸಿಸೋಡಿಯಾ ಕೇಂದ್ರ ಸರ್ಕಾರವನ್ನು ವ್ಯಾಕ್ಸಿನೇಷನ್‌ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳಿಗೆ ಅಗತ್ಯವಾದ ವ್ಯಾಕ್ಸಿನ್‌ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಹೇಗೆ ವ್ಯಾಕ್ಸಿನ್‌ ಗಳನ್ನು ನೀಡುತ್ತಿವೆ ? ಕೇಂದ್ರದ ಬಳಿ ವ್ಯಾಕ್ಸಿನ್‌ ಪೂರೈಕೆ ಇಲ್ಲವೆಂದಾದರೆ ಖಾಸಗಿಯವರಿಗೆ ವ್ಯಾಕ್ಸಿನ್‌ ಎಲ್ಲಿಂದ ಸರಬರಾಜಾಗುತ್ತಿದೆ ಎಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ. ವ್ಯಾಕ್ಸಿನ್‌ ಕೊರತೆಯಿಂದಾಗಿ 18-44 ವಯಸ್ಸಿನ ಸಮುದಾಯಕ್ಕೆ ವ್ಯಾಕ್ಸಿನ್‌ ನೀಡುವ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಡುವಂತಾಗಿದೆ. ದೆಹಲಿ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತವಾಗಿ ವ್ಯಾಕ್ಸಿನ್‌ ನೀಡಲು ಪ್ರಯತ್ನಿಸುತ್ತಿದೆ. ನಡುವೆ ಖಾಸಗಿಯವರು 1000 ರೂಪಾಯಿಗಳಿಗೆ ಒಂದು ಡೋಸ್‌ ವ್ಯಾಕ್ಸಿನ್‌ ಮಾರಿಕೊಳ್ಳುತ್ತಿದ್ದಾರೆ ಎಂದು ಮನಿಶ್‌ ಸಿಸೋಡಿಯಾ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ದೇಶದ ದೊಡ್ಡ ಹೊಟೇಲುಗಳು “ಲಸಿಕೆ ಪ್ಯಾಕೇಜ್” ಆರಂಭಿಸಿದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಆರಂಭ ಆದ ಬೆನ್ನಿಗೇ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿ, ಇಂತಹದಕ್ಕೆಲ್ಲ ಅವಕಾಶ ಇಲ್ಲ ಎಂದಿದೆ. ಆರೋಗ್ಯದ ವಿಷಯದಲ್ಲೇ “ಕಾರ್ಪೋರೇಟ್” ಶಕ್ತಿಗಳು ಇಷ್ಟು ಆಡಬಲ್ಲವೆಂದಾದರೆ ನಾಳೆ ಕೃಷಿ “ಕಾರ್ಪೋರೇಟೀಕರಣ” ಆಗೋದಿಲ್ಲ ಅಂತ ಯಾವ ಬಾಯಲ್ಲಿ ಹೇಳ್ತೀರಿ? ಎಂದು ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಪಶ್ನಿಸಿದ್ದಾರೆ.

ಆರೋಗ್ಯ ಇಲಾಖೆಯು 2021 ಡಿಸೆಂಬರ್‌ ವೇಳೆಗೆ 108 ಕೋಟಿ ಭಾರತೀಯರಿಗೆ 216 ಕೋಟಿ ಡೋಸ್‌ ಕೋವಿಡ್‌ ವ್ಯಾಕ್ಸಿನ್‌ ನೀಡುವ ಗುರಿಯನ್ನು ಹಾಕಿಕೊಂಡಿದೆ. ಇದುವರೆಗೆ 20 ಕೋಟಿ ವ್ಯಾಕ್ಸಿನ್‌ ಡೋಸ್‌ ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಕುಂಟುತ್ತ ಸಾಗುತ್ತಿರುವ ವ್ಯಾಕ್ಸಿನೇಷನ್‌ ಪ್ರಕ್ರಿಯೆಯನ್ನು ಗಮನಿಸಿದರೆ ಕೆಂದ್ರ ಸರ್ಕಾರ ಹೇಳಿರುವಂತೆ 2021 ಡಿಸೆಂಬರ್‌ ವೇಳಗೆ ವ್ಯಾಕ್ಸಿನೇಷನ್‌ ಪ್ರಕ್ರಿಯೆ ಅಂತ್ಯವಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ನಡುವೆ ಕೋವಿಡ್‌ ಮೂರನೆಯ ಅಲೆಯ ಭೀತಿಯೂ ಹೆಚ್ಚುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳು ಲಸಿಗೆಗಳ ಕೊರತೆಯನ್ನೇ ಬಂಡವಾಳ ಮಾಡಿಕೊಂಡು ವಿವಿಧ ಪ್ಯಾಕೇಜ್‌ ಗಳನ್ನು ವಿವಿಧ ಆಕರ್ಷಕ ಆಫರ್‌ ಗಳ ಜಾಹೀರಾತನ್ನು ನೀಡುತ್ತಿವೆ. ಕೇಂದ್ರ ಸರ್ಕಾರ ಹೊಟೇಲ್‌ ಗಳಲ್ಲಿ ಕೋವಿಡ್‌ ಲಸಿಕೆ ನೀಡುವುದನ್ನು ನಿಷೇಧಿಸಿರುವುದನ್ನು ರಾಜ್ಯಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ತರುತ್ತವೆ ಎಂಬುದನ್ನು ಕಾದುನೋಡಬೇಕು. ಸದ್ಯಕ್ಕೆ ಲಸಿಕೆಯ ಪೂರೈಕೆ ಮತ್ತು ಖಾಸಗಿಯವರ ಲಸಿಕೆ ದಂದೆಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.


ಇದನ್ನೂ ಓದಿ; ಕನಿಷ್ಠ ಪ್ರಾಣಹಾನಿಯೊಂದಿಗೆ ಚಂಡಮಾರುತಗಳನ್ನು ಎದುರಿಸಿದ್ದೇವೆ: ಪ್ರಧಾನಿ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಕಾರ್ಯಕರ್ತರ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...