ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಫೇಸ್‌ಬುಕ್ ಖಾತೆಯನ್ನು ಜನವರಿ 2023ರವರೆಗೆ ಅಮಾನತ್ತಿನಲ್ಲಿಡಲಾಗುವುದು ಎಂದು ಫೇಸ್‌ಬುಕ್ ತಿಳಿಸಿದೆ. ತನ್ನ ನಿಯಮಗಳನ್ನು ಮುರಿಯುವ ವಿಶ್ವನಾಯಕರಿಗೆ ಇದು ಎಚ್ಚರಿಕೆ ಎಂದು ಫೇಸ್‌ಬುಕ್ ಹೇಳಿದರೆ, ನನಗೆ ಮತ ನೀಡಿದವರಿಗೆ ಫೇಸ್‌ಬುಕ್ ಮಾಡುತ್ತಿರುವ ಅವಮಾನ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ನಾವು ಟ್ರಂಪ್ ಖಾತೆ ಮೇಲಿನ ಅಮಾನತ್ತನ್ನು 2023ರ ಜನವರಿವರೆಗೂ ಮುಂದುವರೆಸಲು ನಿರ್ಧಿರಿಸದ್ದೇವೆ. ಆ ನಂತರ ಸಾರ್ವಜನಿಕ ಸುರಕ್ಷತೆಗೆ ಅಪಾಯ ಕಡಿಮೆಯಾದರೆ ಮಾತ್ರ ಆ ಅಮಾನತ್ತನ್ನು ತೆಗೆದುಹಾಕಲಾಗುತ್ತದೆ ಎಂದು ಫೇಸ್‌ಬುಕ್ ತಿಳಿಸಿದೆ.
ಈ ವರ್ಷದ ಜನವರಿಯಲ್ಲಿ ವಾಷಿಂಗ್ಟನ್‌ನ ಅಮೆರಿಕ ಸಂಸತ್ (ಕ್ಯಾಪಿಟಲ್) ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅನಿರೀಕ್ಷಿತ ದಾಳಿ ನಡೆಸಿ ಗಲಭೆ ಉಂಟು ಮಾಡಿದ ಬೆನ್ನಲ್ಲೆ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಟ್ರಂಪ್ ಅವರ ಖಾತೆಗಳನ್ನು ಸ್ಥಗಿತಗೊಳಿಸಿವೆ.
ಟ್ರಂಪ್ ಅವರನ್ನು ಟ್ವಿಟರ್ ಶಾಶ್ವತವಾಗಿ ಬ್ಯಾನ್ ಮಾಡಿದೆ. ಯೂಟ್ಯೂಬ್ ಕೂಡ ಅವರ ವಿಡಿಯೋಗಳನ್ನು ನಿಷೇಧಿಸಿದೆ. ಹೀಗಾಗಿ ಅವರು ಸ್ವಂತ ಬ್ಲಾಗ್ ಒಂದನ್ನು ಸ್ಥಾಪಿಸಿದ್ದರು. ಆದರೆ ಈಗ ಅದನ್ನು ಸಹ ಸ್ಥಗಿತಗೊಳಿಸಿದ್ದಾರೆ. ಅವರದೇ ಸ್ವಂತ ವೇದಿಕೆಯೊಂದನ್ನು ನಿರ್ಮಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
“ಫೇಸ್‌ಬುಕ್‌ನ ಈ ನಡೆ ನನ್ನನ್ನು ಫಾಲೋ ಮಾಡುತ್ತಿದ್ದ 7.5 ಕೋಟಿ ಜನರಿಗೆ ಮತ್ತು ಅಧ್ಯಕ್ಷೀಯ ಚುನಾವಣೆಯಲ್ಲಿ ನನಗೆ ಮತ ಹಾಕಿದವರಿಗೆ ಮಾಡಿದ ಅವಮಾನ. ನಮ್ಮ ದೇಶವು ಈ ನಿಂದನೆಯನ್ನು ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಗೆದ್ದೆ ಗೆಲ್ಲುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕ ಸಂಸತ್ ಮೇಲೆ ದಾಳಿ: ಟ್ರಂಪ್ ಖಾತೆ ಸ್ಥಗಿತಗೊಳಿಸಿದ ಟ್ವಿಟರ್, ಫೇಸ್‌ಬುಕ್!


